Asianet Suvarna News Asianet Suvarna News

ವರ್ಕ್‌ ಫ್ರಂ ಹೋಂ ಬೇಕು ಅಂದ್ರೆ ಪರ್ಮನೆಂಟಾಗಿ ಮನೆಗೆ ಕಳಿಸ್ತೀನಿ: ಟೆಸ್ಲಾ ಸಿಬ್ಬಂದಿಗೆ ಮಸ್ಕ್‌ ಎಚ್ಚರಿಕೆ

Elon Musk: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಸಿಬ್ಬಂದಿಗೆ ವಾರ್ನಿಂಗ್‌ ನೀಡಿದ್ದಾರೆ. ಒಂದೋ ಕಚೇರಿಗೆ ಬನ್ನಿ, ಇಲ್ಲದಿದ್ದರೆ ಪರ್ಮನೆಂಟಾಗಿ ಮನೆಗೆ ಕಳಿಸುತ್ತೇನೆ ಎಂದಿದ್ದಾರೆ. ವರ್ಕ್‌ ಫ್ರಂ ಹೋಂ ಅಭ್ಯಾಸವಾಗಿ, ಕಚೇರಿಗೆ ಬರಲಿ ಮೀನಾಮೇಶ ಎಣಿಸುತ್ತಿರುವ ಸಿಬ್ಬಂದಿ ಮೇಲೆ ಮಸ್ಕ್‌ ಕೋಪ ವ್ಯಕ್ತಪಡಿಸಿದ್ದಾರೆ.

Elon Musk says tesla office to come back to office or do not come at all
Author
Bengaluru, First Published Jun 1, 2022, 4:48 PM IST

ಜಗತ್ತಿನ ನಂಬರ್‌ 1 ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ಟೆಸ್ಲಾ ಸಂಸ್ಥೆಯ (Tesla) ಸಿಬ್ಬಂದಿಯ ಮೇಲೆ ಕಿಡಿಕಾರಿದ್ದಾರೆ. ವರ್ಕ್‌ ಫ್ರಂ ಹೋಂ (Work from Home) ಮುಂದುವರೆಸಲು ಮನವಿ ಮಾಡಿದ್ದ ಸಿಬ್ಬಂದಿಗೆ ಒಂದೋ ಕಚೇರಿಗೆ ಬನ್ನಿ ಇಲ್ಲವಾದರೆ ಬರಲೇಬೇಡಿ ಎಂದು ಉತ್ತರ ಕೊಟ್ಟಿದ್ದಾರೆ ಮಸ್ಕ್‌. ಕೊರೋನಾವೈರಸ್‌ (COVID19 pandemic) ಖಾಯಿಲೆ ಪ್ರಪಂಚಾದ್ಯಂತ ಬಂದ ಮೇಲೆ ಮನೆಯಿಂದ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಆದರೆ ಈಗ ಪರಿಸ್ಥಿತಿ ಉತ್ತಮವಾಗಿದ್ದು ಹಲವು ಸಂಸ್ಥೆಗಳು ಸಿಬ್ಬಂದಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿವೆ. ಇದೇ ಸಂದರ್ಭದಲ್ಲಿ ಟೆಸ್ಲಾ ಕೆಲಸಗಾರರಲ್ಲಿ ಕೆಲವರು ಮನೆಯಿಂದಲೇ ಕೆಲಸ ಮಾಡಲು ಇಚ್ಚಿಸಿದ್ದಾರೆ. ಇದರಿಂದ ಎಲಾನ್‌ ಮಸ್ಕ್‌ ಕೆಂಡಾಮಂಡಲರಾಗಿದ್ದಾರೆ. 

ಮನೆಯಿಂದ ಕೆಲಸ ಮಾಡುವುದು ಈಗಿನಿಂದ ಒಪ್ಪಿಕೊಳ್ಳುವುದಿಲ್ಲ ಎಂಬ ಶೀರ್ಷಿಕೆಯಡಿ ಎಲಾನ್‌ ಮಸ್ಕ್‌ ಸಿಬ್ಬಂದಿಗೆ ಕಳಿಸಿದ ಇ-ಮೇಲ್‌ ಸೋರಿಕೆಯಾಗಿದೆ. ಇದು ಟ್ವಿಟ್ಟರ್‌ನಲ್ಲಿ ವೈರಲ್‌ ಆಗಿದೆ. "ಯಾರಾದರೂ ಮನೆಯಿಂದ (ರಿಮೋಟ್‌) ಕೆಲಸ ಮಾಡಲು ಇಚ್ಚಿಸಿದರೆ ಅವರು ಕಚೇರಿಯಲ್ಲಿ ವಾರಕ್ಕೆ ಕನಿಷ್ಟ 40 ಗಂಟೆಗಳ ಕಾಲ ಕೆಲಸ ಮಾಡಲೇಬೇಕು. ಇದು ಕಡ್ಡಾಯ, ಮತ್ತು ಕನಿಷ್ಟ ಎಂಬ ಪದವನ್ನು ಮತ್ತೆ ಹೇಳಲು ಇಚ್ಚಿಸುತ್ತೇನೆ. 40 ಗಂಟೆ ಕಚೇರಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದರೆ ಟೆಸ್ಲಾ ಸಂಸ್ಥೆಯಿಂದ ಹೊರಹೋಗಿ," ಎಂದು ಎಲಾನ್‌ ಮಸ್ಕ್‌ ಮೇಲ್‌ ಬರೆದಿದ್ದಾರೆ. 

"ಟೆಸ್ಲಾ ಕೇಂದ್ರ ಕಚೇರಿಯೊಂದೇ ಟೆಸ್ಲಾದ ಹೆಡ್‌ ಆಫಿಸ್‌. ಅದನ್ನು ಹೊರತುಪಡಿಸಿ ಬೇರೆಲ್ಲೋ ಕುಳಿತುಕೊಂಡು ಅದೇ ಕಚೇರಿ ಎನ್ನಲಾಗುವುದಿಲ್ಲ. ಉದಾಹರಣೆಗೆ ಫ್ರೆಮೊಂಟ್‌ ಫ್ಯಾಕ್ಟರಿಯ ಜನ ಸಂಪರ್ಕಾಧಿಕಾರಿ ಇನ್ಯಾವುದೋ ಸ್ಟೇಟ್‌ನಲ್ಲಿ ಕುಳಿತು ಕೆಲಸ ಮಾಡಿದಂತಾಗುತ್ತದೆ," ಎಂದು ಎಲಾನ್‌ ಮಸ್ಕ್‌  ಮೇಲ್‌ನಲ್ಲಿ ಹೇಳಿದ್ದಾರೆ. 

ಈ ಮೇಲನ್ನು ಮಸ್ಕ್‌ ಅನುಯಾಯಿ ಒಬ್ಬರು ಟ್ವೀಟ್‌ ಮಾಡಿ, ಎಲಾನ್‌ ಮಸ್ಕ್‌ ಅವರ ಪ್ರತಿಕ್ರಿಯೆ ಕೇಳಿದ್ದಾರೆ. ಎಲಾನ್‌ ಮಸ್ಕ್‌ ಈ ಮೇಲನ್ನು ತಾವೇ ಬರೆದಿರುವುದಾಗಿ ಒಪ್ಪಿಕೊಂಡಿಲ್ಲವಾದರೂ, ಕಮೆಂಟ್‌ ಮಾಡಿದ್ದಾರೆ. "ಅವರು ಬೇರೆ ಎಲ್ಲಿಂದಲೋ ಕೆಲಸ ಮಾಡುವಂತೆ ನಟಿಸಬೇಕು," ಎಂದು ಪ್ರತಿಕ್ರಿಯಿಸಿದ್ದಾರೆ. 

3.3 ಲಕ್ಷ ಕೋಟಿ ರು.ಗೆ ಟ್ವೀಟರ್‌ ಖರೀದಿಸಿದ ವಿಶ್ವದ ನಂ.1 ಕುಬೇರ: 

ಜಗತ್ತಿನ ಅತ್ಯಂತ ಪ್ರಭಾವಿ ಹಾಗೂ ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಟ್ವೀಟರ್‌ ಅನ್ನು ಖರೀದಿಸಲು ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಒಪ್ಪಂದ ಮಾಡಿಕೊಂಡಿದ್ದಾರೆ. 3.3 ಲಕ್ಷ ಕೋಟಿ ರು.ಗಳಿಗೆ ಮಸ್ಕ್‌ ಅವರು ಟ್ವೀಟರ್‌ ಅನ್ನು ಖರೀದಿಸುತ್ತಿದ್ದು, ಷೇರುಪೇಟೆಯಲ್ಲಿ ನೋಂದಣಿಯಾದ ಕಂಪನಿಯೊಂದು ಈ ಮೊತ್ತಕ್ಕೆ ಬಿಕರಿಯಾಗಿದ್ದು ಇದೇ ಮೊದಲು ಎಂಬ ಇತಿಹಾಸ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಗಗನಸಖಿಗೆ ಸವಾಲೆಸೆದ ಎಲಾನ್ ಮಸ್ಕ್!

ಟ್ವೀಟರ್‌ನಲ್ಲಿ ಎಲಾನ್‌ ಮಸ್ಕ್‌ ಶೇ.9.1ರಷ್ಟುಷೇರುಗಳನ್ನು ಹೊಂದಿದ್ದರು. ತನ್ಮೂಲಕ ಆ ಕಂಪನಿಯ ಅತಿದೊಡ್ಡ ಷೇರುದಾರ ಆಗಿದ್ದರು. ಈ ನಡುವೆ, ಇಡೀ ಕಂಪನಿಯನ್ನೇ ಖರೀದಿಸುವ ಸಲುವಾಗಿ ಅವರು ಟ್ವೀಟರ್‌ಗೆ ಆಫರ್‌ ನೀಡಿದ್ದರು. ಶೇ.91ರಷ್ಟುಷೇರುಗಳನ್ನು ತಲಾ 4150 ರು.ನಂತೆ ಖರೀದಿಸುವುದಾಗಿ ಹೇಳಿದ್ದರು. ನಿರಂತರ ಮಾತುಕತೆ ನಡೆದು, ಮಸ್ಕ್ ಹೇಳಿದ ದರಕ್ಕೆ ಕಂಪನಿ ಮಾರಾಟ ಮಾಡಲು ಟ್ವೀಟರ್‌ ಒಪ್ಪಿತ್ತು.

ಟ್ವೀಟರ್‌ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅನ್ನಿಸಿದ್ದರಿಂದ ಅದನ್ನು ಖರೀದಿಸಲು ಮುಂದಾದೆ. ಜನರ ವಿಶ್ವಾಸ ಗಳಿಸಿ, ಉತ್ತಮವಾಗಿ ಸೇವೆ ಸಲ್ಲಿಸಲು ಇನ್ನು ಮುಂದೆ ಟ್ವೀಟರ್‌ ಅನ್ನು ಖಾಸಗಿ ಕಂಪನಿಯಾಗಿ ರೂಪಾಂತರಿಸಲಾಗುವುದು ಎಂದು ಮಸ್ಕ್‌ ಹೇಳಿದ್ದರು.

ಇದನ್ನೂ ಓದಿ: ಏನಿದು ಸ್ಪ್ಯಾಮ್ ಬಾಟ್? ಟ್ವಿಟರ್ ಖರೀದಿಗೆ ಮಸ್ಕ್‌ಗೆ ಅಡ್ಡಿಯಾಗಿದ್ದೇಕೆ?

ಈ ನಡುವೆ, ಖರೀದಿ ವ್ಯವಹಾರ ಪೂರ್ಣಗೊಂಡ ಬಳಿಕ ಟ್ವೀಟರ್‌ ಎಂಬುದು ಖಾಸಗಿ ಒಡೆತನದ ಕಂಪನಿಯಾಗಿರಲಿದೆ ಎಂದು ಟ್ವೀಟರ್‌ ಕೂಡ ಹೇಳಿಕೊಂಡಿತ್ತು. ಟ್ವೀಟರ್‌ಗೆ ಉದ್ದೇಶವಿದೆ, ಅದರ ಅಸ್ತಿತ್ವ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತೀಯ ಮೂಲದ ಸಿಇಒ ಪರಾಗ್‌ ಅಗ್ರಾವಾಲ್‌ ಮಸ್ಕ್‌ಗೆ ಉತ್ತರಿಸಿದ್ದರು. ನಂತರ ಇಬ್ಬರ ನಡುವಿನ ಶೀತಲ ಸಮರ ಬಹಿರಂಗವಾಗಿತ್ತು. ಟ್ವಿಟ್ಟರ್‌ನಲ್ಲಿ ಒಬ್ಬರ ಮೇಲೊಬ್ಬರು ಕಮೆಂಟ್‌ನಲ್ಲಿ ಜಗಳವಾಡಿದ್ದರು. ಇದಾದ ನಂತರ ಸ್ಪಾಮ್‌ ಬೋಟ್‌ ಹೆಚ್ಚಿದೆ ಟ್ವಟ್ಟರ್‌ನಲ್ಲಿ ಎಂಬ ಕಾರಣ ನೀಡಿ, ಖರೀದಿ ಪ್ರಕ್ರಿಯೆ ಮುಂದೆ ಹಾಕಲಾಗಿದೆ. ಟ್ವಟ್ಟರ್‌ ಮತ್ತು ಮಸ್ಕ್‌ ನಡುವಿನ ಮಾತುಕತೆ ಮುಂದುವರೆದಿದ್ದು, ಮಸ್ಕ್‌ ಕೊಳ್ಳುವ ಮನಸು ಬದಲಿಸಿದರೂ ಆಶ್ಚರ್ಯವಿಲ್ಲ. 

Follow Us:
Download App:
  • android
  • ios