ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದ 75 ವರ್ಷದ ವೃದ್ಧನ ಗುಡಿಸಲಿಗೆ ಇಲಾಖೆಯು 1.39 ಲಕ್ಷ ರೂ. ಕರೆಂಟ್ ಬಿಲ್ ನೀಡಿದೆ. ಬಿಲ್ ಕಟ್ಟದಿದ್ದರೆ ಜೈಲಿಗೆ ಹಾಕುವ ಬೆದರಿಕೆ ಹಾಕಿದ್ದರಿಂದ, ಭಯಭೀತ ವೃದ್ಧ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಮೊರೆಹೋಗಿದ್ದಾನೆ.
ಸಾಗರ್ (ಮಧ್ಯಪ್ರದೇಶ): ಈ ಮನೆಯವರು ಕರೆಂಟ್ ಬೆಳಕನ್ನೇ ಕಾಣದವರು. ಗುಡಿಸಿಲಿನಲ್ಲಿ ಕಡುಬಡತನದ ಬದುಕು. ಕತ್ತಲಲ್ಲಿ ಜೀವನ ನಡೆಸುತ್ತಿರುವ ಮನೆಯವರಿಗೆ ವಿದ್ಯುತ್ ಕಂಪೆನಿ ಶಾಕ್ ಕೊಟ್ಟಿಬಿಟ್ಟಿದೆ! 75 ವರ್ಷದ ವೃದ್ಧ ಬದುಕುತ್ತಿರುವ ಈ ಗುಡಿಸಿಲಿಗೆ ಇಲಾಖೆಯ 1 ಲಕ್ಷದ 39 ಸಾವಿರದ 232 ರೂಪಾಯಿ ಕರೆಂಟ್ ಬಿಲ್ ನೀಡಿದೆ. ತಮ್ಮ ಮನೆಯಲ್ಲಿ ಕರೆಂಟೇ ಇಲ್ಲ ಎಂದು ಈ ಬಡ ವೃದ್ಧ ಹೇಳಿದಾಗ, ಕರೆಂಟ್ ಬಿಲ್ ಕಟ್ಟದಿದ್ದರೆ ಜೈಲಿಗೆ ಹಾಕುತ್ತೇವೆ ಎನ್ನುವ ಧಮ್ಕಿ ಬೇರೆ! ಈ ಅಸಹಾಯಕ ವೃದ್ಧನ ಸ್ಥಿತಿ ಇದ್ಯಾವ ಪರಿ ಆಯಿತು ಎಂದರೆ, ಎಲ್ಲಿ ತನ್ನನ್ನು ಜೈಲಿಗೆ ಹಾಕಿಬಿಡುತ್ತಾರೆಯೋ ಎನ್ನುವ ಭಯದಲ್ಲಿ, ಬಸ್ ಚಾರ್ಜ್ಗೂ ಬೇರೆಯವರ ಬಳಿ ಸಾಲ ಮಾಡಿ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾನೆ.
ಇದು ನಡೆದಿರುವುದು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬೆಹೆರಿಯಾ ಸಾನಿ ಎಂಬ ಬುಡಕಟ್ಟು ಜನರೇ ಹೆಚ್ಚು ವಾಸಿಸುವ ಗ್ರಾಮದಲ್ಲಿ. 75 ವರ್ಷದ ದುಲಿಚಂದ್ ಅವರು, ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಮನೆಯಲ್ಲಿ ಟಿವಿ, ಫ್ಯಾನ್ ಅಥವಾ ಯಾವುದೇ ವಿದ್ಯುತ್ ಉಪಕರಣಗಳಿಲ್ಲ. ಅಷ್ಟೇ ಯಾಕೆ, ದುಲಿಚಂದ್ ಅವರಿಗೆ ಸ್ವಂತ ಮನೆ ಅಥವಾ ಜಮೀನು ಇಲ್ಲ. ಹಾಗಾಗಿ, ಗ್ರಾಮದ ವ್ಯಕ್ತಿಯೊಬ್ಬರ ಜಾಗದಲ್ಲಿ ಕಳೆದ 7 ವರ್ಷಗಳಿಂದ ಸಣ್ಣ ಗುಡಿಸಲು (ಟಪರಿಯಾ) ನಿರ್ಮಿಸಿಕೊಂಡು ಕತ್ತಲೆಯಲ್ಲೇ ಜೀವನ ನಡೆಸುತ್ತಿದ್ದಾರೆ. ಜೊತೆಗೆ, ಅವರು ಎಂದಿಗೂ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಮತ್ತು ಅವರ ಗುಡಿಸಲಿಗೆ ವಿದ್ಯುತ್ ಪೂರೈಕೆಯೇ ಇಲ್ಲ. ಆದರೂ 2020ರಲ್ಲಿ ಬಮ್ಹೋರಿ ವಿದ್ಯುತ್ ವಿತರಣಾ ಕೇಂದ್ರದ ಸಿಬ್ಬಂದಿ ಅವರ ಅನುಮತಿಯಿಲ್ಲದೆ ಕೆಲಸ ಮಾಡದ (ನಿಷ್ಕ್ರಿಯ) ಮೀಟರ್ ಅನ್ನು ಅಳವಡಿಸಿ, ಅದರ ಹೆಸರಿನಲ್ಲಿ ₹1.39 ಲಕ್ಷಕ್ಕೂ ಅಧಿಕ ಬಿಲ್ ಕಳುಹಿಸಿದ್ದಾರೆ ಎಂದು ದುಲಿಚಂದ್ ಅವರು ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿದ್ಯುತ್ ಸಂಪರ್ಕವಿಲ್ಲದಿದ್ದರೂ ಬಿಲ್!
ತಮಗೆ ಅಧಿಕೃತ ವಿದ್ಯುತ್ ಸಂಪರ್ಕವೇ ಇಲ್ಲದಿದ್ದರೂ, 2020ರ ಆಗಸ್ಟ್ನಿಂದ ವಿದ್ಯುತ್ ಕಂಪನಿಯು ತಮ್ಮ ಹೆಸರಿನಲ್ಲಿ ತಪ್ಪು ಬಿಲ್ಗಳನ್ನು ಕಳುಹಿಸುತ್ತಿದೆ ಎಂದು ದುಲಿಚಂದ್ ದೂರಿದ್ದಾರೆ. 2022ರ ಡಿಸೆಂಬರ್ನಲ್ಲಿ 4,226 ರೂ. ನೋಟಿಸ್ ನೀಡಿದ್ದ ಕಂಪನಿ, ಈಗ ಏಕಾಏಕಿ 1.39 ಲಕ್ಷ ರೂ. ವಸೂಲಾತಿ ನೋಟಿಸ್ ಜಾರಿ ಮಾಡಿದೆ. ಜೊತೆಗೆ, ವಿದ್ಯುತ್ ಇಲಾಖೆಯ ಸಿಬ್ಬಂದಿ ಮನೆಗೆ ಬಂದು ಬಿಲ್ ಪಾವತಿಸುವಂತೆ ಒತ್ತಡ ಹೇರುತ್ತಿದ್ದು, ಹಣ ಕಟ್ಟದಿದ್ದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವೃದ್ಧ ಕಾರ್ಮಿಕ ಆರೋಪಿಸಿದ್ದಾರೆ.
ಏತನ್ಮಧ್ಯೆ, ಈ ನೋಟಿಸ್ನಿಂದ ಆತಂಕಗೊಂಡಿರುವ ದುಲಿಚಂದ್ ಅವರು ಕೊನೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್ ಅವರಿಗೆ ಲಿಖಿತ ದೂರು ಸಲ್ಲಿಸಿ, ನಕಲಿ ಬಿಲ್ ರದ್ದುಪಡಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಇನ್ನು, ವೃದ್ಧನ ಗುಡಿಸಲಿನಲ್ಲಿ ವಿದ್ಯುತ್ ಬಳಕೆಯೇ ಇಲ್ಲದಿರುವುದನ್ನು ಮನಗಂಡ ಜಿಲ್ಲಾಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುವಂತೆ ಮತ್ತು ತಪ್ಪು ಬಿಲ್ ರದ್ದುಗೊಳಿಸಿ ವೃದ್ಧನಿಗೆ ತಕ್ಷಣವೇ ನ್ಯಾಯ ಒದಗಿಸುವಂತೆ ವಿದ್ಯುತ್ ಕಂಪನಿಯ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.















