ಮಾನಸಿಕ ಒತ್ತಡದಿಂದ ಕೇವಲ 4 ತಿಂಗಳಲ್ಲಿ ಕೆಲಸ ಬಿಟ್ಟ ಯುವತಿಗೆ ವಿಪ್ರೋ ಸಂಸ್ಥೆ ₹30,130 ಪಾವತಿಸುವಂತೆ ಲೀಗಲ್ ನೋಟಿಸ್ ನೀಡಿದೆ. ಎಚ್‌ಆರ್ ಅಧಿಕಾರಿ ಹಣ ಕಟ್ಟುವ ಅಗತ್ಯವಿಲ್ಲ ಎಂದು ಬಾಯಿಮಾತಿನಲ್ಲಿ ಹೇಳಿದ್ದರೂ, ಇದೀಗ ಬಡ್ಡಿ ಸಮೇತ ಹಣ ನೀಡದಿದ್ದರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದೆ.

ಬೆಂಗಳೂರು (ಅ.13): ಕಾರ್ಪೊರೇಟ್ ಪ್ರಪಂಚದಲ್ಲಿ ಉದ್ಯೋಗಿಗಳಿಗೆ ಎಚ್‌ಆರ್ (HR) ನೀಡುವ ಬಾಯ ಮಾತಿನ ಭರವಸೆಗಳು ಕೇವಲ ಗಾಳಿಯಲ್ಲಿ ತೂರಿಹೋಗುತ್ತವೆ ಹಾಗೂ ಕೊನೆಗೆ ಉಳಿಯುವುದು ಕಂಪನಿಯ ಕಟು 'ಕಾಗದದ ನೋಟಿಸ್‌ಗಳು' ಮಾತ್ರ ಎಂಬುದಕ್ಕೆ ಪ್ರಮುಖ ಐಟಿ ದೈತ್ಯ ಸಂಸ್ಥೆ 'ವಿಪ್ರೋ' (Wipro Limited) ಎಸಗಿದೆ ಎನ್ನಲಾದ ಘಟನೆಯೊಂದು ಜೀವಂತ ಸಾಕ್ಷಿಯಾಗಿದೆ. ಕೇವಲ 4 ತಿಂಗಳು ಕೆಲಸ ಮಾಡಿ, ತೀವ್ರ ಮಾನಸಿಕ ಒತ್ತಡದ ಕಾರಣಕ್ಕೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಯುವತಿಯೊಬ್ಬಳಿಗೆ ವಿಪ್ರೋ ಸಂಸ್ಥೆಯು ಬರೋಬ್ಬರಿ ₹30,130 ಹಣ ಪಾವತಿ ಮಾಡುವಂತೆ ಲೀಗಲ್ ನೋಟಿಸ್ ಕಳುಹಿಸಿದ್ದು, 10 ದಿನಗಳ ಒಳಗೆ ಬಡ್ಡಿ ಸಮೇತ ಹಣ ಪಾವತಿಸದಿದ್ದರೆ 'ಸಿವಿಲ್ ಹಾಗೂ ಕ್ರಿಮಿನಲ್' (Civil and Criminal Case) ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿರುವ ಪತ್ರ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಏನಿದು ಪ್ರಕರಣ?

ಘಟನೆಯ ಹಿನ್ನೆಲೆ: ಸಂತ್ರಸ್ತ ಯುವತಿ (ತನ್ನು) 2025 ರ ಅಕ್ಟೋಬರ್‌ನಲ್ಲಿ ಗುರುಗ್ರಾಮ್ (Gurugram) ಶಾಖೆಯಲ್ಲಿ ಕಸ್ಟಮರ್ ಸರ್ವಿಸ್ ರೆಪ್ರೆಸೆಂಟೇಟಿವ್ ಆಗಿ ವಿಪ್ರೋ ಸಂಸ್ಥೆಯನ್ನು ಸೇರಿಕೊಂಡಿದ್ದರು. ಕಂಪನಿಯೊಂದಿಗೆ 12 ತಿಂಗಳ (1 ವರ್ಷ) ಉದ್ಯೋಗ ಒಪ್ಪಂದವಿತ್ತು. ಆದರೆ, ಕೆಲಸದ ವಿಪರೀತ ಮಾನಸಿಕ ಒತ್ತಡವನ್ನು (Stress) ತಾಳಲಾರದೆ ಆಕೆ ಉದ್ಯೋಗಕ್ಕೆ ಸೇರಿದ ಕೇವಲ 4 ತಿಂಗಳಿನಲ್ಲೇ ಅಂದರೆ 2026ರ ಫೆಬ್ರವರಿ 25 ರಂದು ರಾಜೀನಾಮೆ ಸಲ್ಲಿಸಿದ್ದರು.

ಯುವತಿ ರಿಸೈನ್ ಮಾಡುತ್ತಿದ್ದಂತೆಯೇ ಆಕೆಗೆ ಶಾಕ್ ನೀಡಿದ್ದ ಕಂಪನಿ, ನೋಟಿಸ್ ಪೀರಿಯಡ್ ಭರಿಸಲು ₹30,000 ಪಾವತಿಸುವಂತೆ, ಇಲ್ಲದಿದ್ದರೆ ಕೆಲಸ ಮಾಡಿದ 'ಅನುಭವದ ಪ್ರಮಾಣಪತ್ರ' (Experience Letter) ನೀಡುವುದಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿತ್ತು. ಈ ವೇಳೆ ಎಚ್‌ಆರ್ (HR) ಅಧಿಕಾರಿಯೊಬ್ಬರು ಫೋನ್‌ನಲ್ಲಿ ಮಾತನಾಡಿ, "ನಿಮಗೆ ಎಕ್ಸ್‌ಪೀರಿಯನ್ಸ್ ಲೆಟರ್ ಬೇಡವೆಂದಾದರೆ ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ" ಎಂದು ಅಭಯ ನೀಡಿದ್ದರು. ಇದನ್ನು ನಂಬಿದ ಯುವತಿ ಸುಮ್ಮನಾಗಿದ್ದರು.

FNF ಶೀಟ್‌ನಲ್ಲಿ ₹27 ಸಾವಿರಕ್ಕೂ ಹೆಚ್ಚು ಹಣ ಕಡಿತ

ಆದರೆ, 2026 ರ ಏಪ್ರಿಲ್‌ನಲ್ಲಿ ವಿಪ್ರೋ ಬಿಡುಗಡೆ ಮಾಡಿದ ತಾತ್ಕಾಲಿಕ ಅಂತಿಮ ಸೆಟಲ್‌ಮೆಂಟ್ ಪತ್ರದಲ್ಲಿ (Provisional Final Settlement Statement) ಕಂಪನಿಯು ಉದ್ಯೋಗಿಗೆ ನೀಡಬೇಕಿದ್ದ ಮೂಲ ವೇತನ, ಬೋನಸ್ ಹಾಗೂ ಹೆಚ್‌ಆರ್‌ಎ ಸೇರಿದಂತೆ ಒಟ್ಟು ₹23,372 ಗಿಫ್ಟ್ ಮೊತ್ತವನ್ನು ಶೂನ್ಯಗೊಳಿಸಿತ್ತು.

ಅಷ್ಟೇ ಅಲ್ಲದೆ, ನೋಟಿಸ್ ಪೀರಿಯಡ್ ರಿಕವರಿ (Notice Period Recovery) ಹೆಸರಿನಲ್ಲಿ ಬರೋಬ್ಬರಿ ₹27,549.79 ಗಳ ಬೃಹತ್ ಮೊತ್ತವನ್ನು ಕಡಿತಗೊಳಿಸಿತ್ತು. ಅಂತಿಮವಾಗಿ ಯುವತಿಯಿಂದ ಉದ್ಯೋಗ ಸಂಸ್ಥೆಗೆ ₹30,129.78 ಬಾಕಿ ಉಳಿದಿದೆ ಎಂದು ಮಾಹಿತಿ ನೀಡಲಾಗಿತ್ತು.

ಲೀಗಲ್ ನೋಟಿಸ್, ಕ್ರಿಮಿನಲ್ ಕೇಸ್‌ನ ಬೆದರಿಕೆ

ಎಫ್‌ಎನ್‌ಎಫ್ ಬಂದ ಹಲವು ತಿಂಗಳ ನಂತರ, ಅಂದರೆ 2026 ರ ಸೆಪ್ಟೆಂಬರ್ 30 ರ ದಿನಾಂಕ ನಮೂದಾಗಿರುವ ಅಧಿಕೃತ 'ಲೀಗಲ್ ನೋಟಿಸ್' ಅನ್ನು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ವಿಪ್ರೋ ಪ್ರಧಾನ ಕಚೇರಿಯ ವಕೀಲರ ಮೂಲದಿಂದ ಯುವತಿಗೆ ಕಳುಹಿಸಲಾಗಿದೆ.

ನೋಟಿಸ್‌ನಲ್ಲಿರುವ ಪ್ರಮುಖ ಬೆದರಿಕೆ ಅಂಶಗಳು

ಸಂಸ್ಥೆಗೆ ಉದ್ಯೋಗಿಯಿಂದ ಒಟ್ಟು ₹30,130 ಗಳ ಬಾಕಿ ಬರಬೇಕಿದೆ. ಈ ಹಣಕ್ಕೆ ಆಕೆಯು ನಿಗದಿತ ದಿನದಿಂದ ವಾರ್ಷಿಕ ಶೇಕಡಾ 12% ರಷ್ಟು ಬಡ್ಡಿಯನ್ನು ಸೇರಿಸಿ ಪಾವತಿಸಬೇಕು. ಅದಲ್ಲದೆ, ನೋಟಿಸ್ ತಲುಪಿದ 10 ದಿನಗಳ ಒಳಗೆ\ಹಣವನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಪ್ರೋ ಖಾತೆಗೆ ಜಮಾ ಮಾಡಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಹಣ ಪಾವತಿಸಲು ವಿಫಲವಾದರೆ ಉದ್ಯೋಗಿಯ ವಿರುದ್ಧ 'ಸಿವಿಲ್ ಹಾಗೂ ಕ್ರಿಮಿನಲ್' (Civil and Criminal Legal Action) ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಅದಕ್ಕಾಗುವ ವೆಚ್ಚವನ್ನು ಉದ್ಯೋಗಿಯೇ ಭರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಫೋನ್‌ನಲ್ಲಿ ಎಚ್‌ಆರ್ ಕೊಟ್ಟ ಮಾತನ್ನು ಸಂಪೂರ್ಣವಾಗಿ ಗಾಳಿಯಲ್ಲಿ ತೂರಿ, ಕಾಗದದ ನೋಟಿಸ್ ಮೂಲಕ ₹30 ಸಾವಿರಕ್ಕೂ ಹೆಚ್ಚು ಹಣ ಹಾಗೂ 12% ಬಡ್ಡಿ ಕೇಳಿ, ಕ್ರಿಮಿನಲ್ ಕೇಸ್ ಹಾಕುವುದಾಗಿ ಎಚ್ಚರಿಸಿರುವ ವಿಪ್ರೋದ ಈ ನಡವಳಿಕೆ ಕಾರ್ಪೊರೇಟ್ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 'ಐಟಿ ಕಂಪನಿಗಳು ತಮ್ಮ ನೌಕರರನ್ನು ಹೇಗೆ ಶೋಷಿಸುತ್ತವೆ' ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ.