ಕನಸು ಕಾಣಲು ಯಾವುದೇ ಬ್ಯಾಗ್ ಗ್ರೌಂಡ್ ಬೇಕಿಲ್ಲ, ಆ ಕನಸುಗಳನ್ನು ನನಸು ಮಾಡುವ ಛಲವಿದ್ದರೆ ಸಾಕು ಎಂದು ಈ ಯುವತಿ ತೋರಿಸಿಕೊಟ್ಟಿದ್ದು, ಮಕ್ಕಳ ಶಿಕ್ಷಣಕ್ಕಾಗಿ ಕಷ್ಟ ಪಟ್ಟು ದುಡಿದು ಒಂದು ಒಂದು ರೂಪಾಯಿ ಸೇರಿಸಿದ್ದ ದಂಪತಿಯ ಸಂತೋಷಕ್ಕೆ ಮಿತಿಯೇ ಇಲ್ಲ ಎಂದು ಹೇಳಬಹುದು.

ಟೈಲರಿಂಗ್ ಮಾಡುತ್ತಾ ಕುಟುಂಬಕ್ಕೆ ಆಸರೆಯಾದ ತಾಯಿ, ಕೂಲಿ ಮಾಡಿ ಮಕ್ಕಳನ್ನು ಪೋಷಣೆ ಮಾಡಿದ್ದ ತಂದೆ. ಎಷ್ಟೋ ಕಷ್ಟಗಳನ್ನು ಎದುರಿಸಿ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಅವರ ಕಷ್ಟಕ್ಕೆ ಫಲ ಎಂಬಂತೆ ಈಗ ಬಡದಂಪತಿಯ ಮಗಳು ಪ್ರತಿಷ್ಠಿತ ಅಮೆಜಾನ್ ಕಂಪನಿಯಲ್ಲಿ ಉದ್ಯೋಗ ಪಡೆದುಕೊಂಡಿದ್ದಾಳೆ. ಆಂಧ್ರ ಪ್ರದೇಶದ ಗುಂಟೂರು ಮೂಲದ ವರಲಕ್ಷ್ಮೀ, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪೂರ್ಣಗೊಳಿಸಿ ಈಗ ಬರೋಬ್ಬರಿ 46 ಲಕ್ಷ ರೂಪಾಯಿ ಸಂಬಳದ ಪ್ಯಾಕೇಜ್ ಪಡೆದುಕೊಂಡಿದ್ದಾಳೆ.

ಕೂಲಿ ಕಾರ್ಮಿಕ ದಂಪತಿಯ ಮಗಳಿಗೆ ಅಮೆಜಾನ್‌ನಲ್ಲಿ 46 ಲಕ್ಷ ಪ್ಯಾಕೇಜ್

ಹೌದು, ತಂದೆ ಕೂಲಿ ಕೆಲಸ, ತಾಯಿ ಟೈಲರಿಂಗ್ ಮಾಡಿದರೆ ಮಾತ್ರ ಕುಟುಂಬ ನಡೆಯುತ್ತಿತ್ತು. ದಿನಪೂರ್ತಿ ಕಷ್ಟಪಟ್ಟರೆ ಮಾತ್ರ ಜೀವನ ನಿರ್ವಹಣೆ ಆಗುತ್ತಿತ್ತು. ಆದರೆ ತಂದೆ-ತಾಯಿ ತಮ್ಮ ಮಕ್ಕಳ ಶಿಕ್ಷಣಕ್ಕೆ ಮಾತ್ರ ಯಾವುದೇ ಕೊರತೆ ಮಾಡಲಿಲ್ಲ. ತಾವು ಎದುಸುತ್ತಿರುವ ಕಷ್ಟ ಇಲ್ಲಿಗೆ ತಮ್ಮೊಂದಿಗೆ ಕೊನೆಯಾಗಬೇಕು, ಮಕ್ಕಳ ಭವಿಷ್ಯ ಉತ್ತಮವಾಗಿ ಇರ್ಬೇಕು ಎಂದು ನಿರ್ಧರಿಸಿದ್ದರು. ತಮ್ಮ ಮಕ್ಕಳು ಓದಿ ಉನ್ನತ ಉದ್ಯೋಗ ಪಡೆದುಕೊಳ್ಳಬೇಕು ಎಂದು ಕನಸು ಕಂಡಿದ್ದರು.

ಈಗ ಪೋಷಕರ ಕನಸು ನನಸು ಮಾಡಿರುವ ಮಗಳು ಉತ್ತಮ ಕಂಪನಿಯಲ್ಲಿ ಕೆಲಸ ಪಡೆದುಕೊಂಡಿದ್ದಾಳೆ. ಮಗಳಿಗೆ ವರ್ಷಕ್ಕೆ 46 ಲಕ್ಷ ರೂಪಾಯಿ ಪ್ಯಾಕೇಜ್ ಇರುವ ಕೆಲಸ ಸಿಗುತ್ತಿದ್ದಂತೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಗುಂಟೂರು ಮೂಲದ ರಾಂಬಾಬು, ಲಕ್ಷ್ಮಿ ಸುಜಾತ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಡತನದ ನಡುವೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಮಗಳು ವರಲಕ್ಷ್ಮೀ ಗುಂಟೂರಿನ ಕಾಲೇಜಿನಲ್ಲೇ ಶಿಕ್ಷಣ ಪಡೆದು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪೂರ್ತಿಗೊಳಿಸಿದ್ದಳು.

ಪೋಕಷರ ಕಷ್ಟ ನೋಡುತ್ತಾ ಬೆಳೆದ ಯುವತಿ, ಓದಿನ ಕಡೆಗೆ ಗಮನ ನೀಡಿದ್ದಳು. ಕ್ಲಾಸ್‌ನಲ್ಲಿ ಉತ್ತಮ ಮಾರ್ಕ್ಸ್ ಪಡೆದುಕೊಂಡು, ಈಗ ಕ್ಯಾಂಪಸ್ ಪ್ಲೇಸ್ಮೆಂಟ್ಸ್ ನಲ್ಲಿ ಸಂದರ್ಶನ ನೀಡಿ ಉದ್ಯೋಗ ಪಡೆದುಕೊಂಡಿದ್ದಾಳೆ. ನಿಜ ಹೇಳಬೇಕು ಎಂದರೆ, ಇಷ್ಟು ದೊಡ್ಡ ಕಂಪನಿಯಲ್ಲಿ ಕೆಲಸ ಸಿಗುತ್ತೆ, ಭಾರೀ ಮೊತ್ತದ ಸಂಬಳವನ್ನು ಆರಂಭದಲ್ಲೇ ಪಡೆಯುತ್ತೇನೆ ಅಂತ ಆಕೆಯ ಅಂದುಕೊಂಡಿರಲಿಲ್ಲವಂತೆ. ಆದರೆ ಅಮೆಜಾನ್ ಕಂಪನಿ ನಡೆಸಿದ ಸಂದರ್ಶದಲ್ಲಿ ಯುವತಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದು, ಡೇಟಾ ಎಂಜಿನಿರ್ ಇಂಟರ್ನ್ ಆಗಿ ಆಯ್ಕೆಯಾಗಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಒಂದು ಸಾಮಾನ್ಯ ಕುಟುಂಬದಿಂದ ಬಂದ ಯುವತಿಗೆ ಇಷ್ಟು ದೊಡ್ಡ ಅವಕಾಶ ಸಿಕ್ಕಿರುವುದು ಇಡೀ ಕುಟುಂಬಕ್ಕೆ ಹೆಮ್ಮೆ ತರಿಸಿದೆ. ಇಷ್ಟು ದಿನ ಮಕ್ಕಳ ಭವಿಷ್ಯಕ್ಕಾಗಿ ದುಡಿದ ಪೋಷಕರ ಕಷ್ಟಕ್ಕೆ ಸೂಕ್ತ ಉಡುಗೊರೆಯಾಗಿದೆ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವರಲಕ್ಷ್ಮೀ, ತನಗೆ ಸಿಕ್ಕ ಉದ್ಯೋಗದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಂದರ್ಶನಕ್ಕೆ ಹೋದ ಸಂದರ್ಭದಲ್ಲಿ ಇಂತಹ ಅವಕಾಶ ಸಿಗುತ್ತೆ ಎಂದು ಕೊಂಡಿರಲಿಲ್ಲ. ತನ್ನ ತಂದೆ ನೀಡಿದ ಪ್ರೋತ್ಸಾಹ, ಕಾಲೇಜಿನ ಶಿಕ್ಷಕರು ನೀಡಿದ ಮಾರ್ಗದರ್ಶನವೇ ಇದಕ್ಕೆ ಕಾರಣ. ಕ್ಯಾಂಪಸ್ ಇಂಟರ್‌ವ್ಯೂಗಳಲ್ಲಿ ಸಿಕ್ಕ ಪ್ರತಿಯೊಂದು ಅವಕಾಶವನ್ನು ಗಂಭೀರವಾಗಿ ತೆಗೆದುಕೊಂಡಿದ್ದೆ, ಎಲ್ಲಾ ಸಂದರ್ಶನಗಳಿಗೂ ಉತ್ತಮವಾಗಿ ಸಿದ್ಧತೆ ನಡೆಸಿ ಹಾಜರಾಗಿದ್ದೆ. ಈ ಪ್ರಯತ್ನದಿಂದಲೇ ಈಗ ಅಮೆಜಾನ್ನಲ್ಲಿ ಉದ್ಯೋಗ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬಡತನ ಮೆಟ್ಟಿನಿಂತ ವರಲಕ್ಷ್ಮೀ ಸಾಧನೆ

ನಾವು ಯಾವ ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇವೆ ಅನ್ನೋದು ಇಲ್ಲಿ ಮುಖ್ಯ ಅಲ್ಲ. ತಮಗೆ ಎದುರಾಗುವ ಪರಿಸ್ಥಿತಿಗಳನ್ನ ಎದುರಿಸಲು ತಕ್ಕ ಸಿದ್ಧತೆ ಮಾಡಿಕೊಳ್ಳಬೇಕು. ನಿರಂತರ ಪ್ರಯತ್ನದಿಂದ ಮಾತ್ರ ಇದು ಆಗಲು ಸಾಧ್ಯ ಎಂದು ವರಲಕ್ಷ್ಮೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು, ಒಂದು ಒಳ್ಳೆಯ ಉದ್ಯೋಗ ಪಡೆದ ತಮ್ಮ ಕಾಲೇಜಿನ ವಿದ್ಯಾರ್ಥಿನಿಗೆ ಅಲ್ಲಿನ ಶಿಕ್ಷಕರು, ಸಹಪಾಠಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.

ವಿಶೇಷ ಎಂದರೆ, ಕಾಲೇಜು ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಇದೇ ಕಾಲೇಜಿನ ವಿದ್ಯಾರ್ಥಿನಿ ಕುಸುಮಾ ಎಂಬಾಕೆಯೂ ಕೂಡ 46 ಲಕ್ಷ ರೂಪಾಯಿಗಳ ಪ್ಯಾಕೇಜ್ ಇರುವ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಇಲ್ಲಿ ವರಲಕ್ಷ್ಮೀ ಅವರ ಪ್ಯಾಕೇಜ್ ಎಷ್ಟು ಅನ್ನೋದು ಮುಖ್ಯವಲ್ಲ, ಆಕೆಯ ಪೋಷಕರು ಕೂಲಿ ಕೆಲಸ ಮಾಡುತ್ತಾ, ಮಕ್ಕಳ ಬಗ್ಗೆ ಕಂಡಿದ್ದ ಕನಸುಗಳನ್ನು ಇಂದು ಅವರ ಮಕ್ಕಳು ನನಸು ಮಾಡಿದ್ದಾರೆ. ದಿನವಿಡಿ ಶ್ರಮ ಹಾಕಿ ಸಂಪಾದನೆ ಮಾಡಿದ್ದ ಪ್ರತಿಯೊಂದು ರೂಪಾಯಿಯನ್ನು ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡಿದ್ದ ಪೋಷಕರ ಸಂತಸಕ್ಕೆ ಇಂದು ಮಿತಿಯೇ ಇಲ್ಲದಂತಾಗಿದೆ. ಕನಸು ಕಾಣಲು ಯಾವುದೇ ಬ್ಯಾಗ್ ಗ್ರೌಂಡ್ ಬೇಕಿಲ್ಲ, ಆ ಕನಸುಗಳನ್ನು ನನಸು ಮಾಡುವ ಛಲವಿದ್ದರೆ ಸಾಕು ಎಂದು ವರಲಕ್ಷ್ಮೀ ನಿರೂಪಿಸಿದ್ದಾರೆ.