ಕೊಡಗು ಜಿಲ್ಲೆಯಾದ್ಯಂತ ವಿಶಿಷ್ಟವಾದ ಕೃಷಿ ಹಬ್ಬ ಪುತ್ತರಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಕದಿರು ಕೊಯ್ದು, ಶ್ರದ್ಧಾಭಕ್ತಿಯಿಂದ ಧಾನ್ಯಲಕ್ಷ್ಮಿಯನ್ನು ರೈತರು ಮನೆ ತುಂಬಿಸಿಕೊಂಡರು.

ಮಡಿಕೇರಿ: ವರ್ಷವಿಡೀ ದುಡಿಯುವ ರೈತರು ಅದನ್ನು ಒಕ್ಕಣೆ ಮಾಡಿ ಮನೆ ತುಂಬಿಕೊಳ್ಳುವುದೇ ಒಂದು ಸಂಭ್ರಮ ಅಲ್ಲವೆ. ಆದರೆ ವಿಶಿಷ್ಟ ಸಂಸ್ಕೃತಿ ಆಚರಣೆಗಳ ಬೀಡು ಕೊಡಗಿನಲ್ಲಿ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಕೊಳ್ಳುವುದೇ ಅತ್ಯಂತ ವಿಶಿಷ್ಟ ಅದೇ ಪುತ್ತರಿ. ಇಂದು ಕೊಡಗಿನಾದ್ಯಂತ ಪುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಕೊಡಗಿನಲ್ಲಿ ಮನೆ ಮಾಡಿರುವ ಪುತ್ತರಿ ಹಬ್ಬದ ಸಂಭ್ರಮ

ದೇಶದಲ್ಲಿಯೇ ವಿಶಿಷ್ಟ ಕಲೆ, ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕೊಡಗಿನೆಲ್ಲೆಡೆ ರೈತರು ಸೇರಿದಂತೆ ಎಲ್ಲಾ ಜನರು ಧಾನ್ಯ ಲಕ್ಷ್ಮಿಯನ್ನು ಶದ್ಧಾಭಕ್ತಿಯಿಂದ ಪೂಜಿಸಿ ಬರಮಾಡಿಕೊಂಡು ಮನೆ ತುಂಬಿಸಿಕೊಂಡಿದ್ದಾರೆ. ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಪುತ್ತರಿ ಹಬ್ಬದ ಸಂಭ್ರಮ ಇಂದು ಮನೆ ಮಾಡಿದೆ. ಕೊಡಗಿನಲ್ಲಿ ಮಳೆ ದೇವರೆಂದೇ ಪೂಜಿಸುವ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಬುಧವಾರ ಹುಣ್ಣಿಮೆಯಂದು ರಾತ್ರಿ 7.25 ಕ್ಕೆ ರೋಹಿಣಿ ನಕ್ಷತ್ರದಲ್ಲಿ, ಕದಿರು ಕೊಯ್ಯಲಾಯಿತು. ಇದಕ್ಕೂ ಮೊದಲು ಮಡಿಕೇರಿಯ ಕೊಡವ ಸಮಾಜದಲ್ಲಿ ನೆರೆಕಟ್ಟಲಾಯಿತು. ನಂತರ ಕೊಡವ ಸಾಂಪ್ರದಾಯಿಕ ವಾದ್ಯ ಒಡ್ಡೋಲಗದೊಂದಿಗೆ ಐತಿಹಾಸಿಕ ಓಂಕಾರೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.

ನೆರೆಕಟ್ಟಿ ದೇವರಗದ್ದೆಯಲ್ಲಿ ಪೂಜಿಸಿ ಕದಿರು ಕೊಯ್ದ ಭಕ್ತರು

ಶಾಸ್ತ್ರೋಕ್ತವಾಗಿ ದೇವರ ಗದ್ದೆಗೆ ತೆರಳಿದ ಜನರು ದೇವರ ಗದ್ದೆಯಲ್ಲಿ ಪೂಜೆ ಸಲ್ಲಿಸಿದರು. ಪೊಲಿ ಪೊಲಿ ದೇವಾ, ಪೊಲಿಯೇ ಬಾ ದೇವಾ ಎಂದು ಬೇಡುತ್ತಾ ಧಾನ್ಯ ಲಕ್ಷ್ಮಿಯನ್ನು ಬೇಡಿದರು. ಒಂದು ಸುತ್ತು ಗಾಳಿಯಲ್ಲಿ ಗುಂಡು ಹೊಡೆದು ಬಳಿಕ ಕದಿರು ಕೊಯ್ಯಲಾಯಿತು. ಪೊಲಿ ಪೊಲಿ ದೇವಾ, ಪೊಲಿಯೇ ಬಾ ದೇವಾ ಎಂದು ಗುರು ಕಾರೋಣ ಹಾಗೂ ಧಾನ್ಯ ಲಕ್ಷ್ಮಿಯನ್ನು ನೆನೆಯುತ್ತಾ ಕದಿರನ್ನು ಪ್ರತಿಯೊಬ್ಬರು ಕೊಂಡು ತೆರಳಿದರು.

ವಿಶೇಷ ಪೂಜೆಯೊಂದಿಗೆ ಧಾನ್ಯಲಕ್ಷ್ಮಿಯ ಮನೆಗೆ ಬರಿಮಮಾಡಿಕೊಂಡ ರೈತರು

ನಂತರ ಅಲ್ಲಿಂದ ಪುನಃ ಮೆರವಣಿಗೆಯಲ್ಲಿ ಕೋಟೆ ಗಣಪತಿ ದೇವಾಲಯಕ್ಕೂ ತೆರಳಿ ಅಲ್ಲಿಯೂ ಪೂಜೆ ಸಲ್ಲಿಸಲಾಯಿತು. ಕೆಳಗಿನ ಕೊಡವ ಸಮಾಜಕ್ಕೆ ತೆರಳಿ ಕದಿರು ತೆಗೆಯುವುದಕ್ಕೆ ಬಂದಿದ್ದ ಎಲ್ಲಾ ಭಕ್ತರಿಗೆ ಕದಿರು ವಿತರಣೆ ಮಾಡಲಾಯಿತು. ಹೀಗೆ ಭಕ್ತಿಯಿಂದ ಕದಿರಿನ ರೂಪದಲ್ಲಿ ಧಾನ್ಯ ಲಕ್ಷ್ಮಿಯನ್ನು ಮನೆಗೆ ಕೊಂಡೊಯ್ದ ಜನರು ಮನೆಗಳಲ್ಲಿಯೂ ಕದಿರನ್ನು ಇಟ್ಟು ಪೂಜಿಸಿದರು. ಅಲ್ಲದೆ ನೆಲ್ಲಕ್ಕಿಯಲ್ಲಿ ಧಾನ್ಯಗಳನ್ನು ಹಾಕಿ ನಂದಾ ಜ್ಯೋತಿಯನ್ನು ಹಚ್ಚಿ ಪೂಜಿಸಿದರು. ಪುತ್ತರಿ ಹಬ್ಬದ ಅಂಗವಾಗಿ ಮನೆಗಳಲ್ಲಿ ಹೊಸ ಅಕ್ಕಿಯಿಂದ ಪಾಯಸ, ತಂಬಿಟ್ಟು ಹಾಗೂ ಕಡುಂಬಟ್ಟು, ಸೇರಿದಂತೆ ವಿವಿಧ ಖಾದ್ಯಗಳನ್ನು ಮಾಡಿ ಭಕ್ತರೆಲ್ಲಾ ಸವಿದು ಸಂಭ್ರಮಿಸಿದ್ದಾರೆ. ಈ ಸಂದರ್ಭ ಮಾತನಾಡಿರುವ ಭಕ್ತರು ವರ್ಷವಿಡೀ ದುಡಿದು ವಿವಿಧ ಬೆಳೆಗಳನ್ನು ಬೆಳೆದಿರುತ್ತೇವೆ. ಇದೀಗ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಕೊಳ್ಳುತ್ತಿದ್ದೇವೆ. ಇದು ಕೊಡಗಿನ ಸುಗ್ಗಿ ಹಬ್ಬದ ಸಂಪ್ರದಾಯ ಎಂದಿದ್ದಾರೆ.

ಒಟ್ಟಿನಲ್ಲಿ ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಕೃಷಿ ಹಬ್ಬ ಪುತ್ತರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿ ಜಿಲ್ಲೆಯ ಜನರು ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಕೊಂಡಿದ್ದಾರೆ. ನೋಡಿದ್ರಲಾ ಕೊಡಗಿನ ಸುಗ್ಗಿ ಹಬ್ಬವಾದ ಪುತ್ತರಿಯನ್ನು ಎಷ್ಟು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು ಎಂದು. (ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)