ಐಪಿಎಲ್ ನಡೆದರೂ ವಿದೇಶಿ ಆಟಗಾರರು ಬರೋದಿಲ್ಲ?
ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಹೀಗಿರುವಾಗಲೇ ಒಂದು ವೇಳೆ ಐಪಿಎಲ್ ಟೂರ್ನಿ ನಡೆದರೂ ವಿದೇಶಿ ಆಟಗಾರರು ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಮೆಲ್ಬರ್ನ್(ಮಾ.18): ಆಸ್ಪ್ರೇಲಿಯಾ ಕ್ರಿಕೆಟಿಗರು ಕೋಟ್ಯಂತರ ರುಪಾಯಿ ಮೌಲ್ಯದ ಐಪಿಎಲ್ ಗುತ್ತಿಗೆಯನ್ನು ಕೈಬಿಡಬೇಕಾಗಬಹುದು. ಕೊರೋನಾ ಸೋಂಕಿನ ಭೀತಿಯಿಂದ ಆಟಗಾರರನ್ನು ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಕಳುಹಿಸದಿರುವ ಬಗ್ಗೆ ಕ್ರಿಕೆಟ್ ಆಸ್ಪ್ರೇಲಿಯಾ(ಸಿಎ) ಗಂಭೀರ ಚಿಂತನೆ ನಡೆಸಿದೆ ಎಂದು ಮಂಗಳವಾರ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಐಪಿಎಲ್ ನಡೆಯದಿದ್ದರೆ ಏನಾಗಲಿದೆ ಧೋನಿ ಭವಿಷ್ಯ?
ಕ್ರಿಕೆಟ್ ಆಸ್ಪ್ರೇಲಿಯಾದ ಸಿಇಒ ಕೆವಿನ್ ರಾರ್ಬರ್ಟ್ಸ್ ಮಾಧ್ಯಮಗಳೊಂದಿಗೆ ಮಾತನಾಡಿ ಆಟಗಾರರಿಗೆ ಇನ್ನೂ ಅಧಿಕೃತವಾಗಿ ಸೂಚನೆ ನೀಡಿಲ್ಲ ಎಂದು ತಿಳಿಸಿದ್ದಾರೆ. ‘ಆಟಗಾರರಿಗೆ ನಾವು ಭಾರತಕ್ಕೆ ತೆರಳದಂತೆ ಸಲಹೆ ನೀಡಬಹುದು. ಆಟಗಾರರು ಐಪಿಎಲ್ ತಂಡಗಳೊಂದಿಗೆ ಪ್ರತ್ಯೇಕವಾಗಿ ಗುತ್ತಿಗೆ ಹೊಂದಿದ್ದಾರೆ ಎನ್ನುವ ಬಗ್ಗೆ ನಮಗೆ ಅರಿವಿದೆ. ಪರಿಸ್ಥಿತಿ ನೋಡಿಕೊಂಡು ಆಟಗಾರರೇ ನಿರ್ಧರಿಸಲಿದ್ದಾರೆ’ ಎಂದು ರಾಬರ್ಟ್ಸ್ ಹೇಳಿದ್ದಾರೆ.
ಈ ಬಾರಿ ಐಪಿಎಲ್ ಟೂರ್ನಿ ನಡೆಯೋದು ಡೌಟ್..!
17 ಆಟಗಾರರು: ಆಸ್ಪ್ರೇಲಿಯಾದ 17 ಆಟಗಾರರು ಐಪಿಎಲ್ ಗುತ್ತಿಗೆ ಹೊಂದಿದ್ದಾರೆ. ಈ ಪೈಕಿ ತಾರಾ ಆಟಗಾರರಾದ ವೇಗದ ಬೌಲರ್ ಪ್ಯಾಟ್ ಕಮಿನ್ಸ್, ಮಾಜಿ ನಾಯಕ ಸ್ಟೀವ್ ಸ್ಮಿತ್, ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹಾಗೂ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಐಪಿಎಲ್‌ನಲ್ಲಿ ಆಡದಂತೆ ಕ್ರಿಕೆಟ್ ಆಸ್ಪ್ರೇಲಿಯಾ ಸೂಚಿಸಬಹುದು ಎನ್ನಲಾಗಿದೆ. ಈ ನಾಲ್ವರು ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲೇ ನಡೆಯಲಿರುವ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ. ಹೀಗಾಗಿ ಕ್ರಿಕೆಟ್ ಆಸ್ಪ್ರೇಲಿಯಾ ಮುನ್ನೆಚ್ಚರಿಕೆ ವಹಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಪ್ಯಾಟ್ ಕಮಿನ್ಸ್ 15.5 ಕೋಟಿ ರುಪಾಯಿಗೆ ಕೆಕೆಆರ್ ತಂಡ ಸೇರುವ ಮೂಲಕ, ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತ ಪಡೆದ ವಿದೇಶಿ ಆಟಗಾರ ಎನಿಸಿದ್ದರು.
ಇದೇ ವೇಳೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಸಹ ತನ್ನ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ದ.ಆಫ್ರಿಕಾ ಆಟಗಾರರು ಈಗಷ್ಟೇ ತವರಿಗೆ ವಾಪಸಾಗಿದ್ದು, ಇಲ್ಲಿನ ಪರಿಸ್ಥಿತಿ ಅವರಲ್ಲಿ ಭಯ ಹುಟ್ಟಿಸಿದೆ ಎನ್ನಲಾಗಿದೆ. ಹೀಗಾಗಿ ಐಪಿಎಲ್ ಆಡಲು ವಾಪಸಾಗಲಿದ್ದಾರೆಯೇ ಎನ್ನುವ ಬಗ್ಗೆ ಅನುಮಾನವಿದೆ. ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆದರೂ ಪರವಾಗಿಲ್ಲ ವಿದೇಶಿ ಆಟಗಾರರನ್ನು ಕರೆತನ್ನಿ ಎಂದು ತಂಡಗಳ ಮಾಲಿಕರು ಬಿಸಿಸಿಐಗೆ ಆಗ್ರಹಿಸಿದ್ದಾರೆ.