ನವದೆಹಲಿ(ಏ.18): 2020ರ ಐಪಿಎಲ್‌ ಟೂರ್ನಿಗೆ ಆತಿಥ್ಯ ನೀಡಲು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಆಸಕ್ತಿ ತೋರಿದ ಬೆನ್ನಲ್ಲೇ, ಬಿಸಿಸಿಐ ಪ್ರತಿಕ್ರಿಯೆ ನೀಡಿದ್ದು ಸದ್ಯಕ್ಕೆ ಆ ಬಗ್ಗೆ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. 

ಗುರುವಾರ ಬಿಸಿಸಿಐ, ಐಪಿಎಲ್‌ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುತ್ತಿದ್ದಂತೆ ಲಂಕಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವಾ, ಟೂರ್ನಿಗೆ ಆತಿಥ್ಯ ನೀಡುವ ಪ್ರಸ್ತಾಪವಿರಿಸಿದರು. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿದ್ದು, ‘ಇಡೀ ವಿಶ್ವವೇ ಸಮಸ್ಯೆಯಲ್ಲಿದ್ದು, ಸದ್ಯಕ್ಕೆ ಬಿಸಿಸಿಐ ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ಲಂಕಾ ಕ್ರಿಕೆಟ್‌ ಮಂಡಳಿಯಿಂದ ಅಧಿಕೃತವಾಗಿ ಪ್ರಸ್ತಾಪ ಬಂದಿಲ್ಲ. ಯಾವುದೇ ಚರ್ಚೆ ಸಹ ನಡೆದಿಲ್ಲ’ ಎಂದಿದ್ದಾರೆ. 

IPL 2020 ಆಯೋಜನೆ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದ ಬಿಸಿಸಿಐ!

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ  13 ಸಾವಿರದ ಗಡಿ ದಾಟಿದ್ದರೆ, ಶ್ರೀಲಂಕಾದಲ್ಲಿ ಕೋವಿಡ್ 19 ಪೀಡಿತರ ಸಂಖ್ಯೆ ಇನ್ನೂರೈವತ್ತರ ಗಡಿ ದಾಟಿಲ್ಲ. ಈ ಹಿಂದೆ 2009 ಹಾಗೂ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಐಪಿಎಲ್ ವಿದೇಶದಲ್ಲಿ ನಡೆಸಲಾಗಿದ್ದು. 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸಂಪೂರ್ಣ ಐಪಿಎಲ್ ನಡೆದರೆ, 2014ರಲ್ಲಿ ಯುಎಇನಲ್ಲಿ ಭಾಗಶಃ ಐಪಿಎಲ್ ಜರುಗಿತ್ತು.  

ಒಂದು ವೇಳೆ ಐಸಿಸಿ ಟಿ20 ವಿಶ್ವಕಪ್ ರದ್ದಾದರೆ ಬಿಸಿಸಿಐ ಸೆಪ್ಟೆಂಬರ್‌-ಅಕ್ಟೋಬರ್‌, ಇಲ್ಲವೇ ಅಕ್ಟೋಬರ್‌-ನವೆಂಬರ್‌ನಲ್ಲಿ ಐಪಿಎಲ್‌ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

"