ಮುಂಬೈನಲ್ಲಿ ಕಲ್ಮಾ ಪಠಿಸಲು ಹೇಳಿ ಸೆಕ್ಯೂರಿಟಿ ಗಾರ್ಡ್‌ಗೆ ಚಾಕು ಇರಿದ ಝುಬೇರ್, ಪೆಹಲ್ಗಾಂ ನೆನಪಿಸಿದ ದಾಳಿ, ಅಮೆರಿಕದಿಂದ ಭಾರತಕ್ಕೆ ಮರಳಿದ 31ರ ಹರೆಯದ ಝೈಬ್ ಝುಬೇರ್ ಅನ್ಸಾರಿ ದಾಳಿ ದೇಶವನ್ನೇ ಬೆಚ್ಚಿಬೀಳಿಸಿದೆ.
ಮುಂಬೈ (ಏ.28) ಪೆಹಲ್ಗಾಂ ಭಯೋತ್ಪಾದಕ ದಾಳಿಯಾಗಿ ಇತ್ತೀಚೆಗೆ ಒಂದು ವರ್ಷ ಸಂದಿದೆ. ಧರ್ಮ ಕೇಳಿ ಗುಂಡಿನ ದಾಳಿ ನಡೆಸಿದ ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ. ಆದರೆ ಭಾರತೀಯರ ನೋವು ಮಾಸಿಲ್ಲ. ಇದೀಗ ಪೆಹಲ್ಗಾಂ ಘಟನೆ ನೆನಪಿಸುವ ರೀತಿಯಲ್ಲೇ ಮುಂಬೈನಲ್ಲಿ ದಾಳಿಯಾಗಿದೆ. ಅಮೆರಿಕದಿಂದ ಮರಳಿದ 31ರ ಹರೆಯದ ಝೈಬ್ ಝುಬೇರ್ ಅನ್ಸಾರಿ ಮುಂಬೈಲ್ಲಿ ಇಬ್ಬರು ಸೆಕ್ಯೂರಿಟಿ ಗಾರ್ಡ್ ಮೇಲೆ ದಾಳಿ ಮಾಡಿದ್ದಾನೆ. ಸೆಕ್ಯೂರಿಟಿ ಗಾರ್ಡ್‌ಗಳಿಗೆ ಕಲ್ಮಾ ಪಠಿಸಲು ಸೂಚಿಸಿದ್ದಾನೆ. ಆತನ ಮಾತನ್ನು ನಿರ್ಲಕ್ಷಿಸಿದ ಬೆನ್ನಲ್ಲೇ ಭದ್ರತಾ ಸಿಬ್ಬಂದಿಗಳ ಮೇಲೆ ಚಾಕು ಮೂಲಕ ದಾಳಿ ನಡೆಸಿದ್ದಾನೆ.
ಕಟ್ಟಡ ನಿರ್ಮಾಣ ಸ್ಥಳದಲ್ಲಿ ಸೆಕ್ಯೂರಿಟಿ ಗಾರ್ಡ್
ಮುಂಬೈನ ವೋಕಾರ್ಡ್ ಆಸ್ಪತ್ರೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡ ಕಾಮಗಾರಿ ಸ್ಥಳದಲ್ಲಿ ರಾಜ್‌ಕುಮಾರ್ ಮಿಶ್ರಾ ಹಾಗೂ ಸುಬ್ರತೋ ಸೆನ್ ಇಬ್ಬರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕಡ್ಡಟ ಕಾಮಗಾರಿ ಸ್ಥಳದಲ್ಲಿ ಕಾಮಗಾರಿ ವಸ್ತುಗಳು, ಸಲಕರಣೆಗಳಿರುವ ಕಾರಣ ಸೆಕ್ಯೂರಿಟಿ ಗಾರ್ಡ್ ನಿಯೋಜನೆ ಮಾಡಲಾಗಿತ್ತು. ಈ ಸ್ಥಳಕ್ಕೆ ಆಗಮಿಸಿದ ಝೈಬ್ ಝುಬೇರ್ ಅನ್ಸಾರಿ, ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳಿಗೆ ಕಲ್ಮಾ ಪಠಿಸಲು ಹೇಳಿದ್ದಾನೆ. ಕಲ್ಮಾ ತಮಗೆ ಗೊತ್ತಿಲ್ಲ, ನೀನು ಇಲ್ಲಿಂದ ಹೊರಡು ಎಂದು ಇಬ್ಬರು ಸೆಕ್ಯೂರಿಟಿ ಗಾರ್ಡ್ ಸೂಚಿಸಿದ್ದಾರೆ.
ಕಲ್ಮಾ ಗೊತ್ತಿಲ್ಲ ಎಂದ ಸೆಕ್ಯೂರಿಟಿ ಗಾರ್ಡ್ ಮೇಲೆ ದಾಳಿ
ಹೊರಟಂತೆ ನಟಿಸಿದ ಝೈಬ್ ಝುಬೇರ್ ಅನ್ಸಾರಿ ತನ್ನಲ್ಲಿದ್ದ ಹರಿತವಾದ ಚಾಕು ತೆಗೆದು ಇಬ್ಬರ ಮೇಲೂ ದಾಳಿ ಮಾಡಿದ್ದಾನೆ. ಕೂಗಿಕೊಂಡರೂ ಯಾರೂ ಪಕ್ಕದಲ್ಲಿ ಇರಲಿಲ್ಲ. ಹೀಗಾಗಿ ದಾಳಿಯಾಗಿರುವುದು ಯಾರಿಗೂ ಗೊತ್ತಾಗಲೇ ಇಲ್ಲ. ಕೂಗಾಟ, ಚೀರಾಟ ಹೆಚ್ಚಾದಾಗ ಝುಬೇರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ತೀವ್ರವಾಗಿ ಗಾಯಗೊಂಡು ಇಬ್ಬರು ಸ್ಥಳದಲ್ಲೆ ಕಸಿದು ಬಿದ್ದಿದ್ದಾರೆ. ಇದೇ ದಾರಿಯಲ್ಲಿ ಬಂದ ಸ್ಥಳೀಯರು ಇಬ್ಬರು ನೆಲದ ಮೇಲೆ ಬಿದ್ದಿರುವುದು ನೋಡಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೆಲ ಗಂಟೆಗಳಲ್ಲಿ ಆರೋಪಿ ಝುಬೈರ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೆಹಲ್ಗಾಂ ಘಟನೆ ನೆನಪಿಸಿದ ದಾಳಿ
ಕಳೆದ ವರ್ಷ ಕಾಶ್ಮೀರದ ಪೆಹಲ್ಗಾಂಗೆ ಪ್ರವಾಸದಲ್ಲಿದ್ದ ಅಮಾಯಕ ಭಾರತೀಯರ ಮೇಲೆ ಭಯೋತ್ಪಾದಕ ದಾಳಿಯಾಗಿತ್ತು. ಉಗ್ರರು ಪೆಹಲ್ಗಾಂನಲ್ಲಿ ನರಮೇಧ ನಡೆಸಿದ್ದರು. ಈ ದಾಳಿಯಲ್ಲಿ 26 ಪ್ರಯಾಣಿಕರು ಹತ್ಯೆಯಾಗಿದ್ದರು. ಉಗ್ರರು ಧರ್ಮ ಕೇಳಿ ಗುಂಡಿನ ದಾಳಿ ನಡೆಸಿದ್ದರು. ಹುಡುಕಿ ಹುಡುಕಿ ಹಿಂದೂಗಳ ಮೇಲೆ ದಾಳಿ ಮಾಡಲಾಗಿತ್ತು. ತಾನು ಮುಸ್ಲಿಂ ಎಂದರೆ ಕಲ್ಮಾ ಪಠಿಸುವಂತೆ ಸೂಚಿಸಿದ್ದರು. ಈ ವೇಳೆ ಕಲ್ಮಾ ಪಠಿಸದಿದ್ದವರ ಮೇಲೂ ದಾಳಿಯಾಗಿತ್ತು. ಇದೀಗ ಝುಬೇರ್ ಇದೇ ಕಲ್ಮಾ ಪಠಿಸಲು ಸೂಚಿಸಿ ಚಾಕು ಮೂಲಕ ದಾಳಿ ಮಾಡಿದ್ದಾನೆ.


