ಏಳು ರಾಜ್ಯಗಳಲ್ಲಿ ಹರಡಿರುವ ಅಕ್ರಮ ಮತಾಂತರ ಗ್ಯಾಂಗ್ ಬೆಳಕಿಗೆ ಬಂದಿದೆ. ದೆಹಲಿಯ ಮಾಸ್ಟರ್‌ಮೈಂಡ್‌ನಿಂದ ಹಲವು ಯುವತಿಯರು ಬಲಿಪಶುಗಳಾಗಿದ್ದಾರೆ. ಈ ಗ್ಯಾಂಗ್‌ನಲ್ಲಿ ಕೆಲವು ಯುವತಿಯರು ಸ್ವತಃ ಮತಾಂತರಗೊಂಡು ಇತರರನ್ನು ಬಲೆಗೆ ಬೀಳಿಸುತ್ತಿದ್ದಾರೆ.

ಉತ್ತರ ಪ್ರದೇಶ (ಜು.25): ಅಕ್ರಮ ಮತಾಂತರ ಗ್ಯಾಂಗ್‌ನ ಜಾಲ ಏಳು ರಾಜ್ಯಗಳಲ್ಲಿ ಹರಡಿದ್ದು, ದೆಹಲಿಯ ಮಾಸ್ಟರ್‌ಮೈಂಡ್ ಅಬ್ದುಲ್ ರೆಹಮಾನ್‌ನಿಂದ ಡಜನ್ಗಟ್ಟಲೆ ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಿ ಮತಾಂತರಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಈ ಗ್ಯಾಂಗ್‌ನ ಕೆಲವು ಯುವತಿಯರು ತಮ್ಮ ಧರ್ಮವನ್ನು ಬಿಟ್ಟು ಈ ಗ್ಯಾಂಗ್‌ಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಸದರ್ ಪ್ರದೇಶದ ಒಡಹುಟ್ಟಿದ ಸಹೋದರಿಯರ ಅಪಹರಣ ಪ್ರಕರಣದ ತನಿಖೆಯ ಸಂದರ್ಭದಲ್ಲಿ, ಪೊಲೀಸರು ಕೋಲ್ಕತ್ತಾ ಸೇರಿದಂತೆ ವಿವಿಧ ರಾಜ್ಯಗಳಿಂದ 10 ಆರೋಪಿಗಳನ್ನು ಬಂಧಿಸಿದ್ದಾರೆ. ಗೋವಾದ ಎಸ್‌ಬಿ ಕೃಷ್ಣ ಅಲಿಯಾಸ್ ಆಯೇಷಾಳ ವಿಚಾರಣೆಯಿಂದ ದೆಹಲಿಯ ಓಲ್ಡ್ ಮುಸ್ತಾಬಾದ್‌ನ ಅಬ್ದುಲ್ ರೆಹಮಾನ್ ಅಲಿಯಾಸ್ ಮಹೇಂದ್ರ ಪಾಲ್‌ನ ಹೆಸರು ಬಯಲಿಗೆ ಬಂದಿತು. ದಾಳಿಯ ನಂತರ ರೆಹಮಾನ್, ಆತನ ಪುತ್ರರಾದ ಅಬ್ದುಲ್ಲಾ, ಅಬ್ದುಲ್ ರಹೀಮ್ ಮತ್ತು ಶಿಷ್ಯ ಜುನೈದ್ ಖುರೇಷಿಯನ್ನು ಬಂಧಿಸಲಾಯಿತು.

ವಿಚಾರಣೆಯಲ್ಲಿ, ರೆಹಮಾನ್ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ್, ಜಾರ್ಖಂಡ್, ದೆಹಲಿ, ಬರೇಲಿ, ಅಲಿಗಢ, ರಾಯ್ ಬರೇಲಿ ಮತ್ತು ಗಾಜಿಯಾಬಾದ್‌ನ ಹುಡುಗಿಯರನ್ನು ಗುರಿಯಾಗಿಸಿ, ಬ್ರೈನ್‌ವಾಶ್ ಮಾಡಿ, ಕಲ್ಮಾ ಪಠಿಸುವಂತೆ ಒತ್ತಾಯಿಸಿದ್ದ ಎಂದು ಪೊಲೀಸ್ ಆಯುಕ್ತ ದೀಪಕ್ ಕುಮಾರ್ ತಿಳಿಸಿದ್ದಾರೆ.

ಶಾಲಾ ಕಾಲೇಜುಗಳಲ್ಲಿ ಗ್ಯಾಂಗ್‌ ಆಕ್ಟಿವ್!

ಗ್ಯಾಂಗ್ ಸದಸ್ಯರು ಯುವತಿಯರನ್ನು ಸಂಪರ್ಕಿಸಿ, ದೆಹಲಿಯ ಹಾಸ್ಟೆಲ್‌ಗಳಲ್ಲಿ ಇರಿಸಿ, ಇಸ್ಲಾಂ ಧರ್ಮದ ಬಗ್ಗೆ ಕಲಿಸಿ, ಕಲ್ಮಾ ಪಠಣಕ್ಕೆ ಒತ್ತಾಯಿಸುತ್ತಿದ್ದರು. ಹೊರಗೆ ಹೋಗಲು ಅವಕಾಶವಿರಲಿಲ್ಲ, ಮತ್ತು ನಿಕಾಹ್‌ಗೆ ಒತ್ತಾಯಿಸಲಾಗುತ್ತಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ. ಉತ್ತರಾಖಂಡದ ಇಬ್ಬರು ಯುವತಿಯರನ್ನು ದೆಹಲಿಗೆ ಕರೆಸಿ ಮತಾಂತರಿಸಲಾಗಿತ್ತು. ಈಗ ಅವರು ಗ್ಯಾಂಗ್‌ನ ಭಾಗವಾಗಿ, ಕಾಲೇಜು ಹುಡುಗಿಯರನ್ನು ಗುರಿಯಾಗಿಸಿ ಇಸ್ಲಾಂ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಒಮ್ಮೆ ಗ್ಯಾಂಗ್‌ಗೆ ಸೇರಿದ ಯುವತಿಯರಿಗೆ ಹಿಂದಿರುಗುವುದು ಅಷ್ಟು ಸುಲಭವಾಗಿಲ್ಲ.

ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮೌಲಾನಾ ಕಲೀಮ್ ಸಿದ್ದಿಕಿ ಬಳಿ ಕೆಲಸ ಮಾಡುತ್ತಿದ್ದ ರೆಹಮಾನ್, ಮೌಲಾನಾ ಜೈಲಿಗೆ ಹೋದ ನಂತರ ಗ್ಯಾಂಗ್‌ನ ನಾಯಕತ್ವ ವಹಿಸಿಕೊಂಡಿದ್ದ. ಉನ್ನತ ಶಿಕ್ಷಣ ಪಡೆದ ಯುವತಿಯರೂ ಈ ಜಾಲಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ರೆಹಮಾನ್‌ನ ಮೊಬೈಲ್‌ನಲ್ಲಿ ಅನೇಕ ಯುವತಿಯರ ವಿವರಗಳು ಪತ್ತೆಯಾಗಿವೆ. ಮತಾಂತರಕ್ಕಾಗಿ ವಿವಿಧ ಸ್ಥಳಗಳಿಂದ ಹಣಕಾಸು ಸಂಗ್ರಹವಾಗುತ್ತಿತ್ತು. ಆತನ ಪುತ್ರರು ಶೂ ವ್ಯಾಪಾರದ ಮೂಲಕ ಈ ಚಟುವಟಿಕೆಗೆ ಬೆಂಬಲ ನೀಡುತ್ತಿದ್ದರು.

ಅಕ್ರಮ ಮತಾಂತರ ಪ್ರಕರಣ ಸಂಬಂಧ ಉತ್ತರ ಪ್ರದೇಶ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಈ ಗ್ಯಾಂಗ್‌ನ ಜಾಲವನ್ನು ಭೇದಿಸಲು ಮತಾಂತರಗೊಂಡ ಯುವತಿಯರು ಮತ್ತು ಅವರ ಕುಟುಂಬಗಳನ್ನು ಸಂಪರ್ಕಿಸುತ್ತಿದ್ದಾರೆ. ಬಂಧಿತ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.