ಮನೆ ಬಾಗಿಲಿಗೆ ಆಹಾರ ತಲುಪಿಸಲು ನಿರಾಕರಿಸಿದ ಡೆಲಿವರಿ ಬಾಯ್, ಗ್ರಾಹಕನ ಜೊತೆ ವಾಗ್ವಾದಕ್ಕಿಳಿದು ಆರ್ಡರ್ ಕ್ಯಾನ್ಸಲ್ ಮಾಡಿದ್ದಾನೆ. ನಂತರ ಗ್ರಾಹಕ ಆರ್ಡರ್ ಮಾಡಿದ್ದ ಆಹಾರವನ್ನು ತಾನೇ ತಿಂದು ವಿಡಿಯೋ ಮಾಡಿದ್ದು, ಈ ಘಟನೆಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅನೇಕ ಆನ್‌ಲೈನ್ ಪುಡ್ ಡೆಲಿವರಿ ಆಪ್‌ಗಳು ಮನೆ ಬಾಗಿಲಿಗೆ ಸೇವೆ ನೀಡುತ್ತೇವೆ ಎಂಬ ಭರವಸೆ ನೀಡುತ್ತಾರೆ. ಆದರೆ ಡೆಲಿವರಿ ಮಾಡುವ ಸಿಬ್ಬಂದಿಯೊರ್ವ ಕಸ್ಟಮರ್ ಮಹಡಿಯಿಂದ ಕೆಳಗಿಳಿದು ಬಾರದ ಕಾರಣ ಕಸ್ಟಮರ್ ಮಾಡಿದ ಆರ್ಡರ್‌ನ್ನು ಕ್ಯಾನ್ಸಲ್ ಮಾಡಿ ತಾನೇ ಕೆಳಗೆ ಕುಳಿತು ಆಹಾರವನ್ನು ತಿಂದಂತಹ ಘಟನೆ ನಡೆದಿದೆ. ಹಲವು ಮಹಾನಗರಗಳಲ್ಲಿ ಕಾರ್ಯಾಚರಿಸುವ ಫುಡ್ ಡೆಲಿವರಿ ಆಪ್‌ಗಳು ತಮ್ಮ ಗ್ರಾಹಕರಿಗೆ ಮನೆ ಬಾಗಿಲಿಗೆ ಸೇವೆ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ಗ್ರಾಹಕರು ಫುಡ್ ಡೆಲಿವರಿ ಬಾಯ್‌ಗೆ ಮನೆ ಬಾಗಿಲಿಗೆ ಬರುವಂತೆ ಕೇಳಿದಾಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ನಂತರ ಗ್ರಾಹಕ ಆಹಾರವನ್ನು ಮೇಲೆ ತರುವುದಕ್ಕೆ ಸಾಧ್ಯವಾದರೆ ತೆಗೆದುಕೊಂಡು ಬಾ ಇಲ್ಲದೇ ಹೋದರೆ ಆರ್ಡರ್ ಕ್ಯಾನ್ಸಲ್ ಮಾಡು ಎಂದು ಹೇಳಿದ್ದಾರೆ. ಇದರಿಂದ ಡೆಲಿವರಿ ಬಾಯ್ ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ. ಈ ವಾಗ್ವಾದದ ನಂತರ ವೀಡಿಯೋ ಮಾಡಿರುವ ಡೆಲಿವರಿ ಬಾಯ್ ತಾನು ಮೇಲೆ ಹೋಗುವುದಕ್ಕೆ ಸಾಧ್ಯವಾಗದಕ್ಕೆ ಕಾರಣ ನೀಡಿದ್ದಾನೆ. ಆದರೆ ನೆಟ್ಟಿಗರು ಡೆಲಿವರಿ ಬಾಯ್‌ಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ನಿಮ್ಮ ಫುಡ್ ಡೆಲಿವರಿ ಸಂಸ್ಥೆಗಳ ಜೊತೆಗೆ ಜಗಳ ಮಾಡಿ ಗ್ರಾಹಕರ ಜೊತೆಗೆ ಅಲ್ಲ, ನಿಮ್ಮ ಸಂಸ್ಥೆಗಳು ಗ್ರಾಹಕರಿಗೆ ಮನೆ ಬಾಗಿಲಿಗೆ ಸೇವೆ ಒದಗಿಸುವುದಾಗಿ ಹೇಳುತ್ತಾರೆ. ಆದರೆ ನೀವು ಗ್ರಾಹಕರ ಜೊತೆಗೆ ಜಗಳ ಮಾಡುತ್ತಿರಿ ಎಂದು ಕಾಮೆಂಟ್‌ಗಳಲ್ಲಿ ಬೈದಾಡಿದ್ದಾರೆ.
ಫುಡ್ ಡೆಲಿವರಿ ಬಾಯ್ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಏನಿದೆ?
ankurthakur7127 ಎಂಬಾತ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ನಾನು ಅವರಿಗೆ ಕೆಳಗೆ ಬರುವಂತೆ ಹೇಳಿದೆ. ಅದರೆ ಅವರು ಬರಲಿಲ್ಲ, ಮೇಲೆ ಬನ್ನಿ ಅಥವಾ ಆರ್ಡರ್ ಕ್ಯಾನ್ಸಲ್ ಮಾಡಿ ಎಂದರು. ಹೀಗಾಗಿ ನಾನು ಆರ್ಡರ್ ಕ್ಯಾನ್ಸಲ್ ಮಾಡಿದೆ. ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದು ಹೇಳಿ ಕಸ್ಟಮರ್ ಆರ್ಡರ್ ಮಾಡಿದ ಆಹಾರವನ್ನು ಕೆಳಗೆಯೇ ನಿಂತು ತಿನ್ನುತ್ತಿದ್ದಾರೆ. ಗ್ರಾಹಕನೋರ್ವ ನಾಲ್ಕು ಬಾಕ್ಸ್ ಗುಲಾಬ್ ಜಾಮೂನ್ ಹಾಗೂ ಬಿರಿಯಾನಿ ಆರ್ಡರ್ ಮಾಡಿದ್ದ ಎಂದು ತಿಳಿದು ಬಂದಿದೆ.
ಅದು ರಾತ್ರಿ ಗಂಟೆ 2.30ರ ಸಮಯವಾಗಿತ್ತು. ಕಸ್ಟಮರ್ ಕೆಳಗಿಳಿದು ಬಂದು ಆಹಾರವನ್ನು ತೆಗೆದುಕೊಳ್ಳುವುದಕ್ಕೆ ನಿರಾಕರಿಸಿದರು. ಕೆಳಗೆ ಬಂದು ಆಹಾರ ಸ್ವೀಕರಿಸಿ ಎಂದು ಕಸ್ಟಮರ್‌ಗೆ ಮಾಡಿದ ಮನವಿ ಹೇಗೆ ವಾದವಾಗಿ ಬದಲಾಯಿತು ಎಂದು ಅವರು ಹೇಳಿದ್ದಾರೆ. ಕಸ್ಟಮರ್ ಬಾಲ್ಕನಿಯಿಂದಲೇ ಕೂಗಾಡಿದ ತಾನು ಆಹಾರಕ್ಕೆ ಪಾವತಿ ಮಾಡಿರುವುದರಿಂದ ನೀವು ಮನೆ ಬಾಗಿಲಿಗೆ ಬಂದು ಆಹಾರ ನೀಡಬೇಕು ಎಂದು ಅವನು ಹೇಳಿದ ಆದರೆ ಅದು ಮಧ್ಯರಾತ್ರಿ 2.30ರ ಸಮಯವಾಗಿತ್ತು.
ಈಗ ನಾನು ನನ್ನ ಬೈಕ್ ಬಿಟ್ಟು ಹೋದರೆ ಯಾರಾದರು ಅದನ್ನು ಕದಿಯಬಹುದು. ಜೊತೆಗೆ ನಾನು ಈ ಚಳಿಯಲ್ಲಿ ಬಹಳ ದೂರದಿಂದ ಬೈಕ್ ರೈಡ್ ಮಾಡಿಕೊಂಡು ಬಂದಿದ್ದೇನೆ ಹೀಗಿರುವಾಗ ಗ್ರಾಹಕರು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಗ್ರಾಹಕರು ಆರ್ಡರ್ ಅನ್ನು ಮೇಲಕ್ಕೆ ತಲುಪಿಸಿ ಅಥವಾ ರದ್ದುಗೊಳಿಸಿ ಎಂದು ಹೇಳಿದ್ದರು ಹೀಗಾಗಿ ನಾನು ಅದನ್ನು ರದ್ದುಗೊಳಿಸಿದೆ ಮತ್ತು ನಾನು ಈಗ ಅದನ್ನು ಇಲ್ಲೇ ತಿನ್ನುತ್ತಿದ್ದೇನೆ ಎಂದು ಠಾಕೂರ್ ವೀಡಿಯೊದಲ್ಲಿ ಗುಲಾಬ್ ಜಾಮೂನ್ ತುಂಡನ್ನು ತೆಗೆದುಕೊಂಡು ಬಾಯಿಗೆ ಹಾಕುತ್ತಾ ಹೇಳಿದ್ದಾರೆ.
ಇದನ್ನೂ ಓದಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೀಸೆ ಚಿಗುರದ ಮಕ್ಕಳ ಧಮ್ ಮಾರೋ ಧಮ್: ವಿಡಿಯೋ ವೈರಲ್
ಆದರೆ ಡೆಲಿವರಿ ಬಾಯ್‌ನ ಈ ವರ್ತನೆ ಅನೇಕರಿಗೆ ಇಷ್ಟವಾಗದೇ ಆತನನ್ನು ಆನ್‌ಲೈನ್‌ನಲ್ಲಿ ಜನ ಬಯ್ಯಲು ಶುರು ಮಾಡಿದ್ದಾರೆ. ನಿಮ್ಮ ಕಂಪನಿಯ ನೀತಿಯ ಪ್ರಕಾರ ನೀವು ಆಹಾರ ಮನೆ ಬಾಗಿಲಿಗೆ ತಲುಪಿಸಬೇಕು. ಅದು ನಿಮಗೆ ಇಷ್ಟವಿಲ್ಲದಿದ್ದರೆ, ಅದು ನಿಮ್ಮ ಸ್ವಂತ ಉದ್ಯೋಗದಾತರೊಂದಿಗಿನ ನಿಮ್ಮ ವೈಯಕ್ತಿಕ ಸಮಸ್ಯೆ. ಇದರಲ್ಲಿ ಗ್ರಾಹಕರನ್ನು ಏಕೆ ಎಳೆಯಬೇಕು? ಆ ವ್ಯಕ್ತಿಯು ಬಹುಶ ದಣಿದು ಮನೆಗೆ ಬಂದಿರಬಹುದು. ನಿಮಗೆ ಈ ಕೆಲಸ ಇಷ್ಟವಿಲ್ಲದಿದ್ದಾರೆ ಏಕೆ ಮಾಡುತ್ತೀರಿ ಎಂದು ಒಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಕೆಳಗೆವರೆಗೆ ಹೋಗಲು ಬಯಸುವುದಾದರೆ ನಾನು ಏಕೆ ಆರ್ಡರ್ ಮಾಡುವೆ ಸೀದಾ ರೆಸ್ಟೋರೆಂಟ್‌ಗೆ ಹೋಗ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇವರು ಎರಡು ಗುಲಾಬ್ ಜಾಮ್‌ಗೋಸ್ಕರ ಉದ್ಯೋಗ ಕಳೆದುಕೊಂಡಂತೆ ಕಾಣುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅಜಿತ್ ಪವಾರ್ ನಿಧನ: ಸುಪ್ರಿಯಾ ಸುಳೆ ಹಾಗೂ ಸುನೇತ್ರಾ ಅವರನ್ನು ಸಮಾಧಾನಿಸುತ್ತಿರುವ ವೃದ್ಧ ಯಾರು?
ಹಾಗೆಯೇ ಒಬ್ಬರು ತಮ್ಮ ಅನುಭವ ಹೇಳಿಕೊಂಡಿದ್ದು, ನಾನು ಹುಷಾರಿಲ್ಲ ಎಂದು ಆಹಾರ ಅರ್ಡರ್ ಮಾಡಿದೆ ಆದರೆ ಡೆಲಿವರಿ ಬಾಯ್ ಕರೆ ಮಾಡಿ ನನಗೂ ಹುಷಾರಿಲ್ಲ ಕೆಳಗೆ ಬಂದು ಆರ್ಡರ್ ಸ್ವೀಕರಿಸಿ ಎಂದ. ಹುಷಾರಿಲ್ಲದೇ ಹೋದರೆ ಕೆಲಸ ಏಕೆ ಮಾಡುವಿರಿ. ಅವನು ಶೀತ ಚಳಿಗಾಳಿಯಲ್ಲಿ ಪರವಾನಗಿ ಇಲ್ಲದೆ ಬೈಕ್ ಓಡಿಸುವಷ್ಟು ಆರೋಗ್ಯವಾಗಿದ್ದ, ಆದರೆ ನನ್ನ ಮನೆ ಬಾಗಿಲಿಗೆ ಬರುವುದಕ್ಕೆ ಆಗಲಿಲ್ಲಎಂದು ಹೇಳಿದ್ದಾರೆ. ಈ ಘಟನೆ ಬಗ್ಗೆ ನಿಮಗೇನನಿಸಿತು. ಫುಡ್ ಡೆಲಿವರಿ ಬಾಯ್ ಮಾಡಿದ್ದು ಸರಿಯೇ..?


