ಪ್ರಧಾನಿ ಮೋದಿ ಭಾಷಣದ ವೇಳೆ ವಿಪಕ್ಷಗಳು ಸಂಸತ್ತಿನಿಂದ ಹೊರನಡೆದಿದ್ದಕ್ಕೆ ಬಿಜೆಪಿ ನಾಯಕ ಸೈಯದ್ ಜಫರ್ ಇಸ್ಲಾಂ ಗರಂ ಆಗಿದ್ದಾರೆ. ರಾಹುಲ್ ಗಾಂಧಿ ವರ್ತನೆಯನ್ನು 'ಮಕ್ಕಳಾಟಿಕೆ' ಎಂದು ಕರೆದಿರುವ ಅವರು, ವಿಪಕ್ಷಗಳು ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದಾಗ ವಿಪಕ್ಷಗಳು ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದವು. ಈ ಘಟನೆ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಜಫರ್ ಇಸ್ಲಾಂ ಅವರು ಶುಕ್ರವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಂಸತ್ತಿನಲ್ಲಿ ರಾಹುಲ್ ತೋರಿದ ವರ್ತನೆಯನ್ನು 'ಮಕ್ಕಳಾಟ' ಎಂದು ಅವರು ಜರಿದಿದ್ದಾರೆ. ವಿಪಕ್ಷಗಳು ರಾಜಕೀಯ ಸ್ಟಂಟ್ ಮಾಡಿ, ಗದ್ದಲ ಎಬ್ಬಿಸಿ ಟಿವಿಯಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಾವು ವಿರೋಧಿಸುತ್ತಿರುವ ಮೂಲ ವಿಷಯಗಳ ಬಗ್ಗೆ ಚರ್ಚೆ ಮಾಡಲು ಅವರಿಗೆ ಆಸಕ್ತಿಯೇ ಇಲ್ಲ, ಎಂದು ಇಸ್ಲಾಂ ಹೇಳಿದ್ದಾರೆ. 'ಅವರ ಮಕ್ಕಳಾಟಿಕೆಯಿಂದ ಸಂಸತ್ತನ್ನೇ ಒತ್ತೆಯಿಟ್ಟುಕೊಂಡಿದ್ದರು. ಇದೇ ಮೊದಲ ಬಾರಿಗೆ, ಪ್ರಧಾನಿ ಮೇಲೆ ದಾಳಿ ನಡೆಯುವ ಸಾಧ್ಯತೆ ಇದ್ದಿದ್ದರಿಂದ ಅವರ ಭಾಷಣವನ್ನು ನಿಲ್ಲಿಸಲಾಯಿತು. ಇವತ್ತು ವಿಪಕ್ಷ ಸಂಸದರು ತೋರಿದ ಬೇಜವಾಬ್ದಾರಿ ವರ್ತನೆ ನೋಡಿದರೆ, ಅವರಿಗೆ ತಮ್ಮ ವರ್ಚಸ್ಸಿನ ಬಗ್ಗೆಯಾಗಲಿ, ದೇಶದ ಬಗ್ಗೆಯಾಗಲಿ ಕಾಳಜಿ ಇಲ್ಲ ಎಂಬುದು ಸ್ಪಷ್ಟ. ಕೇವಲ ಟಿವಿಯಲ್ಲಿ ಪ್ರತಿಭಟನೆ ಮಾಡ್ತಾ ಕಾಣಿಸಿಕೊಳ್ಳಬೇಕು ಅಷ್ಟೇ. ಚರ್ಚೆ ಮಾಡೋಣ ಅಂತ ಸದನಕ್ಕೆ ಬರ್ತಾರೆ, ಆದರೆ ಚರ್ಚೆ ಮಾಡಲ್ಲ. ಸದನಕ್ಕೆ ಬಂದ ತಕ್ಷಣ ಗದ್ದಲ ಶುರು ಮಾಡ್ತಾರೆ ಎಂದು ಅವರು ANI ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

'ಬಣ್ಣ ಬಯಲಾಗುತ್ತೆ ಅಂತ ಸದನಕ್ಕೆ ಅಡ್ಡಿ

ವಿಪಕ್ಷಗಳ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ ಬಿಜೆಪಿ ವಕ್ತಾರರು, 'ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ವಿಪಕ್ಷಗಳು ಸದನದ ಕಲಾಪವನ್ನು ಮುಂದೂಡಲು ಅಥವಾ ಮೊಟಕುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಕಲಾಪ ಸಲಹಾ ಸಮಿತಿಯಲ್ಲಿ ಒಪ್ಪಿಗೆ ಸೂಚಿಸಿದರೂ, ಸದನಕ್ಕೆ ಬಂದಾಗ ಚರ್ಚೆ ಬದಲು ಪ್ರತಿಭಟನೆ ಮಾಡುತ್ತಾರೆ. ಸದನ ನಡೆಯದಂತೆ ಮಾಡುವುದೇ ಅವರ ಮುಖ್ಯ ಗುರಿ. ಯಾಕಂದ್ರೆ, ಸದನ ನಡೆದರೆ ಅವರ ಬಣ್ಣ ಇನ್ನಷ್ಟು ಬಯಲಾಗುತ್ತದೆ. ಅವರು ದೇಶವನ್ನು ಕೆಳಮಟ್ಟಕ್ಕೆ ತರಲು ಯತ್ನಿಸಿದ್ದಾರೆ. ದೇಶದ ರಾಷ್ಟ್ರೀಯ ಭದ್ರತೆಯೊಂದಿಗೂ ರಾಜಿ ಮಾಡಿಕೊಂಡಿದ್ದಾರೆ. ಯಾವಾಗೆಲ್ಲಾ ಅವರ ಬಂಡವಾಳ ಬಯಲಾಗುತ್ತದೋ, ಆಗ ಸಭಾತ್ಯಾಗ ಮಾಡುತ್ತಾರೆ ಅಥವಾ ಸದನಕ್ಕೆ ಅಡ್ಡಿಪಡಿಸುತ್ತಾರೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶ ಪ್ರಗತಿ ಸಾಧಿಸುತ್ತಿರುವಾಗ, ಇಂದು ಅವರು ತಮ್ಮ ಅದೇ ಹಳೇ ಚಾಳಿಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ," ಎಂದು ಅವರು ಹೇಳಿದ್ದಾರೆ.

FTA ಒಪ್ಪಂದ ಬೆನ್ನಲ್ಲೇ ರಾಹುಲ್ 'ಮಕ್ಕಳಾಟ' ಆಡ್ತಿದ್ದಾರೆ

ಇದೇ ವೇಳೆ ರಾಹುಲ್ ಗಾಂಧಿ ಅವರ ವರ್ತನೆಯನ್ನು 'ಮಕ್ಕಳ ಮನಸ್ಥಿತಿ'ಗೆ ಹೋಲಿಸಿದ ಇಸ್ಲಾಂ, ಭಾರತವು ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ (FTA) ಸಹಿ ಹಾಕಿರುವ ಈ ಮಹತ್ವದ ಸಮಯದಲ್ಲಿ ಸಂಸದರು ರಾಹುಲ್ ನಾಯಕತ್ವದಲ್ಲಿ ಸಭಾತ್ಯಾಗ ಮಾಡಿರುವುದನ್ನು ಖಂಡಿಸಿದ್ದಾರೆ. 'ಇವತ್ತು ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕ ಜೊತೆ ಎಫ್‌ಟಿಎಗಳಿಗೆ ಸಹಿ ಹಾಕಲಾಗಿದೆ. ಈಗಾಗಲೇ ನಾವು ವಿಶ್ವದ ಮೂರನೇ ಎರಡರಷ್ಟು ಆರ್ಥಿಕತೆ ಮತ್ತು ಜಿಡಿಪಿ ಹೊಂದಿರುವ ದೇಶಗಳೊಂದಿಗೆ ಎಫ್‌ಟಿಎ ಮಾಡಿಕೊಂಡಿದ್ದೇವೆ. ನಾವು ಸ್ಪರ್ಧಿಸುವ ದೇಶಗಳಿಗಿಂತ ಉತ್ತಮ ಸುಂಕವನ್ನು ಅಮೆರಿಕ ನಮಗೆ ನೀಡಿದೆ. ಇದುವೇ ಒಂದು ದೊಡ್ಡ ಸಾಧನೆ. ಇದರಿಂದ ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಸ್ಪರ್ಧಿಸಬಹುದು. ಆದರೂ, ವಿಪಕ್ಷ ನಾಯಕರು, ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿ, ತಮ್ಮ ಮಕ್ಕಳ ಮನಸ್ಥಿತಿಯಿಂದ ಮಕ್ಕಳ ಹಾಗೆ ಹಠ ಹಿಡಿಯುತ್ತಾರೆ. ಇಂದು ಎಲ್ಲಾ ಸಂಸದರು ಆ ಮಕ್ಕಳಾಟಿಕೆಯ ಹಠಕ್ಕೆ ಬಿದ್ದು ನಡೆದುಕೊಂಡ ರೀತಿ ಅತ್ಯಂತ ಖಂಡನೀಯ ಎಂದು ಅವರು ಹೇಳಿದ್ದಾರೆ. (ANI)

(ಈ ಸುದ್ದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದಂತೆ ಸುದ್ದಿ ಸಂಸ್ಥೆಯಿಂದ ಬಂದಂತೆ ಪ್ರಕಟಿಸಲಾಗಿದೆ. ಏಷ್ಯಾನೆಟ್ ನ್ಯೂಸೇಬಲ್ ಇಂಗ್ಲಿಷ್ ಸಿಬ್ಬಂದಿ ಇದನ್ನು ಸಂಪಾದಿಸಿಲ್ಲ.)