ಕೇಂದ್ರ ಬಜೆಟ್ 2026 ಮಂಡನೆಯ ನಂತರ, ನಿರುದ್ಯೋಗದ ಕುರಿತು ರಾಹುಲ್ ಗಾಂಧಿ ಮಾಡಿದ ಟೀಕೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ಸಮರ್ಥಿಸಿಕೊಂಡರು.

ನವದೆಹಲಿ (ಫೆ.1): ಇಂದು ಮಂಡನೆಯಾದ ಕೇಂದ್ರ ಬಜೆಟ್ 2026, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಬಜೆಟ್ ಮಂಡನೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 'ರಾಜಕೀಯಕ್ಕಾಗಿ ಕೆಟ್ಟದಾಗಿ ವರ್ತಿಸುವುದನ್ನು ಬಿಡಿ, ನಿಮ್ಮ ವಾದಗಳಲ್ಲಿ ಸತ್ಯಾಂಶವಿದ್ದರೆ ಮಂಡಿಸಿ, ನಾನು ಉತ್ತರಿಸಲು ಸಿದ್ಧ' ಎಂದು ಸವಾಲು ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮಸ್ಯೆಗಳಿಗೆ ಕಣ್ಣುಮುಚ್ಚಿದ ಬಜೆಟ್: ರಾಹುಲ್ ಗಾಂಧಿ ವಾಗ್ದಾಳಿ:

ಇದಕ್ಕೂ ಮುನ್ನ ಮಾತನಾಡಿದ್ದ ರಾಹುಲ್ ಗಾಂಧಿ, ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ, ಉತ್ಪಾದನೆ ಕುಸಿಯುತ್ತಿದೆ ಮತ್ತು ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಳ್ಳುತ್ತಿದ್ದಾರೆ. ಈ ಬಜೆಟ್ ದೇಶದ ನಿಜವಾದ ಸಮಸ್ಯೆಗಳಿಗೆ ಕಣ್ಣು ಮುಚ್ಚಿದೆ ಎಂದು ಟೀಕಿಸಿದ್ದರು. ಅಲ್ಲದೆ, ರೈತರ ಸಂಕಷ್ಟ ಮತ್ತು ಕುಸಿಯುತ್ತಿರುವ ಉಳಿತಾಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ ಎಂದು ಕಿಡಿಕಾರಿದ್ದರು.

ವೇಗವಾಗಿ ಬೆಳೆಯುತ್ತಿದೆ ಆರ್ಥಿಕತೆ:ನಿರ್ಮಲಾ ಸೀತಾರಾಮನ್ ತಿರುಗೇಟು:

ರಾಹುಲ್ ಆರೋಪಗಳನ್ನು ತಳ್ಳಿಹಾಕಿದ ಸಚಿವರು, ನಮ್ಮ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME), ಜವಳಿ, ಚರ್ಮೋದ್ಯಮ ಮತ್ತು ಮಹಿಳಾ ಉದ್ಯಮಿಗಳಿಗಾಗಿ ನಾವು ವಿಶೇಷ ಯೋಜನೆಗಳನ್ನು ತಂದಿದ್ದೇವೆ. ಅಂತರರಾಷ್ಟ್ರೀಯ ಒತ್ತಡದ ನಡುವೆಯೂ ಭಾರತ ಸದೃಢವಾಗಿದೆ ಎಂದು ಸ್ಪಷ್ಟಪಡಿಸಿದರು.

ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಕ್ರಾಂತಿ:

ಸೆಮಿಕಂಡಕ್ಟರ್ ಮಿಷನ್: ಇಂಡಿಯಾ ಸ್ಟ್ಯಾಕ್ ಮತ್ತು ಐಪಿ ಸುಧಾರಣೆಗೆ ಎರಡು ದೊಡ್ಡ ಘೋಷಣೆ.

ಎಲೆಕ್ಟ್ರಾನಿಕ್ಸ್ ಹಬ್: ₹40,000 ಕೋಟಿ ವೆಚ್ಚದ ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನಾ ಯೋಜನೆ.

ನಗರಗಳ ಅಭಿವೃದ್ಧಿ: ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳ ಅಭಿವೃದ್ಧಿಗೆ ವಾರ್ಷಿಕ ₹1,000 ಕೋಟಿ ಅನುದಾನ.

ಅಪರೂಪದ ಭೂಮಿಯ ವಸ್ತುಗಳ (Rare Earth Elements) ಕಾರಿಡಾರ್:

ಭಾರತವು ಖನಿಜಗಳಿಗಾಗಿ ವಿದೇಶದ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ 'ಅಪರೂಪದ ಭೂಮಿಯ ಕಾರಿಡಾರ್' ಸ್ಥಾಪಿಸುವುದಾಗಿ ಸಚಿವರು ಘೋಷಿಸಿದ್ದಾರೆ. ಇದು ದೇಶದ ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.