ಮನಾಲಿಯಲ್ಲಿ ಜಿಪ್‌ಲೈನ್ ಸಾಹಸದ ವೇಳೆ ಕೇಬಲ್ ತುಂಡಾಗಿ ಯುವತಿ 30 ಅಡಿ ಎತ್ತರದಿಂದ ಬಿದ್ದಿದ್ದಾಳೆ. ಈ ಘಟನೆಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ನಾಗ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬೇಸಿಗೆಯ ರಜೆಯ ಕಾರಣಕ್ಕೆ ಮನಾಲಿಗೆ ಪ್ರವಾಸಕ್ಕೆಂದು ಬಂದ ಕುಟುಂಬಕ್ಕೆ ಆಘಾತ ಎದುರಾಗಿದೆ. ಯುವತಿಯೊಬ್ಬಳು ಸಾಹಸ ಕ್ರಿಡೆಯಾದ ಜಿಪ್‌ಲೈನ್‌ನಲ್ಲಿ ಹೋಗುತ್ತಿದ್ದಾಗ ಅದರ ಕೊಂಡಿ ತುಂಡಾಗಿದೆ. ಪರಿಣಾಮ 30 ಅಡಿ ಎತ್ತರದಿಂದ ಯುವತಿ ಕೆಳಗೆ ಬಿದ್ದಿದ್ದಾಳೆ. ಈ ಭಯಾನಕ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಯುವತಿಗೆ ಗಂಭೀರ ಗಾಯಗಳಾಗಿದ್ದು, ನಾಗ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎದೆ ಝಲ್ ಎನಿಸುವಂತಿದೆ.
ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಗಪುರದ ಕುಟುಂಬವೊಂದು ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ಬಂದಿತ್ತು. ನಾಗ್ಪುರ ನಿವಾಸಿಯಾದ ಪ್ರಫುಲ್ ಬಜ್ವೆ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಪ್ರವಾಸಕ್ಕೆ ಬಂದಿದ್ದರು. ಈ ಪ್ರವಾಸದ ವೇಳೆ ಪುತ್ರಿ ತ್ರಿಷಾ ಬಜ್ವೆ ಜಿಪ್‌ಲೈನ್ ಸಾಹಸ ಮಾಡುವ ಆಸೆ ಪಟ್ಟಿದ್ದು, ಆಕೆಯ ಆಸೆಯಂತೆ ಪೋಷಕರು ಒಪ್ಪಿದ್ದು, ಆಕೆ ಜಿಪ್ಲೈನ್ ಸಾಹಸ ಮಾಡುವುದಕ್ಕಾಗಿ ಕೇಬಲ್ ಏರಿದ್ದಾಳೆ. ಆದರೆ ಹೀಗೆ ಈಕೆಯನ್ನು ಕರೆದೊಯ್ಯುತ್ತಿದ್ದ ವೇಳೆ ಈಕೆ ಕೇಬಲ್‌ನ ಮಧ್ಯಭಾಗವನ್ನು ತಲುಪುತ್ತಿದ್ದಂತೆ ಕೇಬಲ್‌ಗೆ ಈಕೆಯನ್ನು ನೇತು ಹಾಕಿದ್ದ ಕೊಂಡಿಯೊಂದು ತುಂಡಾಗಿದ್ದು, ಸರಿಸುಮಾರು 30 ಅಡಿ ಎತ್ತರದಿಂದ ಈಕೆ ಕೆಳಗೆ ಬಿದ್ದಿದ್ದಾಳೆ. ಕಳೆದ ಭಾನುವಾರ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ನಿಕಿಲ್ ಸೈನಿ ಎಂಬುವವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದೇ ಕಾರಣಕ್ಕೆ ಭಾರತದಲ್ಲಿ ಸಾಹಸ ಕ್ರೀಡೆಗಳು ಸುರಕ್ಷಿತವಾಗಿಲ್ಲ. ಮನಾಲಿಯಲ್ಲಿ, ಒಬ್ಬ ಯುವತಿಯೊಬ್ಬಳು ಸುಮಾರು 30 ಅಡಿ ಎತ್ತರದ ಜಿಪ್‌ಲೈನ್‌ನಿಂದ ಬಿದ್ದು ಈಗ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸರಿಯಾದ ಅನುಭವವಿಲ್ಲದ ಯಾರಾದರೂ ಇಂತಹ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾರೆ, ಮತ್ತು ಪರಿಶೀಲಿಸಲು ಯಾರೂ ಇರುವುದಿಲ್ಲ. ಮಾರಕ ಅಪಘಾತ ಸಂಭವಿಸಿದ ನಂತರವಷ್ಟೇ ಅವ್ಯವಸ್ಥೆಗಳು ಕಾಣುತ್ತವೆ. ಮತ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಎರಡು ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.
30 ಅಡಿ ಎತ್ತರದಿಂದ ತ್ರಿಷಾ ಅವರು ಕೆಳಗೆ ಬಿದ್ದಿದ್ದರಿಂದ ಆಕೆಯ ಕಾಲುಗಳಲ್ಲಿ ಹಲವು ಮುರಿತಗಳು ಉಂಟಾಗಿದ್ದು, ಆಕೆಯನ್ನು ಮೊದಲಿಗೆ ಮನಾಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಚಿಕಿತ್ಸೆ ನೀಡಲಾಯಿತು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢದ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಕೆ ಪ್ರಸ್ತುತ ನಾಗ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲಿ ವೈದ್ಯರು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ತ್ರಿಷಾ ಕುಟುಂಬದವರು ಜಿಪ್‌ಲೈನ್ ಸಾಹಸ ಚಟುವಟಿಕೆ ನಡೆಸುತ್ತಿರುವ ಸಂಸ್ಥೆಯ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದೆ. ಅಲ್ಲಿ ಸರಿಯಾದ ಸುರಕ್ಷತಾ ಕ್ರಮಗಳಿರಲಿಲ್ಲ, ಘಟನೆ ನಡೆದ ಕೂಡಲೇ ನಮಗೆ ಸೂಕ್ತ ಸಹಾಯವೂ ಲಭಿಸಲಿಲ್ಲ ಎಂದು ಕುಟುಂಬದವರು ದೂರಿದ್ದಾರೆ.
