ಜಡ್ಜ್‌ಗಳು ನಿಷ್ಪಕ್ಷ ಆಗಿರಬೇಕು, ತಮ್ಮ ಸ್ಥಾನಮಾನ ನೋಡಿ ಮಾತಾಡಬೇಕು: ಕೋರ್ಟ್‌ಗಳಿಗೆ ಸುಪ್ರೀಂ ಎಚ್ಚರಿಕೆ
ದೇಶದ ಯಾವುದೇ ಭಾಗವನ್ನು ಪಾಕ್ ಎನ್ನಕೂಡದು ಎಂದು ಎಲ್ಲಾ ಕೋರ್ಟ್ ಜಡ್ಜ್‌ಗಳಿಗೆ ಸುಪ್ರೀಂ ಎಚ್ಚರಿಕೆ ನೀಡಿದೆ. ಬುಧವಾರ ಆ ಅರ್ಜಿ ವಿಚಾರಣೆ ವೇಳೆ ಈ ಎಚ್ಚರಿಕೆ ನೀಡಿದೆ.
- ನ್ಯಾ। ಶ್ರೀಶಾನಂದ ಕ್ಷಮೆ ಕೇಳಿರುವ ಕಾರಣ ವಿಚಾರಣೆ ಮುಕ್ತಾಯಕ್ಕೆ ನಿರ್ಧಾರ
ನವದೆಹಲಿ: ‘ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಕೂಡದು. ಜೊತೆಗೆ, ಯಾವುದೇ ಸ್ತ್ರೀದ್ವೇಷ ಅಥವಾ ಯಾವುದೇ ಸಮುದಾಯ ಅಥವಾ ಲಿಂಗವನ್ನು ಉದ್ದೇಶಿಸಿ ಹೇಳಿಕೆ ನೀಡಬಾರದು’ ಎಂದು ಸುಪ್ರೀಂಕೋರ್ಟು ಎಲ್ಲ ಅಧೀನ ನ್ಯಾಯಾಲಯಗಳಿಗೆ ಎಚ್ಚರಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ನ್ಯಾ। ವೇದವ್ಯಾಸಾಚಾರ್ ಶ್ರೀಶಾನಂದ ಅವರು ಇತ್ತೀಚೆಗೆ ‘ಬೆಂಗಳೂರಿನ ಗೋರಿಪಾಳ್ಯ ಪಾಕಿಸ್ತಾನದಂತಿದೆ’ ಎಂದು ವ್ಯಕ್ತಪಡಿಸಿದ ಅಭಿಪ್ರಾಯ ಹಾಗೂ ಮಹಿಳಾ ವಕೀಲರೊಬ್ಬರ ಬಗ್ಗೆ ಆಡಿದ ಮಾತು ಆಧರಿಸಿ ಸ್ವಯಂಪ್ರಕರಣ ದಾಖಲಿಸಿಕೊಂಡಿದ್ದ ನ್ಯಾಯಾಲಯ, ಬುಧವಾರ ಆ ಅರ್ಜಿ ವಿಚಾರಣೆ ವೇಳೆ ಈ ಎಚ್ಚರಿಕೆ ನೀಡಿದೆ.
ಇದೇ ವೇಳೆ, ‘ತಮ್ಮ ಹೇಳಿಕೆ ಬಗ್ಗೆ ಈಗಾಗಲೇ ನ್ಯಾ। ಶ್ರೀಶಾನಂದ ಅವರು ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ಅವರು ಭಾಗಿದಾರರು ಅಲ್ಲ. ಹೀಗಾಗಿ ಪ್ರಕರಣವನ್ನು ಇಲ್ಲಿಗೇ ಮುಕ್ತಾಯಗೊಳಿಸಲಾಗುವುದು’ ಎಂದು ಮುಖ್ಯ ನ್ಯಾ। ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಏನಿದು ಪ್ರಕರಣ?:
ನ್ಯಾ। ಶ್ರೀಶಾನಂದ ಅವರು ಇತ್ತೀಚೆಗೆ ರಸ್ತೆ ಸಂಚಾರ ಪ್ರಕರಣವೊಂದರ ವಿಚಾರಣೆ ನಡೆಸುವಾಗ, ‘ಬೆಂಗಳೂರಿನ ಕೆ.ಅರ್.ಮಾರ್ಕೆಟ್ ಫ್ಲೈಓವರ್ ಮೇಲೆ ಸಂಚಾರ ನಿಯಮ ಗಾಳಿಗೆ ತೂರಲಾಗುತ್ತದೆ. ಒಂದು ಆಟೋದಲ್ಲಿ ಹತ್ತಾರು ಜನ ತುಂಬಿರುತ್ತಾರೆ. ಪೊಲೀಸರು ಏನೂ ಕ್ರಮ ಜರುಗಿಸಲ್ಲ. ಮಾರ್ಕೆಟ್‌ನಿಂದ ಗೋರಿಪಾಳ್ಯಕ್ಕೆ ಸಂಪರ್ಕಿಸುವ ರಸ್ತೆ ಪಾಕಿಸ್ತಾನದಲ್ಲಿ ಇದ್ದಂತಿದೆ’ ಎಂದಿದ್ದರು. ಇನ್ನೊಂದು ಪ್ರಕರಣದಲ್ಲಿ ಮಹಿಳಾ ವಕೀಲರೊಬ್ಬರು ವಿಪಕ್ಷಗಳ ಬಗ್ಗೆ ವಿವರಣೆ ನೀಡಿದಾಗ, ‘ನಿಮಗೆ ವಿಪಕ್ಷಗಳ ಬಗ್ಗೆ ಸಾಕಷ್ಟು ಗೊತ್ತಿದ್ದಂತಿದೆ. ವಿಪಕ್ಷಗಳ ನಾಯಕರು ಏನೇನು ಒಳ ಉಡುಪು ಧರಿಸುತ್ತಾರೆ ಎಂಬುದನ್ನೂ ನೀವು ಹೇಳಿಬಿಡುತ್ತೀರಿ’ ಎಂದು ಟಾಂಗ್ ನೀಡಿದ್ದರು.
ಶ್ರೀಶಾನಂದ ಕಲಾಪದ ನೇರಪ್ರಸಾರದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್, ಈ ಕುರಿತು 2 ದಿನಗಳಲ್ಲಿ ವರದಿ ನೀಡುವಂತೆ ಕರ್ನಾಟಕ ಹೈಕೋರ್ಟ್‌ಗೆ ಸೂಚಿಸಿತ್ತು. ಅದಾದ ಬೆನ್ನಲ್ಲೇ ಸೆ.21ರಂದು ನ್ಯಾ.ಶ್ರೀಶಾನಂದ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸಿದ್ದರು.
ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಇಂದಿಗೆ 10 ವರ್ಷ, ನಾನು ಹೆಮ್ಮೆಯಿಂದ ಬೀಗುತ್ತಿದ್ದೇನೆ: ಪ್ರಧಾನಿ ಮೋದಿ
ಎಚ್ಚರಿಕೆ:
ಈ ಬಗ್ಗೆ ಬುಧವಾರ ಅಂತಿಮ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ। ಚಂದ್ರಚೂಡ ಅವರಿದ್ದ ಪಂಚಸದಸ್ಯ ಪೀಠ, ‘ಕೆಲವೊಮ್ಮೆ ಸಾಂದರ್ಭಿಕ ಅಭಿಪ್ರಾಯ ಕೂಡ ನಿರ್ದಿಷ್ಟ ಲಿಂಗ ಅಥವಾ ಸಮುದಾಯವನ್ನು ಗುರಿಯಾಗಿಸಿ ನೀಡಿದ ಹೇಳಿಕೆ ಹಾಗೂ ವೈಯಕ್ತಿಕ ಪಕ್ಷಪಾತದ ಹೇಳಿಕೆ ಎಂಬ ಗ್ರಹಿಕೆಗೆ ಕಾರಣವಾಗುತ್ತದೆ. ಹೀಗಾಗಿ ನ್ಯಾಯಾಲಯಗಳು, ನ್ಯಾಯಾಂಗದ ಕಲಾಪದ ವೇಳೆ ಸ್ತ್ರೀದ್ವೇಷ ಅಥವಾ ಸಮಾಜದ ಯಾವುದೇ ಸಮುದಾಯವನ್ನು ಉದ್ದೇಶಿಸಿ ಹೇಳಿಕೆ ನೀಡದಂತೆ ಜಾಗರೂಕತೆ ವಹಿಸಬೇಕು’ ಎಂದು ಎಚ್ಚರಿಸಿತು.
ಇದೇ ವೇಳೆ ನ್ಯಾ.ಶ್ರೀಶಾನಂದ ನೀಡಿದ ಹೇಳಿಕೆ ನೀಡಿದ ಸಮಯವು, ಆಗ ವಿಚಾರಣೆ ನಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂಬ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹೇಳಿಕೆಯನ್ನೂ ತಿರಸ್ಕರಿಸಿದ ನ್ಯಾಯಪೀಠ, ‘ನ್ಯಾಯದ ಕುರಿತ ಸಮಾಜದ ಪ್ರತಿಯೊಂದು ವಲಯದ ಗ್ರಹಿಕೆ ಕೂಡಾ ಅತ್ಯಂತ ಮಹತ್ವದ್ದು. ಏಕೆಂದರೆ ಇಂಥ ಅಭಿಪ್ರಾಯಗಳನ್ನು ನಕಾರಾತ್ಮಕವಾಗಿ ಅರ್ಥೈಸಿಕೊಳ್ಳಬಹುದಾಗಿರುತ್ತದೆ. ದೇಶದ ಯಾವುದೇ ಭಾಗವನ್ನು ನಾವು ಪಾಕಿಸ್ತಾನ ಎಂದು ಕರೆಯಲಾಗದು. ಇಂಥ ಹೇಳಿಕೆ ಕೇವಲ ಆ ಕೋರ್ಟ್ ನ್ಯಾಯಾಧೀಶರ ಮೇಲೆ ಮಾತ್ರವಲ್ಲದೇ ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ನ್ಯಾಯಾಧೀಶರು ತಮ್ಮ ಸ್ಥಾನ ಏನು ಎಂಬುದನ್ನು ಅರಿತಿರಬೇಕು ಹಾಗೂ ಅವರ ಹೃದಯ ನಿಷ್ಪಕ್ಷಪಾತಿ ಆಗಿರಬೇಕು’ ಎಂದು ಹೇಳಿತು.