ಹನಿ ಹನಿ ನೀರನ್ನು ಉಳಿಸಲು ಕರೆ ನೀಡಿದ ಪ್ರಧಾನಿ ಮೋದಿ ಇಂದು ವಿಶ್ವ ಜಲ ದಿನ ಜಲ ಸಂರಕ್ಷಣೆಯ ಪ್ರಯತ್ನಕ್ಕೆ ಪ್ರಧಾನಿ ಶ್ಲಾಘನೆ

ನವದೆಹಲಿ(ಮಾ.22) ವಿಶ್ವ ಜಲ ದಿನವಾದ ಇಂದು ಪ್ರಧಾನಿ ಮೋದಿ ಹನಿ ಹನಿ ನೀರನ್ನು ಉಳಿಸಬೇಕೆಂದು ಕರೆ ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ವಿಶ್ವ ಜಲ ದಿನದ ಸಂದೇಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಷ್ಟ್ರವು ನೀರಿನ ಸಂರಕ್ಷಣೆ ಮತ್ತು ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆ ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.

ವಿಶ್ವ ಜಲ ದಿನದಂದು (World Water Day), ಪ್ರತಿ ಹನಿ ನೀರನ್ನು ಉಳಿಸುವ ನಮ್ಮ ಪ್ರತಿಜ್ಞೆಯನ್ನು ಪುನರುಚ್ಚರಿಸೋಣ. ನಮ್ಮ ರಾಷ್ಟ್ರವು ಜಲ ಸಂರಕ್ಷಣೆ ಮತ್ತು ನಮ್ಮ ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಜಲ ಜೀವನ್ ಮಿಷನ್‌ನಂತಹ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.

2500ಕ್ಕೂ ಹೆಚ್ಚು ನೀರಿಲ್ಲದ ಬೋರ್‌ಗಳಲ್ಲಿ ನೀರುಕ್ಕಿಸಿದ ಸಿಕಂದರ್

ಕಳೆದ ಕೆಲವು ವರ್ಷಗಳಿಂದ, ರಾಷ್ಟ್ರದ ಎಲ್ಲಾ ಭಾಗಗಳಲ್ಲಿ ವಿನೂತನ ಪ್ರಯತ್ನಗಳು ನಡೆಯುವುದರೊಂದಿಗೆ, ನೀರಿನ ಸಂರಕ್ಷಣೆಯು ಒಂದು ಸಾಮೂಹಿಕ ಆಂದೋಲನವಾಗುತ್ತಿರುವುದು ಹರ್ಷದಾಯಕ ವಿಚಾರವಾಗಿದೆ. ನೀರನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ನಾನು ಶ್ಲಾಘಿಸಲು ಬಯಸುತ್ತೇನೆ ಎಂದರು. ಈ ವಿಶ್ವ ಜಲ ದಿನದಂದು ಸುರಕ್ಷಿತ ಶುದ್ಧ ಕುಡಿಯುವ ನೀರು( Water) ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಜಾಗತಿಕ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಜೊತೆಗೆ ಈ ವರ್ಷ ಅಂತರ್ಜಲವನ್ನು ಕಾಪಾಡುವತ್ತ ಗಮನ ಹರಿಸಲಾಗುತ್ತಿದೆ.

Scroll to load tweet…

ಭೂಮಿ ಮೇಲೆ ಸಕಲ ಜೀವರಾಶಿಗಳು ಬದುಕುತ್ತಿರುವುದು ಗಾಳಿ, ಆಹಾರ ಮತ್ತು ನೀರಿನಿಂದ. ಆಹಾರ, ಗಾಳಿ ಒಂದು ಜೀವಿಗೆ ಎಷ್ಟು ಮಖ್ಯವೋ ನೀರು ಕೂಡ ಅಷ್ಟೇ ಮುಖ್ಯವಾಗಿದೆ. ನೀರಿನ ಪ್ರಾಮುಖ್ಯತೆಯ ಕುರಿತು ಜನರಿಗೆ ಅರಿವು ಮೂಡಿಸಲು ವಿಶ್ವಸಂಸ್ಥೆಯು 1993 ರಿಂದ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸುತ್ತಿದ್ದು, ವಿಶ್ವದಲ್ಲಿ ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸುತ್ತಿದೆ. 

ಶಿರಸಿ: ಲಾಕ್‌ಡೌನ್‌ದಲ್ಲಿ ಮತ್ತೊಂದು ಬಾವಿ ತೋಡಿದ ಗೌರಿ..!

ಜಗತ್ತಿನಲ್ಲಿ ಶುದ್ಧ ನೀರು ಸಿಗದೆ ಬಳಲುತ್ತಿರುವ ಸುಮಾರು 2 ಬಿಲಿಯನ್ ಜನರಿದ್ದಾರೆ. ನೀರಿಗಾಗಿ ಸುಸ್ಥಿರ ಅಭಿವೃದ್ಧಿ ಗುರಿಯತ್ತ ಕ್ರಮ ಕೈಗೊಳ್ಳುವ ಜನರನ್ನು ಉತ್ತೇಜಿಸಲು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. 2030 ರ ವೇಳೆಗೆ ಎಲ್ಲರಿಗೂ ನೀರು ಮತ್ತು ನೈರ್ಮಲ್ಯವನ್ನು ಖಚಿತಪಡಿಸುವುದು ಈ ದಿನಾಚರಣೆಯ ಗುರಿಯಾಗಿದೆ. ನೀರೆಷ್ಟು ಅಮೂಲ್ಯ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ನಾವು ಈಗ ನೀರನ್ನು ಉಳಿಸಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ಈ ಸಂಪನ್ಮೂಲವನ್ನು ಸಂರಕ್ಷಿಸಲು ಸಾಧ್ಯವಾಗುವುದಿಲ್ಲ.

ಅತಿಯಾದ ಮಾಲಿನ್ಯ ಮತ್ತು ಅಂತರ್ಜಲದ ಅನಗತ್ಯ ವ್ಯರ್ಥ ಪ್ರಪಂಚದಾದ್ಯಂತ ವಿವಿಧ ಸ್ಥಳಗಳಲ್ಲಿ ಶುದ್ಧ ನೀರಿನ ಲಭ್ಯತೆಯನ್ನು ಮತ್ತಷ್ಟು ಕಡಿಮೆ ಮಾಡಿದೆ. ಇದರ ನಡುವೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವುದು ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ಈ ಎಲ್ಲಾ ಅಂಶಗಳು ಆಹಾರ ಸರಪಳಿಯ ಮೇಲೂ ಪರಿಣಾಮ ಬೀರುತ್ತಿವೆ. ಇದರಲ್ಲಿ ಜಲಚರಗಳ ಸಾವಿಗೆ ಪ್ರಮುಖ ಕಾರಣಗಳಲ್ಲಿ ಕಲುಷಿತ ನೀರು ಒಂದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.

ಪ್ರಸಕ್ತ ವರ್ಷ 'ಅದೃಶ್ಯ ಅಂತರ್ಜಲವನ್ನು ಸದೃಶ್ಯಗೊಳಿಸುವುದು' ಎಂಬ ವಿಚಾರದೊಂದಿಗೆ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ.