ವರದಿ :  ಮಯೂರ ಹೆಗಡೆ

 ಹುಬ್ಬಳ್ಳಿ (ಮಾ.22):  ಇದೊಂದು ವಿಶೇಷ ಜಲಸೇವೆ. ಬರಿದಾದ ಭೂಮಿಯ ಒಡಲಿಗೆ ಮಳೆ ನೀರು ತುಂಬಿಸುವ ಕಾರ್ಯ. ಹುಬ್ಬಳ್ಳಿಯನ್ನು ಕಾರ್ಯಕ್ಷೇತ್ರ ಮಾಡಿಕೊಂಡಿರುವ ಗದಗದ ಸಿಕಂದರ್‌ ಮೀರಾನಾಯಕ್‌ ಬರಿದಾದ ಬೋರ್‌ವೆಲ್‌ಗಳಿಗೆ ಮಳೆನೀರು ಕೊಯ್ಲು ಪದ್ಧತಿ ಅನುಸರಿಸಿ ಡಬಲ್‌ ರಿಂಗ್‌ ಮೆಥಡ್‌ ಮೂಲಕ ಮರುಜೀವ ನೀಡುತ್ತಿದ್ದಾರೆ.

ಬೋರ್‌ವೆಲ್‌ ಪ್ರಚಲಿತಕ್ಕೆ ಬಂದಿದ್ದು 1980ರ ಆಸುಪಾಸಿನಲ್ಲಿ. ಅಂದಿನಿಂದ ಇಂದಿನ ವರೆಗೂ ಎಷ್ಟುಸಾಧ್ಯವೊ ಅಷ್ಟುಅಂತರ್ಜಲದ ಆಳಕ್ಕೆ ಇಳಿದು ನೀರನ್ನು ಬಗೆಯುವ ಕಾರ್ಯ ಮುಂದುವರೆದೇ ಇದೆ. ಬೋರ್‌ವೆಲ್‌ ಬತ್ತಿದ ಬಳಿಕ ಮತ್ತೊಂದು ಬೋರ್‌ ತೋಡುವ ಕೆಲಸ ಮಾಡುತ್ತಿದ್ದೇವೆ ವಿನಃ ನೀರನ್ನು ಭೂಮಿಗೆ ತುಂಬಿಸುವ ಕಾರ್ಯ ಆಗುತ್ತಿಲ್ಲ.

ಹೀಗೆ ದಶಕದ ಕಾಲ ಹಾಳುಬಿದ್ದ ಬೋರ್‌ವೆಲ್‌ಗಳಿಗೆ ಮರುಜೀವ ನೀಡುವ ಕಾರ್ಯವನ್ನು ಸಿಕಂದರ್‌ ಕಳೆದ 13 ವರ್ಷಗಳಿಂದ ಮಾಡುತ್ತಿದ್ದಾರೆ. ಮಳೆನೀರು ಕೊಯ್ಲು ಪದ್ಧತಿ ಅನುಸರಿಸಿ ಡಬಲ್‌ ರಿಂಗ್‌ ಮೆಥಡ್‌ ಮೂಲಕ ಬರಿದಾದ ಜಲಪಾತ್ರೆ ತುಂಬುವ ಕೆಲಸ ಮಾಡುತ್ತಿದ್ದಾರೆ.

11 ರಾಜ್ಯ-2500ಕ್ಕೂ ಹೆಚ್ಚು:  ಕರ್ನಾಟಕ, ಪಂಜಾಬ್‌, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್‌, ಉತ್ತರಪ್ರದೇಶ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಸೇರಿದಂತೆ 11 ರಾಜ್ಯಗಳಲ್ಲಿ ಬರೋಬ್ಬರಿ 2500ಕ್ಕೂ ಹೆಚ್ಚಿನ ಬೋರ್‌ವೆಲ್‌ಗಳಿಗೆ ಮರುಜೀವ ನೀಡಿದ್ದಾರೆ. ರೈತರು ಕೃಷಿಗಾಗಿ, ಉದ್ಯಮಿಗಳು ಕೈಗಾರಿಕಾ ವಸಾಹತಿನಲ್ಲಿ ನಿರ್ಮಿಸಿದ ಬೋರ್‌ವೆಲ್‌ಗಳು ಬತ್ತಿದಾಗ, ನೀರಿನ ಪ್ರಮಾಣ ಕಡಿಮೆಯಾದಾಗ ಇವರನ್ನು ಸಂಪರ್ಕಿಸುತ್ತಾರೆ. ತೆಲಂಗಾಣ, ಮಹಾರಾಷ್ಟ್ರದಲ್ಲಿ ತಮ್ಮವರಿಂದ ಬೋರ್‌ವೆಲ್‌ ಮರುಪೂರಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲ ಕಾಲೇಜು ಯುವಕರು ಇವರ ಕೆಲಸಕ್ಕೆ ಸಾಥ್‌ ನೀಡಿ ಜಲಸೇವೆಯಲ್ಲಿ ತೊಡಗಿದ್ದಾರೆ.

ಸಿಎಸ್‌ಆರ್‌ ನೆರವು:  2008ರಲ್ಲಿ ಸಂಕಲ್ಪ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ ಎಂಬ ಸಂಸ್ಥೆ ಕಟ್ಟಿಕೊಂಡು ಈ ಕಾರ್ಯದಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ದೇಶಪಾಂಡೆ ಫೌಂಢೇಶನ್‌ ಸಿಎಸ್‌ಆರ್‌ ನೆರವು ಪಡೆದಿದ್ದ ಸಿಕಂದರ್‌, ನಬಾರ್ಡ್‌, ಅಮೆರಿಕದ ಸೇವ್‌ ಇಂಡಿಯನ್‌ ಫಾರ್ಮರ್‌ ಸಂಸ್ಥೆ, ಸಸ್ಟೈನ್‌ ಪ್ಲಸ್‌ ಆರ್ಗನೈಸೇಶನ್‌ ಸಂಸ್ಥೆಗಳ ನೆರವಲ್ಲಿ ನೀರಿನ ಕಾಯಕದಲ್ಲಿ ನಿರತರಾಗಿದ್ದಾರೆ. ಒಂದು ಬೋರ್‌ವೆಲ್‌ ಮರುಪೂರಣವನ್ನು ಕೇವಲ 30 ಸಾವಿರ (80-1 ಲಕ್ಷದವರೆಗೆ ಖರ್ಚು ತಗುಲುತ್ತದೆ.) ಖರ್ಚಿನಲ್ಲಿ ಮಾಡಿಕೊಡುವುದು ಇವರ ವಿಶೇಷ. ಅದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಮೊತ್ತವನ್ನು ಸಿಎಸ್‌ಆರ್‌ ಅಡಿ ರೈತರಿಗೆ ಒದಗಿಸುತ್ತಾರೆ. ಇನ್ನರ್ಧ ಮೊತ್ತವನ್ನು ಶುಲ್ಕವಾಗಿ ಪಡೆಯುತ್ತಾರೆ.

‘ಹಲವು ರೈತರಿಗೆ ಸಿಎಸ್‌ಆರ್‌ ಹೊರತುಪಡಿಸಿ ರಿಯಾಯಿತಿಯಾಗಿ ಮರುಪೂರಣ ಮಾಡಿಕೊಟ್ಟಿದ್ದೇವೆ. ನಾವು ಸಂಪೂರ್ಣ ಉಚಿತವಾಗಿಯೆ ಮಾಡಬಹುದು. ಆದರೆ, ಜನತೆಗೆ ನೀರಿನ ಮಹತ್ವ ಅರಿವಾಗಬೇಕು. ಖರ್ಚು ಮಾಡಿದರೆ ಮಾತ್ರ ಅವರಿಗೆ ಆ ಕಾರ್ಯದ ಅರಿವಾಗುತ್ತದೆ. ಹೀಗಾಗಿ ಅರ್ಧದಷ್ಟುಹಣ ಪಡೆಯುತ್ತೇವೆ. ಅದನ್ನೂ ಮುಂದಿನವರ ಜಲಸೇವೆಗೆ ಬಳಸುತ್ತೇವೆ’ ಎನ್ನುತ್ತಾರೆ ಸಿಕಂದರ್‌.

‘ಒಂದು ವರ್ಷಕ್ಕೆ 30-40 ಬೋರ್‌ವೆಲ್‌ಗಳ ಮರುಪೂರಣಕ್ಕೆ ರೈತರೆ ನಮಗೆ ಮುಂದಿನ ಕೆಲಸಗಳಿಗೆ ನಮಗೆ ಹಣವನ್ನು ನೀಡುತ್ತಾರೆ. ಈ ವರ್ಷ 10 ಸಾವಿರ ಬೋರ್‌ವೆಲ್‌ಗಳಿಂದ ಮತ್ತೆ ಜೀವಜಲ ಉಕ್ಕಿಸುವ ಉದ್ದೇಶವಿದೆ’ ಎಂದು ಅವರು ತಿಳಿಸಿದರು.

ಜೀವ ವೈವಿಧ್ಯದ ಸಂರಕ್ಷಣೆಗಾಗಿ ತಮ್ಮದೇ ಕೊಡುಗೆ ನೀಡುತ್ತಿರುವ ಹೆಮ್ಮೆಯ ರೈತ .

ಏನಿದು ಡಬಲ್‌ರಿಂಗ್‌ ಮೆಥಡ್‌?:

ಸರಳ ತಂತ್ರವಿದು. ಬೋರ್‌ವೆಲ್‌ ಪಕ್ಕ ಕೃಷಿ ಹೊಂಡ ನಿರ್ಮಿಸಲಾಗುತ್ತದೆ. ಬೋರ್‌ ಸುತ್ತ 6*4 ಅಗಲದ 8 ಅಡಿ ಆಳದ ಗುಂಡಿ ತೋಡಲಾಗುತ್ತದೆ. ಅದರೊಳಗೆ ವಿವಿಧ ಅಳತೆ ಪ್ರಕಾರದ ಜೆಲ್ಲಿಕಲ್ಲುಗಳನ್ನು ಹಾಕಿ ಜಾಳಿಗೆ ಸುತ್ತಲಾಗುತ್ತದೆ. ಸುತ್ತಲೂ ಐದು ಸಿಮೆಂಟ್‌ ರಿಂಗ್‌ಗಳನ್ನು ಇಳಿಸಲಾಗುತ್ತದೆ. ಅದರ ಪಕ್ಕದಲ್ಲಿಯೂ ಇದೆ ರೀತಿ ಹೊಂಡವನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ಕೃಷಿಹೊಂಡದಿಂದ ಪೈಪ್‌ ಮೂಲಕ ಸಂಪರ್ಕ ನೀಡಿ ಮಳೆ ನೀರಿಂಗಿಸುವ ಕಾರ್ಯ ಮಾಡಲಾಗುತ್ತದೆ.

ಜಲಯೋಧನಿಗೆ ಜಾಗತಿಕ ಪ್ರಶಸ್ತಿ:

ಈ ಕಾರ್ಯವನ್ನು ಮೆಚ್ಚಿ ಸಿಕಂದರ್‌ ಅವರಿಗೆ ಇಂಟರ್‌ನ್ಯಾಷನಲ್‌ ವಾಟರ್‌ ಅಸೋಸಿಯೇಷನ್‌ ಡೆವಲಪ್‌ಮೆಂಟ್‌ ಅವಾರ್ಡ್‌ ಫಾರ್‌ ಪ್ರಾಕ್ಟೀಸ್‌, ಇರಾನ್‌ನಲ್ಲಿ ಎನರ್ಜಿ ಗ್ಲೋಬ್‌ ವಲ್ಡ್‌ರ್‍ ಅವಾರ್ಡ್‌, ನಬಾರ್ಡ್‌ ರೂರಲ್‌ ಇನೋವೇಶನ್‌ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.

ಅನಿಯಮಿತವಾಗಿ ಬೋರ್‌ವೆಲ್‌ ಕೊರೆಯುತ್ತಿದ್ದೇವೆ. ಆದರೆ, ಭೂಮಿಗೆ ನೀರುಣಿಸುವ ಕಾರ್ಯವನ್ನು ಮರೆತಿದ್ದೇವೆ. ಮುಂದೊಂದು ದಿನ ಅಂತರ್ಜಲ ಸಂಪೂರ್ಣ ಖಾಲಿಯಾದರೆ ಏನು ಎಂಬ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮಳೆನೀರು ಕೊಯ್ಲು ಪದ್ಧತಿ ಮೂಲಕ ಬೋರ್‌ವೆಲ್‌ ಮರುಪೂರಣ ಮಾಡ್ತಿದ್ದೇವೆ.

ಸಿಕಂದರ್‌ ಮೀರಾನಾಯಕ, ಸಂಕಲ್ಪ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ ಸಿಇಒ

ಐದು ವರ್ಷದಿಂದ ನಮ್ಮ ಬೋರ್‌ವೆಲ್‌ ಬತ್ತಿತ್ತು. ಎಸ್‌ಆರ್‌ಡಿಎಸ್‌ನಿಂದ ಸಿಕಂದರ್‌ ಅವರು ಮರುಪೂರಣ ಮಾಡಿದ್ದರಿಂದ ಪುನಃ ನೀರು ದೊರೆಯುತ್ತಿದೆ.

ಶ್ರೀನಿವಾಸ ಜೋಶಿ ನಿಟ್ಟಾಲಿ ಗ್ರಾಮ ಕೂಕನೂರು (ಕೊಪ್ಪಳ)