ಬೀದಿ ನಾಯಿಗಾಗಿ ಜುಟ್ಟು ಜುಟ್ಟು ಹಿಡಿದು ಕಿತ್ತಾಡಿಕೊಂಡ ನಾರಿಯರು... ವಿಡಿಯೋ ವೈರಲ್
ಮಕ್ಕಳ ವಿಚಾರಕ್ಕೆ ದೊಡ್ಡವರು ಜಗಳ ಮಾಡಿದ್ದ, ಮಾಡುವ ಘಟನೆಗಳು ಸಾಮಾನ್ಯವಾಗಿ ಕೆಲ ಕುಟುಂಬಗಳಲ್ಲಿ ನಡೆಯುತ್ತಿರುತ್ತವೆ, ಆದರೆ ಇಲ್ಲಿ ನಾಯಿಯ ವಿಚಾರಕ್ಕೆ ದೊಡ್ಡವರು ಜಗಳವಾಡಿದ್ದಾರೆ.
ನೋಯ್ಡಾ: ಮಕ್ಕಳ ವಿಚಾರಕ್ಕೆ ದೊಡ್ಡವರು ಜಗಳ ಮಾಡಿದ್ದ, ಮಾಡುವ ಘಟನೆಗಳು ಸಾಮಾನ್ಯವಾಗಿ ಕೆಲ ಕುಟುಂಬಗಳಲ್ಲಿ ನಡೆಯುತ್ತಿರುತ್ತವೆ, ಆದರೆ ಇಲ್ಲಿ ನಾಯಿಯ ವಿಚಾರಕ್ಕೆ ದೊಡ್ಡವರು ಜಗಳವಾಡಿದ್ದಾರೆ. ಹೌದು ಉತ್ತರಪ್ರದೇಶದ ನೋಯ್ಡಾ ಅಪಾರ್ಟ್‌ಮೆಂಟ್‌ಗಳು ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತವೆ. ಕೆಲ ದಿನಗಳ ಹಿಂದೆ ಇಲ್ಲಿನ ಅಪಾರ್ಟ್‌ಮೆಂಟ್ ಒಂದರ ಲಿಫ್ಟ್‌ನಲ್ಲಿ ನಾಯಿಯೊಂದು ಮಗುವಿಗೆ ಕಚ್ಚಿದ ಕಾರಣಕ್ಕೆ ದೇಶಾದ್ಯಂತ ಸುದ್ದಿಯಾಗಿತ್ತು. ಇದಾದ ಬಳಿಕ ಮನೆಯಲ್ಲಿ ಐಷಾರಾಮಿ ನಾಯಿ ಸಾಕುತ್ತಿದ್ದವನನ್ನು ಕೆಲವು ದುಷ್ಕರ್ಮಿಗಳು ನಾಯಿಗೋಸ್ಕರ ಕಿಡ್ನಾಪ್ ಮಾಡಿದ ಘಟನೆ ನಡೆದಿತ್ತು. ಆದರೆ ಈಗ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿರುವ ವಸತಿ ಸಂಕೀರ್ಣವೊಂದು ಮತ್ತದೇ ನಾಯಿಯ ಕಾರಣಕ್ಕೆ ಸುದ್ದಿಯಾಗಿದೆ. ನಾಯಿಗಾಗಿ ಹೆಂಗಳೆಯರು ಜುಟ್ಟು ಜುಟ್ಟು ಹಿಡಿದು ಕಿತ್ತಾಡಿಕೊಂಡಿದ್ದಾರೆ.
ರಿವರ್ ಹೈಟ್ ವಸತಿ ಸಮುಚ್ಛಯದ ಆಡಳಿತ ಮಂಡಳಿಯೂ ಇತ್ತೀಚೆಗೆ ಈ ಆವರಣದಲ್ಲಿದ್ದ ಬೀದಿ ನಾಯಿಗಳನ್ನು ದೂರ ಓಡಿಸಲು ನಿರ್ಧರಿಸಿತ್ತು. ಇದಕ್ಕಾಗಿ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರಕ್ಕೆ ಕೆಲವು ಶ್ವಾನ ಪ್ರೇಮಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದಾಗ ಜಗಳ ಆರಂಭವಾಗಿದೆ. ಮಹಿಳೆಯರು ಪರಸ್ಪರ ಕೈ ಮಿಲಾಯಿಸಿಕೊಂಡು, ಕೂದಲು ಎಳೆದುಕೊಂಡು ಹೊಡೆದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಕಿಪ್ಪಿಂಗ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ ಶ್ವಾನ: ವೈರಲ್ ವಿಡಿಯೋ
ಪೊಲೀಸರ ಪ್ರಕಾರ, ಬೀದಿ ನಾಯಿಗಳನ್ನು ಸೊಸೈಟಿ ಆವರಣದಿಂದ ದೂರ ಓಡಿಸಬೇಕು ಎಂದು ಸೊಸೈಟಿಯ ಆಡಳಿತ ಮಂಡಳಿಯ ನಿರ್ಧಾರವನ್ನು ರಿವರ್ ಹೈಟ್ಸ್ ಸೊಸೈಟಿಯಲ್ಲಿರುವ ಶ್ವಾನ ಪ್ರೇಮಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ಇಲ್ಲಿದ್ದ ಶ್ವಾನವೊಂದನ್ನು ಆಡಳಿತ ಮಂಡಳಿಯವರು ಗೋಣಿ ಚೀಲದಲ್ಲಿ ತುಂಬಿಸಿ ದೂರ ತೆಗೆದುಕೊಂಡು ಹೋಗಿ ಬಿಡಲು ನಿರ್ಧರಿಸಿದ್ದರು. ಈ ವೇಳೆ ಶ್ವಾನ ಪ್ರೇಮಿಗಳಾದ ಪೂನಂ ಕಶ್ಯಪ್ ಹಾಗೂ ಇನ್ನು ಕೆಲವರು ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದಾಗ ಪರಸ್ಪರ ವಾಗ್ವಾದ ಶುರುವಾಗಿದ್ದು, ಇದು ಕಿತ್ತಾಟಕ್ಕೆ ಕಾರಣವಾಯ್ತು. ಈ ವೇಳೆ ಕೆಲವು ಮಹಿಳೆಯರು ಪೂನಂ ಕಶ್ಯಪ್ ಅವರನ್ನು ಕೂದಲಿನಲ್ಲಿ ಹಿಡಿದೆಳೆದು ಆಕೆಗೆ ಹೊಡೆಯಲು ಶುರು ಮಾಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಆಕೆ ವ್ಯಕ್ತಿಯೊಬ್ಬನ ಕೆನ್ನೆಗೆ ಬಾರಿಸಿದ್ದಾಳೆ. ಈ ಎಲ್ಲಾ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆ ಆಗಿದೆ.
ಸೊಸೈಟಿಯ ಕಲ್ಯಾಣ ಸಂಘದ ಮುಖ್ಯಸ್ಥ ಸುಭೋದ್ ತ್ಯಾಗಿ ಮಾತನಾಡಿ, ಮಹಿಳೆ ಪೂನಾಂ ಕಶ್ಯಪ್ (Poonam Kashyap) ವಿರುದ್ಧ ಆರೋಪ ಮಾಡಿದ್ದಾರೆ. ಪೂನಂ ಕಶ್ಯಪ್ ಮೊದಲಿಗೆ ಜಗಳ ಆರಂಭಿಸಿದ್ದಾಳೆ ಎಂದು ದೂರಿದ್ದಾರೆ. ಆದರೆ ಕಶ್ಯಪ್ ಮಾತನಾಡಿ ತಾನು ಒಂದು ಪ್ರಾಣಿ ಸಂಘದ ಜೊತೆ ಕೆಲಸ ಮಾಡುತ್ತಿದ್ದು, ತ್ಯಾಗಿ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ಘಟನೆ ಸಂಬಂಧಿಸಿದಂತೆ ತನಿಖೆ ನಡೆಸುವುದಾಗಿ ಅಲೋಕ್ ದುಬೆ (Alok Dubey) ಹೇಳಿದ್ದಾರೆ.
ವಿಶ್ವದ ಅತೀ ದುಬಾರಿ ಶ್ವಾನ ಖರೀದಿಸಿದ ಬೆಂಗಳೂರಿನ ವ್ಯಕ್ತಿ: ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ
ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ (Delhi-NCR region) ಇತ್ತೀಚೆಗೆ ಶ್ವಾನಗಳು ದಾಳಿ ನಡೆಸಿದ ಹಲವು ಪ್ರಕರಣಗಳು ವರದಿಯದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಶ್ವಾನಗಳ ಸಾಕಣೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಕೂಡ ನಾಯಿಗಳ ಸಾಕುವಿಕೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಗಳು ನಾಯಿ ಸಾಕುವವರು ಹಲವು ನಿಯಮಗಳನ್ನು ಪಾಲಿಸುವಂತೆ ಇಲ್ಲಿನ ಸ್ಥಳೀಯ ಸಂಸ್ಥೆಗಳು ಸೂಚನೆ ನೀಡಲು ಕಾರಣವಾಗಿದೆ. ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಈಗಾಗಲೇ ಮೂರು ತಳಿಯ ಶ್ವಾನಗಳ ಸಾಕಾಣೆಗೆ ನಿಷೇಧ ಹೇರಿದೆ. ಪಿಟ್ ಬುಲ್(Pit Bull), ರೊಟ್‌ವೀಲರ್ (Rottweiler) ಮತ್ತು ಡೊಗೊ ಅರ್ಜೆಂಟಿನೋ (Dogo Argentino) ತಳಿಯ ಶ್ವಾನಗಳನ್ನು ಈ ಪ್ರದೇಶದಲ್ಲಿ ಯಾರೂ ಸಾಕುವಂತಿಲ್ಲ. ಇದರ ಜೊತೆಗೆ ಹಲವು ನಿಯಮಗಳನ್ನು ಜಾರಿಗೆ ತಂದಿದೆ.