ವಿಶ್ವದ ಅತೀ ದುಬಾರಿ ಶ್ವಾನ ಖರೀದಿಸಿದ ಬೆಂಗಳೂರಿನ ವ್ಯಕ್ತಿ: ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ

ಇನ್ಮೇಲೆ ಮನುಷ್ಯರನ್ನು ನಾಯಿ ಎಂದು ಬೈಯುವುದಕ್ಕೆ ಬಳಸುವಂತಿಲ್ಲ. ಯಾಕೆಂದರೆ ಇತ್ತೀಚೆಗೆ ನಾಯಿಗಿರುವ ಬೆಲೆ ಮನುಷ್ಯನಿಗಿಲ್ಲ. ಹೀಗೆ ಹೇಳುವುದಕ್ಕೆ ಕಾರಣ ಈ 20  ಕೋಟಿ ಬಾಳುವ ದುಬಾರಿ ಶ್ವಾನ.

Bengaluru man brought worlds costliest dog Caucasian Shepherd for 20 crore akb

ಬೆಂಗಳೂರು: ಇನ್ಮೇಲೆ ಮನುಷ್ಯರನ್ನು ನಾಯಿ ಎಂದು ಬೈಯುವುದಕ್ಕೆ ಬಳಸುವಂತಿಲ್ಲ. ಯಾಕೆಂದರೆ ಇತ್ತೀಚೆಗೆ ನಾಯಿಗಿರುವ ಬೆಲೆ ಮನುಷ್ಯನಿಗಿಲ್ಲ. ಹೀಗೆ ಹೇಳುವುದಕ್ಕೆ ಕಾರಣ ಈ 20  ಕೋಟಿ ಬಾಳುವ ದುಬಾರಿ ಶ್ವಾನ.  ಇತ್ತೀಚೆಗೆ  ಮನುಷ್ಯರಿಗಿಂತ ನಾಯಿಗೆ ಬೆಲೆ ಜಾಸ್ತಿ, ಅದರಲ್ಲೂ ಮಹಾನಗರಗಳಲ್ಲಿ ಒಳ್ಳೆಯ ತಳಿಯ ನಾಯಿಗಳನ್ನು ಸಾಕವುದು ಟ್ರೆಂಡ್ ಆಗಿದೆ.  ಅದರಲ್ಲೂ ನಮ್ಮ ಉದ್ಯಾನನಗರಿಯ ಜನರಲ್ಲಿ  ಉತ್ತಮ ತಳಿಯ ಶ್ವಾನಗಳ ವ್ಯಾಮೋಹ ಹೆಚ್ಚಾಗುತ್ತಿದೆ.  ಶ್ವಾನವನ್ನು ಕರೆದುಕೊಂಡು ಬೀದಿಯಲ್ಲಿ ವಾಕಿಂಗ್ ಹೋಗುವುದು ಫ್ಯಾಷನ್ ಆಗಿದೆ.  ಉದ್ಯಾನಗರಿಯಲ್ಲಿ ವಾಸವಿರುವ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಗಣ್ಯರು ಸೇರಿದಂತೆ ಜನ ಸಾಮಾನ್ಯರು ಕೂಡ ನಾಯಿ ಸಾಕುವುದನ್ನು ಟ್ರೆಂಡ್ ಆಗಿಸಿಕೊಂಡಿದ್ದಾರೆ.  ಇದರ ಮಧ್ಯೆ ಈ 20 ಕೋಟಿ  ಮೌಲ್ಯದ ಶ್ವಾನ  ಟಾಕ್ ಆಫ್ ದಿ ಟೌನ್ ಆಗ್ತಿದೆ.

ನಟ, ಕಡಬಮ್ ಕೆನಲ್ ಎಂಬ ವೆಬ್‌ಸೈಟ್ ಹಾಗೂ ಭಾರತೀಯ ಶ್ವಾನ ತಳಿ ಸಾಕಾಣೆಕಾರರ ಸಂಘದ ಅಧ್ಯಕ್ಷರೂ ಆಗಿರುವ ಸತೀಶ್ ಎಂಬುವವರು ಇಷ್ಟೊಂದು ದುಬಾರಿ ಬೆಲೆಯ ಶ್ವಾನವನ್ನು ಖರೀದಿಸಿದ್ದಾರೆ. ಕಕೇಶಿಯನ್ ಶೆಫರ್ಡ್ (Caucasian Shepherd) ಎಂಬ ಬಹಳ ಅಪರೂಪದ ಹಾಗೂ ಅಷ್ಟೇ ದುಬಾರಿ ಶ್ವಾನವನ್ನು ಖರೀದಿಸಿದ್ದಾರೆ.  ಇದೊಂದು ಗಾರ್ಡಿಯನ್ ಶ್ವಾನವಾಗಿದ್ದು,  ಸಾಮಾನ್ಯವಾಗಿ ರಷ್ಯಾ (Russia), ಟರ್ಕಿ(Turkey), ಅರ್ಮೇನಿಯಾ( Armenia), ಸರ್ಕಾಸಿಯಾ (Circassia), ಹಾಗೂ ಜಾರ್ಜಿಯಾ( Georgia)ದಲ್ಲಿ ಕಾಣಲು ಸಿಗುವುದು.  ಆದರೆ ಭಾರತದಲ್ಲಿ ಈ ತಳಿಯ ಶ್ವಾನ ಕಾಣಲು ಸಿಗುವುದು ತೀರಾ ಅಪರೂಪ.

ದಸರಾ ಉತ್ಸವದಲ್ಲಿ ಶ್ವಾನ ಪ್ರದರ್ಶನ; Tibetan Mastiff ಶ್ವಾನ ನೋಡಲು ಮುಗಿಬಿದ್ದ ಜನ!

ಈ ತಳಿಯ ಶ್ವಾನಗಳು ಅತೀ ಬುದ್ಧಿವಂತ ಪ್ರಾಣಿಗಳಾಗಿದ್ದು, ಭಯವಿಲ್ಲದ ತುಂಬಾ ಆತ್ಮವಿಶ್ವಾಸದ ಹಾಗೂ ಬೋಲ್ಡ್,  ಆಗಿರುವ ಶ್ವಾನಗಳಾಗಿವೆ.  ನೋಡಲು ತುಂಬಾ ಬೃಹತ್ ಆಕಾರವಾಗಿದ್ದು, ತುಂಬಾ ರೋಮದಿಂದ ಕೂಡಿರುತ್ತವೆ. ಸುಮಾರು 10 ರಿಂದ 12 ವರ್ಷಗಳ ಕಾಲ ಜೀವಿತಾವಧಿಯನ್ನು ಹೊಂದಿವೆ.  ಅಮೆರಿಕನ್ ಕೆನ್ನೆಲ್ ಕ್ಲಬ್ ಪ್ರಕಾರ,  ಈ ಕಕೇಶಿಯನ್ ಶೆಫರ್ಡ್ ತಳಿಯ ಶ್ವಾನಗಳನ್ನು ಶತಮಾನಗಳಿಂದಲೂ ಆಸ್ತಿಯನ್ನು ಕಾಯುವುದಕ್ಕೆ,  ದೊಡ್ಡ ದೊಡ್ಡ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ಸೇರಿದಂತೆ ಹಲವು ರಕ್ಷಣಾತ್ಮಕ ಕಾರ್ಯಗಳಿಗೆ ಬಳಸಲಾಗುತ್ತಿತ್ತು.

ಇದಕ್ಕೂ ಮೊದಲು ಕೂಡ ಸತೀಶ್ ಅವರು ಕೊರಿಯನ್ ದೋಸ ಮ್ಯಾಸ್ಟಿಫ್ಸ್ (Korean Dosa Mastiffs)ಎಂಬ ಅಪರೂಪದ ತಳಿಯ ಶ್ವಾನವನ್ನು ಖರೀದಿಸಿದ್ದರು. ಇದರ ಬೆಲೆ ಸುಮಾರು 1 ಕೋಟಿ ಆಗಿತ್ತು.,  ಅದಕ್ಕೂ ಮೊದಲು 8 ಕೋಟಿ ಮೊತ್ತ ಅಲಾಸ್ಕನ್ ಮಲಾಮುಟ್(Alaskan Malamute) ಹಾಗೆಯೇ 10 ಕೋಟಿ ಮೌಲ್ಯದ ಟಿಬೆಟಿಯನ್ ಮಾಸ್ಟಿಫ್ (Tibetan Mastiff) ಎಂಬ ಶ್ವಾನವನ್ನು ಖರೀದಿಸಿದ್ದರು.  ಪ್ರಸ್ತುತ ಈಗ 20 ಕೋಟಿ ಮೊತ್ತಕ್ಕೆ ಖರೀದಿಸಿರುವ ಈ ಶ್ವಾನಕ್ಕೆ ಕ್ಯಾಡಬಮ್ ಹೈದರ್ ಎಂದು ಹೆಸರಿಡಲಾಗಿದೆ.  ಪ್ರಸ್ತುತ 1.5 ವರ್ಷದ ಪ್ರಾಯದ ಈ ಶ್ವಾನವನ್ನು ಹೈದರಾಬಾದ್ ಮೂಲದ  ಶ್ವಾನ ಸಾಕಾಣೆಕಾರರೊಬ್ಬರಿಂದ ಖರೀದಿಸಿದ್ದಾರೆ. 

ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ ಈ ಅಪರೂಪದ ಕಕೇಶಿಯನ್ ಶೆಫರ್ಡ್ ತಳಿಯ ಶ್ವಾನ ತನ್ನ ಬಳಿ ಇರುವುದಾಗಿ ಹೇಳಿದರು.  ನಾನು ಅದನ್ನು ಖರೀದಿಸಲು ನಿರ್ಧರಿಸಿದೆ. ಇದನ್ನು ಖರೀದಿಸಿ ಆರು ತಿಂಗಳಾಗಿದೆ. ಆದರೆ ತುಂಬಾ ಜನಕ್ಕೆ ಇದರ ಬಗ್ಗೆ ಗೊತ್ತಿಲ್ಲ ಎಂದು ಶ್ವಾನಪ್ರಿಯ ಸತೀಶ್ ಹೇಳುತ್ತಾರೆ.  ಇತ್ತೀಚೆಗೆ ಈ 20 ಕೋಟಿಯ ಶ್ವಾನ ಕ್ಯಾಡಬಮ್ ಹೈದರ್  ತಿರುವನಂತಪುರದಲ್ಲಿ ನಡೆದ ತ್ರಿವೆಂಡ್ರಮ್ ಕೆನ್ನೆಲ್ ಕ್ಲಬ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಒಟ್ಟು 32ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದೆ.  ಗಾತ್ರದಲ್ಲಿ ಬೃಹತ್ ಆಗಿರುವ ಹೈದರ್ ತುಂಬಾ ಸ್ನೇಹಿಯಾಗಿದ್ದಾನೆ.  ಪ್ರಸ್ತುತ ನನ್ನ ಮನೆಯಲ್ಲಿ ಏರ್ ಕಂಡೀಷನ್ಡ್ ವ್ಯವಸ್ಥೆಯಲ್ಲಿ ವಾಸ ಮಾಡುತ್ತೇನೆ ಎಂದು ಸತೀಶ್ ತಮ್ಮ ಈ ನೆಚ್ಚಿನ ಶ್ವಾನದ ಬಗ್ಗೆ ಹೇಳಿ ಕೊಂಡಿದ್ದಾರೆ.

ಸಾಕಿದ ಮಹಿಳೆ, ಮಕ್ಕಳನ್ನೇ ಕಚ್ಚಿ ಗಾಯಗೊಳಿಸಿದ Pit Bull: 50 ಹೊಲಿಗೆ ಹಾಕಿಸಿಕೊಂಡ ಮನೆಯೊಡತಿ

ನಾನು ಹೈದರ್‌ನನ್ನು ನವೆಂಬರ್ ತಿಂಗಳಲ್ಲಿ ಬೆಂಗಳೂರು ಜನರಿಗೆ ಪರಿಚಯಿಸಬೇಕೆಂದುಕೊಂಡಿದ್ದೆ. ಆದರೆ ಆ ಸಮಯದಲ್ಲಿ ಅವನಿಗೆ ಕೂದಲುದುರಲು ಶುರು ಆಯ್ತು.  ಹೀಗಾಗಿ ಮುಂಜಾಗೃತ ಕ್ರಮವಾಗಿ  ಈ ಯೋಜನೆಯನ್ನು ಮುಂದೂಡಿದೆ.  ಮುಂದೆ ಫೆಬ್ರವರಿಯಲ್ಲಿ ದೊಡ್ಡ ಕಾರ್ಯಕ್ರಮ ಮಾಡಿ ಆತನನ್ನು ಎಲ್ಲರಿಗೂ ಪರಿಚಯಿಸುವ ಯೋಜನೆ ಇದೆ ಎಂದು ಸತೀಶ್ ಹೇಳಿದ್ದಾರೆ.  ಪ್ರಸ್ತುತ ಸತೀಶ್ ಇದೇ ತಳಿಯ ಎರಡು ಮರಿಗಳನ್ನು ಹೊಂದಿದ್ದು, ಇವುಗಳ ಮೊತ್ತ 5 ಕೋಟಿ ಆಗಿದೆ.

Latest Videos
Follow Us:
Download App:
  • android
  • ios