ರನ್‌ವೇ ನಲ್ಲಿ ಪಲ್ಟಿಯಾದ ಅಗ್ನಿ ಏರೋಸ್ಪೇಸ್ 185 ಏರ್ ಕ್ರಾಫ್ಟ್ ಗಾಯಗೊಂಡ ಮಹಿಳಾ ಪೈಲೆಟ್ ಆಸ್ಪತ್ರೆ ದಾಖಲು ಕ್ಯಾಪ್ಟನ್ ಆಕಾಶ್ ಮತ್ತು ಚೆರ್ಲಿ ತರಬೇತಿ ನಡೆಸುತ್ತಿದ್ದಾಗ ಘಟನೆ 

ಬೆಂಗಳೂರು(ಏ.17): ಅಗ್ನಿ ಏರೋಸ್ಪೇಸ್ 185 ಏರ್ ಕ್ರಾಫ್ಟ್ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬೆಂಗಳೂರಿನ ಜಕ್ಕೂರ್ ಏರೋಡ್ರಮ್‌ನಲ್ಲಿ ನಡೆದಿದೆ. ತರಬೇತಿಯಲ್ಲಿದ್ದ ಈ ವಿಮಾನ ಲ್ಯಾಂಡಿಂಗ್ ವೇಳೆ ಪೈಲೆಟ್ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಮಹಿಳಾ ಪೈಲೆಟ್‌ಗೆ ಗಾಯವಾಗಿದೆ.

ತರಬೇತಿಯಲ್ಲಿದ್ದ ಅಗ್ನಿ ಏರೋಸ್ಪೇಸ್ 185 ಏರ್ ಕ್ರಾಫ್ಟ್ ವಿಮಾನ ಜಕ್ಕೂರ್ ಏರೋಡ್ರಮ್‌ನಲ್ಲಿ ಲ್ಯಾಂಡಿಂಗ್ ಮಾಡಿತ್ತು. ಆದರೆ ನಿಯಂತ್ರಣ ತಪ್ಪಿದ ಕಾರಣ ವಿಮಾನ ರನ್‌ವೇನಲ್ಲಿ ಪಲ್ಟಿಯಾಗಿದೆ. ಮಹಿಳಾ ಪೈಲೆಟ್ ಚೆರ್ಲಿ ಆ್ಯನ್ ಸ್ಟಿಮ್ಸ್‌ಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. 

ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ವಿಮಾನ ಕರಾಚಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್, ತನಿಖೆಗೆ ಆದೇಶ!

ಇನ್ನು ಈ ವಿಮಾನದಲ್ಲಿದ್ದ ಮತ್ತಿಬ್ಬರು ಪೈಲೆಟ್‌ಗೆ ಯಾವುದೇ ಗಾಯಗಳಾಗಿಲ್ಲ. ಕ್ಯಾಪ್ಟನ್ ಆಕಾಶ್ ಮತ್ತು ಚೆರ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ವಿಮಾನ ಲ್ಯಾಂಡ್ ಆಗಿ ರನ್‌ವೇನಲ್ಲಿ ವೇಗವಾಗಿ ತೆರಳುತ್ತಿದ್ದ ವೇಳೆ ನಾಯಿ ಅಡ್ಡಬಂದಿದೆ. ಪರಿಣಾಮ ವಿಮಾನ ಪಲ್ಟಿಯಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇತ್ತೀಚೆಗೆ ದೇಶದಲ್ಲಿ ಹಲವು ದುರಂತಗಳು ಕೂದಲೆಳಯುವ ಅಂತರದಲ್ಲಿ ಪಾರಾಗಿದೆ. ಪ್ರಯಾಣಿಕರನ್ನು ಹೊತ್ತ ವಿಮಾನ ಲ್ಯಾಂಡಿಂಗ್ ವೇಳೆ ಎಡವಟ್ಟು, ಆಗಸದಲ್ಲಿ ಡಿಕ್ಕಿ ಕೂದಲೆಳೆಯುವ ಅಂತರಿಂದ ಪಾರು ಸೇರಿದಂತೆ ಹಲವು ಘಟನೆಗಳು ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಘಟನೆಗಳ ವಿವರ ಇಲ್ಲಿವೆ.

ಬಿರುಗಾಳಿಯಲ್ಲೂ ವಿಮಾನ ಲ್ಯಾಂಡಿಂಗ್, ಭಾರತೀಯ ಪೈಲಟ್‌ಗಳ ಸಾಹಸಕ್ಕೆ ಪ್ರಶಂಸೆ!

ಲ್ಯಾಂಡಿಂಗ್‌ ವೇಳೆ ರನ್‌ವೇನಿಂದ ಜಾರಿದ ವಿಮಾನ, ಅಪಾಯವಿಲ್ಲ
ಕಳೆದ ತಿಂಗಳು ದೆಹಲಿಯಿಂದ 55 ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ‘ಅಲಯನ್ಸ್‌ ಏರ್‌’ ವಿಮಾನವು ಜಬಲ್‌ಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಆಗುವ ವೇಳೆ ರನ್‌ ವೇ ಅನ್ನು ದಾಟಿ ಮುಂದಕ್ಕೆ ಚಲಿಸಿದ ಘಟನೆ ನಡೆದಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಪ್ರತಿಕ್ರಿಯಿಸಿದ್ದು, ‘ಅಪಘಾತದಿಂದ ಯಾವುದೇ ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗಳಿಗೆ ತೊಂದರೆಯಾಗಿಲ್ಲ. ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ’ ಎಂದಿದ್ದಾರೆæ. ದೆಹಲಿಯಿಂದ ಬೆಳಗ್ಗೆ 11.30ಕ್ಕೆ ಹೊರಟಿದ್ದ ಎಟಿಆರ್‌-72 ವಿಮಾನವು ಮಧ್ಯಪ್ರದೇಶದ ಜಬಲ್‌ಪುರಕ್ಕೆ 1.15ಕ್ಕೆ ಆಗಮಿಸಿತ್ತು. ವಿಮಾನದಲ್ಲಿ 55 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿಗಳಿದ್ದರು.

ಬೆಂಗಳೂರಿನಲ್ಲಿ ಸ್ವಲ್ಪದರಲ್ಲೇ ತಪ್ಪಿತು ವಿಮಾನಗಳ ದುರಂತ!
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಎರಡು ಇಂಡಿಗೋ ವಿಮಾನಗಳು ಏಕಕಾಲದಲ್ಲಿ ಟೇಕಾಫ್‌ ಆದ ನಂತರದಲ್ಲಿ ಆಗಸದಲ್ಲೇ ಡಿಕ್ಕಿ ಹೊಡೆಯುವ ಅಪಾಯ ಎದುರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ ರಾಡಾರ್‌ ನಿಯಂತ್ರಕರ ಎಚ್ಚರಿಕೆಯ ಬಳಿಕ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ್ದು, ಎರಡೂ ವಿಮಾನದಲ್ಲಿದ್ದ 426 ಜನರ ಜೀವ ಉಳಿದಿದೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಸಿಜಿಎ) ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ತಪ್ಪು ರನ್‌ವೇನಲ್ಲಿ ವಿಮಾನ ಲ್ಯಾಂಡ್‌!
ಹೈದರಾಬಾದ್‌-ಬೆಳಗಾವಿ ಮಾರ್ಗ ಮಧ್ಯೆ ಸಂಚರಿಸುವ ಸ್ಪೈಸ್‌ ಜೆಟ್‌ ವಿಮಾನವು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತಾನು ಇಳಿಯಬೇಕಿದ್ದ ರನ್‌ವೇ ಬದಲು ಇನ್ನೊಂದು ರನ್‌ವೇನಲ್ಲಿ ಲ್ಯಾಂಡ್‌ ಆದ ಘಟನೆ ಭಾನುವಾರ ನಡೆದಿದೆ. ಅದೃಷ್ಟವಶಾತ್‌ ಆ ರನ್‌ ವೇನಲ್ಲಿ ಯಾವುದೇ ವಿಮಾನ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸಾಂಬ್ರಾ ವಿಮಾನ ನಿಲ್ದಾಣದ 26ನೇ ರನ್‌ ವೇನಲ್ಲಿ ಲ್ಯಾಂಡ್‌ ಆಗಬೇಕಿದ್ದ ವಿಮಾನ 8ರ ರನ್‌ ವೇನಲ್ಲಿ ಇಳಿದಿದೆ. ರನ್‌ ವೇ 26ರಲ್ಲಿ ಈ ಸಮಯದಲ್ಲಿ ಬೇರೆ ವಿಮಾನಗಳ ಲ್ಯಾಂಡಿಂಗ್‌ ಇಲ್ಲದಿದ್ದಕ್ಕೆ ದುರಂತ ತಪ್ಪಿದೆ. ಬೆಳಗ್ಗೆ 11.26ಕ್ಕೆ ಲ್ಯಾಂಡ್‌ ಆಗಿದ್ದ ಈ ವಿಮಾನ ಮಧ್ಯಾಹ್ನ 12.05ಕ್ಕೆ ಮರಳಿ ಸಾಂಬ್ರಾ ಹೈದರಾಬಾದ್‌ಗೆ ತೆರಳಿತು. ಇಬ್ಬರೂ ಪೈಲಟ್‌ಗಳನ್ನು ಸೇವೆಯಿಂದ ತೆಗೆದುಹಾಕಲಾಗಿದೆ. ತನಿಖಾಧಿಕಾರಿಗಳ ಎದುರು ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ ಎಂದು ಸ್ಪೈಸ್‌ ಜೆಟ್‌ ವಿಮಾನ ಕಂಪನಿ ವಕ್ತಾರರು ತಿಳಿಸಿದ್ದಾರೆ.