ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ವಿಮಾನ ಕರಾಚಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್, ತನಿಖೆಗೆ ಆದೇಶ!
* ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ
* ಎಮರ್ಜೆನ್ಸಿ ಲ್ಯಾಂಡಿಂಗ್ ಬಗ್ಗೆ ತನಿಖೆಗೆ ಆದೇಶ
* ಸುಮಾರು 100 ಪ್ರಯಾಣಿಕರಿದ್ದ ವಿಮಾನ ಕರಾಚಿಯಲ್ಲಿ ಲ್ಯಾಂಡಿಂಗ್
ಕರಾಚಿ(ಮಾ.21): ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ವಿಮಾನವನ್ನು ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಈ ವಿಮಾನವು ಕತಾರ್ ಏರ್‌ವೇಸ್‌ಗೆ ಸೇರಿತ್ತು. ಪ್ರಸ್ತುತ, ಕರಾಚಿಯಿಂದ ದೋಹಾಗೆ ಪ್ರಯಾಣಿಕರನ್ನು ಕಳುಹಿಸಲು ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ. ಸುದ್ದಿ ಸಂಸ್ಥೆ ANI ಪ್ರಕಾರ, ವಿಮಾನದ ಕಾರ್ಗೋ ಪ್ರದೇಶದಲ್ಲಿ ಹೊಗೆಯ ಲಕ್ಷಣಗಳು ಕಂಡುಬಂದಿದ್ದು, ಇದಾದ ಬಳಿಕ ವಿಮಾನವನ್ನು ಕರಾಚಿಗೆ ತಿರುಗಿಸಲಾಯಿತು. ಪ್ರಸ್ತುತ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ಪ್ರಯಾಣಿಕರನ್ನು ದೋಹಾಗೆ ಕರೆದೊಯ್ಯಲು ಪರಿಹಾರ ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ.
ವರದಿಗಳ ಪ್ರಕಾರ, ಕತಾರ್ ಏರ್‌ವೇಸ್ ವಿಮಾನ ಸಂಖ್ಯೆ QR579 ನಲ್ಲಿ ಸುಮಾರು 100 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ವಿಮಾನವು ಇಂದು ಮುಂಜಾನೆ 3.50 ಕ್ಕೆ ಟೇಕಾಫ್ ಆಗಿದೆ. ಇದರ ನಂತರ, ಅದರ ತುರ್ತು ಲ್ಯಾಂಡಿಂಗ್ ಅನ್ನು ಕರಾಚಿಯಲ್ಲಿ ಬೆಳಿಗ್ಗೆ 5.30 ಕ್ಕೆ ಮಾಡಲಾಯಿತು. ಈ ಬೆಳವಣಿಗೆಗಳ ಬೆನ್ನಲ್ಲೇ ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಕತಾರ್ ಏರ್ವೇಸ್ ಹೇಳಿಕೆ ನೀಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಕ್ಯೂಆರ್ 579 ರಲ್ಲಿ ಪ್ರಯಾಣಿಸುತ್ತಿದ್ದ ರಮೇಶ್ ರಾಲಿಯಾ ಅವರು ವೀಡಿಯೊ ಸಂದೇಶವನ್ನು ನೀಡಿದ್ದಾರೆ, ಅವರೆಲ್ಲರೂ ಪ್ರಸ್ತುತ ಕರಾಚಿ ವಿಮಾನ ನಿಲ್ದಾಣದಲ್ಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಅವರ ಮುಂದಿನ ವಿಮಾನ ಯಾವಾಗ ಹೊರಡಲಿದೆ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.