ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲು ರದ್ದು ಮಾಡಲಾಗುತ್ತದೆ ಎಂದು ವಿಜಯ ಸಂಕಲ್ಪ ಸಭೆಯಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಭರವಸೆ ನೀಡಿದ್ದಾರೆ. 

ಹೈದರಾಬಾದ್‌ (ಏಪ್ರಿಲ್ 24, 2023): ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ನೀಡಿರುವ ಶೇ.4 ರಷ್ಟು ಮೀಸಲು ರದ್ದು ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಹೇಳಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಬಿಆರ್‌ಎಸ್‌ ಸರ್ಕಾರ ಅಂತ್ಯವಾಗಲು ಕ್ಷಣಗಣನೆ ಆರಂಭವಾಗಿದೆ ಎಂದೂ ಹೇಳಿದರು.

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ತೆಲಂಗಾಣದಲ್ಲಿ ‘ವಿಜಯ್‌ ಸಂಕಲ್ಪ ಸಭೆ’ಯಲ್ಲಿ ಮಾತನಾಡಿದ ಅಮಿತ್‌ ಶಾ, ‘ಧರ್ಮದ ಆಧಾರದಲ್ಲಿ ಮೀಸಲಾತಿ ಸಾಧ್ಯವಿಲ್ಲ. ಇದು ಅಸಂವಿಧಾನಿಕ. ಹಾಗಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದುಳಿದ ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿಯನ್ನು ರದ್ದು ಮಾಡಿ, ಅದನ್ನು ಇತರ ಹಿಂದುಳಿದ ವರ್ಗಗಳ ನಡುವೆ ಹಂಚಿಕೆ ಮಾಡುತ್ತೇವೆ ಎಂದು ಹೇಳಿದರು. 

ಇದನ್ನು ಓದಿ: ನಾನು ಅಮಿತ್‌ ಶಾ ಗೆ ಕರೆ ಮಾಡಿರುವುದು ಸಾಬೀತಾದ್ರೆ ರಾಜೀನಾಮೆ ಕೊಡ್ತೇನೆ ಎಂದು ದೀದಿ ಹೇಳಿದ್ಯಾಕೆ?

ಪ್ರಸ್ತುತ ತೆಲಂಗಾಣದಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದೆ. ಇದನ್ನು ಶೇ.12ಕ್ಕೆ ಏರಿಸಬೇಕು ಎಂದು 2014ರಲ್ಲಿ ತೆಲಂಗಾಣ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಕಳುಹಿಸಿತ್ತು. ಇದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಈಗಾಗಲೇ ಕರ್ನಾಟಕ ಸರ್ಕಾರ ಇದೇ ರೀತಿ ಮುಸ್ಲಿಮರಿಗೆ 2ಬಿ ಅಡಿ ನೀಡಲಾಗ್ತಿದ್ದ ಶೇ. 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದೆ. ಅಲ್ಲದೆ, ಶೇ. 10 ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯೂಎಸ್‌) ದಡಿ ನೀಡಲು ಕಳೆದ ತಿಂಗಳು ತೀರ್ಮಾನಿಸಿದೆ. ಅಲ್ಲದೆ, ಈ ಮೀಸಲಾತಿಯನ್ನು ವೀರಶೈವ ಲಿಂಗಾಯತರಿಗೆ ಹಾಗೂ ಒಕ್ಕಲಿಗರಿಗೆ ಸಮಾನವಾಗಿ ಹಂಚಿದೆ. ಮೇ 10ರಂದು ವಿಧಾನಸಭೆ ಚುನಾವಣೆಗೂ ಮುನ್ನ ಈ ನಿರ್ಧಾರ ಕೈಗೊಂಡಿದೆ. ಈ ಮಧ್ಯೆ, ಕರ್ನಾಟಕ ಸರ್ಕಾರದ ಮೀಸಲಾತಿ ರದ್ದುಗೊಳಿಸಬೇಕೆಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ನಿರ್ಧಾರ ದೋಷಪೂರಿತ ಎಂದಿದೆ. 

ತೆಲಂಗಾಣದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ “ನಾವು ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ. ಕೋಟಾಗಳು ದಲಿತರು, ಬುಡಕಟ್ಟುಗಳು ಮತ್ತು ಹಿಂದುಳಿದ ಜಾತಿಗಳ ಸಾಂವಿಧಾನಿಕ ಹಕ್ಕು ಮತ್ತು ಅವರು ಪ್ರಯೋಜನ ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ”ಎಂದು ಅಮಿತ್‌ ಶಾ ಅವರು ಮುಸ್ಲಿಂ ಕೋಟಾಗಳನ್ನು 4% ರಿಂದ 12% ಕ್ಕೆ ಹೆಚ್ಚಿಸುವ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ನೇತೃತ್ವದ ಸರ್ಕಾರದ ಕ್ರಮಗಳ ನಡುವೆ ರ‍್ಯಾಲಿಯಲ್ಲಿ ಹೇಳಿದರು.

ಇದನ್ನೂ ಓದಿ: ನಾನು ಬಿಜೆಪಿ ಶಾಸಕ; ಅಮಿತ್ ಶಾ ಭೇಟಿಯಾಗ್ಬೇಕು ಎಂದ ಟಿಎಂಸಿ ನಾಯಕ ಮುಕುಲ್ ರಾಯ್

ಹೈದರಾಬಾದ್‌ನಿಂದ 46 ಕಿಮೀ ದೂರದಲ್ಲಿರುವ ಚೆವೆಲ್ಲಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಬಿಆರ್‌ಎಸ್‌ನ ವಿಸ್ತರಣೆ ಯೋಜನೆಗಳನ್ನು ಲೇವಡಿ ಮಾಡಿದರು. ಅಲ್ಲದೆ, ಪ್ರಧಾನಿ ಹುದ್ದೆ ಖಾಲಿ ಇಲ್ಲ ಮತ್ತು ನರೇಂದ್ರ ಮೋದಿ 2024 ರಲ್ಲಿ "ಸುಲಭವಾಗಿ" ಅಧಿಕಾರವನ್ನು ಉಳಿಸಿಕೊಳ್ಳುತ್ತಾರೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಹಾಗೆ, ಬಿಆರ್‌ಎಸ್ ಅಧಿಕಾರದಿಂದ ಕೆಳಗಿಳಿಯುವವರೆಗೂ ಬಿಜೆಪಿ ಸುಮ್ಮನಿರಲ್ಲ ಎಂದು ಅಮಿತ್ ಶಾ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌ಗೆ ಎಚ್ಚರಿಕೆ ನೀಡಿದರು ಮತ್ತು ಅವರ “ಗುಲಾಬಿ ಪಕ್ಷವು ಟಿಆರ್‌ಎಸ್‌ನಿಂದ ಬಿಆರ್‌ಎಸ್‌ಗೆ ರೂಪಾಂತರಗೊಂಡಿರುವುದು ಕುತ್ತಿಗೆ ಆಳವಾದ ಭ್ರಷ್ಟಾಚಾರದಿಂದ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ” ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: ಲೋಕಸಭೆಯಲ್ಲಿ ಬಂಗಾಳದಲ್ಲಿ ಬಿಜೆಪಿಗೆ 35 ಸ್ಥಾನ ಕೊಡಿ; ನಂತರ ಟಿಎಂಸಿ ಸರ್ಕಾರ ಉಳಿಯಲ್ಲ: ಅಮಿತ್ ಶಾ

"ಕೆಸಿಆರ್ ಪ್ರಧಾನಿಯಾಗುವ ಮತ್ತು ಭಾರತ ಪ್ರವಾಸ ಮಾಡುವ ಕನಸು ಕಾಣುತ್ತಾರೆ, ಆದರೆ ಅವರು ಮೊದಲು ತೆಲಂಗಾಣವನ್ನು ನೋಡಲಿ" ಎಂದು ಅಮಿತ್ ಶಾ ಹೇಳಿದರು. ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ನೀಡುವಂತೆ ಜನತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದರು. 

ಇದನ್ನೂ ಓದಿ: ಸೂಜಿಮೊನೆಯಷ್ಟು ಜಾಗವನ್ನೂ ಕಬಳಿಸಲಾಗದು: ಅರುಣಾಚಲ ಪ್ರದೇಶದಲ್ಲಿ ಚೀನಾ ವಿರುದ್ಧ ಅಮಿತ್‌ ಶಾ ಗುಡುಗು