Asianet Suvarna News Asianet Suvarna News

Assembly Elections 2021: ಒಮಿಕ್ರೋನ್‌ ಭೀತಿ: ಪಂಚರಾಜ್ಯ ಚುನಾವಣೆ ಮುಂದೂಡಿಕೆ?

*ಪಂಚರಾಜ್ಯಗಳಲ್ಲಿ ಕೋವಿಡ್‌ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹ
*ಲಸಿಕಾಕರಣ ಹೆಚ್ಚಿಸಲು ರಾಜ್ಯಗಳಿಗೆ ಆಯೋಗ ಸೂಚನೆ
*ಚುನಾವಣಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ

Will polls in 5 states including Uttar Pradesh  get  postponed amid Covid 19 mnj
Author
Bengaluru, First Published Dec 28, 2021, 5:19 AM IST

ನವದೆಹಲಿ (ಡಿ. 28): ಒಮಿಕ್ರೋನ್‌ ವೈರಸ್‌ (Omicron Variant) ಅಬ್ಬರದ ನಡುವೆಯೂ ಮುಂದಿನ ವರ್ಷದ ಆರಂಭದಲ್ಲಿ ನಿಗದಿಯಾಗಿರುವ ಪಂಚರಾಜ್ಯ ಚುನಾವಣೆ (Assembly Election 2021) ನಿಗದಿಯಂತೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಚುನಾವಣಾ ರಾಜ್ಯಗಳಲ್ಲಿನ ಕೋವಿಡ್‌ ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಸೋಮವಾರ, ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಭೇಟಿಯಾಗಿದ್ದರು. ಈ ವೇಳೆ ಅಧಿಕಾರಿಗಳು ಕೋವಿಡ್‌ (Covid 19) ಸ್ಥಿತಿಗತಿ ಮತ್ತು ಮುಂದಿನ ದಿನಗಳ ಸಂಭವನೀಯ ಕೇಸುಗಳ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ಅದರ ಬೆನ್ನಲ್ಲೇ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಲಸಿಕಾಕರಣ (Vaccination) ತೀವ್ರಗೊಳಿಸುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಇದು ನಿಗದಿತ ಸಮಯದಲ್ಲೇ ಉತ್ತರಪ್ರದೇಶ, ಪಂಜಾಭ್‌, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಿಗೆ ಚುನಾವಣೆ ನಡೆಸುವ ಬಗ್ಗೆ ಆಯೋಗ ಒಲವು ಹೊಂದಿರುವ ಸುಳಿವು ಎಂದು ವಿಶ್ಲೇಷಿಸಲಾಗಿದೆ. ಒಮಿಕ್ರೋನ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚುನಾವಣೆಗಳನ್ನು ಒಂದೆರಡು ತಿಂಗಳು ಮುಂದೂಡಲು ಉತ್ತರಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ ಕೇಂದ್ರ ಚುನಾವಣಾ ಆಯೋಗಕ್ಕೆ ಸಲಹೆ ನೀಡಿತ್ತು.

ಪರೀಕ್ಷೆ, ಲಸಿಕೆ ವಿತರಣೆ ಹೆಚ್ಚಿಸಿ

ಮುಂದಿನ ವರ್ಷ ಚುನಾವಣೆಗೆ ಸಜ್ಜಾಗಿರುವ ರಾಜ್ಯಗಳು ಕೋವಿಡ್‌ ಪರೀಕ್ಷಾ ಪ್ರಮಾಣಗಳನ್ನು ಹೆಚ್ಚಿಸಬೇಕು ಮತ್ತು ಲಸಿಕಾಕರಣವನ್ನು ತೀವ್ರಗೊಳಿಸಬೇಕು ಎಂದು ಕೇಂದ್ರ ಸರ್ಕಾರ, 5 ರಾಜ್ಯಗಳಿಗೆ ಸೂಚಿಸಿದೆ.ಈ ಕುರಿತು ಸೋಮವಾರ 5 ರಾಜ್ಯಗಳ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ‘ಎಲ್ಲಾ ಅರ್ಹರಿಗೂ ಮೊದಲ ಮತ್ತು ಎರಡನೇ ಡೋಸ್‌ ಲಸಿಕೆ ನೀಡಿಕೆ ಖಚಿತಪಡಿಸಿಕೊಳ್ಳಬೇಕು.

ಜೊತೆಗೆ ಕೋವಿಡ್‌ ಸೋಂಕಿತರನ್ನು ತಕ್ಷಣವೇ ಗುರುತಿಸುವ ನಿಟ್ಟಿನಲ್ಲಿ ಪರೀಕ್ಷಾ ಪ್ರಮಾಣ ಹೆಚ್ಚಿಸಬೇಕು. ಈ ಮೂಲಕ ಸೋಂಕಿನ ಪ್ರಮಾಣ ದಿಢೀರ್‌ ಏರಿಕೆಯಾಗುವುದನ್ನು ತಡೆಯಬೇಕು. ಕೋವಿಡ್‌ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದ್ದಾರೆ.ಲಸಿಕಾಕರಣ ಹೆಚ್ಚಿಸಲು ಜಿಲ್ಲಾವಾರು ವಾರದ ಲಸಿಕಾ ಯೋಜನೆ ರೂಪಿಸಬೇಕು. ಲಸಿಕಾ ಪ್ರಮಾಣದ ಪ್ರಗತಿಯನ್ನು ಹಿರಿಯ ಅಧಿಕಾರಿಗಳು ದೈನಂದಿನ ಆಧಾರದಲ್ಲಿ ಪರಿಶೀಲಿಸಬೇಕು ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ.

'ಕೋವಿಡ್‌ ಹೆಚ್ಚಾದರೆ ಸ್ಥಳೀಯ ನಿರ್ಬಂಧ ವಿಧಿಸಿ, ಪಂಚಸೂತ್ರ ಪಾಲಿಸಿ

ಒಮಿಕ್ರೋನ್‌ ಪ್ರಕರಣಗಳು ಹಾಗೂ ಹಲವೆಡೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೊಸ ಸಲಹಾವಳಿಗಳನ್ನು ನೀಡಿದೆ. ಅಗತ್ಯ ಬಿದ್ದರೆ ಸ್ಥಳೀಯ ನಿಯಂತ್ರಣ ಕ್ರಮಗಳು ಹಾಗೂ ನಿರ್ಬಂಧಗಳನ್ನು ಹೇರಬೇಕು. ಹಬ್ಬ ಹಾಗೂ ಹೊಸ ವರ್ಷಾಚರಣೆಯ ಈ ಸಂದರ್ಭದಲ್ಲಿ ಜನಜಂಗುಳಿ ಸೇರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.

ಕೋವಿಡ್‌ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ. ಹೀಗಾಗಿ ಶಸ್ತ್ರತ್ಯಾಗ ಬೇಡ. ಕೋವಿಡ್‌ ತಪಾಸಣೆ, ಚಿಕಿತ್ಸೆ, ಲಸಿಕಾಕರಣ, ಸೋಂಕಿತರ ಪತ್ತೆ, ಕೋವಿಡ್‌ ಸನ್ನಡತೆ ಪಾಲನೆಯಂಥ ‘ಐದಂಶದ ಸೂತ್ರ’ ಪಾಲನೆ ಮರೆಯಬಾರದು. ಡಿ.21ರಂದು ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳು ಪಾಲನೆ ಆಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಆಜಯ್‌ ಭಲ್ಲಾ, ಸೋಮವಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ.

ಪಂಚಸೂತ್ರಗಳು

1.ಕೋವಿಡ್‌ ತಪಾಸಣೆ

2. ಚಿಕಿತ್ಸೆ

3. ಲಸಿಕಾಕರಣ

4. ಸೋಂಕಿತರ ಪತ್ತೆ

5. ಕೋವಿಡ್‌ ಸನ್ನಡತೆ ಪಾಲನೆ

ಇದನ್ನೂ ಓದಿ:

1) Covid 19 Variant: ಒಮಿಕ್ರೋನ್‌ ಸ್ಫೋಟ: ಸೋಮವಾರ ದಾಖಲೆಯ 156 ಹೊಸ ಕೇಸ್‌!

2) Covid in India: ಭಾರತಕ್ಕೂ ಬಂತು ಕೋವಿಡ್ ಗುಳಿಗೆ, ತುರ್ತು ಬಳಕೆಗೆ ಶಿಫಾರಸು!

3) NITI Ayog: ಆರೋಗ್ಯ ಸೂಚ್ಯಂಕ: ಕೇರಳ ನಂ.1 ಕರ್ನಾಟಕ ನಂ.9!

Follow Us:
Download App:
  • android
  • ios