NITI Ayog: ಆರೋಗ್ಯ ಸೂಚ್ಯಂಕ: ಕೇರಳ ನಂ.1 ಕರ್ನಾಟಕ ನಂ.9!
* ನೀತಿ ಆಯೋಗದಿಂದ ಆರೋಗ್ಯ ಸೂಚ್ಯಂಕ ಪ್ರಕಟ
* ಆರೋಗ್ಯ ಸೂಚ್ಯಂಕ: ಕೇರಳ ನಂ.1 ಕರ್ನಾಟಕ ನಂ.9
* ತಮಿಳುನಾಡು ನಂ.2, ತೆಲಂಗಾಣ ನಂ.3, ಯುಪಿ ಲಾಸ್ಟ್
ನವದೆಹಲಿ(ಡಿ.28): 2019-20ನೇ ಸಾಲಿನ ನೀತಿ ಆಯೋಗದ ಆರೋಗ್ಯ ಸೂಚ್ಯಂಕ ಪ್ರಕಟಗೊಂಡಿದ್ದು, ಸತತ 4ನೇ ಬಾರಿಗೆ ಕೇರಳವು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಇದೇ ವೇಳೆ ಉತ್ತರ ಪ್ರದೇಶ ಕೊನೆಯ ಸ್ಥಾನ ಪಡೆದುಕೊಂಡಿದೆ. ಕಳೆದ ಸಲ 8ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಸಲ 9ನೇ ಸ್ಥಾನಕ್ಕೆ ಜಾರಿದೆ.
ಆರೋಗ್ಯ ಕ್ಷೇತ್ರದಲ್ಲಿನ 24 ವಿವಿಧ ವಿಭಾಗಗಳಲ್ಲಿನ ಸಾಧನೆ ಆಧರಿಸಿ ಹಾಗೂ ದೊಡ್ಡ ರಾಜ್ಯ, ಸಣ್ಣ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಎಂಬ 3 ವಿಭಾಗ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ.
ಕೇರಳ, ತ.ನಾಡು, ತೆಲಂಗಾಣ ಟಾಪ್ 3:
19 ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ 82.20 ಅಂಕ ಪಡೆದ ಕೇರಳ ಮೊದಲ ಸ್ಥಾನ ಪಡೆದಿದ್ದು, ನಂತರದ ಸ್ಥಾನಗಳು 72.42 ಅಂಕ ಪಡೆದ ತಮಿಳುನಾಡು ಹಾಗೂ 69.96 ಅಂಕ ಗಳಿಸಿದ ತೆಲಂಗಾಣದ ಪಾಲಾಗಿವೆ. ಆದರೆ ಕಳಪೆ ಸಾಧನೆ ತೋರಿರುವ ಉತ್ತರ ಪ್ರದೇಶ ಕೇವಲ 30.57 ಅಂಕ ಪಡೆದು ಕೊನೆಯ ಸ್ಥಾನದಲ್ಲಿದ್ದು, ನಂತರದ 2 ಕೊನೆ ಸ್ಥಾನಗಳು ಕ್ರಮವಾಗಿ 31 ಅಂಕ ಪಡೆದ ಬಿಹಾರ ಹಾಗೂ 36.72 ಅಂಕ ಗಳಿಸಿದ ಮಧ್ಯಪ್ರದೇಶದ ಪಾಲಾಗಿವೆ.
ಕರ್ನಾಟಕದ ಸ್ಥಾನ ಕುಸಿತ:
2018-19ನೇ ಸಾಲಿನಲ್ಲಿ ಕರ್ನಾಟಕ 59.29 ಅಂಕ ಗಳಿಸಿ 8ನೇ ಸ್ಥಾನದಲ್ಲಿತ್ತು. ಆದರೆ ಈ 2019-20ನೇ ಸಾಲಿನಲ್ಲಿ 1.36 ಅಂಕ ಕಳೆದುಕೊಂಡು 57.93 ಅಂಕ ಮಾತ್ರ ಗಳಿಸಿದೆ. ಈ ಮೂಲಕ 8ರಿಂದ 9ನೇ ಸ್ಥಾನಕ್ಕೆ ಕುಸಿದಿದೆ.
ಸಣ್ಣ ರಾಜ್ಯದಲ್ಲಿ ಮಿಜೋರಂ ನಂ.1:
ಇನ್ನು ಸಣ್ಣ ರಾಜ್ಯಗಳಿಗೆ ಹೋಲಿಸಿದರೆ ಮಿಜೋರಂ ಮೊದಲ ಹಾಗೂ ತ್ರಿಪುರಾ 2ನೇ ಸ್ಥಾನ ಪಡೆದಿದೆ. ಕೇಂದ್ರಾಡಳಿತದಲ್ಲಿ ಮೊದಲ 2 ಸ್ಥಾನಗಳು ದಿಲ್ಲಿ ಹಾಗೂ ಜಮ್ಮು-ಕಾಶ್ಮೀರದ ಪಾಲಾಗಿವೆ.