Covid in India: ಭಾರತಕ್ಕೂ ಬಂತು ಕೋವಿಡ್ ಗುಳಿಗೆ, ತುರ್ತು ಬಳಕೆಗೆ ಶಿಫಾರಸು!
* ಕೇಂದ್ರ ಸರ್ಕಾರದ ತಜ್ಞರ ಸಮಿತಿ ಒಪ್ಪಿಗೆ
* ಮೊಲ್ನುಪಿರಾವಿರ್ ತುರ್ತು ಬಳಕೆಗೆ ಶಿಫಾರಸು
* 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ನೀಡುವಂತಿಲ್ಲ
* ಆಸ್ಪತ್ರೆಗೆ ದಾಖಲಾದ ಗಂಭೀರ ಸ್ಥಿತಿಯ ರೋಗಿಗಳ ಮೇಲೆ ಬಳಕೆಗೆ ಶಿಫಾರಸು
ನವದೆಹಲಿ(ಡಿ.28): ಅಮೆರಿಕ ಮೂಲದ ಮೆರ್ಕ್ ಮತ್ತು ರೆಡ್ಜ್‌ಬ್ಯಾಕ್ ಔಷಧ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಮೊಲ್ನುಪಿರಾವಿರ್ ಕೋವಿಡ್ ವಿರುದ್ಧದ ಮಾತ್ರೆಯನ್ನು ತುರ್ತು ಬಳಕೆಯ ಉದ್ದೇಶದಿಂದ ಭಾರತದಲ್ಲಿ ಉತ್ಪಾದಿಸಲು ಮತ್ತು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸೋಮವಾರ ಕೇಂದ್ರ ಸರ್ಕಾರದ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಆದರೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಯಸ್ಕ ಕೋವಿಡ್ ಸೋಂಕಿತ ವ್ಯಕ್ತಿಯ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಶೇ.93ಕ್ಕೆ ಕುಸಿದಿದ್ದರೆ ಅಥವಾ ಸೋಂಕಿತ ಆಸ್ಪತ್ರೆಗೆ ದಾಖಲಾಗಿ ಗಂಭೀರ ಸ್ಥಿತಿಯಲ್ಲಿದ್ದಾಗ ಮಾತ್ರ ಮಾತ್ರೆಯನ್ನು ಬಳಕೆ ಮಾಡಬಹುದು. 18 ವರ್ಷಕ್ಕಿಂತ ಕಡಿಮೆ ವಯೋಮಾನದ ರೋಗಿಗಳ ಮೇಲೆ ಗುಳಿಗೆ ಪ್ರಯೋಗ ಮಾಡಬಾರದು ಎಂದು ತಿಳಿಸಿದೆ. ಸಿಪ್ಲಾ, ಡಾ.ರೆಡ್ಡಿಸ್ ಲ್ಯಾಬೊರೇಟರೀಸ್, ಸನ್ ಫಾರ್ಮಾ, ಹೆಟೆರೊ, ಅರಬಿಂದೊ ಫಾರ್ಮಾ ಸೇರಿದಂತೆ ಭಾರತದ 8 ಔಷಧ ತಯಾರಕ ಕಂಪನಿಗಳ ಜತೆ ಮರ್ಕ್ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.
ಈ ಕಂಪನಿಗಳು ಕ್ಲಿನಿಕಲ್ ಡೇಟಾ ಸೇರಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮೊಲ್ನುಫಿರಾವಿರ್ 200 ಮಾತ್ರೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಈ ಬಗ್ಗೆ ಸೋಮವಾರ 2ನೇ ಬಾರಿ ಸುದೀರ್ಘವಾಗಿ ವಿಶ್ಲೇಷಣೆ ನಡೆಸಿದ ಕೋವಿಡ್ ಕುರಿತಾದ ಕೇಂದ್ರ ಸರ್ಕಾರದ ವಿಷಯ ತಜ್ಞರ ಸಮಿತಿ, ಮಾತ್ರೆಯ ತುರ್ತು ಬಳಕೆಗೆ ಅವಕಾಶ ನೀಡಬಹುದು ಎಂದು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಡಿಸಿಜಿಐ ಅನುಮೋದನೆ ಬಳಿಕ ಗುಳಿಗೆಯು ಬಳಕೆ ಅರ್ಹತೆ ಪಡೆಯಲಿದೆ.
ಕೋವಿಡ್ ನಿರೋಧಕ ಮೊಲ್ನುಪಿರಾವಿರ್ ಮಾತ್ರೆಗೆ ಕಳೆದ ನವೆಂಬರ್‌ನಲ್ಲಿ ಬ್ರಿಟನ್ ಅನುಮೋದನೆ ನೀಡಿದೆ. ಈ ಮೂಲಕ ಜಗತ್ತಿನ ಮೊದಲ ಕೋವಿಡ್ ಗುಳಿಗೆಗೆ ಮಾನ್ಯತೆ ನೀಡಿದ ಮೊದಲ ರಾಷ್ಟ್ರ ಎಂಬ ಖ್ಯಾತಿ ಪಡೆದಿದೆ. ಬ್ರಿಟನ್ ಔಷಧ ಮತ್ತು ಆರೋಗ್ಯ ಉತ್ಪನ್ನ ನಿಯಂತ್ರಣ ಮಂಡಳಿ ಮೊಲ್ನುಪಿರಾವಿರ್ ಗುಳಿಗೆಯನ್ನು ಕೋವಿಡ್ ಸೋಂಕು ದೃಢಪಟ್ಟನಂತರ, ಲಕ್ಷಣಗಳು ಆರಂಭವಾಗುವ 5 ದಿನದ ಒಳಗಾಗಿ ಬಳಕೆ ಮಾಡಲು ಶಿಫಾರಸು ನೀಡಿದೆ.