Covid 19 Variant: ಒಮಿಕ್ರೋನ್ ಸ್ಫೋಟ: ಸೋಮವಾರ ದಾಖಲೆಯ 156 ಹೊಸ ಕೇಸ್!
*ದೇಶದಲ್ಲಿ ಒಮಿಕ್ರೋನ್ ಸೋಂಕಿತರ ಸಂಖ್ಯೆ 578ಕ್ಕೆ
*578ರ ಪೈಕಿ 151 ಜನರು ಗುಣಮುಖ, ಸಾವು ಇಲ್ಲ
*ಒಟ್ಟು 19 ರಾಜ್ಯಗಳಲ್ಲಿ ಹೊಸ ವೈರಸ್ ಮಾದರಿ ಪತ್ತೆ
ನವದೆಹಲಿ (ಡಿ. 28) :ಭಾರತದಲ್ಲೂ ದಿನೇ ದಿನೇ ಒಮಿಕ್ರೋನ್ ಸೋಂಕಿತರ (Omicron Cases)ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣುತ್ತಿದ್ದು, ಸೋಮವಾರ ಒಂದೇ ದಿನ 156 ಜನರಲ್ಲಿ ಹೊಸ ರೂಪಾಂತರಿ ವೈರಸ್ (Covid 19 Variant) ಪತ್ತೆಯಾಗಿದೆ. ಇದು, ಇದುವರೆಗೆ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸೋಂಕಿನ ಪ್ರಮಾಣವಾಗಿದೆ.ಇದರೊಂದಿಗೆ ದೇಶದಲ್ಲಿ ಒಟ್ಟು ಒಮಿಕ್ರೋನ್ ಸೋಂಕಿತರ ಸಂಖ್ಯೆ 578ಕ್ಕೆ ತಲುಪಿದೆ. ಡಿ.24ರಂದು 122 ಕೇಸ್ ಪತ್ತೆಯಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಒಮಿಕ್ರೋನ್ ಕೇಸುಗಳಲ್ಲಿ ದೆಹಲಿ (142), ಮಹಾರಾಷ್ಟ್ರ (141), ಕೇರಳ (57) ಅತಿ ಹೆಚ್ಚು ಒಮಿಕ್ರೋನ್ ಸೋಂಕಿತ ಟಾಪ್ ಮೂರು ರಾಜ್ಯಗಳಾಗಿ ಹೊರಹೊಮ್ಮಿವೆ. ಕರ್ನಾಟಕದಲ್ಲಿ ಇದುವರೆಗೂ 38 ಪ್ರಕರಣಗಳು ಪತ್ತೆಯಾಗಿವೆ.
ಟಾಪ್ 3 ಒಮಿಕ್ರೋನ್ ರಾಜ್ಯಗಳು : ರಾಜ್ಯ ಕೇಸ್
*ದೆಹಲಿ 142
*ಮಹಾರಾಷ್ಟ್ರ 141
*ಕೇರಳ 57
19 ರಾಜ್ಯಗಳಲ್ಲಿ ಒಮಿಕ್ರೋನ್ ಸೋಂಕು!
ಸೋಮವಾರ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ 156 ಹೊಸ ಒಮಿಕ್ರೋನ್ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ ಮಣಿಪುರ ಮತ್ತು ಗೋವಾದಲ್ಲಿ ಪತ್ತೆಯಾದ ಮೊದಲ ಪ್ರಕರಣಗಳು ಕೂಡಾ ಸೇರಿವೆ. ಇದರೊಂದಿಗೆ ಡಿ.2ರಂದು ಕರ್ನಾಟಕದ ಇಬ್ಬರಲ್ಲಿ ಕಾಣಿಸಿಕೊಳ್ಳುವ ಮೂಲಕ ದೇಶವನ್ನು ಪ್ರವೇಶಿಸಿದ್ದ ಒಮಿಕ್ರೋನ್ ಸೋಂಕು ಇದೀಗ ಒಟ್ಟು 19 ರಾಜ್ಯಗಳನ್ನು ಪ್ರವೇಶ ಮಾಡಿದಂತಾಗಿದೆ.
ಒಟ್ಟು 578 ಸೋಂಕಿತರ ಪೈಕಿ 151 ಜನರು ಈಗಾಗಲೇ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಜೊತೆಗೆ ಯಾವುದೇ ಸಾವು ಸಂಭವಿಸಿಲ್ಲ. ಒಮಿಕ್ರೋನ್ ಅತ್ಯಂತ ವೇಗವಾಗಿ ಹರಡುವ ಗುಣವನ್ನು ಹೊಂದಿದೆಯಾದರೂ, ಡೆಲ್ಟಾದಷ್ಟುತೀವ್ರತೆ ಹೊಂದಿಲ್ಲ. ಹೀಗಾಗಿ ಒಮಿಕ್ರೋನ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ, ಆಕ್ಸಿಜನ್ ಸಿಲಿಂಡರ್ ಮೂಲಕ ಉಸಿರಾಟದ ವ್ಯವಸ್ಥೆ ತಲುಪುವ ಪ್ರಕರಣ ತೀರಾ ವಿರಳ ಎಂದು ಈಗಾಗಲೇ ವಿಶ್ವದಾದ್ಯಂತ ಸಾಬೀತಾಗಿದೆ. ಆದರೆ ಕೋವಿಡ್ ಲಸಿಕೆ ಪಡೆಯದವರಲ್ಲಿ ಇದು ಮಾರಕವಾಗುವ ಸಾಧ್ಯತೆ ಇರುವ ಕಾರಣ, ಒಮಿಕ್ರೋನ್ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಕೋವಿಡ್ ನಿರ್ಬಂಧ ಕ್ರಮಗಳನ್ನು ಮತ್ತಷ್ಟುಬಿಗಿಗೊಳಿಸುತ್ತಿವೆ.
ಹೊಸ ಕೊರೋನಾ ಕೇಸು:
ಈ ನಡುವೆ ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 6,531 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 315 ಸೋಂಕಿತರು ಸಾವಿಗೀಡಾಗಿದ್ದಾರೆ. ತನ್ಮೂಲಕ ಒಟ್ಟು ಪ್ರಕರಣ 3.47 ಕೋಟಿಗೆ ಹಾಗೂ ಒಟ್ಟು ಸಾವು 4.79 ಲಕ್ಷಕ್ಕೆ ಏರಿಕೆಯಾಗಿದೆ. ಸಕ್ರಿಯ ಕೇಸು 75,841ಕ್ಕೆ ಇಳಿಕೆ ಕಂಡಿದೆ.
ಕೋವಿಡ್ ಚಿಕಿತ್ಸೆಗೆ ಬಂತು ಮಾತ್ರೆ
ಕೋವಿಡ್ ಸೋಂಕಿಗೆ ಚಿಕಿತ್ಸೆ (Treatment) ನೀಡಲು ಇದೀಗ ಭಾರತಕ್ಕೆ ಮಾತ್ರೆ ಬಂದಿದೆ. ಅಮೆರಿಕ ಮೂಲದ ಮೆರ್ಕ್ ಮತ್ತು ರೆಡ್ಜ್‌ಬ್ಯಾಕ್ ಔಷಧ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಮೊಲ್ನುಪಿರಾವಿರ್ ಮಾತ್ರೆಯನ್ನು ತುರ್ತು ಬಳಕೆಗಾಗಿ ಭಾರತದಲ್ಲಿ ಉತ್ಪಾದಿಸಲು ಮತ್ತು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸೋಮವಾರ ಕೇಂದ್ರ ಸರ್ಕಾರದ ತಜ್ಞರ ಸಮಿತಿ ಶಿಫಾರಸು ಮಾಡಿದೆ.
15+ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ
15 ವರ್ಷ ಮೇಲಿನ ಮಕ್ಕಳು ತಮ್ಮ ಆಧಾರ್ ಸಂಖ್ಯೆ ಬಳಸಿ ಅಥವಾ ಆಧಾರ್ ಇಲ್ಲದವರು ಶಾಲಾ ಗುರುತಿನ ಚೀಟಿ ಕೋ-ವಿನ್ ಪೋರ್ಟಲ್‌ನಲ್ಲಿ ಪ್ರತ್ಯೇಕ ನೋಂದಣಿ ಮಾಡಿಕೊಳ್ಳಬಹುದು ಅಥವಾ ಇತರ ಕುಟುಂಬ ಸದಸ್ಯರು ಲಸಿಕೆ ಪಡೆಯುತ್ತಿದ್ದರೆ ಅವರ ಜತೆಗೂ ಹೆಸರು ನೋಂದಾಯಿಸಿಕೊಳ್ಳಬಹುದು. ತಮ್ಮದೇ ಮೊಬೈಲ್ ಸಂಖ್ಯೆ ನೀಡಬಹುದು ಅಥವಾ ಕುಟುಂಬ ಸದಸ್ಯರು ಒಟ್ಟಾಗಿ ಲಸಿಕೆ ಪಡೆಯುತ್ತಿದ್ದರೆ ಒಂದು ಮೊಬೈಲ್ ಸಂಖ್ಯೆ ನೀಡಿ ನಾಲ್ವರು ಲಸಿಕೆ ಪಡೆಯಬಹುದು.
ಇದನ್ನೂ ಓದಿ:
1) India Fights Corona: 'ಕೋವಿಡ್ ಹೆಚ್ಚಾದರೆ ಸ್ಥಳೀಯ ನಿರ್ಬಂಧ ವಿಧಿಸಿ, ಪಂಚಸೂತ್ರ ಪಾಲಿಸಿ'
2) ಆರೋಗ್ಯ ಸೂಚ್ಯಂಕ: ಕೇರಳ ನಂ.1 ಕರ್ನಾಟಕ ನಂ.9!
3) News Hour ಡಿ.28 ರಿಂದ 10 ದಿನ ನೈಟ್ ಕರ್ಫ್ಯೂ, ಡಿ.31ಕ್ಕೆ ಬಂದ್; ಸಮಸ್ಯೆಗಳ ಆಗರವಾದ ಕರ್ನಾಟಕ