120 ಜನರಿಂದ ಯೋಧನ ಪತ್ನಿ ಅರೆಬೆತ್ತಲೆ ಮಾಡಿ ಹಲ್ಲೆ ಆರೋಪ: ಇದು ಕಟ್ಟುಕತೆ ಎಂದ ತಮಿಳುನಾಡು ಪೊಲೀಸ್
ಪ್ರಭಾಕರನ್ ಪತ್ನಿ ಹಾಗೂ ಆಕೆಯ ತಾಯಿ ಅಂಗಡಿಯಲ್ಲೇ ಇದ್ದರೂ ಅವರಿಗೆ ಉದ್ರಿಕ್ತರು ಏನೂ ಮಾಡಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.
ಚೆನ್ನೈ (ಜೂನ್ 12, 2023): ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸೇನಾ ಯೋಧರೊಬ್ಬರ ಪತ್ನಿಯನ್ನು 120 ಜನರು ಅರೆಬೆತ್ತಲೆ ಮಾಡಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಖುದ್ದು ಯೋಧ ಪ್ರಭಾಕರನ್ ಈ ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದು, ‘ಇದು ಉತ್ಪ್ರೇಕ್ಷಿತ ಕಟ್ಟು ಕತೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಲೆ.ಕ. ಎನ್.ತ್ಯಾಗರಾಜನ್ ಅವರು ವಿಡಿಯೋವೊಂದನ್ನು ಹಾಕಿದ್ದು, ಅದರಲ್ಲಿ ಸೇನಾ ಯೋಧ ಹವಿಲ್ದಾರ್ ಪ್ರಭಾಕರನ್ ಮಾತನಾಡಿದ್ದಾರೆ. ‘ನನ್ನ ಪತ್ನಿ ತಿರುವಣ್ಣಾಮಲೈನಲ್ಲಿ ಅಂಗಡಿ ನಡೆಸುತ್ತಾಳೆ. ಅಲ್ಲಿ 120 ಗೂಂಡಾಗಳು ಬಂದು ಅಂಗಡಿಯಲ್ಲಿನ ವಸ್ತುಗಳನ್ನು ರಸ್ತೆಗೆ ಎಸೆದಿದ್ದಾರೆ. ನನ್ನ ಕುಟುಂಬಕ್ಕೆ ಚೂರಿ ತೋರಿಸಿ ಬೆದರಿಸಿದ್ದಾರೆ ಹಾಗೂ ಪತ್ನಿಯನ್ನು ಅರೆನಗ್ನಗೊಳಿಸಿ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ದಯಮಾಡಿ ತಮಿಳುನಾಡಿ ಡಿಜಿಪಿ ಅವರು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.
ಇದನ್ನು ಓದಿ: OROP ಪಿಂಚಣಿ ಲೆಕ್ಕಾಚಾರ ಸೂತ್ರಕ್ಕೆ ವಿರೋಧ: ದೇಶದ ಹಲವು ನಿವೃತ್ತ ಸೈನಿಕರ ಪ್ರತಿಭಟನೆ
ಇದು ಸುಳ್ಳು- ಪೊಲೀಸರು:
ಆದರೆ ತಿರುವಣ್ಣಾಮಲೈನ ಕಂಧವಸಾಲ್ ಠಾಣೆ ಪೊಲೀಸರು ಈ ಆರೋಪ ನಿರಾಕರಿಸಿದ್ದಾರೆ. ‘ಪ್ರಭಾಕರನ್ ಅವರ ಮಾವ ಸೆಲ್ವಮೂರ್ತಿ 9.5 ಲಕ್ಷ ರೂ. ಲೀಸ್ ಮೇಲೆ ಅಂಗಡಿಯೊಂದನ್ನು ನಡೆಸುತ್ತಿದ್ದರು. ಲೀಸ್ ನೀಡಿದ್ದ ರಾಮು ಅವರು, ‘9.5 ಲಕ್ಷ ರೂ. ಮರಳಿಸುತ್ತೇವೆ. ಅಂಗಡಿಯನ್ನು ವಾಪಸ್ ಕೊಡಿ’ ಎಂದು ಕೇಳಿದ್ದರು. ಮೊದಲು ‘ಹೂಂ’ ಎಂದಿದ್ದ ಸೆಲ್ವಮೂರ್ತಿ ನಂತರ ಇದಕ್ಕೆ ನಿರಾಕರಿಸಿದರು. 9.5 ಲಕ್ಷ ರೂ. ಕೊಡಲು ಹೋಗಿದ್ದ ರಾಮುವಿನ ಮೇಲೆ ಪ್ರಭಾಕರನ್ ಸೆಲ್ವಮೂರ್ತಿ ಮಕ್ಕಳು ಭೀಕರ ಹಲ್ಲೆ ಮಾಡಿದರು. ಆಗ ರಸ್ತೆಯಲ್ಲಿ ಹೋಗುತ್ತಿದ್ದ ಜನರು ರಾಮು ಪರ ನಿಂತರು ಹಾಗೂ ಅಂಗಡಿಯಲ್ಲಿನ ವಸ್ತುಗಳನ್ನು ರಸ್ತೆಗೆ ಎಸೆದರು. ಈ ವೇಳೆ ಪ್ರಭಾಕರನ್ ಪತ್ನಿ ಹಾಗೂ ಆಕೆಯ ತಾಯಿ ಅಂಗಡಿಯಲ್ಲೇ ಇದ್ದರೂ ಅವರಿಗೆ ಉದ್ರಿಕ್ತರು ಏನೂ ಮಾಡಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.
‘ಆದರೆ ಮರುದಿನ ಪ್ರಭಾಕರನ್ ಪತ್ನಿ ಆಸ್ಪತ್ರೆಗೆ ದಾಖಲಾಗಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಚಿಕಿತ್ಸೆಗೆ ಕೋರಿದ್ದಳು. ಆದರೆ ಆಕೆಯ ದೇಹದ ಮೇಲೆ ಯಾವುದೇ ಗಾಯ ಕಂಡುಬಂದಿಲ್ಲ. ಪ್ರಭಾಕರನ್ ಕಟ್ಟು ಕತೆ ಸೃಷ್ಟಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಯೋಧನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುತ್ತೇವೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಯಾವುದೇ ದೇಶದ ಮಿಲಿಟರಿ ಮೈತ್ರಿಯ ಭಾಗವಾಗಿಲ್ಲ: ಅಮೆರಿಕ ಜತೆಗಿನ ಸಂಬಂಧದ ಬಗ್ಗೆ ಚೀನಾಗೆ ಸ್ಪಷ್ಟನೆ