ಅಮೆರಿಕ ಪ್ರಜೆಯಾಗಿದ್ದರೂ ಭಾರತದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್ನಲ್ಲಿ ಕ್ಷಮೆಯಾಚಿಸಿದ್ದಾರೆ. ದೇಶ ಬಿಟ್ಟು ಹೋಗುವಂತೆ ಮುಂಬೈ ಪೊಲೀಸರು ನೀಡಿದ್ದ ನೋಟಿಸ್ಗೆ ಕೋರ್ಟ್ ಡಿಸೆಂಬರ್ 7ರವರೆಗೆ ತಡೆ ನೀಡಿದೆ. ಪ್ರಕರಣದ ಪೂರ್ಣ ವಿವರ ಇಲ್ಲಿದೆ ನೋಡಿ
ಮುಂಬೈ (ನ.3): ಅಮೆರಿಕ ಪ್ರಜೆ ಆಗಿದ್ದರೂ ನಿಯಮ ಉಲ್ಲಂಭಿಸಿ ಭಾರತದಲ್ಲಿ ಜಿರಳೆ ಪಕ್ಷದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್ ಅವರು, ಈ ಬಗ್ಗೆ ಬಾಂಬೆ ಹೈಕೋರ್ಟಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ. ಇದೇ ವೇಳೆ, ದೇಶ ಬಿಟ್ಟು ಹೋಗುವಂತೆ ಅವರಿಗೆ ಮುಂಬೈ ಪೊಲೀಸರು ನೀಡಿದ್ದ ನೋಟಿಸ್ಗೆ ಕೋರ್ಟ್ ಡಿ.7ರವರೆಗೆ ಕೋರ್ಟ್ ತಡೆ ನೀಡಿದೆ.
ಆಮಿರ್ ಖಾನ್ ಅಳಿಯನಿಗೆ ಹಿಗ್ಗಾಮುಗ್ಗಾ ಬಾಂಬೆ ಹೈ ತರಾಟೆ
ಆದರೆ ಕೋರ್ಟ್ ಅವರನ್ನು ಈ ವೇಳೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ‘ಭಾರತದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಹಕ್ಕು ಭಾರತೀಯರಿಗೆ ಮಾತ್ರ ಇದೆ. ನೀವು ಭಾರತೀಯ ಪ್ರಜೆಯಾಗಿ ವಿದೇಶದಲ್ಲಿ ಈ ರೀತಿ ಮಾಡಿದ್ದರೆ ಮರುದಿನವೇ ನಿಮ್ಮನ್ನು ಭಾರತಕ್ಕೆ ಗಡೀಪಾರು ಮಾಡುತ್ತಿದ್ದರು. ಜತೆಗೆ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಗ್ಗೆ ಅಫಿಡವಿಟ್ ಸಲ್ಲಿಸದರಷ್ಟೇ ಸಾಲದು, ಅವರು ಬೇಷರತ್ ಕ್ಷಮೆ ಯಾಚಿಸಬೇಕು’ ಎಂದೂ ಮೌಖಿಕವಾಗಿ ತಿಳಿಸಿತು.
ಬಳಿಕ ಖಾನ್ ಪರ ವಕೀಲರು, ‘ನಮ್ಮ ಕಕ್ಷಿದಾರರು ಬೇಷರತ್ ಕ್ಷಮೆ ಕೇಳಿದ್ದಾರೆ. ಮುಂದೆ ಭಾರತದಲ್ಲಿ ಪ್ರತಿಭಟನೆಗಳಲ್ಲಿ ಅವರು ಭಾಗವಹಿಸಲ್ಲ’ ಎಂದು ಭರವಸೆ ನೀಡಿದರು. ಇದನ್ನು ಪರಿಗಣಿಸಿದ ಕೋರ್ಟ್ ಡಿ.7ರವರೆಗೆ ಪೊಲೀಸ್ ನೋಟಿಸ್ಗೆ ತಡೆ ನೀಡಿ ಅಂದು ವಿಚಾರಣೆ ನಿಗದಿಪಡಿಸಿತು.
ಜಿರಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇಮ್ರಾನ್ ಖಾನ್
ಕಳೆದ ತಿಂಗಳು ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಅಮೆರಿಕದ ಪ್ರಜೆಯಾಗಿರುವ ಇಮ್ರಾನ್ ಖಾನ್ಗೆ ತಕ್ಷಣ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಒಸಿಐ ಕಾರ್ಡ್ ಹೊಂದಿರುವ (ಸಾಗರೋತ್ತರ ಭಾರತೀಯ ಪ್ರಜೆ) ಇಮ್ರಾನ್ ಖಾನ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರತಿಭಟನೆಯ ಆಯೋಜಕರಿಕೂ ತಮಗೂ ಯಾವುದೇ ಸಂಬಂಧ ಇಲ್ಲ ಮತ್ತು ಈ ಸಂಬಂಧ ಅಫಿಡವಿಟ್ ಸಲ್ಲಿಸುತ್ತೇನೆ. ಭಾರತದಲ್ಲಿ ಉಳಿಯಲು ಅವಕಾಶ ಮಾಡಿಕೊಡಿ ಎಂದು ಇಮ್ರಾನ್ ಖಾನ್ ಮನವಿ ಮಾಡಿದ್ದರು.
ಅವರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಬೇಕಿದ್ದರೆ ನೀವು ಅಮೆರಿಕಕ್ಕೆ ಹೋಗಿ ಅಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದು, ಅಲ್ಲಿ ನಿಮ್ಮ ಮತವನ್ನೂ ಚಲಾಯಿಸಬಹುದು. ಆದರೆ, ಭಾರತದಲ್ಲಿ ಪ್ರತಿಭಟನೆ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿತು.
ಇಮ್ರಾನ್ ಖಾನ್ರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಲೇ ಅವರಿಗೆ ವಸುಧೈವಂ ಕುಟುಂಬಕಂ ತತ್ವ ಸ್ಮರಿಸಿದ ಕೋರ್ಟ್, ಭಾರತ ಬಿಟ್ಟು ತೆರಳುವಂತೆ ನೀಡಿದ್ದ ನೋಟಿಸ್ಗೆ ಮುಂದಿನ ವಿಚಾರಣೆ ನಡೆಯಲಿರುವ ಡಿ.7ರ ವರೆಗೆ ತಡೆ ನೀಡಿತು.
ತಮ್ಮ ಅರ್ಜಿಯಲ್ಲಿ ಇಮ್ರಾನ್ ಖಾನ್ ಅವರು ನಾನು ಕಳೆದ ಹಲವು ವರ್ಷಗಳಿಂದ ಭಾರತದಲ್ಲೇ ವಾಸಿಸುತ್ತಿದ್ದೇನೆ. ನನ್ನ ಮಗು ಇಲ್ಲೇ ಇದೆ. ನನ್ನ ವೃತ್ತಿ, ಕುಟುಂಬದ ಮತ್ತು ನನ್ನ ಮೂಲ ಭಾರತವೇ ಆಗಿದೆ ಎಂದು ಹೇಳಿಕೊಂಡಿದ್ದರು.






