Bharat Bandh Tomorrow: ಜುಲೈ 9 ರಂದು ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿವೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಈ ಬಂದ್ ಆಯೋಜಿಸಲಾಗಿದೆ.

ನವದೆಹಲಿ: ಜುಲೈ 9ರಂದು ಭಾರತ್ ಬಂದ್‌ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ದೇಶವ್ಯಾಪಿ ನಡೆಯುವ ಭಾರತ್ ಬಂದ್‌ನಲ್ಲಿ ಸುಮಾರು 25 ಕೋಟಿಗೂ ಅಧಿಕ ಕಾರ್ಮಿಕರು ಭಾಗವಹಿಸುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಮತ್ತು ಕಾರ್ಪೋರೇಟ್ ಪರವಾದ ನೀತಿಯನ್ನು ಖಂಡಿಸಿ ಒಟ್ಟು 10 ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ ಭಾರತ್ ಬಂದ್‌ಗೆ ಕರೆ ನೀಡಿವೆ.

ನಾಳೆ ಯಾವ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ?

ನಾಳೆ ಅಂದ್ರೆ ಜುಲೈ 9ರಂದು ಬ್ಯಾಂಕಿಂಗ್, ವಿಮೆ, ಅಂಚೆ ಕಚೇರಿ, ಕಲ್ಲಿದ್ದಲು ಗಣಿಗಾರಿಕೆ, ಸಾರಿಗೆ ಮತ್ತು ಸಾರ್ವಜನಿಕ ವಲಯದ ಕೈಗಾರಿಕೆಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ. ಹಿಂದ್ ಮಜ್ದೂರ್ ಸಭಾದ ನಾಯಕ ಹರ್ಭಜನ್ ಸಿಂಗ್, ಬ್ಯಾಂಕ್, ಅಂಚೆ, ಗಣಿಗಾರಿಕೆ, ಸಾರ್ವಜನಿಕ ವಲಯದ ಕಾರ್ಖಾನೆ ಮತ್ತು ರಾಜ್ಯ ಸಾರಿಗೆ ಸ್ತಬ್ಧವಾಗಲಿದೆ ಎಂದು ಹೇಳಿದ್ದಾರೆ.

ಕಳೆದ 10 ವರ್ಷಗಳಿಂದ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ಆಯೋಜಿಸುತ್ತಿಲ್ಲ. ಕೇಂದ್ರ ಸರ್ಕಾರ ಕಾರ್ಮಿಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆರ್ಥಿಕ ನೀತಿಗಳಿಂದಾಗಿ ನಿರುದ್ಯೋಗ ಹೆಚ್ಚುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಏರುತ್ತಿವೆ, ವೇತನ ಕುಸಿಯುತ್ತಿದೆ ಮತ್ತು ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ನಾಗರಿಕ ಸೌಲಭ್ಯಗಳ ಮೇಲಿನ ಸಾಮಾಜಿಕ ವಲಯದ ವೆಚ್ಚವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಕಾರ್ಮಿಕ ಸಂಘಟನೆಗಳ ವೇದಿಕೆ ಆರೋಪಿಸಿದೆ.

ಬೇಡಿಕೆಗಳೇನು?

  • ಗುಲಾಮಗಿರಿ ತಳ್ಳುವ ನಾಲ್ಕು ಕಾರ್ಮಿಕ ಸಂಹಿತೆ ರದ್ಧತಿ.
  • ರಾಜ್ಯ ಸರ್ಕಾರ ಕಾರ್ಮಿಕ ಕಾನೂನಿನಲ್ಲಿ ಕೆಲಸದ ಅವಧಿ ಹೆಚ್ಚಳ ವಿರೋಧ.
  • ಜೀವನ ಯೋಗ್ಯ ಕನಿಷ್ಠ ವೇತನ
  • ಗುತ್ತಿಗೆ, ಖಾಯಂ ಆಗದ ಕಾರ್ಮಿಕರ ಖಾಯಂ ಶಾಸನ
  • ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ, ಪಿಂಚಿಣಿ, ಕಲ್ಯಾಣ ಸೌಲಭ್ಯಗಳ ಜಾರಿಗೆ.
  • ರೈತರ ಬೆಳೆಗೆ ಬೆಂಬಲ ಬೆಲೆ ಖಾತ್ರಿ
  • ಬಲವಂತದ ಭೂಸ್ವಾಧೀನ ವಿರೋಧ.

ಬಂದ್‌ಗೆ ಕರೆ ನೀಡಿದ ಸಂಘಟನೆಗಳು

  1. ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ),
  2. ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್ಟಿಯುಸಿ)
  3. ಎಚ್ಎಂಎಸ್, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)
  4. ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ),
  5. ಟ್ರೇಡ್ ಯೂನಿಯನ್ ಕೋಆರ್ಡಿನೇಷನ್ ಸೆಂಟರ್ (ಟಿಯುಸಿಸಿ)
  6. ಸ್ವಯಂ ಉದ್ಯೋಗಿ ಮಹಿಳಾ ಸಂಘ (ಎಸ್ಇವಿಎ)
  7. ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು)
  8. ಲೇಬರ್ ಪ್ರೊಗ್ರೆಸ್ಸಿವ್ ಫೆಡರೇಶನ್ (ಎಲ್ಪಿಎಫ್)
  9. ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಯುಟಿಯುಸಿ)

ಶಾಲಾ-ಕಾಲೇಜು ಬಂದ್ ಆಗುತ್ತಾ?

ಭಾರತ್ ಬಂದ್‌ನಿಂದಾಗಿ ಸಾರಿಗೆ ಸೇವೆಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಇದರಿಂದಾಗಿ ಶಾಲೆಗಳು ಮತ್ತು ಕಾಲೇಜುಗಳು ಸಹ ಪರಿಣಾಮ ಬೀರಬಹುದು. ಆದರೆ ಈವರೆಗೆ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚುವ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಬೆಂಗಳೂರಿನಲ್ಲಿ ಬಂದ್ ಇರುತ್ತಾ?

ಸದ್ಯದ ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಬಂದ್ ಇರಲ್ಲ ಎಂದು ಹೇಳಲಾಗುತ್ತಿದೆ. ಬುಧವಾರ ಬೆಳಗ್ಗೆ 10 ಗಂಟೆಗೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಬ್ಯಾಂಕ್ ಸಿಬ್ಬಂದಿ, ನಿವೃತ್ತ ಬ್ಯಾಂಕ್, ಅಂಚೆ ಇಲಾಖೆ ನೌಕರರು ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಾರು ಕಾರ್ಮಿಕರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಪೀಣ್ಯ ಕೈಗಾರಿಕೆಗಳು ಎಂದಿನಂತೆ ನಾಳೆಯೂ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿವೆ. ಕೇವಲ ಕೆಲ ಕಾರ್ಮಿಕರು ಮತ್ತು ಮುಖಂಡರು ಭಾಗಿಯಾಗಬಹುದು.