Asianet Suvarna News Asianet Suvarna News

ಇತಿಹಾಸದಲ್ಲಿ ಏನು ನಡೆದಿತ್ತು? ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದ ಅಮೆರಿಕ ಬದಲಾಗಿದ್ದು ಏಕೆ?

ಈ ಹಿಂದೆ ಭಾರತದ ಮೇಲೆ ದ್ವೇಷ ಕಾರುತ್ತಿದ್ದ ಅಮೆರಿಕಾ ದಿಢೀರ್ ಬದಲಾಗಿದ್ದು ಹೇಗೆ? ಪ್ರಸ್ತುತ ಬದಲಾದ ಜಾಗತಿಕ ರಾಜಕಾರಣದಲ್ಲಿ ಅಮೆರಿಕಾ ಭಾರತದಿಂದ ಏನನ್ನು ನಿರೀಕ್ಷಿಸುತ್ತಿದೆ. ಈ ಬಗ್ಗೆ ಬಗ್ಗೆ ನಮ್ಮ ರಾಜಕೀಯ ವಿಶ್ಲೇಷಕ ಪ್ರಶಾಂತ್ ನಾತು ಬರೆದ ಲೇಖನ ಇಲ್ಲಿದೆ ಓದಿ.

Why has America changed, What is the reason for Big brother love for India Read Political Analyst Prashant Natu Article akb
Author
First Published Jun 23, 2023, 7:40 AM IST

ನೆಹರು ಅಲಿಪ್ತ ನೀತಿಯನ್ನು ಅಪ್ಪಿಕೊಂಡಾಗಲೇ ಅಮೆರಿಕಕ್ಕೆ ಭಾರತದ ಮೇಲೆ ದ್ವೇಷ ಆರಂಭವಾಗಿತ್ತು. ನಂತರ ಇಂದಿರಾ ಗಾಂಧಿ ಗೋಧಿ ಕೇಳಿದರೆ ಅಮೆರಿಕ ಕೊಟ್ಟಿರಲಿಲ್ಲ. ಬದಲಿಗೆ ಪಾಕ್‌ ಹಾಗೂ ಚೀನಾಕ್ಕೆ ಬೆಂಬಲ ನೀಡಿತ್ತು. ಬಳಿಕ ಭಾರತದ ಬಳಿಗೆ ಯುದ್ಧನೌಕೆ ಕಳುಹಿಸಿ ಹೆದರಿಸುವ ಕೆಲಸವನ್ನೂ ಮಾಡಿತ್ತು. ಆಮೇಲೆ ಅಣ್ವಸ್ತ್ರ ಪರೀಕ್ಷೆ ನಡೆಸಿದ ಕಾರಣಕ್ಕೆ ಭಾರತದ ಮೇಲೆ ನಿರ್ಬಂಧಗಳನ್ನು ಹೇರಿತ್ತು. ಈಗ ಬದಲಾದ ಜಾಗತಿಕ ಪರಿಸ್ಥಿತಿಯಲ್ಲಿ ಅಮೆರಿಕ ಪಾಠ ಕಲಿತಿದೆ.

1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಪೋಖ್ರಾನ್‌ ಅಣು ಪರೀಕ್ಷೆ ನಡೆಸಿದ ನಂತರ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದ ಅಮೆರಿಕ 2008ರಲ್ಲಿ ಭಾರತದ ಜೊತೆ ಪರಮಾಣು ಕರಾರು ಮಾಡಿಕೊಳ್ಳಲು ದುಂಬಾಲು ಬಿದ್ದಿತ್ತು. 1999ರಲ್ಲಿ ಕಾರ್ಗಿಲ್‌ ನಲ್ಲಿ ಪಾಕಿಸ್ತಾನದ ಯೋಧರು ಉಗ್ರರ ವೇಷದಲ್ಲಿ ನುಗ್ಗಿದಾಗ ಜಿಪಿಎಸ್‌ ತಂತ್ರಜ್ಞಾನದಿಂದ ಚಲನವಲನದ ಮಾಹಿತಿ ಕೊಡಿ ಎಂದು ಕೇಳಿದರೂ ಇಲ್ಲ ಎಂದಿದ್ದ ಅಮೆರಿಕ ಇವತ್ತು ಭಾರತಕ್ಕೆ ಜೆಟ್‌ ಎಂಜಿನ್‌ ತಂತ್ರಜ್ಞಾನವನ್ನು ನೂರು ಪ್ರತಿಶತ ಕೊಡುತ್ತೇವೆ, ಜಂಟಿಯಾಗಿ ಭಾರತದಲ್ಲೇ ಉತ್ಪಾದನೆ ಮಾಡೋಣ, ನಮ್ಮದೇನೂ ಅಭ್ಯಂತರ ಇಲ್ಲ ಎಂದು ಹೇಳುತ್ತಿದೆ. 

ಅರ್ಥ ಸ್ಪಷ್ಟ- ಜಾಗತಿಕ ರಾಜಕಾರಣದ ಮಾನದಂಡಗಳು ಬದಲಾಗುತ್ತಿವೆ. ಒಂದು ಕಾಲದಲ್ಲಿ ರಷ್ಯಾ ಮತ್ತು ಭಾರತವನ್ನು ತುದಿಗಾಲ ಮೇಲೆ ನಿಲ್ಲಿಸಲು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಹಣ, ಶಸ್ತ್ರಗಳು ಮತ್ತು ಸಮಯವನ್ನು ಹೂಡಿಕೆ ಮಾಡುತ್ತಿದ್ದ ಅಮೆರಿಕಕ್ಕೆ ಇವತ್ತು ಚೀನಾ ಮತ್ತು ರಷ್ಯಾದ ಮೈತ್ರಿಯ ಗಾತ್ರ, ಸಾಮರ್ಥ್ಯ ಮತ್ತು ಪ್ರಭಾವಕ್ಕೆ ಸಡ್ಡು ಹೊಡೆಯಬಲ್ಲ ಭಾರತದ ಮಾರುಕಟ್ಟೆ ಮತ್ತು ಸಾಮರಿಕ ಶಕ್ತಿಯ ಅಗತ್ಯತೆ ಮತ್ತು ಅನಿವಾರ್ಯತೆ ಹಿಂದೆಂದಿಗಿಂತಲೂ ಜಾಸ್ತಿ ಇದೆ. ಆ ಪರಿಪ್ರೇಕ್ಷ್ಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಶ್ವೇತಭವನದ ಭರ್ಜರಿ ಸ್ವಾಗತ, ವಾಸ್ತವ್ಯ ಮತ್ತು ಔತಣಕೂಟದ ಸಂಭ್ರಮಗಳನ್ನು ಜಾಗತಿಕ ರಾಜಕಾರಣದಲ್ಲಿ ನೋಡಲಾಗುತ್ತಿದೆ. ಎರಡು ರಾಷ್ಟ್ರಗಳಿಗೂ ಅನಿವಾರ್ಯತೆ ಇಲ್ಲದೆ ಯಾವತ್ತೂ ದ್ವಿಪಕ್ಷೀಯ ಸಂಬಂಧಗಳು ಗಟ್ಟಿಯಾಗುವುದಿಲ್ಲ. ವಿಸ್ತರಣಾವಾದಿ ಮತ್ತು ಅಕ್ರಮಣಕಾರಿ ಚೀನಾವನ್ನು ಎದುರಿಸಲು ಭಾರತಕ್ಕೆ ಆಧುನಿಕ ಶಸ್ತ್ರಗಳು ಮತ್ತು ತಂತ್ರಜ್ಞಾನ ಅಮೆರಿಕದಿಂದ ಬೇಕು. ಇದಕ್ಕೆ ಪ್ರತಿಯಾಗಿ ಚೀನಾ ಮತ್ತು ರಷ್ಯಾದ ಮೈತ್ರಿ ಎದುರಿಸಲು ಅಮೆರಿಕಕ್ಕೆ ಒಬ್ಬ ಅದೇ ಭೂಗೋಳಿಕ ಪ್ರದೇಶದ ಮಿತ್ರ ಬೇಕು. ಜೊತೆಗೆ ತನ್ನ ಶಸ್ತ್ರಗಳನ್ನು ಮಾರುವ ದೊಡ್ಡ ಮಾರುಕಟ್ಟೆ ಬೇಕು. ಅಷ್ಟೇ ಅಲ್ಲ, ಚೀನಾಕ್ಕೆ ಪರ್ಯಾಯವಾಗಿ ಉತ್ಪಾದನಾ ರಾಷ್ಟ್ರವಾಗಿ ಬೆಳೆಯಬಲ್ಲ ಗಾತ್ರ ಮತ್ತು ಜನಸಂಖ್ಯೆ ಇರುವ ಭಾರತದ ಮೈತ್ರಿ ಅಮೆರಿಕಕ್ಕೆ ಬೇಕು. ಜಾಗತಿಕ ರಾಜಕಾರಣದಲ್ಲಿ (World Politics)ಹಿತಾಸಕ್ತಿ ಮತ್ತು ಲಾಭ ಇಲ್ಲದೇ ಯಾವುದೇ ದೇಶ ರತ್ನಗಂಬಳಿ ಹಾಸುವುದಿಲ್ಲ ಬಿಡಿ.

ಮೋದಿ ಮತ್ತೆ ಜಗತ್ತಿನ ಜನಪ್ರಿಯ ನಾಯಕ: ಅಮೆರಿಕದ ಮೈಕ್ರಾನ್‌ನಿಂದ ಗುಜರಾತ್‌ನಲ್ಲಿ ಚಿಪ್‌ ಘಟ​ಕ

ಭಾರತದ ನಿರೀಕ್ಷೆ ಏನು?

ಭಾರತದ ಪರಿಣತ ವಿಜ್ಞಾನಿಗಳು ಉಪಗ್ರಹ ಉಡಾವಣೆಯಿಂದ ಹಿಡಿದು ಅಣು ಕ್ಷಿಪಣಿ ತಯಾರಿಕೆಯಲ್ಲಿ ಹಿರಿತನ ಸಾಧಿಸಿದರೂ ಕೂಡ ಯಾಕೋ ನಾನಾ ಕಾರಣಗಳಿಂದ ಯುದ್ಧ ವಿಮಾನಗಳ ಸ್ವದೇಶೀ ಜೆಟ್‌ ಎಂಜಿನ್‌ ತಯಾರಿಸುವ ಭಾರತದ ಕನಸು ಇದುವರೆಗೆ ನನಸಾಗಿಲ್ಲ. ಇಡೀ ವಿಶ್ವದಲ್ಲಿ ಸುಧಾರಿತ ಜೆಟ್‌ ಎಂಜಿನ್‌ಗಳನ್ನು ತಯಾರಿಸುವ ತಂತ್ರಜ್ಞಾನ ಮತ್ತು ಕ್ಷಮತೆ ಬರೀ ಅಮೆರಿಕ (America), ಬ್ರಿಟನ್‌, ಫ್ರಾನ್ಸ್‌, ಜರ್ಮನಿ ಮತ್ತು ರಷ್ಯಾ (Russia) ಬಳಿ ಮಾತ್ರ ಇದೆ. ಮಾರುತ ಮತ್ತು ಕಾವೇರಿ ಎಂಬ ಎರಡು ಜೆಟ್‌ ಎಂಜಿನ್‌ಗಳನ್ನು ತಯಾರಿಸುವ ಪ್ರಯತ್ನ ಭಾರತದಲ್ಲಿ ನಡೆಯಿತಾದರೂ ಕೂಡ ಅದು ಯಶಸ್ವಿ ಆಗಿಲ್ಲ. ಹೀಗಾಗಿ ಅಮೆರಿಕದ ಕಂಪನಿಗಳು ಜೆಟ್‌ ಎಂಜಿನ್‌ಗಳನ್ನು ಭಾರತದಲ್ಲಿ ಹಿಂದೂಸ್ತಾನ್‌ ಏರೋನಾಟಿಕಲ್ ಜೊತೆ ಜಂಟಿಯಾಗಿ ತಯಾರಿಸಲು ಮೋದಿ ಭೇಟಿ ವೇಳೆ ಅಮೆರಿಕ ಒಪ್ಪಿಗೆ ಕೊಡಲಿದೆ.

ಇನ್ನು ಅಮೆರಿಕ ಇರಾಕ್‌ ಮತ್ತು ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಬಳಸಿರುವ 50000 ಫೀಟ್‌ ಎತ್ತರದಿಂದ ಕಣ್ಣುಗಾವಲು ಇಡಬಲ್ಲ ಮತ್ತು ಶಸ್ತ್ರ ಎಸೆಯಬಲ್ಲ ಅತ್ಯಾಧುನಿಕ ರಿಪರ್‌ ಡ್ರೋನ್‌ಗಳನ್ನು ಕೂಡ ಭಾರತಕ್ಕೆ ಕೊಡಲಿದೆ. ಭಾರತದ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ರಷ್ಯಾದ ಪಾಲು ಅಂದಾಜು ಶೇ.45ರಷ್ಟಿದ್ದು, ಫ್ರಾನ್ಸ್‌ನದ್ದು ಶೇ.23 ಇದ್ದರೆ, ಅಮೆರಿಕದ ಪಾಲು ಇರುವುದು ಕೇವಲ ಶೇ.11 ಮಾತ್ರ. ಬೆಳೆಯುತ್ತಿರುವ ಚೀನಾ-ರಷ್ಯಾ ಮೈತ್ರಿ ಕಾರಣದಿಂದ ಅಮೆರಿಕದ ಪೂರೈಕೆಯನ್ನು ಶೇ.30ಕ್ಕೆ ಏರಿಸಿ, ರಷ್ಯಾದ ಪೂರೈಕೆ ಪಾಲುದಾರಿಕೆಯನ್ನು ಶೇ.25-30ಕ್ಕೆ ಸೀಮಿತಗೊಳಿಸಿದರೆ ಒಳ್ಳೆಯದು ಎಂದು ಭಾರತದ ಚಿಂತನೆ. ನಾವು ಎಲ್ಲಿಯವರೆಗೆ ಸ್ವದೇಶೀ ಜೆಟ್‌ ಎಂಜಿನ್‌ ಉತ್ಪಾದನೆ ಮಾಡಲು ಸಾಧ್ಯ ಆಗುವುದಿಲ್ಲವೋ ಅಲ್ಲಿಯವರೆಗೆ ರಷ್ಯಾ, ಯುಕೆ, ಫ್ರಾನ್ಸ್‌ ಮತ್ತು ಅಮೆರಿಕದಂಥ ದೇಶಗಳ ಮೇಲೆ ಅವಲಂಬಿತರಾಗಿರೋದು ಅನಿವಾರ್ಯ.

ಭಾರತ-ಅಮೆರಿಕ ನಡುವೆ ಮಹಾ ಒಪ್ಪಂದ: ಬಾಹ್ಯಾಕಾಶ, ರಕ್ಷಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ

ಅಮೆರಿಕ ಏನು ಬಯಸುತ್ತಿದೆ?

1945ರ ಎರಡನೇ ಮಹಾಯುದ್ಧದ ನಂತರದ 46 ವರ್ಷಗಳ ಕಾಲ ಅಂದರೆ 1991ರ ಸೋವಿಯಟ್‌ ರಷ್ಯಾ (Soviet Russia) ವಿಘಟನೆವರೆಗೆ ಜಾಗತಿಕ ರಾಜಕಾರಣ ಬಂಡವಾಳಶಾಹಿ ಅಮೆರಿಕ ಮತ್ತು ಕಮ್ಯುನಿಸ್ಟ್‌ ಸೋವಿಯಟ್‌ ನಡುವೆ ಶೀತಲ ಯುದ್ಧದ ರೀತಿಯಲ್ಲಿ ನಡೆಯುತ್ತಿತ್ತು. ಆದರೆ ಸೋವಿಯಟ್‌ ವಿಘಟನೆ ನಂತರ ಅಮೆರಿಕದ ಏಕ ಚಕ್ರ ಅಧಿಪತ್ಯ ನಡೆಯುತ್ತಿತ್ತು. ಆದರೆ ಈಗ ಅಮೆರಿಕಕ್ಕೆ ಆರ್ಥಿಕತೆಯಲ್ಲಿ ಬಂಡವಾಳಶಾಹಿ ರಾಜಕೀಯ ವ್ಯವಸ್ಥೆಯಲ್ಲಿ ಕಮ್ಯುನಿಸ್ಟ್‌ ಆಗಿರುವ ಚೀನಾ ಮತ್ತು ಹಿಟ್ಲರ್‌ ಮಾದರಿಯ ವಿಸ್ತರಣಾವಾದಿ ಆಗಿರುವ ವ್ಲಾದಿಮಿರ್‌ ಪುಟಿನ್‌ ಹಿಡಿತದಲ್ಲಿರುವ ರಷ್ಯಾಗಳು ಆರ್ಥಿಕವಾಗಿ ಮತ್ತು ಸಾಮರಿಕವಾಗಿ ಸ್ಪರ್ಧೆ, ಪೈಪೋಟಿ ಮತ್ತು ಸಂಘರ್ಷ ನಡೆಸುತ್ತಿವೆ. ಈ ಎರಡು ರಾಷ್ಟ್ರಗಳನ್ನು ಎದುರಿಸಲು ಅಮೆರಿಕಕ್ಕೆ ಒಬ್ಬ ಮಿತ್ರ ಬೇಕು. ಅದೇ ಕಾರಣದಿಂದ ಅಮೆರಿಕದ ಜೋ ಬೈಡೆನ್‌ (Joe Biden) ಹೋದಲ್ಲಿ ಬಂದಲ್ಲಿ ಭಾರತ ಮತ್ತು ಮೋದಿ ಜಪ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಭಾರತಕ್ಕೆ ರಕ್ಷಣಾ ತಂತ್ರಜ್ಞಾನವನ್ನು ಶತ ಪ್ರತಿಶತ ಕೊಡುವ ವಾಗ್ದಾನ ಮಾಡುತ್ತಿದ್ದಾರೆ. ಚೀನಾವನ್ನು ಹಿಮ್ಮೆಟ್ಟಿಸಬೇಕಾದರೆ ಅದರ ಆರ್ಥಿಕ ಶಕ್ತಿಯನ್ನು ಕ್ಷೀಣಿಸುವಂತೆ ಮಾಡಬೇಕು. ಅದಕ್ಕಾಗಿ ಭಾರತದಲ್ಲಿ ಅಮೆರಿಕನ್‌ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೆಲ್ಲ ಜಾಗತಿಕ ರಾಜಕಾರಣದ ಜೊತೆಗೆ ಸ್ವಾರ್ಥ ಇಲ್ಲದೆ ಅಮೆರಿಕ ಏನನ್ನೂ ಮಾಡುವುದಿಲ್ಲ ಅನ್ನುವುದು ಗೊತ್ತಿರುವ ಸಂಗತಿ. ಕುಸಿಯುತ್ತಿರುವ ಅಮೆರಿಕದ ಆರ್ಥಿಕತೆಗೆ ವೇಗ ನೀಡಲು ಭಾರತದಂಥ ಆಗಾಧ ಜನಸಂಖ್ಯೆ ಇರುವ ಮಾರುಕಟ್ಟೆಮತ್ತು ಅಮೆರಿಕನ್‌ ಶಸ್ತ್ರಗಳನ್ನು ಕೊಳ್ಳುವ ಸಾಮರ್ಥ್ಯ ಇರುವ ಗ್ರಾಹಕ ಬೇಕು.

ಇತಿಹಾಸದಲ್ಲಿ ಏನು ನಡೆದಿತ್ತು?

ಪಶ್ಚಿಮದ ಬಂಡವಾಳಶಾಹಿ ರಾಷ್ಟ್ರಗಳಿಂದ ಸ್ವಾತಂತ್ರ್ಯ ಪಡೆದಿದ್ದ ಭಾರತದ ಪ್ರಧಾನಿ ನೆಹರು ಅವರಿಗೆ ಸಹಜವಾಗಿ ಸಮಾಜವಾದದ ಬಗ್ಗೆ ಹೆಚ್ಚು ಆಕರ್ಷಣೆ ಇತ್ತು. ಹೀಗಾಗಿ ಶೀತಲ ಸಮರ ಶುರುವಾದಾಗ ಪಂಡಿತ ನೆಹರು ನಾವು ಅಲ್ಲೂ ಇರುವುದಿಲ್ಲ, ಇಲ್ಲೂ ಇರುವುದಿಲ್ಲ ಎಂದು ಅಲಿಪ್ತ ರಾಷ್ಟ್ರಗಳ ಒಕ್ಕೂಟ ರಚಿಸಲು ಹೊರಟರು. ಆಗ ಅಮೆರಿಕದ ಆಡಳಿತಗಾರರಿಗೆ ಭಾರತ ಅಂದರೆ ಒಂದು ಅಸಡ್ಡೆ ಇತ್ತು. ಹೀಗಾಗಿ ಅಮೆರಿಕ ಪಾಕಿಸ್ತಾನದ ಪರವಾಗಿ ವಾಲತೊಡಗಿತು. ಅಷ್ಟೇ ಅಲ್ಲ 1962ರ ಚೀನಾ ಜೊತೆಗಿನ ಯುದ್ಧದಲ್ಲಿ ಯಾವ ಸಹಾಯ ಮಾಡಲು ಕೂಡ ಒಪ್ಪಲಿಲ್ಲ. ಯಾವಾಗ 1966ರಲ್ಲಿ ಇಂದಿರಾ ಗಾಂಧಿ ಪ್ರಧಾನಿ ಆದರೋ ಅಮೆರಿಕ ಭಾರತಕ್ಕೆ ಕೊಡುವ ವಾಗ್ದಾನ ಮಾಡಿದ್ದ ಪಿಎಲ್ 470ರ ಪ್ರಕಾರದ ಗೋಧಿಯನ್ನು ಕೂಡ ಕೊಡದೇ ಸತಾಯಿಸಿತು. ಆಗಿನ ಅಮೆರಿಕದ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಮತ್ತು ಲಿಂಡಲ್ ಜಾನ್ಸನ್‌ ಇಂದಿರಾ ಬಗ್ಗೆ ಅಪಶಬ್ದಗಳನ್ನು ಕೂಡ ಬಳಸಿದರು. ಸಿಟ್ಟಿಗೆದ್ದ ಇಂದಿರಾ ಹಸಿರು ಕ್ರಾಂತಿಗೆ ಕರೆ ಕೊಟ್ಟಿದ್ದೇ ಅಮೆರಿಕದ ಕೈಕೊಡುವಿಕೆಯಿಂದಾಗಿ. 

ನಂತರ ಶಾಸ್ತ್ರಿ ಪ್ರಧಾನಿ ಇದ್ದಾಗ 1965ರ ಯುದ್ಧ ಮತ್ತು 1971ರಲ್ಲಿ ಬಾಂಗ್ಲಾದೇಶ ರಚನೆ ಸಂದರ್ಭದಲ್ಲಿ ಅಮೆರಿಕ ಪಾಕಿಸ್ತಾನದ ಪರವಾಗಿ ಬಹಿರಂಗವಾಗಿಯೇ ನಿಂತಿತ್ತು. ಹೀಗಾಗಿ ಶೀತಲ ಸಮರ ನಡೆಯುತ್ತಿದ್ದ ಕಾಲದಲ್ಲಿ ಭಾರತ ಸೋವಿಯಟ್‌ ಯೂನಿಯನ್‌ ಪರವಾಗಿ ವಾಲುವುದು ಮತ್ತು ನಿಲ್ಲುವುದು ಅನಿವಾರ್ಯ ಆಗಿತ್ತು. ನಂತರ ಏಕಾಏಕಿ ಅಮೆರಿಕ ಪರಮಾಣು ನಿಶ್ಯಸ್ತ್ರೀಕರಣದ ಒತ್ತಡ ಹಾಕತೊಡಗಿದಾಗ ಇಂದಿರಾ ಅದನ್ನು ಧಿಕ್ಕರಿಸಿ 1974ರಲ್ಲಿ ಮೊದಲ ಪರಮಾಣು ಪರೀಕ್ಷೆ ನಡೆಸಿದರು. ಆಗ ಅಮೆರಿಕ ಭಾರತದ ಮೇಲೆ ನಿರ್ಬಂಧ ವಿಧಿಸಿತ್ತು. ಅಷ್ಟೇ ಅಲ್ಲ ಭಾರತಕ್ಕೆ ಅಂತರಿಕ್ಷ ಉಪಗ್ರಹ ಉಡಾವಣೆಗೆ ಬೇಕಾದ ಕ್ರಯೋಜೆನಿಕ್‌ ಎಂಜಿನ್‌ಗಳನ್ನು ಕೊಡಬೇಡಿ ಎಂದು ರಷ್ಯಾ ಮೇಲೆ ಒತ್ತಡ ಹಾಕಿತ್ತು. ಫ್ರಾ®್ಸ… ಭಾರತಕ್ಕೆ ಅತ್ಯಾಆಧುನಿಕ ತಂತ್ರಜ್ಞಾನ ಕೊಡಲು ಹೊರಟಾಗ ನಿರ್ಬಂಧದ ಹೆಸರಲ್ಲಿ ವಿರೋಧಿಸಿದ್ದು ಇದೇ ಅಮೆರಿಕ. ಆದರೆ 2001ರ ಉಗ್ರರ ದಾಳಿ ನಂತರ 2004ರಿಂದೀಚೆಗೆ ಅಮೆರಿಕ ಭಾರತದ ಅಪ್ಪುಗೆಗೆ ಹಾತೊರೆಯುತ್ತಿದೆ. ಅರ್ಥ ಸ್ಪಷ್ಟ; ಜಾಗತಿಕ ರಾಜಕಾರಣದ ಪ್ರಾಬಲ್ಯ, ಪರಿಸ್ಥಿತಿ ಮತ್ತು ನಿಯಮಗಳು ಬದಲಾಗುತ್ತಿವೆ. ಚಾಣಕ್ಯ ಹೇಳಿದ ಒಂದು ಮಾತು ಸಾರ್ವಕಾಲಿಕ ಸತ್ಯ. ವಿದೇಶ ನೀತಿಯಲ್ಲಿ ಮುಖ್ಯ ಆಗಬೇಕಾಗಿರುವುದು ದೇಶದ ಹಿತ ಮತ್ತು ಸಾರ್ವಭೌಮತ್ವದ ರಕ್ಷಣೆ ಅಷ್ಟೆ. ಅದಕ್ಕೆ ಅನುಗುಣವಾಗಿ ಏನು ಮಾಡಬೇಕೋ ಅದೆಲ್ಲ ಮಾಡಲೇಬೇಕು.

ಅಮೆರಿಕಕ್ಕೆ ಹೇಗೆ ಬೇಕೋ ಹಾಗೆ

ಜಾಗತಿಕ ರಾಜಕಾರಣದಲ್ಲಿ ಆರ್ಥಿಕ ಮತ್ತು ಮಿಲಿಟರಿ ಶಕ್ತಿ ಇರುವವರು ಏನು ಮಾಡುತ್ತಾರೋ ಅದೆಲ್ಲವೂ ಸರಿಯೇ. ಇವತ್ತು ಚೀನಾ ವಿರುದ್ಧ ಭಾರತ ನಿಲ್ಲಬೇಕು ಎಂದೆಲ್ಲ ಬಯಸುವ ಅಮೆರಿಕವೇ ಸೋವಿಯಟ್‌ ಯೂನಿಯನ್‌ನ ಪ್ರಾಬಲ್ಯಕ್ಕೆ ಇತಿಶ್ರೀ ಹಾಡಲು 1971ರ ನಂತರ ಕಮ್ಯುನಿಸ್ವ್‌ ಚೀನಾಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಕೊಡಲು ಖಟ್‌ಪಟಿ ಮಾಡಿತ್ತು. 1971ರಲ್ಲಿ ಭಾರತವನ್ನು ಹೆದರಿಸಲು ಬಂಗಾಳ ಕೊಲ್ಲಿಗೆ ತಮ್ಮ ಯುದ್ಧ ಹಡಗನ್ನು ಕಳುಹಿಸಿದ್ದ ಅಮೆರಿಕದ ವಿದೇಶಾಂಗ ಸಚಿವ ಹೆನ್ರಿ ಕಿಸಿಂಜರ್‌ 1971ರಲ್ಲಿ ನವದೆಹಲಿಗೆ ಬಂದವರು ಬೀಜಿಂಗ್‌ಗೆ ರಹಸ್ಯ ಭೇಟಿ ನೀಡಿದ್ದರು. 1972ರಲ್ಲಿ ಭಾರತಕ್ಕೆ ಗೋದಿ ನೀಡಲು ತಯಾರಾಗದ ಅಮೆರಿಕದ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಚೀನಾಕ್ಕೆ ಹೋಗಿ ಮಾರುಕಟ್ಟೆಮುಕ್ತ ಮಾಡಿ, ನಾವು ಬಂಡವಾಳ ಹೂಡುತ್ತೇವೆ ಎಂದು ಮನವೊಲಿಸಿದ ಕಾರಣದಿಂದಲೇ ಕಳೆದ 50 ವರ್ಷಗಳಲ್ಲಿ ಚೀನಾ ಇಷ್ಟೊಂದು ಆಗಾಧವಾಗಿ ಬೆಳೆದಿದೆ. ಆದರೆ ಈಗ ಅದೇ ಅಮೆರಿಕಕ್ಕೆ ಚೀನಾದಿಂದ ಆತಂಕ ಇದೆ ಅನ್ನಿಸುತ್ತಿದೆ. ಭಾರತದತ್ತ ಸ್ನೇಹ ಹಸ್ತ ಚಾಚುತ್ತಿದೆ.

ಅಟಲ್ ಜಿ ಆಡಿದ ಆಟ

2001ರಲ್ಲಿ ಅಮೆರಿಕದ ಮೇಲೆ ಉಗ್ರರ ದಾಳಿ ನಡೆದ ನಂತರ ಅಧ್ಯಕ್ಷ ಜಾಜ್‌ರ್‍ ಬುಷ್‌ ಇರಾಕ್‌ ಮೇಲೆ ದಾಳಿ ಘೋಷಿಸಿದರು. ಭಾರತ ಕೂಡ ಸೈನ್ಯವನ್ನು ಕಳುಹಿಸಬೇಕು ಮತ್ತು ಅಮೆರಿಕದ ಯುದ್ಧ ವಿಮಾನ ಇಳಿಸಲು ಅವಕಾಶ ಕೊಡಬೇಕು ಎಂಬ ಒತ್ತಡ ಅಮೆರಿಕನ್‌ ಆಡಳಿತಗಾರರಿಂದ ಅಟಲ್ಜಿ ಮೇಲೆ ಶುರುವಾಯಿತು. ಆಗ ಒಂದು ದಿನ ಸಂಜೆ ಕಮ್ಯುನಿಸ್ವ್‌ ನಾಯಕರಾದ ಎ.ಬಿ.ಬರ್ಧನ್‌ರನ್ನು ಚಹಾಕ್ಕೆ ಕರೆದ ಅಟಲ…ಜಿ, ‘ಏನು ನಿಮ್ಮ ಸಂಘಟನೆಗಳು ಅಮೆರಿಕದ ಇರಾಕ್‌ ಮೇಲಿನ ದಾಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲವಲ್ಲ ಯಾಕೆ?’ ಎಂದು ಕೇಳಿ ನಕ್ಕರಂತೆ. ತಗೊಳ್ಳಿ, ಮರುದಿನದಿಂದ ದಿಲ್ಲಿ, ಕೋಲ್ಕತ್ತಾ, ಮುಂಬೈಗಳಲ್ಲಿ ಪ್ರತಿಭಟನೆಗಳು ಶುರುವಾದವು. ಸಂಸತ್‌ನಲ್ಲಿ ಗಲಾಟೆ ಶುರುವಾಯಿತು. ಕೂಡಲೇ ಬ್ರಜೇಶ್‌ ಮಿಶ್ರಾರನ್ನು ಅಮೆರಿಕಕ್ಕೆ ಕಳುಹಿಸಿದ ಅಟಲ…ಜಿ, ಭಾರತದಲ್ಲಿ ವಿಪಕ್ಷಗಳು ಒಪ್ಪುವುದಿಲ್ಲ. ಹೀಗಾಗಿ ನಿಮ್ಮ ಬೇಡಿಕೆಗೆ ನಮ್ಮ ಒಪ್ಪಿಗೆ ಸಿಗುವುದಿಲ್ಲ ಎಂದು ಹೇಳಿಸಿ ಅಲಿಪ್ತ ನೀತಿ ಮುಂದುವರೆಸಿದರು.

Follow Us:
Download App:
  • android
  • ios