ಭಾರತ-ಅಮೆರಿಕ ನಡುವೆ ಮಹಾ ಒಪ್ಪಂದ: ಬಾಹ್ಯಾಕಾಶ, ರಕ್ಷಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ಭರ್ಜರಿ ಯಶಸ್ಸು ಕಂಡಿದ್ದು, ಎರಡೂ ದೇಶಗಳ ನಡುವೆ ಅನೇಕ ಮಹತ್ವದ ಒಪ್ಪಂದಗಳಿಗೆ ಸಹಿ ಬಿದ್ದಿದೆ. ರಕ್ಷಣೆ, ರಾಜತಾಂತ್ರಿಕ, ವಿಜ್ಞಾನ ಹಾಗೂ ತಂತಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಈ ಒಪ್ಪಂದಗಳು ಏರ್ಪಟ್ಟಿದೆ.
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ಭರ್ಜರಿ ಯಶಸ್ಸು ಕಂಡಿದ್ದು, ಎರಡೂ ದೇಶಗಳ ನಡುವೆ ಅನೇಕ ಮಹತ್ವದ ಒಪ್ಪಂದಗಳಿಗೆ ಸಹಿ ಬಿದ್ದಿದೆ. ರಕ್ಷಣೆ, ರಾಜತಾಂತ್ರಿಕ, ವಿಜ್ಞಾನ ಹಾಗೂ ತಂತಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಈ ಒಪ್ಪಂದಗಳು ಏರ್ಪಟ್ಟಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಗಟ್ಟಿಗೊಳ್ಳಲು ನಾಂದಿ ಹಾಡಿದೆ. ಭಾರತೀಯ ಕಾಲಮಾನ ಗುರುವಾರ ನಸುಕಿನ ಜಾವ (ಅಮೆರಿಕ ಕಾಲಮಾನ ಬುಧವಾರ ರಾತ್ರಿ) ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಪತ್ನಿ ಜಿಲ್ ಬೈಡೆನ್ ಶ್ವೇತಭವನದಲ್ಲಿ ಖಾಸಗಿ ಔತಣಕೂಟ ಏರ್ಪಡಿಸಿದ್ದರು. ಆಗ ಮೋದಿ ಅವರು 80 ವರ್ಷ ಪೂರೈಸಿದ ಬೈಡೆನ್ ಅವರಿಗೆ ಸಹಸ್ರಚಂದ್ರ ದರ್ಶನ ಸಂಪ್ರದಾಯದ ಪ್ರತೀಕವಾಗಿ ‘ದಶದಾನ’ಗಳನ್ನು ಮೈಸೂರಿನ ಶ್ರೀಗಂಧದಿಂದ ತಯಾರಿಸಲಾದ ಪೆಟ್ಟಿಗೆಯಲ್ಲಿ ಇಟ್ಟು ನೀಡಿದರು.
ಈ ನಡುವೆ, ಗುರುವಾರ ಸಂಜೆ ಮೋದಿ ಹಾಗೂ ಬೈಡೆನ್ ನಡುವೆ ದ್ವಿಪಕ್ಷೀಯ ಚರ್ಚೆ ಶ್ವೇತಭವನದಲ್ಲಿ ನಡೆಯಿತು. ಮೋದಿ ಅವರಿಗೆ ಸಾಂಪ್ರದಾಯಿಕವಾಗಿ ಈ ವೇಳೆ ಜೋ ಬೈಡೆನ್ ಸ್ವಾಗತಿಸಿದರು ಹಾಗೂ ಭಾರತ-ಅಮೆರಿಕ ನಡುವೆ ಹೊಸ ಶಕೆಗೆ ಈ ಭೇಟಿಯು ನಾಂದಿ ಹಾಡಲಿದೆ. ‘2 ಸೂಪರ್ ಪವರ್ ದೇಶಗಳ, 2 ಮಹಾನ್ ಶಕ್ತಿಗಳ ಹಾಗೂ ಇಬ್ಬರು ಸ್ನೇಹಿತರ ಮಹಾ ಸಮ್ಮಿಲನನ ಇದಾಗಲಿದೆ ಎಂದು ಶ್ಲಾಘಿಸಿದರು. ಈ ವೇಳೆ ಹಲವು ಮಹತ್ವದ ಒಪ್ಪಂದಗಳ ಘೋಷಣೆ ಆಯಿತು.
ಶ್ವೇತಭವನದ ಆತ್ಮೀಯ ಅತಿಥ್ಯಕ್ಕೆ ವಿಡಿಯೋ ಮೂಲಕ ಪ್ರಧಾನಿ ಮೋದಿ ಧನ್ಯವಾದ!
ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಅಮೆರಿಕ ಮೂಲದ ಮೈಕ್ರಾನ್ ಕಂಪನಿಯಿಂದ (Micron) ಘಟಕ ಆರಂಭಿಸುವುದು, ಭಾರತದ ಇಸ್ರೋ (Isro) ಹಾಗೂ ಅಮೆರಿಕದ ನಾಸಾ (NASA) ಸೇರಿ 2024ರಲ್ಲಿ ಅಂತರಿಕ್ಷಕ್ಕೆ ಮಾನವಸಹಿತ ಜಂಟಿ ಯಾನ ಕೈಗೊಳ್ಳುವುದು, ಭಾರತದಲ್ಲೇ ಯುದ್ಧವಿಮಾನದ ಎಂಜಿನ್ ಉತ್ಪಾದನೆಗೆ ಅಮೆರಿಕವು ಸಂಪೂರ್ಣ ತಂತ್ರಜ್ಞಾನವನ್ನು ನೀಡುವುದು, ಭಾರತದಿಂದ ಅಮೆರಿಕಕ್ಕೆ ತೆರಳುವ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಅನುಕೂಲವಾಗುವಂತೆ ಎಚ್1ಬಿ ವೀಸಾ ನಿಯಮಗಳನ್ನು ಸಡಿಲಗೊಳಿಸುವುದು, ಅಮೆರಿಕದಿಂದ ಭಾರತಕ್ಕೆ ಅತ್ಯಂತ ಸುಧಾರಿತ ಡ್ರೋನ್‌ಗಳನ್ನು (Drone) ಪೂರೈಸುವುದು ಸೇರಿದಂತೆ ಹಲವು ಒಪ್ಪಂದಗಳು ಏರ್ಪಟ್ಟವು.
ಏನೇನು ಒಪ್ಪಂದ?
ಭಾರತದಲ್ಲಿ ಚಿಪ್ ಉತ್ಪಾದನೆ
ಗುಜರಾತ್‌ನಲ್ಲಿ ಸೆಮಿಕಂಡಕ್ಟರ್ (ಚಿಪ್) ಜೋಡಣೆ ಮತ್ತು ಪರೀಕ್ಷಾ ಘಟಕ ಅರಂಭಿಸುವುದಾಗಿ ಅಮೆರಿಕ ಮೂಲದ ಮೈಕ್ರಾನ್ ಟೆಕ್ನಾಲಜಿ ಘೋಷಣೆ. 22,540 ಕೋಟಿ ರು. ಬಂಡವಾಳ ಹೂಡಿಕೆ
ನಾಸಾ-ಇಸ್ರೋ ಅಂತರಿಕ್ಷ ಯಾನ
ಭಾರತ-ನಾಸಾ ಅಂತರಿಕ್ಷ ಒಪ್ಪಂದ. ಇದರಿಂದಾಗಿ ನಾಸಾ-ಇಸ್ರೋದಿಂದ 2024ರಲ್ಲಿ ಅಂತರಿಕ್ಷ ಕೇಂದ್ರಕ್ಕೆ ಮಾನವಸಹಿತ ಜಂಟಿ ಯಾನ. ಅಲ್ಲದೆ, ಇನ್ನು ಜಂಟಿಯಾಗಿ ವಿವಿಧ ಬಾಹ್ಯಾಕಾಶ ಅನ್ವೇಷಣೆ
ಭಾರತದಲ್ಲೇ ಯುದ್ಧ ವಿಮಾನ ಎಂಜಿನ್
ಸ್ವದೇಶಿ ತೇಜಸ್ ಯುದ್ಧವಿಮಾನಗಳಿಗೆ ಭಾರತದಲ್ಲೇ ಇನ್ನು ಎಫ್ 414 ಎಂಜಿನ್ ಉತ್ಪಾದನೆ. ಇದಕ್ಕಾಗಿ ಬೆಂಗಳೂರಿನ ಎಚ್ಎಎಲ್ ಹಾಗೂ ಅಮೆರಿಕದ ಜಿಇ ಏರೋಸ್ಪೇಸ್ ಒಪ್ಪಂದ
ಶ್ವೇತಭವನದಲ್ಲಿ ಮೋದಿ, ಬೈಡನ್ ಜಂಟಿ ಸುದ್ದಿಗೋಷ್ಠಿ, ಬೆಂಗಳೂರಿನಲ್ಲಿ ಕೌನ್ಸಿಲರ್ ಘಟಕ ಸ್ವಾಗತಿಸಿದ ಪ್ರಧಾನಿ!
ಎಚ್1ಬಿ ವೀಸಾ ನಿಯಮ ಸಡಿಲ
ಎಚ್1ಬಿ ವೀಸಾ ನವೀಕರಣಕ್ಕೆ ಭಾರತೀಯ ಟೆಕ್ಕಿಗಳು ಸ್ವದೇಶಕ್ಕೇ ಹೋಗಬೇಕು ಎಂಬ ನಿಮಯ ಬದಲು. ಅಮೆರಿಕದಲ್ಲೇ ಇದ್ದು ವೀಸಾ ನವೀಕರಣ ಸಾಧ್ಯ. ಇದರಿಂದ 4.42 ಲಕ್ಷ ಟೆಕ್ಕಿಗಳಿಗೆ ಅನುಕೂಲ
ಅತ್ಯಾಧುನಿಕ ಡ್ರೋನ್ ಖರೀದಿ
ಅಮೆರಿಕದಿಂದ ಅತ್ಯಾಧುನಿಕ ಎಂಕ್ಯು-9 ರೀಪರ್ ಸಶಸ್ತ್ರ ಡ್ರೋನ್ ಖರೀದಿಗೆ ಭಾರತ ಒಪ್ಪಂದ. ಈ ಡ್ರೋನ್ಗಳು ಹಳೆಯ ಡ್ರೋನ್ಗಳಿಗಿಂತ 9 ಪಟ್ಟು ಹೆಚ್ಚು ಬಲಶಾಲಿ, 500 ಪಟ್ಟು ಹೆಚ್ಚು ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯ
ಬೆಂಗಳೂರು, ಅಹ್ಮದಾಬಾದ್‌ನಲ್ಲಿ ಅಮೆರಿಕದ ದೂತಾವಾಸ
ವಾಷಿಂಗ್ಟನ್: ಉಭಯ ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಅಹಮದಾಬಾದ್‌ಗಳಲ್ಲಿ ಅಮೆರಿಕದ ದೂತಾವಾಸ ತೆರೆಯಲು ಹಾಗೂ ಸಿಯಾಟಲ್‌ನಲ್ಲಿ ಭಾರತದ ದೂತವಾಸ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈ ಕುರಿತು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಕರ್ನಾಟಕದ ಜನರಿಗೆ ಇನ್ನು ಬೆಂಗಳೂರಿನಲ್ಲೇ ಅಮೆರಿಕದ ವೀಸಾ ಪಡೆಯಲು ಸಾಧ್ಯವಾಗಲಿದೆ. ಈವರೆಗೆ ಕನ್ನಡಿಗರು ಅಮೆರಿಕದ ವೀಸಾಗೆ ಚೆನ್ನೈಗೆ ಅಥವಾ ಹೈದರಾಬಾದ್‌ಗೆ ಹೋಗಬೇಕಿತು.