ಯಾರೇ ಅಧ್ಯಕ್ಷರಾದರೂ ರಾಹುಲ್‌ಗೆ ಗುಲಾಮನಂತೆ ಇರಬೇಕು: ಆಜಾದ್ ಕಿಡಿ
ಕಾಂಗ್ರೆಸ್ಸಿನಲ್ಲಿರುವ 90% ಜನ ಕಾಂಗ್ರೆಸಿಗರಲ್ಲ. ಯಾರೇ ಅಧ್ಯಕ್ಷರಾದರೂ ರಾಹುಲ್‌ಗೆ ಗುಲಾಮನಂತೆ ಇರಬೇಕು. ಫೈಲ್ ಹಿಡಿದು ಹಿಂದೆ ಓಡಾಡಬೇಕು. ರೋಗಕ್ಕೆ ವೈದ್ಯನ ಬದಲು ಕಾಂಪೌಂಡರ್ ಬಳಿ ಚಿಕಿತ್ಸೆ ಪಡೆಯುತ್ತಿದೆ ಕಾಂಗ್ರೆಸ್ ಪಕ್ಷ ಎಂದು ಗುಲಾಂ ನಬಿ ಆಜಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಆ.30): ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಘೋಷಣೆಯಾದ ಬೆನ್ನಲ್ಲೇ, ಯಾರೇ ಪಕ್ಷದ ಅಧ್ಯಕ್ಷರಾದರೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಗುಲಾಮನಂತೆ ಇದ್ದು, ಅವರ ಹಿಂದೆ ಫೈಲ್ ಹಿಡಿದು ಓಡಾಡಿಕೊಂಡಿರಬೇಕಾಗುತ್ತದೆ ಎಂದು ಕಳೆದ ವಾರ ಪಕ್ಷ ತೊರೆದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್ಸಿಗೆ ಕಾಯಿಲೆ ಇದ್ದು, ಅದರ ಚಿಕಿತ್ಸೆಗೆ ಔಷಧ ಬೇಕಾಗಿದೆ. ಆದರೆ ವೈದ್ಯರ ಬದಲು ಅಲ್ಲಿ ಕಾಂಪೌಂಡರ್ ಔಷಧ ನೀಡುತ್ತಿದ್ದಾರೆ. ತಜ್ಞ ವೈದ್ಯರ ಅಗತ್ಯ ಆ ಪಕ್ಷಕ್ಕೆ ತೀರಾ ಅಗತ್ಯವಿದೆ ಎಂದು ಹರಿಹಾಯ್ದಿದ್ದಾರೆ. ರಾಜ್ಯ ಘಟಕಗಳಲ್ಲಿ ಪಕ್ಷವನ್ನು ಒಗ್ಗೂಡಿಸುವಂಥವರ ಬದಲು ಯಾರಿಗೆ ನಾಯಕತ್ವ ವಹಿಸಿದರೆ ಎಲ್ಲರೂ ಬಿಟ್ಟು ಹೋಗುತ್ತಾರೋ ಅಂಥವರಿಗೆ ಮಣೆ ಹಾಕಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಜೊತೆಗೆ ಕಾಂಗ್ರೆಸ್ಸಿನಲ್ಲಿರುವ 90% ಜನ ಕಾಂಗ್ರೆಸ್ಸಿ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ಪಕ್ಷ ತೊರೆದ ಹಿನ್ನೆಲೆಯಲ್ಲಿ ಸುದ್ದಿಗಾರರು ಹಾಗೂ ಮಾಧ್ಯಮ ಸಂಸ್ಥೆಗಳಿಗೆ ನೀಡಿದ ಸಂದರ್ಶನದಲ್ಲಿ ಆಜಾದ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿರುವ ಶೇ.90 ಮಂದಿ ಕಾಂಗ್ರೆಸ್ಸಿ ಅಲ್ಲ. ಕಾಲೇಜಿನಲ್ಲಿರುವವರು, ಸಿಎಂಗಳ ಗುಮಾಸ್ತರನ್ನು ಆರಿಸಿ ಹುದ್ದೆ ನೀಡಲಾಗುತ್ತಿದೆ. ತಮ್ಮ ಇತಿಹಾಸವೇ ಗೊತ್ತಿಲ್ಲದ ವ್ಯಕ್ತಿಗಳ ಜತೆ ವಾದಕ್ಕಿಳಿಯಲು ನಾನು ಸಿದ್ಧನಿಲ್ಲ ಎಂದಿದ್ದಾರೆ.
ಪ್ರತಿಪಕ್ಷ ನಾಯಕನಾಗಿದ್ದಾಗಲೇ, ಜಿ-23ಗೂ ಮುನ್ನವೇ ಸೋನಿಯಾ ಗಾಂಧಿ (Sonia gandhi) ಅವರಿಗೆ ಪತ್ರ ಬರೆದಿದ್ದೆ. ಅವರು ಮಾಡಿದ್ದೇನು? ಕೆ.ಸಿ. ವೇಣುಗೋಪಾಲ್ ಜತೆ ಮಾತನಾಡಿ ಎಂದರು. ನಾನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಆತ ಶಾಲೆಗೆ ಹೋಗುತ್ತಿದ್ದವ ಎಂದುಬಿಟ್ಟೆ. ರಣದೀಪ್ ಸುರ್ಜೇವಾಲಾ ಜತೆ ಚರ್ಚಿಸಿ ಎಂದು ಗಾಂಧಿ ಕುಟುಂಬದ ಒಬ್ಬರು ಹೇಳಿದರು. ನಾನು ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಸುರ್ಜೇವಾಲಾ ತಂದೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿದ್ದರು. ನನ್ನ ಅಡಿ ಕೆಲಸ ಮಾಡಿದವರು. ಅಂಥವರ ಪುತ್ರನ ಜತೆ ನಾನೇನು ಚರ್ಚೆ ಮಾಡಲಿ. ರಾಹುಲ್ ಗಾಂಧಿ ಏನು ಹೇಳುತ್ತಿದ್ದೀರಿ ಎಂದುಬಿಟ್ಟೆಎಂದು ಹೇಳಿದರು.
ಮತ್ತೊಂದೆಡೆ, ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೂಕ್ತವಾಗಿ ಸಂಘಟನೆ ಮಾಡಲು ಕಾಂಗ್ರೆಸ್ (Congress) ನಾಯಕತ್ವಕ್ಕೆ ಸಮಯವೇ ಇಲ್ಲ. ರಾಹುಲ್ (Rahulgandhi) ಅವರಿಗೆ ರಾಜಕಾರಣದಲ್ಲಿ ಒಲವೂ ಇಲ್ಲ, ಆಸಕ್ತಿಯೂ ಇಲ್ಲ. ನಾನು ಬಿಜೆಪಿ ಸೇರುವುದಿಲ್ಲ. ಜಮ್ಮು-ಕಾಶ್ಮೀರದಲ್ಲಿ ರಾಜಕಾರಣ ಮಾಡಲು ಬಿಜೆಪಿ (BJP) ಸಹಾಯವನ್ನೂ ಪಡೆಯುವುದಿಲ್ಲ ಎಂದರು.
ಮೋದಿ ಒರಟು ಮನುಷ್ಯ ಎಂದುಕೊಂಡಿದ್ದೆ, ಅವರೊಬ್ಬ ಮಾನವೀಯ ವ್ಯಕ್ತಿ
ಪ್ರಧಾನಿ ನರೇಂದ್ರ ಮೋದಿಯವರನ್ನು ಒರಟು ಮನುಷ್ಯ ಎಂದು ಭಾವಿಸಿದ್ದೆ. ಅದರೆ ಅವರು ಮಾನವೀಯತೆ ತೋರಿಸಿದ್ದರು ಎಂದು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad ) ಸೋಮವಾರ ಹಳೆಯ ಘಟನೆಯೊಂದನ್ನು ಸ್ಮರಿಸಿದ್ದಾರೆ.
ಗುಲಾಂ ನಬಿ ರಾಜೀನಾಮೆಯ ಹಿಂದೆ ನಡೆದಿದ್ದೇನು? ಗೆಹ್ಲೋಟ್ ಎಐಸಿಸಿ ಅಧ್ಯಕ್ಷರಾಗ್ತಾರಾ?
‘2006ರಲ್ಲಿ ಕಾಶ್ಮೀರದಲ್ಲಿ ಗುಜರಾತಿನ ಕೆಲವು ಪ್ರಯಾಣಿಕರಿದ್ದ ಬಸ್ ಮೇಲೆ ಗ್ರೆನೇಡ್ ದಾಳಿ ನಡೆದಿತ್ತು. ಆಗ ನಾನು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದೆ ಹಾಗೂ ಮೋದಿ ಗುಜರಾತ್ ಸಿಎಂ ಆಗಿದ್ದರು. ಘಟನೆಯ ಭೀಕರತೆ ನೋಡಿ ನಾನು ಅಳುತ್ತಿರುವಾಗ ಮೋದಿ ನನಗೆ ಕರೆ ಮಾಡಿದರು. ನಾನು ಅಳುತ್ತಿದ್ದ ಕಾರಣ ಮಾತಾಡಲು ಸಾಧ್ಯವಾಗಲಿಲ್ಲ. ಬಳಿಕ ದಾಳಿಯಲ್ಲಿ ಮೃತಪಟ್ಟವರನ್ನು ಹಾಗೂ ಗಾಯಗೊಂಡವರನ್ನು ಸಾಗಿಸಲು 2 ವಿಮಾನಗಳನ್ನು ರವಾನಿಸುವಂತೆ ಮೋದಿಯವರಿಗೆ ಕೇಳಿದೆ. ತಮ್ಮ ರಾಜ್ಯದ ಜನರ ಸ್ಥಿತಿ ಬಗ್ಗೆ ಕೇಳಿ ಮೋದಿ ಭಾವುಕರಾದರು. ಮೋದಿ ಒರಟು ವ್ಯಕ್ತಿ ಎಂದು ಭಾವಿಸಿದ್ದೆ, ಆದರೆ ಅವರು ಮಾನವೀಯತೆ ತೋರಿಸಿದ್ದರು’ ಎಂದು ಸಂದರ್ಶನವೊಂದರಲ್ಲಿ ಸ್ಮರಿಸಿದ್ದಾರೆ.
ಪ್ರಧಾನಿ ಮೋದಿ ಬಗ್ಗೆ ತಪ್ಪು ಗ್ರಹಿಕೆ ಹೊಂದಿದ್ದೆ; ಅವರು ಮಾನವೀಯತೆ ತೋರಿದ್ದಾರೆ: ಆಜಾದ್
ಗುಲಾಂ ಅವರಿಗೆ ರಾಜ್ಯಸಭೆಯಿಂದ ಬೀಳ್ಕೊಡುವಾಗ ಮೋದಿ ಕಣ್ಣೀರಿಟ್ಟಿದ್ದು ಭಾರೀ ಸುದ್ದಿಯಾಗಿತ್ತು. ‘ಅವರು ಕಣ್ಣೀರಿಡಲು ಕಾರಣ ತಾವು ಕಾಶ್ಮೀರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಡೆದ ಘಟನೆಯಾಗಿತ್ತು’ ಎಂದು ಗುಲಾಂ ಹೇಳಿದ್ದಾರೆ.