ಗುಲಾಂ ನಬಿ ರಾಜೀನಾಮೆಯ ಹಿಂದೆ ನಡೆದಿದ್ದೇನು? ಗೆಹ್ಲೋಟ್‌ ಎಐಸಿಸಿ ಅಧ್ಯಕ್ಷರಾಗ್ತಾರಾ?

ವಿದೇಶಕ್ಕೆ ಹೋಗುವ ಮುನ್ನ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ರನ್ನು ಕರೆಸಿಕೊಂಡ ಸೋನಿಯಾ ಗಾಂಧಿ, ನೀವು ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಎಐಸಿಸಿ ಅಧ್ಯಕ್ಷರಾಗಿ ಎಂದು ಸೂಚಿಸಿದ್ದಾರೆ. ಆದರೆ ಗೆಹ್ಲೋಟ್‌, ಸಿಎಂ ಹುದ್ದೆ ಬೇಕಾದರೆ ಬಿಟ್ಟೇನು, ದಿಲ್ಲಿಗೆ ಬರಲಾರೆ ಎಂದಿದ್ದಾರೆ. ಒಂದು ವೇಳೆ ಗೆಹ್ಲೋಟ್‌ ಸಿಎಂ ಹುದ್ದೆ ಬಿಟ್ಟರೂ ಸಚಿನ್‌ ಪೈಲಟ್‌ರನ್ನು ತಮ್ಮ ಉತ್ತರಾಧಿಕಾರಿ ಮಾಡಲು ಸುತರಾಂ ಸಿದ್ಧರಿಲ್ಲ.

What happened behind the Congress Exit of Ghulam Nabi Azad gow

ಪ್ರಶಾಂತ್‌ ನಾತು

ರಾಜ ಮಹಾರಾಜರ ಕಾಲದಿಂದಲೂ ಕೂಡ ಸಾಮ್ರಾಜ್ಯಗಳ ಬಂಡಾಯ ಮೊದಲು ಶುರುವಾಗುವುದು ರಾಜರು ತಮ್ಮನ್ನು ಹೊಗಳಲು ನೇಮಿಸಿಕೊಂಡ ಅರಮನೆಗಳ ಅವಕಾಶವಾದಿ ಆಸ್ಥಾನಿಕರಿಂದ. ಬಹುತೇಕ ಹೊಸ ತಲೆಮಾರುಗಳ ದುರ್ಬಲ ಯುವರಾಜರು ಅಧಿಕಾರ ಹಿಡಿದಾಗ ಹಳೆಯ ರಾಜರ ಮಂತ್ರಿಗಳು, ವಿದೂಷಕರು ಬಂಡಾಯ ಏಳುವ ನೂರಾರು ಕಥೆಗಳು ಇತಿಹಾಸದ ಪುಟಗಳಲ್ಲಿವೆ. 1947ರಿಂದ ಪಂಡಿತ ನೆಹರುರಿಂದ ಹಿಡಿದು ಇಂದಿರಾ ಗಾಂಧಿ, ಸಂಜಯ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿವರೆಗೆ 65 ವರ್ಷಗಳ ಕಾಲ ಮಾತೆತ್ತಿದರೆ ಗಾಂಧಿಗಳಿಗೆ ಜೈ ಎನ್ನುತ್ತಿದ್ದ, 30ರಿಂದ 40 ವರ್ಷ ಹೊಗಳಿ ಹೊಗಳಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ದರ್ಬಾರಿಗಳು ಈಗ ಗಾಂಧಿ ಕುಟುಂಬದ ಅತ್ಯಂತ ಕೆಟ್ಟರಾಜಕೀಯ ಸಮಯದಲ್ಲಿ ಮನೆತನವನ್ನೇ ಬಯ್ಯುತ್ತಾ ಹೊರಗೆ ಹೋಗುತ್ತಿದ್ದಾರೆ. ಹಳಬರ ಸಿಟ್ಟಿಗೆ ಮುಖ್ಯ ಕಾರಣ ಒಂದು ಕಡೆ ಹೊಸ ಯುವ ದರ್ಬಾರಿಗಳು ಅಧಿಕಾರ ಕಳೆದುಕೊಂಡ ನಿರಾಸಕ್ತ ರಾಜಕಾರಣಿ ಯುವರಾಜನನ್ನು ಸುತ್ತುವರೆದಿದ್ದಾರೆ ಎನ್ನುವುದಾದರೆ, ಇನ್ನೊಂದು ಕಡೆ ಎದುರುಗಡೆ ಇರುವ ಯುದ್ಧ ಯಶಸ್ವಿ ಮಹತ್ವಾಕಾಂಕ್ಷಿ ಚಕ್ರವರ್ತಿ ತೋರಿಸುತ್ತಿರುವ ಹೊಸ ಹುಲ್ಲುಗಾವಲು ಕೂಡ ಇನ್ನೊಂದು ಮಹತ್ವದ ಕಾರಣ. ಒಂದು ಮಾತ್ರ ಸಾರ್ವಕಾಲಿಕ ಸತ್ಯ ನೋಡಿ, ಬಹುಪಾಲು ರಾಜಕಾರಣಿಗಳ ನಿಷ್ಠೆ ಅಧಿಕಾರಕ್ಕೇ ಹೊರತು ಮನೆತನ ಅಥವಾ ವ್ಯಕ್ತಿ ವಿಚಾರಕ್ಕೆ ಅಲ್ಲ.

ಗುಲಾಂ ಈಗ ಆಜಾದ್‌: 1977ರಲ್ಲಿ ಕಾಶ್ಮೀರದ ಮುಸಲ್ಮಾನ ನಾಯಕ ಒಬ್ಬ ಜೊತೆಗೆ ಇರಲಿ ಎಂದು ಸಂಜಯ ಗಾಂಧಿ ಶ್ರೀನಗರದಿಂದ ದಿಲ್ಲಿಗೆ ಕರೆದುಕೊಂಡು ಬಂದಿದ್ದು ಗುಲಾಂ ನಬಿ ಆಜಾದ್‌ರನ್ನು. ವಿಪರೀತ ಚಳಿ ಪ್ರದೇಶದಿಂದ ಬಂದಿದ್ದ ಗುಲಾಂ ನಬಿ ದಿಲ್ಲಿಯ ಬಿಸಿಲಿನಿಂದ ಮೂಗು ಸೋರುತ್ತದೆ, ನಾನು ವಾಪಸ್‌ ಹೋಗುತ್ತೇನೆ ಎಂದಾಗ ಸಂಜಯ ಗಾಂಧಿ ಬೇಡ ಇರು ಎಂದು ಉಳಿಸಿಕೊಂಡಿದ್ದರು. ಕಾಶ್ಮೀರದ ಗುಲಾಂ ನಬಿಯನ್ನು 1980 ಮತ್ತು 84ರಲ್ಲಿ ಮಹಾರಾಷ್ಟ್ರದಿಂದ ಲೋಕಸಭೆಗೆ ತಂದ ಗಾಂಧಿ ಕುಟುಂಬ 1989ರಿಂದ 33 ವರ್ಷ ಸತತವಾಗಿ ರಾಜ್ಯಸಭೆಗೆ ತಂದು ಮಧ್ಯೆ ಒಮ್ಮೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಕೂಡ ಮಾಡಿತ್ತು. ನಿಸ್ಸಂದೇಹವಾಗಿ ಗುಲಾಂ ನಬಿ ಸೋನಿಯಾರಿಗೆ ನಿಷ್ಠ. ಆದರೆ ಮಗ ರಾಹುಲ್ ಜೊತೆ ಆಜಾದ್‌ರಿಗೆ ಅಷ್ಟಕಷ್ಟೆ. 2 ವರ್ಷದಿಂದ ರಾಹುಲ್ ಗಾಂಧಿ ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎಂದು ಬೇಸರ ಹೊರಹಾಕುತ್ತಿದ್ದ ಗುಲಾಂ ನಬಿ ತಮ್ಮನ್ನು ಮರಳಿ ರಾಜ್ಯಸಭೆಗೆ ತರದ ಗಾಂಧಿ ಕುಟುಂಬದ ಜೊತೆ ಇದ್ದಾದರೂ ಏನು ಪ್ರಯೋಜನ ಎಂದು ಕೊನೆಗೂ ಹೊರಬಿದ್ದಿದ್ದಾರೆ. ಜೀವನವಿಡೀ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದು ಅಧಿಕಾರ ಹಿಡಿದುಕೊಂಡ ಕೆಲವರಿಗೆ ಅಧಿಕಾರ ಹೋಗಿ ವೃದ್ಧ್ಯಾಪ್ಯ ಸಮೀಪಿಸಿದಾಗ ಆಂತರಿಕ ಪ್ರಜಾಪ್ರಭುತ್ವ ಮತ್ತು ಮೆರಿಟ್‌ ನೆನಪಾಗುವುದು ಒಂದು ಸೋಜಿಗದ ಸಂಗತಿ.

ಗುಲಾಂ ರಾಜೀನಾಮೆ ಈಗ ಏಕೆ?: ಕಳೆದ ತಿಂಗಳು ರಾಜ್ಯಸಭಾ ಚುನಾವಣೆಗೆ ಟಿಕೆಟ್‌ ಕೊಡುವಾಗ ತಮ್ಮನ್ನು ರಾಜ್ಯಸಭೆಗೆ ತನ್ನಿ ಎಂದು ಗುಲಾಂ ನಬಿ ಸೋನಿಯಾರಿಗೆ ಕೇಳಿಕೊಂಡಿದ್ದರು. ಆದರೆ ರಾಹುಲ್ ಮತ್ತು ಪ್ರಿಯಾಂಕಾ ಯಾವುದೇ ಕಾರಣಕ್ಕೂ ಬೇಡ ಎಂದು ಹಟ್‌ ಹಿಡಿದಾಗ ಸೋನಿಯಾ ಫೋನ್‌ ಮಾಡಿ ಆಜಾದ್‌ಜೀ, ನಿಮ್ಮ ಹೆಸರು ಮ್ಯಾನೇಜ್‌ ಮಾಡಲು ಆಗುತ್ತಿಲ್ಲ ಎಂದು ಹೇಳಿದ ದಿನವೇ ಗುಲಾಂ ನಬಿ ಸಿಟ್ಟಿನಲ್ಲಿದ್ದರು. ಆಜಾದ್‌ ಆಪ್ತರು ಹೇಳುವ ಪ್ರಕಾರ ಅಮರಿಂದರ್‌ ತರಹವೇ ಒಂದು ಮುಸ್ಲಿಂ ಪಾರ್ಟಿ ಮಾಡಿಕೊಂಡು ಬಿಜೆಪಿ ಜೊತೆಗೆ ಹೋದರೆ ಮರಳಿ 73ನೇ ವಯಸ್ಸಿನಲ್ಲಿ ಮುಖ್ಯಮಂತ್ರಿ ಆಗುವ ಉಮೇದಿಯಲ್ಲಿ ಗುಲಾಂ ನಬಿ ಇದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಆಜಾದ್‌ ನೇರವಾಗಿ ಪ್ರಧಾನಿ ಮೋದಿ ಸಂಪರ್ಕದಲ್ಲಿಯೇ ಇದ್ದಾರೆ. ಆದರೆ ಯಾವಾಗ 5 ದಿನಗಳ ಹಿಂದೆ ವಿದೇಶಕ್ಕೆ ಹೋಗಬೇಕಾದಾಗ ಸೋನಿಯಾ ಗಾಂಧಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್‌ರನ್ನು ಕಾಂಗ್ರೆಸ್‌ಗೆ ಅಧ್ಯಕ್ಷರಾಗಿ ಎಂದು ಹೇಳಿ ಆಗಸ್ಟ್‌ 28ಕ್ಕೆ ಚುನಾವಣಾ ವೇಳಾಪಟ್ಟಿತಯಾರಿಸಲು ಕಾಂಗ್ರೆಸ್‌ ಕಾರ್ಯಕಾರಿ ಸಭೆ ಕರೆದರೋ ಗುಲಾಂ ನಬಿ ಆಜಾದ್‌ ಕಾಂಗ್ರೆಸ್‌ ಬಿಡುವವರ ಇಷ್ಟದ ‘ಹೊಡೆಯುವ ಚೀಲ’ ರಾಹುಲ್‌ ಗಾಂಧಿಗೆ ‘ಹೊಡೆದು’ ಪಾರ್ಟಿ ಬಿಟ್ಟಿದ್ದಾರೆ. ಕಾಶ್ಮೀರದ ಹೊರಗೆ ಆಜಾದ್‌ ಹೋಗುವುದರಿಂದ ಲಾಭ ನಷ್ಟಏನೂ ಇಲ್ಲ. ಆದರೆ ಕಷ್ಟದ ಸಮಯದಲ್ಲಿ ಕಾಂಗ್ರೆಸ್‌ಗೆ ಒಬ್ಬೊಬ್ಬ ದರ್ಬಾರಿ ಬಿಟ್ಟು ಹೋದಾಗಲೂ ಅದು ನಷ್ಟದ ಬಾಬ್ತು.

ಪೇಚಿನಲ್ಲಿ ಅಶೋಕ್‌ ಗೆಹಲೋಟ್‌: ವಿದೇಶಕ್ಕೆ ಚಿಕಿತ್ಸೆಗೆ ತೆರಳುವ ಮುಂಚೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್‌ರನ್ನು 10 ಜನಪಥ್‌ಗೆ ಕರೆಸಿಕೊಂಡ ಸೋನಿಯಾ ಗಾಂಧಿ ಆಗಸ್ಟ್‌ 28ಕ್ಕೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ಇದೆ, ಹೊಸ ಅಧ್ಯಕ್ಷರ ಆಯ್ಕೆ ಮಾಡಬೇಕು, ನೀವು ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಇಲ್ಲಿಗೆ ಬನ್ನಿ ಎಂದು ಹೇಳಿದಾಗ ಗೆಹಲೋಟ್‌ ‘ಇಲ್ಲ ಮೇಡಂ ನನಗೆ ದಿಲ್ಲಿಗೆ ಬರಲು ಇಷ್ಟಇಲ್ಲ. ನೀವು ಬೇಕಾದರೆ ಹೇಳಿ, ನಾನು ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡುತ್ತೇನೆ’ ಎಂದು ಹೇಳಿ ಬಂದಿದ್ದಾರೆ. ಸದ್ಯಕ್ಕೆ ಗಾಂಧಿ ಕುಟುಂಬಕ್ಕೆ ಅನ್ನಿಸುತ್ತಿರುವುದು- 1. ನಂಬಿಕಸ್ಥ, ಶುದ್ಧ ಚಾರಿತ್ರ್ಯದ, ಮಾತು ಕೇಳುವ ಅಶೋಕ್‌ ಗೆಹಲೋಟ್‌ರನ್ನು ಅಧ್ಯಕ್ಷ ಮಾಡಿ ಗಾಂಧಿ ಕುಟುಂಬದ ಕೈಯಲ್ಲೇ ಕಾಂಗ್ರೆಸ್‌ ಇದೆ ಎನ್ನುವ ಆರೋಪಗಳಿಂದ ಹೊರಬರುವುದು. 2. ಒಂದು ಕಾಲು ಹೊರಗೆ ಇಟ್ಟಿರುವ ಸಚಿನ್‌ ಪೈಲಟ್‌ರನ್ನು ಮುಖ್ಯಮಂತ್ರಿ ಮಾಡುವುದು. ಆದರೆ ಪೇಚಿನ ವಿಷಯ ಏನೆಂದರೆ ಅಶೋಕ್‌ ಗೆಹಲೋಟ್‌ ಮುಖ್ಯಮಂತ್ರಿ ಸ್ಥಾನ ಬಿಟ್ಟು ಅಧ್ಯಕ್ಷರಾಗಲು ತಯಾರಿಲ್ಲ. ಒಂದು ವೇಳೆ ಒತ್ತಡದಿಂದ ಮುಖ್ಯಮಂತ್ರಿ ಹುದ್ದೆ ಬಿಟ್ಟು ಬಂದರೂ ಕೂಡ ಸಚಿನ್‌ ಪೈಲಟ್‌ರನ್ನು ಉತ್ತರಾಧಿಕಾರಿ ಎಂದು ಒಪ್ಪಿಕೊಳ್ಳಲು ತಯಾರಿಲ್ಲ.

ಹೀಗಿತ್ತು ಗಾಂಧಿಗಳ ವರ್ಚಸ್ಸು: ಆಗಿನ್ನೂ ರಾಜೀವ್‌ ಗಾಂಧಿ ಪ್ರಧಾನಿಯಾದ ಹೊಸತು. ದಿಲ್ಲಿಯಿಂದ 170 ಕಿಲೋಮೀಟರ್‌ ದೂರ ಸರಿಸ್ಕಾ ಹುಲಿ ಅಭಯಾರಣ್ಯದಲ್ಲಿ ರಾಜೀವ್‌ ಗಾಂಧಿ ಕೇಂದ್ರ ಸಂಪುಟದ ಸಭೆ ಕರೆದಿದ್ದರು. ತಾನೊಬ್ಬ ಕಾಂಗ್ರೆಸ್‌ನಲ್ಲಿನ ಮಿಸ್ಟರ್‌ ಕ್ಲೀನ್‌ ಎಂದು ತೋರಿಸಿಕೊಳ್ಳಲು ಯತ್ನಿಸುತ್ತಿದ್ದ ರಾಜೀವ್‌ ತಮ್ಮನ್ನು ಭೇಟಿ ಆಗಲು ಯಾವುದೇ ರಾಜ್ಯ ಸರ್ಕಾರದ ಮಂತ್ರಿಗಳು ಸರ್ಕಾರಿ ಕಾರಿನಲ್ಲಿ ಖರ್ಚು ಹಾಕಿಕೊಂಡು ಬರುವಂತಿಲ್ಲ ಎಂದು ಫರ್ಮಾನು ಹೊರಡಿಸಿದರು. ಸ್ವತಃ ಕಾರು ಡ್ರೈವ್‌ ಮಾಡಿಕೊಂಡು ಬಂದ ರಾಜೀವ್‌ ನೇರ ರಸ್ತೆಯಲ್ಲಿ ಹೋಗಬೇಕಾದವರು ತಪ್ಪಾಗಿ ಬಲಕ್ಕೆ ತಿರುಗಿ ಬಂದು ನೋಡುತ್ತಾರೆ ದಟ್ಟಅರಣ್ಯದಲ್ಲಿ ಮಂತ್ರಿಗಳ, ಶಾಸಕರ ನೂರಾರು ಕಾರುಗಳು ಪಾರ್ಕ್ ಮಾಡಿಕೊಂಡು ನಿಂತಿವೆ. ರಾಜೀವ್‌ ಎಷ್ಟುಸಿಟ್ಟಾದರು ಅಂದರೆ ಆಗಿನ ರಾಜಸ್ಥಾನದ ಮುಖ್ಯಮಂತ್ರಿ ಹರಿದೇವ್‌ ಜೋಶಿ ರಾಜೀನಾಮೆ ಕೊಡಬೇಕಾಯಿತು. ಮಜಾ ಏನಪ್ಪ ಅಂದರೆ ಆಗ ಬೇಕೆಂತಲೇ ರಾಜೀವ್‌ ದಾರಿ ತಪ್ಪುವಂತೆ ನೋಡಿಕೊಂಡಿದ್ದು ಈಗ ಮುಖ್ಯಮಂತ್ರಿ ಆಗಿರುವ, ಆಗ ಕೇಂದ್ರ ಮಂತ್ರಿ ಆಗಿದ್ದ ಅಶೋಕ್‌ ಗೆಹಲೋಟ್‌. ಅದೊಂದು ಕಾಲವಿತ್ತು, ಆಗ ಗಾಂಧಿಗಳು ಹೇಳಿದ ಹಾಗೆ ದೇಶ ನಡೆಯುತ್ತಿತ್ತು. ಈಗೊಂದು ಕಾಲವಿದೆ, ದೇಶ ಬಿಡಿ ಗಾಂಧಿಗಳು ಸಾಕಿದ ಗಿಣಿಗಳೇ ಮಾತು ಕೇಳುತ್ತಿಲ್ಲ. ಸಮಯ ಎಲ್ಲರಿಗಿಂತ ಬಲಶಾಲಿ.

ರಾಹುಲ್‌ ಸುತ್ತ ಇರುವವರು: 2020ರಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಅಧಿಕಾರ ಹಿಡಿದಾಗ ವಿಲಾಸ್‌ ರಾವ್‌ ದೇಶಮುಖ್‌ ಪುತ್ರ ಅಮಿತ್‌ ದೇಶಮುಖ್‌ಗೆ ಅಹ್ಮದ್‌ ಪಟೇಲ್‌ ಫೋನ್‌ ಮಾಡಿ ಸೋನಿಯಾ ಮೇಡಂ ನಿಮಗೆ ಇಂಧನ ಖಾತೆ ಕೊಡುವಂತೆ ಹೇಳಿದ್ದಾರೆ, ಸಿಗುತ್ತದೆ ಅಂದರಂತೆ. ಆದರೆ ಅದು ಸಿಕ್ಕಿದ್ದು ನಿತಿನ್‌ ರಾವತ್‌ಗೆ. ಕಾರಣ ಏನು ಎಂದು ಹುಡುಕಿದಾಗ ರಾಹುಲ್‌ ಗಾಂಧಿ ಜೊತೆ ಇರುವ ಅಲಂಕಾರ ಸವಾಯಿ ವಿದರ್ಭದವರು. ನಿತಿನ್‌ ರಾವತ್‌ ಅಲ್ಲಿಯವರು. ಹೀಗಾಗಿ ರಾಹುಲ್‌ ಕಾರ್ಯಾಲಯ ಹೇಳಿತು ಎಂದು ಕೊನೆ ಕ್ಷಣದಲ್ಲಿ ಬದಲಾವಣೆ ಆಯಿತು. ರಾಜಕೀಯದ ಅನುಭವವೇ ಇಲ್ಲದ, ವಿದೇಶದಲ್ಲಿ ಓದಿ ಬಂದಿದ್ದಾರೆ ಅನ್ನುವ ಏಕೈಕ ಕ್ವಾಲಿಫಿಕೇಶನ್‌ ಇರುವ, ಉತ್ತರ ಪ್ರದೇಶ ಮೂಲದ ಕನಿಷ್ಕಾ ಸಿಂಗ್‌, ಮಹಾರಾಷ್ಟ್ರ ಮೂಲದ ಅಲಂಕಾರ ಸವಾಯಿ, ಸಚಿನ್‌ ರಾವ್‌, ಜೆಎನ್‌ಯುದಲ್ಲಿ ಓದಿರುವ ಕೌಶಿಕ್‌ ವಿದ್ಯಾರ್ಥಿ ಕಾಂಗ್ರೆಸ್‌ನ ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದರೆ, ರಾಹುಲ್‌ರ ಭದ್ರತೆಯಲ್ಲಿ ಎಸ್‌ಪಿಜಿಯಲ್ಲಿದ್ದ ಬೈಜು ಎಂಬ ಮಲೆಯಾಳಿ ಅಧಿಕಾರಿಯ ಪ್ರಭಾವ ರಾಹುಲ್‌ರ ರಾಜಕೀಯ ನಿರ್ಣಯಗಳ ಮೇಲಿದೆ. ಇವರೆಲ್ಲರ ಮಾತು ಕೇಳಿಯೇ ಪಂಜಾಬ್‌ನಲ್ಲಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ರನ್ನು ಬದಲಿಸಿದ ಪರಿಣಾಮ ನೋಡಿ. ಕ್ಯಾಪ್ಟನ್‌ ಅಮರಿಂದರ್‌ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದಾರೆ. ನವಜೋತ್‌ ಸಿಂಗ್‌ ಸಿದು ಜೈಲಿನಲ್ಲಿದ್ದಾರೆ. ಚರಣ್‌ ಜಿತ್‌ ಸಿಂಗ್‌ ಚನ್ನಿ ಸೋತು ಕೆನಡಾ ಸೇರಿಕೊಂಡಿದ್ದಾರೆ. ಸುನೀಲ್‌ ಜಾಖಡ್‌ ಬಿಜೆಪಿಯಲ್ಲಿದ್ದಾರೆ. ಹೀಗೆಲ್ಲ ಮಾಡಿದರೆ ಕಾಂಗ್ರೆಸ್‌ ಖಾಲಿ ಆಗದೇ ಇರುತ್ತಾ.

Latest Videos
Follow Us:
Download App:
  • android
  • ios