ಮುಂಬೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ, ಯುವತಿಯೊಬ್ಬರು ಏಕಾಂಗಿಯಾಗಿ ಪೊಲೀಸ್ ವ್ಯಾನ್ ತಡೆದು ವಶಕ್ಕೆ ಪಡೆದಿದ್ದ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸುವಂತೆ ಮಾಡಿದ್ದಾರೆ. ಈ ದಿಟ್ಟ ಯುವತಿ ನಟಿ ಹಾಗೂ ಉದ್ಯಮಿ ರಿಯಾ ಅಹಿರ್ ಎಂದು ಗುರುತಿಸಲಾಗಿದ್ದು, ಅವರ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮುಂಬೈ: ಮುಂಬೈಗೂ ವ್ಯಾಪಿಸಿರುವ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುವಾಗ ಮಹಿಳೆಯೊಬ್ಬರು ಪೊಲೀಸ್ ವ್ಯಾನ್ ತಡೆದು ದಿಟ್ಟತನ ಪ್ರದರ್ಶಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ದಾದರ್ ಪ್ರದೇಶದ ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಸ್ಥಳಾಂತರಿಸಲು ಮುಂದಾದರು. ಆದರೆ ಮಹಿಳೆ ಅದಕ್ಕೆ ಒಪ್ಪಲಿಲ್ಲ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಆಗ ಯುವತಿ ಏಕಾಂಗಿಯಾಗಿ ನಿಂತು ಕೊಂಚವೂ ಅಲುಗಾಡದೇ ಪೊಲೀಸ್ ವಾಹನ ತಡೆದಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳ ಪರ ನಿಂತು ದಿಟ್ಟತನ ಪ್ರದರ್ಶಿಸಿದ ಆಕೆ ನಡೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಮಾತ್ರವಲ್ಲ ಆ ಯುವತಿಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆಕೆ ಯಾರು ಎಂಬ ಹುಡುಕಾಟ ಆರಂಭವಾಗಿ ಇಂಟರ್ ನೆಟ್ ನಲ್ಲಿ ಸಿಕ್ಕಾಪಟ್ಟೆ ಜಾಲಾಡಿದ್ದಾರೆ. ಕೊನೆಗೆ ಆಕೆಯ ಗುರುತು ಪತ್ತೆಯಾಗಿದೆ. ಈ ಹೋರಾಟಗಾರ್ತಿ ಹೆಸರು ರಿಯಾ ಅಹಿರ್. ರಿಯಾ ವೃತ್ತಿಯಲ್ಲಿ ನಟಿ, ರೂಪದರ್ಶಿ ಹಾಗೂ ಮಹಿಳಾ ಉದ್ಯಮಿಯಾಗಿದ್ದಾರೆ.
ಮುಂಬೈನ ದಾದರ್ ಪ್ರದೇಶದ ಶಿವಾಜಿ ಪಾರ್ಕ್ ಹಾಗೂ ಕೊಹಿನೂರ್ ಚೌಕದ ಸುತ್ತಮುತ್ತ ಜಮಾಯಿಸಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ವ್ಯಾನ್‌ನಲ್ಲಿ ಕೂರಿಸಿದ್ದರು. ಈ ವೇಳೆ ಅಲ್ಲಿಗೆ ಬಂದ ನಟಿ ಹಾಗೂ ರೂಪದರ್ಶಿ ರಿಯಾ ಅಹಿರ್, ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್‌ನ ಮುಂದೆ ಹೂಡಿ ಹಾಗೂ ಟೋಪಿ ಧರಿಸಿ ದಿಟ್ಟವಾಗಿ ಬಂದು ನಿಂತರು. ಪೊಲೀಸರು ಆಕೆಯನ್ನು ಅಲ್ಲಿಂದ ಸರಿಸಲು ಎಷ್ಟೇ ಪ್ರಯತ್ನಿಸಿದರೂ, ಬೆದರಿಕೆ ಹಾಕಿದರೂ ರಿಯಾ ಮಾತ್ರ ಕೊಂಚವೂ ಅಲುಗಾಡದೆ ಏಕಾಂಗಿಯಾಗಿ ಇಡೀ ವಾಹನಕ್ಕೆ ಅಡ್ಡ ನಿಂತರು.
ಈಗಲೇ ಬಿಡುಗಡೆ ಮಾಡಿ, ಆಮೇಲೆ ಅಲ್ಲ!
ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ರಿಯಾ ಅಹಿರ್ ಮತ್ತು ಪೊಲೀಸರ ನಡುವೆ ಸುದೀರ್ಘ ಕಾಲ ತೀವ್ರ ವಾಕ್ಸಮರ ನಡೆಯಿತು. ಪೊಲೀಸರು ಮೊದಲು ಆಕೆಗೆ ಬೆದರಿಕೆ ಹಾಕಿದರು, ನಂತರ ಅಲ್ಲಿಂದ ಜರುಗುವಂತೆ ಬೇಡಿಕೊಂಡರು. ವಿದ್ಯಾರ್ಥಿಗಳನ್ನು ಆಮೇಲೆ ಬಿಡುಗಡೆ ಮಾಡುತ್ತೇವೆ ಎಂದು ಅಧಿಕಾರಿಗಳು ಸಬೂಬು ನೀಡಿದಾಗ, ರಿಯಾ ಅದನ್ನು ಒಪ್ಪಲಿಲ್ಲ. ಹೇಗಿದ್ದರೂ ಬಿಡುಗಡೆ ಮಾಡುವುದಾದರೆ, ಆಮೇಲೆ ಏಕೆ? ಈಗಲೇ, ಇಲ್ಲೇ ಬಿಡುಗಡೆ ಮಾಡಿ! ಎಂದು ಪಟ್ಟು ಹಿಡಿದು ಧೈರ್ಯದಿಂದ ನಿಂತರು. ಕೊನೆಗೆ ರಿಯಾ ಅವರ ಅಚಲ ಹೋರಾಟಕ್ಕೆ ಮಣಿದ ಮುಂಬೈ ಪೊಲೀಸರು, ವ್ಯಾನ್‌ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಸ್ಥಳದಲ್ಲೇ ಮುಕ್ತಗೊಳಿಸಿದರು. ವಿದ್ಯಾರ್ಥಿಗಳು ಸುರಕ್ಷಿತವಾಗಿ ಹೊರಬಂದ ಮೇಲಷ್ಟೇ ರಿಯಾ ಅಲ್ಲಿಂದ ಪಕ್ಕಕ್ಕೆ ಸರಿದರು.
ಯಾರು ಈ ರಿಯಾ ಅಹಿರ್?
ಪೊಲೀಸ್ ವಾಹನಕ್ಕೆ ಒಂಟಿ ಮಹಿಳೆಯಾಗಿ ಸವಾಲು ಹಾಕಿದ ಈ ರಿಯಾ ಅಹಿರ್ ಯಾರೆಂದು ಇಡೀ ದೇಶವೀಗ ಹುಡುಕುತ್ತಿದೆ. ರಿಯಾ ವೃತ್ತಿಯಲ್ಲಿ ನಟಿ, ಹೆಸರಾಂತ ರೂಪದರ್ಶಿ ಹಾಗೂ ಮಹಿಳಾ ಉದ್ಯಮಿ. ಅವರು ಕೇವಲ ಗ್ಲಾಮರ್ ಲೋಕಕ್ಕೆ ಸೀಮಿತವಾಗದೆ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಕುರಿತು ಸದಾ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ದಿಟ್ಟ ವ್ಯಕ್ತಿತ್ವದವರು. ನಟನೆಯ ಜೊತೆಗೆ ಅವರು 'ರಿಯಾಸತ್' ಎಂಬ ಹ್ಯಾಂಡ್‌ಮೇಡ್ (ಕೈಯಿಂದ ತಯಾರಿಸಿದ) ಬಟ್ಟೆ ಬ್ರ್ಯಾಂಡ್ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅತ್ಯುತ್ತಮ ನೃತ್ಯಗಾರ್ತಿಯೂ ಆಗಿರುವ ಅವರು ಹಲವಾರು ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅಂದರೆ ಫೆಬ್ರವರಿ 2025 ರಲ್ಲಿ ಬಿಡುಗಡೆಯಾದ ಅವರ 'ದಿಲ್ಬಾರಾ' ಆಲ್ಬಂ ಸಾಂಗ್ ಭಾರಿ ಸದ್ದು ಮಾಡಿತ್ತು.
"ಅನ್ಯಾಯದ ವಿರುದ್ಧ ನಿಲ್ಲಲು ಜಾತಿ, ಹಿನ್ನೆಲೆ ಬೇಕಿಲ್ಲ": ರಿಯಾ ದಿಟ್ಟ ನುಡಿ
ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಿಯಾ ಅಹಿರ್, ತಮ್ಮ ನಿಲುವನ್ನು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ವಿವರಿಸಿದರು. ಪೊಲೀಸರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಸಾರ್ವಜನಿಕ ವ್ಯವಸ್ಥೆ ವಿಫಲವಾದಾಗ ಸಾಮಾನ್ಯ ಜನರೇ ಪರಸ್ಪರ ಸಹಾಯಕ್ಕೆ ಬರಬೇಕಾಗುತ್ತದೆ. ನನಗೆ ಪ್ರತಿಭಟನೆ ನಡೆಸುತ್ತಿರುವ ಯಾವುದೇ ಸಂಘಟನೆಗಳೊಂದಿಗೆ ವೈಯಕ್ತಿಕ ಸಂಬಂಧವಿಲ್ಲ. ನಾನು ದಲಿತಳೂ ಅಲ್ಲ, ಒಬಿಸಿಯೂ ಅಲ್ಲ, ನನ್ನ ತಂದೆ ರೈತನೂ ಅಲ್ಲ. ಆದರೆ ದೇಶದ ಯುವ ಪೀಳಿಗೆಯನ್ನು ಪೊಲೀಸರು ಅಮಾನವೀಯವಾಗಿ ಎಳೆದಾಡುವುದನ್ನು, ಅವರ ಮೇಲೆ ಲಾಠಿ ಬೀಸುವುದನ್ನು ನೋಡಿದಾಗ ನನ್ನಿಂದ ಸುಮ್ಮನಿರಲು ಸಾಧ್ಯವಾಗಲಿಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಯಾವುದೇ ಜಾತಿ, ಸಮುದಾಯ ಅಥವಾ ಹಿನ್ನೆಲೆಯ ಹಂಗು ಬೇಕಿಲ್ಲ.
ಸಾಮಾಜಿಕ ಜಾಲತಾಣಗಳ ಯುಗದಲ್ಲಿ ವಿದ್ಯಾರ್ಥಿಗಳನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವ ನೋವಿನ ಚಿತ್ರಗಳ ಮಧ್ಯೆ, ರಿಯಾ ಅಹಿರ್ ಒಂಟಿಯಾಗಿ ಬಸ್ ತಡೆದು ನಿಂತಿರುವ ಈ ಶಕ್ತಿಶಾಲಿ ಚಿತ್ರ ಇಡೀ ಸಮಾಜಕ್ಕೆ ಪ್ರೇರಣೆಯಾಗಿದೆ. ಸಂಕಷ್ಟದಲ್ಲಿದ್ದ ಅಪರಿಚಿತ ವಿದ್ಯಾರ್ಥಿಗಳ ಪರವಾಗಿ ಪ್ರಾಣದ ಹಂಗು ತೊರೆದು ನಿಂತ ರಿಯಾ ಅವರ ಧೈರ್ಯಕ್ಕೆ ದೇಶಾದ್ಯಂತ ಈಗ ಅಭೂತಪೂರ್ವ ಪ್ರಶಂಸೆ ಹಾಗೂ ಗೌರವ ಹರಿದುಬರುತ್ತಿದೆ.


