ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ದಸರಾ ಆಯುಧ ಪೂಜೆ ವೇಳೆ ಮಹಿಳಾ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಅವರು ಸೀರೆಯುಟ್ಟು ಎಕೆ47 ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ದಕ್ಷ ಸೇವೆ ಸಲ್ಲಿಸಿರುವ ಈ 'ಲೇಡಿ ಸಿಂಗಂ' ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ನವದೆಹಲಿ: ದಸರಾ ಹಬ್ಬದ ಸಂದರ್ಭದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿ ಒಬ್ಬರು ಭಾರೀ ಸುದ್ದಿ ಆಗುತ್ತಿದ್ದಾರೆ. ಸಾಂಪ್ರದಾಯಿಕ ಸೀರೆಯುಟ್ಟು ಅವರು ಎಕೆ47 ಗನ್‌ನಿಂದ ಗುಂಡುಗಳನ್ನ ಹಾರಿಸಿ ಎಲ್ಲರನ್ನೂ ಬೆರಗು ಗೊಳಿಸಿದ್ದಾರೆ. ಸದ್ಯ ಅವರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಆಗಿದ್ದೇನು?

ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯದ್ದು! ದಸರಾ ಸಂದರ್ಭದಲ್ಲಿ ಆಯುಧ ಪೂಜೆ ದೇಶದ ಮೂಲೆ ಮೂಲೆಯಲ್ಲೂ ನಡೆಯುತ್ತದೆ. ಅಂತೆಯೇ ರಾಜ್‌ನಂದಗಾಂವ್ ಪೊಲೀಸ್ ಲೈನ್ಸ್‌ನಲ್ಲಿ ಆಯುಧಪೂಜೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ವೇಳೆ ಖಡಕ್‌ ಮಹಿಳಾ ಪೊಲೀಸ್‌ ಅಧಿಕಾರಿ ಪೂಜೆ ಸಂದರ್ಭದಲ್ಲಿ ಗನ್‌ ತೆಗೆದುಕೊಂಡು ಏಕಾಏಕಿ ಗಾಳಿಯಲ್ಲಿ ಗಂಡುಗಳನ್ನ ಸಿಡಿಸಿದ್ದಾರೆ. ಅವರ ಗನ್‌ ಹಿಡಿದು ಗುಂಡುಗಳನ್ನ ಹಾರಿಸುವ ವಿಡಿಯೋ ವೈರಲ್‌ ಆಗಿದೆ.

ಯಾರು ಆ ಲೇಡಿ ಸಿಂಗಂ? ಹೆಸರು ಅಂಕಿತಾ ಶರ್ಮಾ. ಛತ್ತೀಸ್‌ಗಢ ಕೇಡರ್‌ನ 2018 ರ ಬ್ಯಾಚ್ ಐಪಿಎಸ್ ಅಧಿಕಾರಿ ಆಗಿದ್ದಾರೆ. ಖಡಕ್‌ ಅಧಿಕಾರಿ ಆಗಿದ್ದು, ಕಠಿಣ ಪೊಲೀಸ್‌ ವ್ಯವಸ್ಥೆ ಮತ್ತು ಕಾನೂನು ಸುವ್ಯವಸ್ಥೆಯ ಕೆಲಸಕ್ಕಾಗಿ ಅವರು ಹೆಸರುವಾಸಿ ಆಗಿದ್ದಾರೆ. ಛತ್ತೀಸ್‌ಗಢದ ನಕ್ಸಲ್‌ ಪೀಡಿತ ಜಿಲ್ಲೆಗಳಲ್ಲಿ ತುಂಬಾ ದಕ್ಷವಾಗಿ ಕಾರ್ಯನಿರ್ವಹಿಸಿದ್ದಾರೆ. ಅನೇಕ ಯಶಸ್ವಿ ಕೂಂಬಿಂಗ್‌ ನಡೆಸಿ ಹೆಸರುವಾಸಿ ಆಗಿದ್ದಾರೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಅವರ ಕಠಿಣ ಹೋರಾಟ ಹಾಗೂ ಅವರು ಪೊಲೀಸ್‌ ಇಲಾಖೆಯಲ್ಲಿ ತೋರುತ್ತಿರುವ ಸಾಹಸದ ಕೆಲಸಗಳಿಂದಾಗಿ ಲೇಡಿ ಸಿಂಗಂ ಎಂದು ಕರೆಯಲಾಗುತ್ತದೆ.

ಅಂದ್ಹಾಗೆ ಅಂಕಿತ್‌ ಶರ್ಮಾ, ಜೂನ್ 25, 1990 ರಂದು ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಜನಿಸಿದರು. 2017 ರ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 203 ರ ಅಖಿಲ ಭಾರತ ಶ್ರೇಣಿಯನ್ನು ಪಡೆದರು. ತವರು ಕೇಡರ್, ಛತ್ತೀಸ್‌ಗಢಕ್ಕೆ ಹಂಚಿಕೆಯಾದರು. ಯುಪಿಎಸ್‌ ಪರೀಕ್ಷೆಯ ಮೂರನೇ ಪ್ರಯತ್ನದಲ್ಲಿ ತಮ್ಮ ಕನಸುಗಳನ್ನ ನನಸು ಮಾಡಿಕೊಂಡರು. ಮೊದಲ ಪ್ರಯತ್ನದಲ್ಲೇ ಮೇನ್‌ ಎಕ್ಸಂಗೆ ಎಂಟ್ರಿಯಾದರು. ಆದರೆ ಎರಡನೇ ಪ್ರಯತ್ನದಲ್ಲಿ ಅವರಿಂದ ಅದು ಸಾಧ್ಯವಾಗಿರಲಿಲ್ಲ.

ಪೊಲೀಸ್‌ ಅಧಿಕಾರಿ ಆಗಿ ತವರು ರಾಜ್ಯಕ್ಕೆ ಎಂಟ್ರಿ ನೀಡಿದ್ದ ಅಂಕಿತಾ ಶರ್ಮಾ, ಛತ್ತೀಸ್‌ಗಢದ ಭಾಟಪಾರದಲ್ಲಿ ಮೊದಲ ಸೇವೆ. ರಾಯ್‌ಪುರದ ಆಜಾದ್ ಚೌಕ್‌ನ ಸಿಎಸ್‌ಪಿ ಆಗಿಯೂ ಸೇವೆ ಸಲ್ಲಿಸಿದರು. ಮೇ 2022 ರಲ್ಲಿ, ಅವರು ಖೈರಾಗಢದ ಎಸ್‌ಪಿಯಾಗಿ ನೇಮಕಗೊಂಡರು. ಆ ಮೂಲಕ ಜಿಲ್ಲೆಯ ಮೊದಲ ಮಹಿಳಾ ಎಸ್‌ಪಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸ್ತುತ ರಾಜನಂದಗಾಂವ್ ಜಿಲ್ಲೆಯ ಎಸ್ಪಿ ಆಗಿದ್ದಾರೆ.

Scroll to load tweet…