ಭಾರತದಿಂದ ಕದ್ದು ವಶದಲ್ಲಿಟ್ಟುಕೊಂಡಿರುವ ಕಾಶ್ಮೀರ ಭಾಗವನ್ನು ವಾಪಸ್‌ ನೀಡಿದರೆ ಕಾಶ್ಮೀರ ವಿಷಯ ಇತ್ಯರ್ಥವಾಗಲಿದೆ ಎಂದು ಜೈಶಂಕರ್ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದಿದ್ದಾರೆ.

ಇಸ್ಲಾಮಾಬಾದ್‌ (ಮಾ.7): ಪಾಕಿಸ್ತಾನವು ಭಾರತದಿಂದ ಕದ್ದು, ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡಿರುವ ಕಾಶ್ಮೀರದ ಭಾಗ ವಾಪಸ್‌ ನೀಡಿದರೆ ಕಾಶ್ಮೀರ ವಿಷಯ ಸಂಪೂರ್ಣ ಇತ್ಯರ್ಥವಾಗಲಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಕಾಶ್ಮೀರ ವಿಷಯ ಕೆದಕಿದ ಪಾಕ್‌ ಪತ್ರಕರ್ತಗೆ ಟಾಂಗ್‌ ನೀಡಿದ್ದಾರೆ.

ಬ್ರಿಟನ್‌ ಪ್ರವಾಸದಲ್ಲಿರುವ ಜೈಶಂಕರ್‌ ಅವರು ಲಂಡನ್‌ನ ಚಾಥಂ ಹೌಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಕ್‌ ಪತ್ರಕರ್ತರೊಬ್ಬರು ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್‌, ‘ನಾವು ಪಾಕಿಸ್ತಾನವು ಕದ್ದು ತನ್ನ ವಶದಲ್ಲಿ ಇಟ್ಟುಕೊಂಡಿರುವ ಕಾಶ್ಮೀರದ ಭಾಗವನ್ನು ಮರಳಿಸುವುದನ್ನೇ ಕಾಯುತ್ತಿದ್ದೇವೆ. ಅದು ಆದ ತಕ್ಷಣವೇ ಕಾಶ್ಮೀರ ವಿಷಯ ಇತ್ಯರ್ಥ ಆದಂತೆ’ ಎಂದು ತಿರುಗೇಟು ನೀಡಿದ್ದಾರೆ.

ಜೊತೆಗೆ, ‘ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸುಧಾರಣೆಗೆಗೆ ಸರ್ಕಾರ ಅನೇಕ ಕ್ರಮಕೈಗೊಂಡಿದೆ. ಈ ನಿಟ್ಟಿನಲ್ಲಿ ಆರ್ಟಿಕಲ್‌ 370 ಅನ್ನು ರದ್ದು ಮಾಡಿದ್ದು ಮೊದಲ ಹೆಜ್ಜೆ, ಬೆಳವಣಿಗೆ ಮತ್ತು ಆರ್ಥಿಕ ಚಟುವಟಿಕೆಗಳು ಮತ್ತು ಸಾಮಾಜಿಕ ನ್ಯಾಯವನ್ನು ಕಾಶ್ಮೀರದಲ್ಲಿ ಮರುಸ್ಥಾಪಿಸಿದ್ದು ಎರಡನೇ ಹೆಜ್ಜೆ, ಅತೀ ಹೆಚ್ಚು ಮತದಾನದೊಂದಿಗೆ ಚುನಾವಣೆ ನಡೆಸಿದ್ದು ಸರ್ಕಾರದ ಮೂರನೇ ಹೆಜ್ಜೆಯಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: SDPI ಮುಖ್ಯಸ್ಥ ಎಂಕೆ ಫೈಜ್ ಬಂಧನ: 6 ದಿನ ಇಡಿ ವಶಕ್ಕೆ | ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಸಂಚು, ಆಘಾತಕಾರಿ ಮಾಹಿತಿ ಬಹಿರಂಗ!

ಪಾಕ್‌ ಆಕ್ರೋಶ: ಜೈಶಂಕರ್‌ ಹೇಳಿಕೆಯಿಂದ ಕಿಡಿಕಿಡಿಯಾಗಿರುವ ಪಾಕ್‌, ಈ ಆರೋಪ ಆಧಾರರಹಿತ ಎಂದು ಆರೋಪಿಸಿದೆ. ಕಾಶ್ಮೀರವನ್ನು ಭಾರತವೇ ಆಕ್ರಮಿಸಿಕೊಂಡಿದೆ. ಈ ರೀತಿಯ ಆಧಾರರಹಿತ ಆರೋಪ ಮಾಡುವ ಬದಲು ಭಾರತವು 77 ವರ್ಷಗಳಿಂದ ಅಕ್ರಮವಾಗಿ ವಶದಲ್ಲಿಟ್ಟುಕೊಂಡಿರುವ ಕಾಶ್ಮೀರದಿಂದ ಜಾಗಖಾಲಿ ಮಾಡಲಿ ಎಂದು ಆಗ್ರಹಿಸಿದೆ.