ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಕ್ಕೆ ಭಾರತದ ಬೆಂಬಲ ಕೋರಿ ದೇಶಭ್ರಷ್ಟ ಬಲೂಚ್ ನಾಯಕರು ಮನವಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಭಾರತ ತನ್ನ ತತ್ವಗಳು ಮತ್ತು ಕಾರ್ಯತಂತ್ರದ ಯೋಜನೆಗಳ ನಡುವೆ ಸಮತೋಲನ ಸಾಧಿಸಬೇಕಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ದೇಶಭ್ರಷ್ಟರಾದ ಬಲೂಚ್ ನಾಯಕರು ಭಾರತಕ್ಕೆ ಇತ್ತೀಚೆಗೆ ಮನವಿಯೊಂದನ್ನು ಸಲ್ಲಿಸಿದ್ದು, ಬಲೂಚಿಸ್ತಾನದ ಸುದೀರ್ಘ ಸ್ವಾತಂತ್ರ್ಯ ಹೋರಾಟಕ್ಕೆ ಭಾರತ ನೈತಿಕ, ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ನೆರವು ನೀಡಬೇಕೆಂದು ವಿನಂತಿಸಿದ್ದಾರೆ. ಈ ಬೆಳವಣಿಗೆ ಈಗ ಚರ್ಚೆಗೆ ಗ್ರಾಸವಾಗಿದೆ. 1971ರಲ್ಲಿ ಬಾಂಗ್ಲಾದೇಶದ ವಿಮೋಚನೆಯ ಸಂದರ್ಭದಲ್ಲಿ ಭಾರತ ವಹಿಸಿದಂತಹ ಪಾತ್ರವನ್ನು ಈಗ ಬಲೂಚಿಸ್ತಾನದ ವಿಚಾರದಲ್ಲೂ ವಹಿಸಬೇಕು ಎನ್ನುವುದು ಬಲೂಚಿಗರ ಆಶಯವಾಗಿದ್ದು, ಆಗಿನಂತೆ ಈಗಲೂ ಭಾರತ ಪಾಕಿಸ್ತಾನದ ಭಯೋತ್ಪಾದನಾ ಶಿಬಿರಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ಕೈಗೊಂಡ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಳಿಕ ಭಾರತ - ಪಾಕಿಸ್ತಾನ ಸಂಬಂಧ ಉದ್ವಿಗ್ನಗೊಂಡಿದೆ. ಬಲೂಚಿಸ್ತಾನದ ಪರಿಸ್ಥಿತಿ ಭಾರತದಲ್ಲಿ ಸಹಾನುಭೂತಿ ಮೂಡಿಸಿದರೂ, ಈ ವಿಚಾರದಲ್ಲಿ ಭಾರತ ತನ್ನ ತತ್ವಗಳು ಮತ್ತು ಕಾರ್ಯತಂತ್ರದ ಯೋಜನೆಗಳ ನಡುವೆ ಸಮತೋಲನ ಸಾಧಿಸಿಕೊಂಡು, ಬಹಳಷ್ಟು ಜಾಗರೂಕತೆಯಿಂದ ಹೆಜ್ಜೆ ಇಡಬೇಕು.
ಹಾಗೆಂದು ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟ ಇದೇನೂ ಹೊಸದಲ್ಲ. 1948ರಲ್ಲಿ ಪಾಕಿಸ್ತಾನ ಕಾಲಾತ್ ರಾಜಾಡಳಿತ ಪ್ರದೇಶವನ್ನು ಪಾಕಿಸ್ತಾನ ಒತ್ತಡ ಹೇರಿ ಪಾಕಿಸ್ತಾನಕ್ಕೆ ಸೇರ್ಪಡೆಗೊಳಿಸಿತು. ಆ ಬಳಿಕ ಬಲೂಚಿಸ್ತಾನ ಐದು ಪ್ರಮುಖ ಹೋರಾಟಗಳಿಗೆ ಸಾಕ್ಷಿಯಾಗಿದ್ದು, ಪ್ರತಿಯೊಂದು ಹೋರಾಟವೂ ಅಪಾರ ಹಿಂಸಾಚಾರವನ್ನು ಒಳಗೊಂಡಿತ್ತು. ಆದರೆ, ಈ ಹೋರಾಟಗಳಲ್ಲಿ ಒಗ್ಗಟ್ಟಿನ ಕೊರತೆಯಿತ್ತು. ಆದರೆ, ಇಂದಿನ ಹೋರಾಟವೂ ವಿಭಜಿತವಾಗಿದ್ದು, ಬುಡಕಟ್ಟು ನಾಯಕರು, ರಹಸ್ಯ ಬಂಡುಕೋರ ಗುಂಪುಗಳು, ಮತ್ತು ಬ್ರಹುಮ್ದಾಗ್ ಬುಗ್ತಿ ಮತ್ತು ಮೆಹ್ರಾನ್ ಮರ್ರಿಯಂತಹ ದೇಶಭ್ರಷ್ಟ ಹೋರಾಟಗಾರರು ಇದರ ನೇತೃತ್ವ ವಹಿಸಿದ್ದಾರೆ. ಯುರೋಪ್ ಮತ್ತು ಉತ್ತರ ಅಮೆರಿಕಾಗಳಿಂದ ಕಾರ್ಯಾಚರಿಸುತ್ತಿರುವ ಈ ನಾಯಕರಿಗೆ ನಿರೀಕ್ಷಿತ ಮಟ್ಟದಲ್ಲಿ ಅಂತಾರಾಷ್ಟ್ರೀಯ ಬೆಂಬಲ ಗಳಿಸಲು ಸಾಧ್ಯವಾಗಿಲ್ಲ. ಪಾಕಿಸ್ತಾನವೂ ಹೋರಾಟಗಾರರ ಮೇಲೆ ದಾಳಿ, ಅಪಹರಣ, ಕಾನೂನು ಬಾಹಿರ ಹತ್ಯೆಗಳಂತಹ ಕ್ರಮಗಳ ಮೂಲಕ ಬಲೂಚಿಸ್ತಾನದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದೆ.
ಆಪರೇಷನ್ ಸಿಂದೂರದ ಬಳಿಕ ಬಲೂಚ್ ನಾಯಕರು ಮತ್ತೆ ಭಾರತದತ್ತ ಕೈಚಾಚಿರುವುದು ಅವರ ಶಕ್ತಿಯ ಸಂಕೇತದಂತೆ ಕಾಣುತ್ತಿಲ್ಲ. ಬದಲಿಗೆ, ಜಾಗತಿಕ ಮನ್ನಣೆಗಾಗಿ ನಡೆಸುತ್ತಿರುವ ಹತಾಶ ಪ್ರಯತ್ನದಂತೆ ಗೋಚರಿಸುತ್ತಿದೆ. ಬಲೂಚ್ ನಾಯಕರು ಪಾಕಿಸ್ತಾನದ ವಿರುದ್ಧ ಭಾರತದ ದೃಢ ನಿಲುವನ್ನು ಶ್ಲಾಘಿಸಿದ್ದು, ಬಾಂಗ್ಲಾದೇಶದ ಉದಾಹರಣೆಯನ್ನು ನೆನಪಿಸಿ, ತಮ್ಮ ಹೋರಾಟಕ್ಕೂ ನವದೆಹಲಿ ಬೆಂಬಲ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ತಜ್ಞರು ಅಭಿಪ್ರಾಯ ಪಡುವಂತೆ ಬಾಂಗ್ಲಾದೇಶ ಮತ್ತು ಬಲೂಚಿಸ್ತಾನದ ಪ್ರಕರಣಗಳು ಸಂಪೂರ್ಣ ಭಿನ್ನವಾಗಿವೆ. ಬಾಂಗ್ಲಾದೇಶದ ವಿಚಾರದಲ್ಲಿ, ಅದು ಭಾರತದೊಡನೆ ಗಡಿ ಹಂಚಿಕೊಂಡಿದ್ದು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ 1 ಕೋಟಿಗೂ ಹೆಚ್ಚು ಬಾಂಗ್ಲಾದೇಶಿ ನಿರಾಶ್ರಿತರು ಭಾರತಕ್ಕೆ ವಲಸೆ ಬಂದು, ಒಂದು ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಆದರೆ, ಬಲೂಚಿಸ್ತಾನದ ವಿಚಾರ ಸಂಪೂರ್ಣವಾಗಿ ಭಿನ್ನವಾಗಿದ್ದು, ಬಲೂಚಿಸ್ತಾನ ಭಾರತದೊಡನೆ ಗಡಿ ಹಂಚಿಕೊಳ್ಳುತ್ತಿಲ್ಲ. ಅದರೊಡನೆ, ಬಲೂಚಿಸ್ತಾನದ ಜನಸಂಖ್ಯೆಯೂ ಬಹಳಷ್ಟು ಕಡಿಮೆಯಿದ್ದು, ಭಾರತದ ಪಾಲ್ಗೊಳ್ಳುವಿಕೆ ಏರ್ಪಡುವಂತೆ ಮಾಡಲು ಅಲ್ಲಿನ ನಾಯಕರಲ್ಲಿ ಒಗ್ಗಟ್ಟಿನ ಕೊರತೆಯಿದೆ. ಬಲೂಚಿಸ್ತಾನದಿಂದ ಯಾವುದೇ ಸಾಮೂಹಿಕ ವಲಸೆಯೂ ನಡೆಯುತ್ತಿಲ್ಲ.
ಬಲೂಚ್ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವುದು ಭಾರತಕ್ಕೂ ತಿರುಮಂತ್ರವಾಗುವ ಅಪಾಯಗಳಿವೆ. ಭಾರತ ಅಂತಹ ಹೆಜ್ಜೆ ಇಟ್ಟರೆ, ಪಾಕಿಸ್ತಾನ ಈ ಅವಕಾಶವನ್ನು ಬಳಸಿಕೊಂಡು, ಕಾಶ್ಮೀರ ಮತ್ತು ಬಲೂಚಿಸ್ತಾನದ ವಿಚಾರವನ್ನು ಸಮೀಕರಿಸಿ ಮಾತನಾಡಬಹುದು. ಆಗ ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂಬ ಭಾರತದ ನಿಲುವಿಗೆ ಕಳಂಕ ಉಂಟಾಗುವ ಸಾಧ್ಯತೆಗಳಿವೆ. ಪಹಲ್ಗಾಮ್ ದಾಳಿಯ ಬಳಿಕ ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟಕ್ಕೆ ನಿರೀಕ್ಷಿತ ಅಂತಾರಾಷ್ಟ್ರೀಯ ಬೆಂಬಲ ಲಭಿಸಿಲ್ಲ. ಇಂತಹ ಸಮಯದಲ್ಲಿ ಕಾಶ್ಮೀರ ವಿಚಾರದಲ್ಲಿ ಮತ್ತೆ ತೊಂದರೆ ಉಂಟಾದರೆ, ಆಗ ಜಾಗತಿಕವಾಗಿ ಭಾರತದ ಸ್ಥಾನ ದುರ್ಬಲಗೊಂಡೀತು. ಅದರೊಡನೆ, ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಕ್ಕೆ ಭಾರತ ಬೆಂಬಲ ನೀಡಿದರೆ, ಚಬಹಾರ್ ಬಂದರಿನಂತಹ ಪ್ರಮುಖ ಯೋಜನೆಗಳಲ್ಲಿ ಭಾರತದ ಸಹಯೋಗಿಯಾಗಿರುವ ಇರಾನ್ ಜೊತೆಗಿನ ಸಂಬಂಧವೂ ಹದಗೆಡುವ ಅಪಾಯಗಳಿವೆ. ಇರಾನ್ ಸಹ ತನ್ನದೇ ಉದ್ರಿಕ್ತ ಬಲೂಚ್ ಜನಸಂಖ್ಯೆ ಹೊಂದಿದ್ದು, ಬಲೂಚ್ ವಿಚಾರದಲ್ಲಿ ವಿದೇಶೀ ಹಸ್ತಕ್ಷೇಪದ ವಿರುದ್ಧ ಇರಾನ್ ಈಗಾಗಲೇ ಎಚ್ಚರಿಕೆ ನೀಡಿದೆ.
ಇನ್ನು ಈ ವಿಚಾರದಲ್ಲಿ ಪಾಕಿಸ್ತಾನದ ಆಪ್ತ ಮಿತ್ರ ಚೀನಾ ಸಹ ಕಾಣಿಸಿಕೊಳ್ಳುತ್ತದೆ. ಚೀನಾದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗೆ, ಅದರಲ್ಲೂ ಚೀನಾ - ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಗೆ ಬಲೂಚಿಸ್ತಾನ ಕೇಂದ್ರವಾಗಿದೆ. ಬಲೂಚ್ ಪ್ರತ್ಯೇಕತಾವಾದಿಗಳಿಗೆ ಭಾರತದ ಯಾವುದೇ ರೀತಿಯ ಬೆಂಬಲ ಗ್ವಾದರ್ ಬಂದರು ಸೇರಿದಂತೆ ಚೀನಾದ ಪ್ರಮುಖ ಹೂಡಿಕೆಗಳಿಗೆ ಭಾರತದ ನೇರ ಸವಾಲಿನಂತೆ ಭಾಸವಾಗಬಹುದು. ಇದರ ಪರಿಣಾಮವಾಗಿ, ಚೀನಾ - ಪಾಕಿಸ್ತಾನದ ಮಿಲಿಟರಿ ಸ್ನೇಹ ಇನ್ನಷ್ಟು ಗಾಢವಾದೀತು. ಇದು ಈಗಾಗಲೇ ಉದ್ವಿಗ್ನಗೊಂಡಿರುವ ಪ್ರದೇಶದಲ್ಲಿ ಭಾರತದ ಕಾರ್ಯತಂತ್ರದ ಲೆಕ್ಕಾಚಾರಗಳನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು.
ಬಲೂಚಿಸ್ತಾನದ ನೆಲದಲ್ಲೇ ಗಮನಿಸಿದರೆ, ಒಂದು ನಿರಂತರ ಹೋರಾಟಕ್ಕೆ ಅವಶ್ಯಕವಾದ ಒಗ್ಗಟ್ಟು ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟದಲ್ಲಿ ಕಂಡು ಬರುತ್ತಿಲ್ಲ. ಬಲೂಚ್ ಲಿಬರೇಶನ್ ಆರ್ಮಿ ಮತ್ತು ಬಲೂಚ್ ಲಿಬರೇಶನ್ ಫ್ರಂಟ್‌ನಂತಹ ಸಂಘಟನೆಗಳು ಅಲ್ಲಲ್ಲಿ ದಾಳಿಗಳನ್ನು ನಡೆಸುತ್ತಿವೆಯಾದರೂ, ಅವುಗಳಿಗೆ ಬೇಕಾದಷ್ಟು ಸ್ಥಳೀಯ ಬೆಂಬಲ ಲಭ್ಯವಿಲ್ಲ, ಮತ್ತು ಅವುಗಳ ನಡುವೆ ಅವಶ್ಯಕ ಸಮನ್ವಯವೂ ಇಲ್ಲ. ಬಲೂಚಿಸ್ತಾನದ ಸ್ವಾತಂತ್ರ್ಯದ ಬಹಳಷ್ಟು ಧ್ವನಿ ವಿದೇಶಗಳಿಂದ ಬಂದು, ಸಾಮಾಜಿಕ ಜಾಲತಾಣಗಳಲ್ಲಿ, ವಿದೇಶೀ ಮಾಧ್ಯಮಗಳಲ್ಲಿ ಮೊಳಗುತ್ತಿವೆಯೇ ಹೊರತು, ಬಲವಾದ ಸ್ಥಳೀಯ ಹೋರಾಟವಾಗಿ ರೂಪ ತಳೆಯುತ್ತಿಲ್ಲ. ಬಹುಮಟ್ಟಿಗೆ ವಿದೇಶೀ ಅನುಕಂಪವನ್ನು ಆಧರಿಸಿರುವ ಒಂದು ಹೋರಾಟದ ಮೇಲೆ ಭಾರತ ಭರವಸೆ ಇಡುವುದು ಬುದ್ಧಿವಂತಿಕೆಯ ನಡೆಯಾಗುವುದಿಲ್ಲ.
ಹಾಗೆಂದು ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಮಾನವ ಹಕ್ಕುಗಳ ದಮನವನ್ನು ಭಾರತ ಕಡೆಗಣಿಸಲು ಸಾಧ್ಯವಿಲ್ಲ. ಆಪರೇಷನ್ ಸಿಂದೂರದ ಬಳಿಕ, ಪಾಕಿಸ್ತಾನಿ ಸೇನೆ ಬಲೂಚಿಸ್ತಾನದಲ್ಲಿ ಹೆಚ್ಚಿನ ಅಪಹರಣ, ಮತ್ತು ಹತ್ಯೆಗಳನ್ನು ನಡೆಸುತ್ತಿದೆ ಎಂದು ಮಾನವ ಹಕ್ಕು ಗುಂಪುಗಳು ವರದಿ ಮಾಡಿವೆ. ಇದು ಬಲೂಚಿಸ್ತಾನದ ಪ್ರತ್ಯೇಕತೆಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್ ಸಂಸ್ಥೆಯ ಡಾ. ಶಾಲಿನಿ ಚಾವ್ಲಾ ಅವರು ಬಲೂಚಿಸ್ತಾನದ ಹೋರಾಟಕ್ಕೆ ಇನ್ನಷ್ಟು ವೇಗ ಲಭಿಸುವ ಸಾಧ್ಯತೆಗಳಿದ್ದು, ಅದು ಪಾಕಿಸ್ತಾನಿ ಸೇನೆಗೆ ತಲೆನೋವಾಗಿ ಮುಂದುವರಿಯಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಭಾರತ ಈಗಾಗಲೇ ಪಾಕಿಸ್ತಾನದ ದ್ವಿಮುಖ ನೀತಿಯನ್ನು ಪ್ರಶ್ನಿಸಿದ್ದು, ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನದ ಬೂಟಾಟಿಕೆಯನ್ನು ಬಯಲುಗೊಳಿಸಲು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬಲೂಚಿಸ್ತಾನದ ಬವಣೆಯನ್ನು ಎತ್ತಿ ತೋರಿಸಿದೆ. ಹಾಗೆಂದು ಮಾನವ ಹಕ್ಕುಗಳ ದಮನದತ್ತ ಬೆಳಕು ಚೆಲ್ಲುವುದು ಮತ್ತು ಪ್ರತ್ಯೇಕತಾವಾದಕ್ಕೆ ಬೆಂಬಲ ನೀಡುವುದು ಎರಡೂ ಒಂದೇ ಅಲ್ಲ! ಬಲೂಚಿಸ್ತಾನದ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುವುದು ಈಗಾಗಲೇ ಗಡಿ ಉದ್ವಿಗ್ನತೆಗಳಿಗೆ ತುತ್ತಾಗಿರುವ ಈ ಪ್ರದೇಶದಲ್ಲಿ ಇನ್ನಷ್ಟು ಅಪಾಯಗಳನ್ನು ಸೃಷ್ಟಿಸಬಲ್ಲದು.
ಭಾರತದ ಈಗಿನ ನಿಲುವು ಬಲೂಚಿಸ್ತಾನದ ಸ್ವಾತಂತ್ರ್ಯ ವಿಚಾರಕ್ಕೆ ಮಧ್ಯ ಪ್ರವೇಶಿಸದೆ, ಅಲ್ಲಿನ ಮಾನವ ಹಕ್ಕುಗಳ ದಮನದ ಕುರಿತು ಧ್ವನಿ ಎತ್ತುವುದಾಗಿದೆ. ಇದು ಕಾರ್ಯತಂತ್ರದ ದೃಷ್ಟಿಯಿಂದ ಸರಿಯಾದ ನಡೆಯೇ ಹೌದು. ಈ ಕುರಿತು ದ್ವಂದ್ವ ನಿಲುವನ್ನು ಪ್ರದರ್ಶಿಸುವ ಮೂಲಕ ಭಾರತ ಪಾಕಿಸ್ತಾನವನ್ನು ಆತಂಕದಲ್ಲೇ ಇರುವಂತೆ ಮಾಡಿದೆ. ಆ ಮೂಲಕ ಭಾರತ ಬಹಿರಂಗವಾಗಿ ಬಲೂಚ್ ಹೋರಾಟಕ್ಕೆ ಬೆಂಬಲ ನೀಡುವುದರಿಂದ ದೂರವಿದೆ. ಹೀಗಿರುವಾಗ ಭಾರತ ಬಲೂಚಿಸ್ತಾನದ ಒಗ್ಗಟ್ಟಿಲ್ಲದ ಹೋರಾಟಕ್ಕೆ ಬೆಂಬಲ ನೀಡಿದರೆ, ಅದು ಪಾಕಿಸ್ತಾನಕ್ಕೆ ಒಂದು ಪ್ರೊಪಗಾಂಡ ಗೆಲುವು ನೀಡಿದಂತಾಗುತ್ತದೆ. ಆಗ ಪಾಕಿಸ್ತಾನ ಆಪರೇಷನ್ ಸಿಂದೂರದಂತಹ ಕಾರ್ಯಾಚರಣೆಗಳು ಬಯಲುಗೊಳಿಸಿದ ಅದರ ವೈಫಲ್ಯಗಳಿಂದ ನುಣುಚಿಕೊಳ್ಳಲು ಸಾಧ್ಯವಾಗುತ್ತದೆ. ಪಾಕಿಸ್ತಾನ ಭಾರತದ ಹಸ್ತಕ್ಷೇಪದ ಆರೋಪವನ್ನು ಜಗತ್ತಿನ ಮುಂದಿಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಕ್ಕೆ ಸಹಾನುಭೂತಿ ತೋರುವುದು ಅಗತ್ಯವಾಗಿದೆ. ಆದರೆ, ಭಾರತ ಈಗ ತನ್ನ ದೀರ್ಘಾವಧಿಯ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕು. ಯಾವುದೇ ಸಾಹಸಕ್ಕೆ ಮುಂದಾಗದೆ, ರಾಜತಾಂತ್ರಿಕವಾಗಿ ಹೆಜ್ಜೆ ಇಡುವುದು ಭಾರತದ ಮುಂದಿನ ಸರಿಯಾದ ಹಾದಿ. ಭಾರತ ಬಲೂಚಿಸ್ತಾನದ ವಿಚಾರದಲ್ಲಿ ಪಾಕಿಸ್ತಾನದ ದುರ್ನಡೆಗಳನ್ನು ಬಯಲುಗೊಳಿಸುವುದನ್ನು ಮುಂದುವರಿಸುತ್ತಾ, ತನ್ನ ಪ್ರಾದೇಶಿಕ ಸಹಯೋಗಗಳನ್ನು ಇನ್ನಷ್ಟು ಬಲಪಡಿಸಬೇಕು. ಭೌಗೋಳಿಕ ರಾಜಕಾರಣವನ್ನು ಕೇವಲ ಭಾವನೆಗಳಿಂದ ನಿರ್ವಹಿಸಲು ಸಾಧ್ಯವಿಲ್ಲ. ಅಲ್ಲಿ ರಾಜತಾಂತ್ರಿಕತೆಯೇ ಮುಖ್ಯವಾಗುತ್ತದೆ. ಭಾರತದ ಸಹಿಷ್ಣುತೆ ಅದರ ಬಲಹೀನತೆಯಲ್ಲ, ಬದಲಿಗೆ ಭಾರತದ ಬುದ್ಧಿವಂತಿಕೆ ಮತ್ತು ಶಕ್ತಿಯೂ ಹೌದು.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)


