ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಭಾರಿ ಪ್ರತಿಭಟನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಡಿಎಂಕೆ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದೆ. ತಮಿಳುನಾಡಿನಲ್ಲಿ SIR ಕುರಿತು ರಾಹುಲ್ ಗಾಂಧಿ ಸ್ಟಾಂಡ್ ಏನು ಎಂದು ಪ್ರಶ್ನಿಸಿದೆ.
ಚೆನ್ನೈ (ಅ.06) ಚುನಾವಣಾ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ಏಕಪಕ್ಷೀಯವಾಗಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ನಡೆಸಿದ್ದಾರೆ. ಈ ಮೂಲಕ ಅಕ್ರಮ ಮಾಡಿದ್ದಾರೆ. ಹೀಗಾಗಿ ತಕ್ಷಣವೇ ಗ್ಯಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳು ದೆಹಲಿಯಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ತೀವ್ರ ಸ್ಪರೂಪ ಪಡೆದುಕೊಳ್ಳುತ್ತಿದ್ದಂತೆ ತಮಿಳುನಾಡಿನ ವಿಪಕ್ಷ ಡಿಎಂಕೆ ರಾಹುಲ್ ಗಾಂಧಿಗೆ ಕೆಲ ಪ್ರಶ್ನೆಗಳನ್ನು ಕೇಳಿ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ತಮಿಳುನಾಡಿನಲ್ಲಿ ಟಿವಿಕೆ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಆಡಳಿತದಲ್ಲಿದೆ. ತಮಿಳುನಾಡಿನಲ್ಲೂ ಎಸ್ಐಆರ್ ಮೂಲಕ ಮತದಾರರ ಹೆಸರು ಡಿಲೀಟ್ ಮಾಡಲಾಗಿತ್ತು. ಈ ಕುರಿತು ರಾಹುಲ್ ಗಾಂಧಿ ನಿಲುವೇನು ಎಂದು ಡಿಎಂಕೆ ಪ್ರಶ್ನಿಸಿದೆ.
ಡಿಎಂಕೆ ನಾಯಕ ಸರವಣ ಅಣ್ಣಾದೊರೈ ಸೋಶಿಯಲ್ ಮೀಡಿಯಾ ಮೂಲಕ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ. ತಮಿಳುನಾಡಿಲ್ಲೂ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಈ ಕುರಿತು ಮೌನವೇಕೆ? ತಮಿಳುನಾಡಿನಲ್ಲಿ ಟಿವಿಕೆ ಜೊತೆ ಅಧಿಕಾರ ಅನುಭವಿಸುತ್ತಿದ್ದೀರಿ ಎಂದು ಅಣ್ಣಾದೊರೆ ಪ್ರಶ್ನಿಸಿದ್ದಾರೆ.
ಖರ್ಗೆ ಮಾತಿಗೆ ರಾಹುಲ್ ಗಾಂಧಿ ಉತ್ತರವೇನು?
ಡಿಎಂಕೆ ನಾಯಕ ಸರವಣ ಅಣ್ಣಾದೊರೈ ಪ್ರಶ್ನೆಗಳು ಇಲ್ಲಿಗೆ ಮುಗಿದಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯನ್ನು ಪ್ರಮುಖವಾಗಿಟ್ಟುಕೊಂಡು ಮತ್ತೆ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆ ಮೂಲಕ ಆಯ್ಕೆಯಾದ ಸರ್ಕಾರಗಳನ್ನು ವಿಸರ್ದಿಸಬೇಕು ಎಂದಿದ್ದಾರೆ. ಈ ಮಾತನ್ನು ರಾಹುಲ್ ಗಾಂಧಿ ಸಮರ್ಥಿಸುತ್ತೀರಾ? ಹಾಗಾದರೆ ತಮಿಳುನಾಡು ಸರ್ಕಾರವನ್ನೂ ವಿಸರ್ಜಿಸುತ್ತೀರಾ ಎಂದು ಅಣ್ಣಾದೊರೆ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ಎಸ್ಐಆರ್ ಕುರಿತು ಮಾತನಾಡುವುದಿಲ್ಲ. ಟಿವಿಕೆ ವಿಜಯ್ ಅವರ ಭಯವೇ? ಎಂದು ಸರವಣ ಪ್ರಶ್ನಿಸಿದ್ದಾರೆ.
ಇಂಡಿಯಾ ಒಕ್ಕೂಟ ಪ್ರತಿಭಟೆಯಿಂದ ಡಿಎಂಕೆ ದೂರ
ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷಗಳು ಗ್ಯಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಳಿಸಿದೆ. ಟಿಎಂಸಿ, ಸಮಾಜವಾದಿ ಪಾರ್ಟಿ ಸೇರಿದಂತೆ ಇಂಡಿಯಾ ಒಕ್ಕೂಟದ ಹಲವು ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಆದರೆ ಈ ಪ್ರತಿಭಟೆಯಿಂ ಡಿಎಂಕೆ ದೂರ ಉಳಿದಿದೆ. ಡಿಎಂಕೆ ಮಾತ್ರವಲ್ಲ ಆಪ್ ನಾಯಕರು ದೂರ ಉಳಿದಿದ್ದಾರೆ.
ರಾಹುಲ್ ಗಾಂಧಿ ದೆಹಲಿಯಲ್ಲಿ ಭಾರಿ ಪ್ರತಿಭಟನೆಯಲ್ಲಿ ಮುಳುಗಿದ್ದಾರೆ. ಚುನಾವಣಾ ಮುಖ್ಯ ಆಯುಕ್ತರು, ಚುನಾವಣಾ ಆಯುಕ್ತರು ಪ್ರತಿಭಟನಾನಿರತ ನಮ್ಮನ್ನು ಯಾಕೆ ಭೇಟಿಯಾಗುತ್ತಿಲ್ಲ, ಪೊಲೀಸರು ನಮ್ಮನ್ನು ಯಾಕೆ ತಡೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಅಕ್ರಮ ಎಸಗಿರುವ ಗ್ಯಾನೇಶ್ ಕುಮಾರ್‌ಗೆ ನಮ್ಮನ್ನು ಭೇಟಿಯಾಗಲು ಭಯವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.


