ನಗರ, ಪಟ್ಟಣ, ಜಿಲ್ಲೆಗಳ ಮರುನಾಮಕರಣ ಮಾಡಿದ ಹಲವು ಉದಾಹರಣೆಗಳಿವೆ. ಆದರೆ ಇದೀಗ ರಾಜ್ಯದ ಹೇಸರೇ ಬದಲಾಗುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಹೆಸರು ಬದಲಾವಣೆ ಕುರಿತು ಮಹತ್ವದ ನಿರ್ಧಾರ ಹೊರಬೀಳಲಿದೆ.

ನವದೆಹಲಿ (ನ.23) ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ರಾಜ್ಯಗಳಲ್ಲಿ ನಗರ, ಜಿಲ್ಲೆ, ಪಟ್ಟಣಗಳ ಹೆಸರು ಬದಲಿಸಲಾಗಿದೆ. ಪರ ವಿರೋಧಗಳ ನಡುವೆಯೂ ಮರುನಾಮಕರಣಗೊಂಡಿದೆ. ಇನ್ನು ಬ್ಯಾಂಗಲೋರ್- ಬೆಂಗಳೂರು, ಮಡ್ರಾಸ್ -ಚೆನ್ನೈ , ಕಲ್ಕತಾ-ಕೋಲ್ಕತಾ, ಬಾಂಬೆ-ಮುಂಬೈ ಹೀಗೆ ಹಲವು ನಗರಗಳ ಹೆಸರು ಕೆಲ ದಶಕಗಳ ಹಿಂದೆ ಬದಲಿಸಲಾಗಿದೆ. ಇದೀಗ ರಾಜ್ಯದ ಹೆಸರನ್ನೇ ಬದಲಿಸಲಾಗುತ್ತಿದೆ. ಹೌದು ವೆಸ್ಟ್ ಬೆಂಗಾಲ್ ರಾಜ್ಯ ಹೆಸರು ಬದಲಿಸುತ್ತಿದೆ. ಈ ಕುರಿತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸುಳಿವು ನೀಡಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ವೆಸ್ಟ್ ಬೆಂಗಾಲ್ ಹೆಸರು ಬದಲಿಸುವ ಪ್ರಸ್ತಾಪ ಮುಂದಿಡಲಾಗುತ್ತದೆ ಎಂದಿದ್ದಾರೆ.

ವೆಸ್ಟ್ ಬೆಂಗಾಲ್ ಹೊಸ ಹಸರೇನು

ವೆಸ್ಟ್ ಬೆಂಗಾಲ್ ಹೆಸರನ್ನು ಪಶ್ಚಿಮ್ ಬಾಂಗ ಎಂದು ಮರುನಾಮಕರಣ ಮಾಡುವ ಪ್ರಸ್ತಾಪ ಸಲ್ಲಿಕೆಯಾಗಿದೆ. ಈ ಕುರಿತು ಪ್ರಸ್ತಾನವನೆ ನಮ್ಮ ಟೇಬಲ್‌ನಲ್ಲಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮರುನಾಮಕರಣದ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಸುವೇಂಧು ಅಧಿಕಾರಿ ಹೇಳಿದ್ದಾರೆ. ಡಿಸೆಂಬರ್ 4 ರಿಂದ 14ರ ವರೆಗೆ ಪಶ್ಚಿಮ ಬಂಗಾಳದ ಚಳಿಗಾಲದ ಅದಿವೇಶನ ನಡೆಯಲಿದೆ.

ವಿಧಾನಸಭೆಯಲ್ಲಿ ಬಿಲ್ ಪಾಸ್ ಆದ ಬೆನ್ನಲ್ಲೇ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಪ್ರಮುಖ ಮುಖ್ಯಮಂತ್ರಿಗಳು ಮರು ನಾಮಕರಣ ಬಿಲ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕೇಂದ್ರದ ಅನಮೋದನೆ ಸಿಗದೆ ಈ ಪ್ರಯತ್ನ ಕೈಗೂಡಲಿಲ್ಲ. ಆದರೆ ಈ ಬಾರಿ ಹೆಸರು ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ. ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇಷ್ಟೇ ಅಲ್ಲ, ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ಸುಲಭವಾಗಿ ಹೆಸರು ಬದಲಾವಣೆಯಾಗುವ ಸಾಧ್ಯತೆ ಇದೆ.

1999ರಿಂದ ಹೆಸರು ಬದಲಾವಣೆ ಪ್ರಯತ್ನ

1999ರಲ್ಲಿ ಜ್ಯೋತಿ ಬಸು ಅವರ ಎಡಪಕ್ಷ ಸರ್ಕಾರ ಪಶ್ಚಿಮ ಬಾಂಗ ಎಂದು ಮರುನಾಮಕರಣ ಮಾಡಲು ಮುಂದಾಗಿತ್ತು. ವಿಧಾನಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಕೇಂದ್ರದಿಂದ ಅನುಮೋದನೆ ಸಿಗದ ಕಾರಣ ಹೆಸರು ಬದಲಾವಣೆ ಪ್ರಯತ್ನ ಕೈಗೂಡಲಿಲ್ಲ. 2011ರಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಈ ಕುರಿತು ಸಮಿತಿ ರಚಿಸಿತ್ತು. ಬಳಿಕ ಬಾಂಗಾ, ಬಾಂಗ್ಲಾ, ಬಾಂಗಾ ಪ್ರದೇಶ, ಪೌಂದ್ರ ಬರ್ದಾನ್ ಸೇರಿದಂತೆ ಹಲವು ಹೆಸರನ್ನು ಮುಂದಿಟ್ಟು ಚರ್ಚಿಸಲಾಗಿತ್ತು. ಬಳಿಕ ಪಶ್ಚಿಮ್ ಬಾಂಗಾ ಎಂದು ಅಂತಿಮಗೊಳಿಸಿತ್ತು. ವಿಧಾನಸಭೆಯಲ್ಲೂ ಈ ಬಿಲ್ ಪಾಸ್ ಆಗಿತ್ತು. ಆದರೆ ಅಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರ ಅನುಮೋದನೆ ನೀಡಲಿಲ್ಲ.

ವೆಸ್ಟ್ ಬೆಂಗಾಲ್ ಎಂಬುದು ಇಂಗ್ಲಿಷ್ ಪದ. ಹೀಗಾಗಿ ಬಂಗಾಳ ಭಾಷೆಯಲ್ಲಿ ಹೆಸರು ಇರಬೇಕು ಅನ್ನೋದು ರಾಜ್ಯದ ಜನರ ಒತ್ತಾಯ. ಪಶ್ಚಿಮ್ ಬಾಂಗಾ ಸೂಕ್ತ ಹೆಸರು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಇದೇ ಹೆಸರು ಅಂತಿಮಗೊಳಿಸಿ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುತ್ತದೆ. ಕೇಂದ್ರ ಈ ಕುರಿತು ಅನುಮೋದನೆ ನೀಡುವ ಸಾಧ್ಯತೆ ಇದೆ. ಇತ್ತೀಚೆಗೆ ಕೇರಳ ರಾಜ್ಯ ಹೆಸರನ್ನು ಕೇರಳಂ ಎಂದು ಬದಲಿಸಿತ್ತು.