ಪಶ್ಚಿಮ ಬಂಗಾಳದ 152 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.90ರಷ್ಟು ದಾಖಲೆಯ ಮತದಾನವಾಗಿದೆ. ಆದರೆ, ಬಿಜೆಪಿ ಅಭ್ಯರ್ಥಿಗಳು ಮತ್ತು ಏಜೆಂಟರ ಮೇಲೆ ಹಲ್ಲೆ, ಕಲ್ಲುತೂರಾಟ ಸೇರಿದಂತೆ ಹಲವೆಡೆ ಟಿಎಂಸಿ ಕಾರ್ಯಕರ್ತರಿಂದ ಗೂಂಡಾಗಿರಿ ನಡೆದಿದ್ದು, ಚುನಾವಣೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ.

  • 152 ಕ್ಷೇತ್ರಗಳಲ್ಲಿ ಮತದಾನ । ದೀದಿ- ಮೋದಿ ನಡುವೆ ನೇರ ಫೈಟ್‌
  • ಬಿಜೆಪಿ ಶಾಸಕ, ಅಭ್ಯರ್ಥಿ, ಏಜೆಂಟ್‌ ಮೇಲೆ ಹಲ್ಲೆ, ಮತದಾನಕ್ಕೆ ಅಡ್ಡಿ

ಕೋಲ್ಕತಾ: ಮೊದಲ ಸಲ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸಿನಲ್ಲಿರುವ ಬಿಜೆಪಿ ಮತ್ತು ಸತತ 4ನೇ ಬಾರಿ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿರುವ ಟಿಎಂಸಿ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಿರುವ ಪಶ್ಚಿಮ ಬಂಗಾಳದ 152 ಕ್ಷೇತ್ರಗಳಿಗೆ ಗುರುವಾರ ಚುನಾವಣೆ ನಡೆದಿದ್ದು ಶೇ.90ರಷ್ಟು ದಾಖಲೆಯ ಮತದಾನ ನಡೆದಿದೆ.

Add Asianetnews Kannada as a Preferred SourcegooglePreferred

ರಾಜ್ಯದ 294 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ ಗುರುವಾರ 152 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಉಳಿದ 142 ಕ್ಷೇತ್ರಗಳಿಗೆ ಏ.29ರಂದು ಮತದಾನ ನಡೆಯಲಿದೆ. ಕಳೆದ ವರ್ಷ ಈ 152 ಕ್ಷೇತ್ರಗಳ ಪೈಕಿ ಬಿಜೆಪಿ 59 ಮತ್ತು ಟಿಎಂಸಿ 93 ಸ್ಥಾನ ಗೆದ್ದುಕೊಂಡಿತ್ತು.

152 ಕ್ಷೇತ್ರಗಳಿಗೆ ಒಟ್ಟು 1478 ಅಭ್ಯರ್ಥಿಗಳು ಸ್ಪರ್ಧಿಸಿದ್ದು 3.60 ಕೋಟಿ ಜನರು ಮತದಾನದ ಹಕ್ಕು ಪಡೆದುಕೊಂಡಿದ್ದರು. ಕಳೆದ ಚುನಾವಣೆ ವೇಳೆ ನಡೆದ ಹಿಂಸಾಚಾರ, ಇತ್ತೀಚೆಗೆ ನಡೆದ ವಿವಾದಿತ ವಿಶೇಷ ಮತಪಟ್ಟಿ ಪರಿಷ್ಕರಣೆ ಸಾಕಷ್ಟು ಗದ್ದಲಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆಗೆ ದಾಖಲೆಯ 2.5 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು.

==ಟಿಎಂಸಿ ಕಾರ್ಯಕರ್ತರ ಗೂಂಡಾಗಿರಿ

ಗುರುವಾರ ನಡೆದ ಮತದಾನದ ವೇಳೆ ರಾಜ್ಯದ ಹಲವು ಕಡೆ ಅಭ್ಯರ್ಥಿಗಳ ಮೇಲೆ ಹಲ್ಲೆ, ವಾಹನಗಳ ಮೇಲೆ ಕಲ್ಲು ತೂರಾಟ, ಮತದಾನಕ್ಕೆ ಅಡ್ಡಿಯಂಥ ಘಟನೆಗಳು ನಡೆದಿವೆ.

ದಕ್ಷಿಣ ದಿನಾಜ್‌ಪುರದ ಕುಮಾರ್‌ಗಂಜ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಸರ್ಕಾರ್‌ ಮೇಲೆ ಮತಗಟ್ಟೆ ಬಳಿ ಪೊಲೀಸರ ಸಮ್ಮುಖದಲ್ಲೇ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಇನ್ನು ಅಸಾನ್‌ಸೋಲ್‌ ದಕ್ಷಿಣ ಕ್ಷೇತ್ರದ ರಹಮತ್‌ನಗರದಲ್ಲಿ ಹಾಲಿ ಬಿಜೆಪಿ ಶಾಸಕ, ಅಭ್ಯರ್ಥಿ ಅಗ್ನಿಮಿತ್ರ ಪೌಲ್‌ ಅವರ ಕಾರಿನ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಈ ವೇಳೆ ಕಾರಿಗೆ ಹಾನಿಯಾಗಿದೆ.

ಇನ್ನು ಮುರ್ಷಿದಾಬಾದ್‌ನ ನವೋದಾದಲ್ಲಿ ಟಿಎಂಸಿ ಮತ್ತು ಹುಮಾಯುನ್‌ ಕಬೀರ್‌ ನೇತೃತ್ವದ ಎಜೆಯುಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಶಿಬ್‌ನಗರ್‌ ಗ್ರಾಮಕ್ಕೆ ಕಬೀರ್‌ ಭೇಟಿ ನೀಡಿದ್ದಕ್ಕೆ ಟಿಎಂಸಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದಾಗ ಗದ್ದಲ ಏರ್ಪಟ್ಟಿದೆ. ಈ ವೇಳೆ ಕಬೀರ್ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ತಕ್ಷಣ ಕೇಂದ್ರೀಯ ಭದ್ರತಾ ಪಡೆಗಳು ಲಾಠಿಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ಬೀರ್‌ಭೂಮ್‌ನ ಲಭ್‌ಪುರ ಮತ್ತ ಮಾಲ್ಡಾದ ಚಾಂಚಲ್‌ನಲ್ಲಿ ಬಿಜೆಪಿ ಪೋಲಿಂಗ್‌ ಏಜೆಂಟ್‌ಗಳ ಮೇಲೆ ಮತಗಟ್ಟೆ ಬಳಿ ಹಲ್ಲೆ ನಡೆಸಲಾಗಿದೆ. ಎರಡೂ ಘಟನೆಗಳಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ. ಮುರಾರಾಯ್‌ನಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮುರ್ಷಿದಾಬಾದ್‌ನ ಡೊಮ್ಕಲ್‌ನಲ್ಲಿ ಸ್ಥಳೀಯರು ಮತಗಟ್ಟೆಗೆ ತೆರಳದಂತೆ ಅಡ್ಡಿ ಮಾಡಿದ ಘಟನೆ ನಡೆದಿದೆ. ಬಳಿಕ ಭದ್ರತಾ ಪಡೆಗಳ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿದೆ. ಕೋಚ್‌ಬೆಹರ್‌ನಲ್ಲಿ ಟಿಎಂಸಿ ಕಾರ್ಯಕರ್ತರು ಮತಗಟ್ಟೆಗೆ ತೆರಳುವ ರಸ್ತೆ ತಡೆ ಮಾಡಿದ್ದು, ಭದ್ರತಾ ಪಡೆಗಳು ಅದನ್ನು ತೆರವುಗೊಳಿಸಿವೆ. ಇದನ್ನು ಹೊರತುಪಡಿಸಿ ಪೂರ್ವ ಮೇಧಿನಿಪುರ, ಸೇರಿದಂತೆ ಹಲವು ಕಡೆ ಟಿಎಂಸಿ ಕಾರ್ಯಕರ್ತರು ಮತ್ತು ವಿಪಕ್ಷಗಳ ಕಾರ್ಯಕರ್ತರ ನಡುವೆ ವಾಕ್ಸಮರ, ಮಾರಾಮಾರಿಯ ಘಟನೆಗಳು ನಡೆದಿವೆ.

ಬೀರ್ಭೂಮ್‌ನ ಖರ್ಸೋಲ್‌ನಲ್ಲಿ ಮತಯಂತ್ರದಲ್ಲಿ ಟಿಎಂಸಿಗೆ ಹಾಕಿದ ಮತಗಳು ಬಿಜೆಪಿಗೆ ಚಲಾವಣೆಯಾಗುತ್ತಿದೆ ಎಂದು ಕೆಲ ಮತದಾರರು ಆರೋಪಿಸಿದ ಕಾರಣ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾದ ಪೊಲೀಸರು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಈ ವೇಳೆ ಹಲವು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.