ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದ ಮದುವೆಯೊಂದರಲ್ಲಿ, ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪೀಸ್ ಕಡಿಮೆ ಇದೆ ಎಂಬ ಕಾರಣಕ್ಕೆ ವರನ ಕಡೆಯವರು ಗಲಾಟೆ ಆರಂಭಿಸಿದ್ದಾರೆ. ಈ ಸಣ್ಣ ಜಗಳವು ವಿಕೋಪಕ್ಕೆ ತಿರುಗಿ, ಮದುವೆ ಮನೆಯೇ ರಣರಂಗವಾಯ್ತು, ಕೊನೆಗೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಬೇಕಾಯಿತು.

ಬಿರಿಯಾನಿಯಲ್ಲಿ ಸಿಗದ ಚಿಕನ್ ಲೆಗ್‌ಪೀಸ್

ಅಮ್ರೋಹಾ: ಮದುವೆಗೆಂದು ಮಾಡಿದ್ದ ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪೀಸ್ ಕಡಿಮೆ ಆಯ್ತು ಎಂದು ಮದುವೆ ಮನೆಯೇ ರಣಾಂಗಣವಾದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಮದುವೆಗೆ ಬಂದ ಗಂಡಿನ ಕಡೆಯವರು ಪರಸ್ಪರ ಹೊಡೆದಾಡಿದ್ದಲ್ಲದೇ ಚೇರ್‌ಗಳನ್ನು ಪರಸ್ಪರರ ಮೇಲೆ ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಮದುವೆ ಮನೆಯನ್ನು ರಣಾಂಗಣವಾಗಿಸಿದ್ದಾರೆ.

ಮುಸ್ಲಿಂ ಸಮುದಾಯವೊಂದರ ಮದುವೆ ಸಮಾರಂಭದಲ್ಲಿ ಊಟದ ತಟ್ಟೆಗೆ ಬಿರಿಯಾನಿ ಬಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಣ್ಣ ಜಗಳ ಹಿಂಸೆಗೆ ತಿರುಗಿದ್ದು, ಸಂತೋಷ ಸಂಭ್ರಮದ ಈ ಕಾರ್ಯಕ್ರಮವೂ ಕೆಲವೇ ಕ್ಷಣಗಳಲ್ಲಿ ಯುದ್ಧಭೂಮಿಯಾಗಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಈ ಮದುವೆಗಾಗಿ ಗಂಡಿನ ಕಡೆಯವರು ಹೈಬತ್‌ಪುರ ಬಂಜಾರದಿಂದ ಅಮ್ರೋಹಾಗೆ ಬಂದಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಡಾನ್ಸ್‌ ಕುಣಿತ, ನಗು, ಹಾಸ್ಯದಿಂದ ಅಲ್ಲಿ ಸಂತಸ ಮನೆ ಮಾಡಿತ್ತು. ಆದರೆ ಊಟದ ಸಮಯದಲ್ಲಿ ಬಿರಿಯಾನಿಗೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಬಿರಿಯಾನಿಯಲ್ಲಿ ಕಾಲಿನ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಶುರುವಾಗಿದ್ದು, ಸಣ್ಣದಾಗಿ ಆರಂಭವಾದ ಈ ವಾಗ್ವಾದ ಕೆಲ ನಿಮಿಷಗಳಲ್ಲೇ ವಿಕೋಪಕ್ಕೆ ತಿರುಗಿದೆ. ಅಲ್ಲಿದ್ದವರು ಊಟದ ಪರಸ್ಪರ ನೂಕಾಟ ತಳ್ಳಾಟವಾಡಿದ್ದಲ್ಲದೇ ಅಲ್ಲಿದ್ದ ಚೇರ್‌ಗಳನ್ನು ಹೊಡೆದು ಹಾಕಿ ಗಲಾಟೆ ಮಾಡಿದ್ದಾರೆ.

ಮದುವೆ ಮನೆಯಾಯ್ತು ರಣಾಂಗಣ

ಈ ವೇಳೆ ಅಲ್ಲಿದ್ದ ಮಕ್ಕಳು ಮಹಿಳೆಯರು ಭಯದಿಂದ ಓಡಿ ಹೋಗಿದ್ದಾರೆ. ಪುರುಷರು ಪರಸ್ಪರ ಹೊಡೆದಾಟದಲ್ಲಿ ಮಗ್ನರಾಗಿದ್ದಾರೆ. ಅಲ್ಲಿದ್ದ ಈ ಸಂಪೂರ್ಣ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ವೈರಲ್ ಆಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ವರನ ಕಡೆಯವರಾಗಲಿ ವಧುವಿನ ಕಡೆಯವರಾಗಲಿ ಪ್ರತಿಕ್ರಿಯೆ ನೀಡಿಲ್ಲ, ಆದರೆ ಗಲಾಟೆ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂಬ ಮಾಹಿತಿ ಇದೆ. ಪೊಲೀಸರು ಅಲ್ಲಿಗೆ ಬರುವ ಹೊತ್ತಿಗೆ ಅಲ್ಲಿದ್ದವರೆಲ್ಲಾ ಸೈಲೆಂಟ್ ಆಗಿದ್ದರು. ಮನದೊಳಗಿನ ಉದ್ವಿಗ್ನತೆ ಹಾಗೆಯೇ ಇತ್ತು. ಪೊಲೀಸರು ಘಟನಾ ಸ್ಥಳದಲ್ಲಿದ್ದವರಿಂದ ಮಾಹಿತಿ ಪಡೆದು ಶಾಂತವಾಗಿ ಊಟ ಮಾಡಿ ನಡೆಯುವಂತೆ ಎಚ್ಚರಿಸಿದ ನಂತರ ಪರಿಸ್ಥಿತಿ ಶಾಂತವಾಯ್ತು ಎಂದು ವರದಿಯಾಗಿದೆ.

ಇದನ್ನೂ ಓದಿ: MRI ಸ್ಕ್ಯಾನಿಂಗ್ ವೇಳೆ ಪುಟ್ಟ ಮಗನಿಗೆ ಭಯವಾಗುತ್ತೆ ಅಂತ ಜೊತೆಗೆ ಮೆಷಿನ್ ಒಳಗೆ ಹೋದ ಅಪ್ಪ

ಇತ್ತ ವೈರಲ್ ಆದ ವೀಡಿಯೋ ನೋಡಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ವೀಡಿಯೋದಲ್ಲಿ ಕಂಡು ಬರುತ್ತಿರುವ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದೆ. ಹಿಂಸಾಚಾರದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿಷಯ ಎಷ್ಟೇ ಸಣ್ಣದಾಗಿದ್ದರೂ ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ದುರ್ಗಮ ಪ್ರದೇಶದಲ್ಲಿ ಸ್ಟ್ರೆಚರ್‌ನಲ್ಲಿ ಗರ್ಭಿಣಿಯನ್ನು ಇರಿಸಿ 5 ಕಿಮೀ ದೂರ ಹೊತ್ತು ಸಾಗಿದ ಯೋಧರು