ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ವಕ್ಫ್ ಮಸೂದೆ ವಿರೋಧಿಸಿ ನಡೆದ ಹಿಂಸಾಚಾರದಿಂದ ಸಂತ್ರಸ್ತರಾದವರು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಮನೆ ಮಠ ಕಳೆದುಕೊಂಡು, ಜೀವ ಉಳಿಸಿಕೊಂಡು ಬಂದಿರುವ ಸಂತ್ರಸ್ತರ ಕಣ್ಣೀರ ಕಥೆಗಳು ಹೇಳತೀರದಾಗಿವೆ.
ಬಂಗಾಳ: ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ಮಸೂದೆಯ ನಂತರ ಹಿಂಸಾಚಾರ ಭುಗಿಲೆದ್ದಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಸಂತ್ರಸ್ತರ ಗೋಳು ಹೇಳತೀರದಾಗಿದೆ. ಒಬ್ಬೊಬ್ಬರದ್ದು ಒಂದೊಂದು ಕಣ್ಣೀರ ಕತೆಯಾಗಿದ್ದು, ಇದುವರೆಗೆ ಇಲ್ಲಿ ನಡೆದ ಹಿಂಸಾಚಾರಕ್ಕೆ ಮೂರು ಬಲಿಯಾಗಿದೆ. ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಹಿಂಸಾಚಾರಕ್ಕಿಳಿದ ಗುಂಪೊಂದು ತಂದೆ 72 ವರ್ಷದ ಹರಿಗೋಬಿಂದ ದಾಸ್ ಮಗ ಚಂದನ್ ದಾಸ್ ಅವರನ್ನು ಅವರದೇ ಮನೆಯಿಂದ ಹೊರಕ್ಕೆಳೆದು ಕೊಂದಿದ್ದರು. ಹೀಗೆ ಮತೀಯವಾದಿಗಳ ಹಿಂಸಾಚಾರಕ್ಕೆ ಸಿಲುಕಿ ಮನೆ ಮಠ ಬಿಟ್ಟು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಒಬ್ಬೊಬ್ಬರದ್ದು ಒಂದೊಂದು ಕಣ್ಣೀರ ಕತೆಯಾಗಿದೆ.
ಹಿಂಸಾಚಾರಿಗಳಿಂದ ಜೀವ ಉಳಿಸಿಕೊಂಡು ಓಡಿ ಬಂದು ಪರ್ಲಾಪುರದ ಹೈಸ್ಕೂಲ್‌ನ ಕೊಠಡಿಗಳಲ್ಲಿ ಹಾಸಿದ ಟರ್ಪಾಲ್ ಮೇಲೆ ಕುಳಿತಿದ್ದ 24 ವರ್ಷ ಸಪ್ತಮಿ ಮಂಡಲ್ ಅವರ ಕೈಯಲ್ಲಿ ಕೇವಲ 8 ದಿನಗಳಷ್ಟೇ ತುಂಬಿದ್ದ ಮಗುವಿತ್ತು. ವಕ್ಪ್ ಮಸೂದೆ ಜಾರಿ ನಂತರ ಕಳೆದ ವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದ ನಂತರ ಇದನ್ನು ಆಶ್ರಯ ತಾಣವಾಗಿ ಪರಿವರ್ತಿಸಲಾಗಿದೆ. ಮನೆಗಳನ್ನು ಬಿಟ್ಟು ಓಡಿಹೋಗಿ ಈ ಶಾಲೆಯಲ್ಲಿ ಆಶ್ರಯ ಪಡೆದಿರುವ 400 ಪುರುಷರು ಹಾಗೂ ಮಹಿಳೆಯರು ಮತ್ತು ಮಕ್ಕಳಲ್ಲಿ ಒಬ್ಬಳಾದ ಸಪ್ತಮಿ ಮಂಡಲ್ ಅವರು ಗಂಗಾ ನದಿಯ ಆಚೆಗೆ 60 ಕಿಲೋಮೀಟರ್ ದೂರದಲ್ಲಿರುವ ತನ್ನ ಹಳ್ಳಿಗೆ ಮತ್ತೆ ತಾನು ಹಿಂದಿರುಗಬಹುದು ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ ಎನ್ನುತ್ತಾರೆ.
ವಕ್ಫ್ ಆಸ್ತಿ ಮೇಲೆ ಕಣ್ಣಿಟ್ಟವರ ಕಣ್ಣು ಕೀಳಿ ಎಂದ ಸಂಸದ; ಮೊದಲು ಷರಿಯಾ ಕಾನೂನು, ಬಳಿಕ ಸಂವಿಧಾನ ಎಂದ ಸಚಿವ
ಈ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ಹೇಳಿಕೊಂಡರೂ, ತೊಂದರೆಗೀಡಾದ ಪ್ರದೇಶಗಳಿಂದ ಜೀವ ಉಳಿಸಿಕೊಳ್ಳಲು ಮನೆ ಬಿಟ್ಟು ಬಂದು ನಿರಾಶ್ರಿತ ಶಿಬಿರ ಸೇರಿದವರಿಗೆ ತಾವು ಮತ್ತೆ ತಮ್ಮ ಮನೆಗೆ ಮರಳಬಹುದು ಎಂಬ ಬಗ್ಗೆ ಯಾವ ಖಚಿತತೆಯೂ ಇಲ್ಲವಾಗಿದೆ. ಶುಕ್ರವಾರ, ಗುಂಪೊಂದು ನಮ್ಮ ನೆರೆಮನೆಗೆ ಬೆಂಕಿ ಹಚ್ಚಿ ನಮ್ಮ ಮನೆಯ ಮೇಲೆ ಕಲ್ಲು ತೂರಾಟ ನಡೆಸಿತು. ನನ್ನ ಹೆತ್ತವರು ಮತ್ತು ನಾನು ಮನೆ ಒಳಗೆ ಅಡಗಿಕೊಂಡು ಸಂಜೆ ಗುಂಪು ಅಲ್ಲಿಂದ ಹೋದ ನಂತರ ಹೊರಟೆವು. ಆಗ ಬಿಎಸ್‌ಎಫ್ ಗಸ್ತು ತಿರುಗಲು ಪ್ರಾರಂಭಿಸಿತ್ತು. ನಾವು ಧರಿಸಿದ್ದ ಬಟ್ಟೆಗಳು ಮಾತ್ರ ನಮ್ಮ ಬಳಿ ಇದ್ದವು. ಬಿಎಸ್‌ಎಫ್ ಸಹಾಯದಿಂದ ನಾವು ಘಾಟ್ (ತಾತ್ಕಾಲಿಕ ಜೆಟ್ಟಿ) ಬಳಿ ಹೋದೆವು ಎಂದು ಪಶ್ಚಿಮ ಬಂಗಾಳದ ಧುಲಿಯನ್‌ನಲ್ಲಿ ವಾಸಿಸುತ್ತಿದ್ದ ಸಪ್ತಮಿ ಹೇಳಿದ್ದಾರೆ.
ನಾವು ಹೊರಡುವ ವೇಳೆ ಕತ್ತಲಾಗಿತ್ತು. ನಾವು ದೋಣಿ ಹತ್ತಿ ನದಿ ದಾಟಿದೆವು. ಇನ್ನೊಂದು ಬದಿಯಲ್ಲಿ ಈ ಗ್ರಾಮವಿತ್ತು ಅಲ್ಲಿ ಒಂದು ಕುಟುಂಬವು ನಮಗೆ ರಾತ್ರಿ ಆಶ್ರಯ ನೀಡಿ ಬಟ್ಟೆಗಳನ್ನು ನೀಡಿತು. ಮರುದಿನ, ನಾವು ಈ ಶಾಲೆಗೆ ಬಂದೆವು ಎಂದು ಸಪ್ತಮಿಯ ತಾಯಿ ಮಹೇಶ್ವರಿ ಮೊಂಡೋಲ್ ಹೇಳಿದ್ದಾರೆ. ನಾವು ನದಿ ದಾಟುತ್ತಿದ್ದಂತೆ ನನ್ನ ಮಗುವಿಗೆ ಜ್ವರ ಬಂತು ನಾವು ಈಗ ಇತರರ ಅನುಕಂಪದಲ್ಲಿದ್ದೇವೆ. ನಾವು ನಮ್ಮ ಸ್ವಂತ ಭೂಮಿಯಲ್ಲಿ ನಿರಾಶ್ರಿತರಾಗಿದ್ದೇವೆ. ಬಹುಶಃ ನಾವು ಎಂದಿಗೂ ಹಿಂತಿರುಗದಿರಬಹುದು. ಅವರು ಮತ್ತೆ ನಮ್ಮ ಮೇಲೆ ದಾಳಿ ಮಾಡಿದರೆ ಏನು ಗತಿ ಎಂದು ಸಪ್ತಮಿ ತಾಯಿ ಅವರು ಆತಂಕದಿಂದ ಪ್ರಶ್ನೆ ಮಾಡಿದ್ದಾರೆ.
ಪ್ರಸ್ತುತ ಪರ್ಲಾಲ್‌ಪುರ ಪ್ರೌಢಶಾಲೆಯಲ್ಲಿರುವ ನಿರಾಶ್ರಿತ ಶಿಬಿರದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳು ಮುರ್ಷಿದಾಬಾದ್‌ನ ಸುತಿ, ಧುಲಿಯನ್ ಮತ್ತು ಸಮಹೇರ್‌ಗಂಜ್‌ನ ನಿವಾಸಿಗಳಾಗಿದ್ದಾರೆ. ನಮ್ಮ ಮನೆಯನ್ನು ಸುಡಲಾಯ್ತು, ನಮಗೆ ನಮ್ಮ ಪ್ರದೇಶದಲ್ಲಿ ಶಾಶ್ವತವಾದ ಬಿಎಸ್‌ಎಫ್ ಕ್ಯಾಂಪ್ ಬೇಕು. ಹಾಗಿದ್ದರೆ ಮಾತ್ರ ನಾವು ವಾಪಸ್ ನಮ್ಮ ಜಾಗಕ್ಕೆ ಮರಳಲು ಸಾಧ್ಯ ಎಂದು ಧೂಲಿಯಾನ್ ಪ್ರದೇಶದ ನಿವಾಸಿಯಾದ ವಿಧವೆ ಮಹಿಳೆ ಟುಲೊರಾನಿ ಮೊಂಡಲ್ ಹೇಳಿದ್ದಾರೆ.
ವಕ್ಫ್ ಸರಿಯಾಗಿ ಬಳಸಿದ್ದರೆ, ಮುಸ್ಲಿಂ ಹುಡುಗರು ಪಂಚರ್ ಹಾಕುವ ಸ್ಥಿತಿ ಬರುತ್ತಿರಲಿಲ್ಲ!
ಹಾಗೆಯೇ ಇದೇ ನಿರಾಶ್ರಿತ ತಾಣದಲ್ಲಿ ಆಶ್ರಯ ಪಡೆದ ಮತ್ತೊಬ್ಬ ಮಹಿಳೆ ಪ್ರತಿಮಾ ಮೊಂಡಲ್(30) ಇದೇ ರೀತಿಯ ಘಟನೆಗಳ ಸರಣಿಯನ್ನು ಹೇಳಿದರು. ಗುಂಪೊಂದು ಗಲಭೆ ನಡೆಸುತ್ತಿದ್ದಂತೆ ಭಯದಿಂದ ನಡುಗುತ್ತಿದ್ದೆವು. ನಾವು ಟೆರೇಸ್‌ನಲ್ಲಿ ಅಡಗಿಕೊಂಡಿದ್ದಾಗ ಗುಂಪು ನಮ್ಮ ಮನೆಯನ್ನು ದೋಚಿತು. ಮರುದಿನ ಸಂಜೆ, ನಾವು ನದಿ ದಾಟಲು ದೋಣಿ ತೆಗೆದುಕೊಂಡೆವು. ನನಗೆ ಒಂದು ವರ್ಷದ ಮಗು ಇದೆ ಎಂದು ಅವರು ಹೇಳಿದ್ದಾರೆ. ಜೀವ ಉಳಿಸಿಕೊಳ್ಳಲು ಮನೆಬಿಟ್ಟು ಓಡಿ ಬಂದ ನಮಗೆ ಏನನ್ನೂ ತರಲು ಸಾಧ್ಯವಾಗಲಿಲ್ಲ. ಪೊಲೀಸರು ಮತ್ತು ಬಿಎಸ್‌ಎಫ್ ಅಂತಿಮವಾಗಿ ಹೋಗುತ್ತವೆ. ಆಗ ನಮ್ಮನ್ನು ಯಾರು ರಕ್ಷಿಸುತ್ತಾರೆ ಎಂದು ಇದೇ ಶಾಲೆಯಲ್ಲಿ ತನ್ನ 18 ವರ್ಷದ ಮಗನೊಂದಿಗೆ ಆಶ್ರಯ ಪಡೆದಿರುವ ಧುಲಿಯನ್‌ನ ಸಬ್ಜಿಪಟ್ಟಿ ನಿವಾಸಿ, ನಮಿತಾ ಮೊಂಡೊಲ್ (40) ಪ್ರಶ್ನಿಸಿದ್ದಾರೆ.
ಪ್ರಸ್ತುತ ಶಾಲೆಯಲ್ಲಿ ನಿರ್ಮಿತವಾಗಿರುವ ತರಗತಿ ಕೊಠಡಿಗಳ ಒಳಗೆ, ಹಾಸಿಗೆ ಹಾಕಲು ಸ್ಥಳಾವಕಾಶ ಕಲ್ಪಿಸಲು ಬೆಂಚುಗಳನ್ನು ತೆಗೆದುಹಾಕಲಾಗಿದೆ ಮತ್ತು ಸ್ಥಳೀಯ ಗ್ರಾಮಸ್ಥರು ಮತ್ತು ಆಡಳಿತವು ಬಟ್ಟೆ, ಆಹಾರ ಮತ್ತು ಔಷಧಿಗಳ ವ್ಯವಸ್ಥೆಗಳನ್ನು ಇಲ್ಲಿ ಆಶ್ರಯ ಪಡೆದಿರುವವರಿಗಾಗಿ ಮಾಡಿದೆ. ಪ್ರಸ್ತುತ ಈ ಶಾಲೆಗೆ ಸಶಸ್ತ್ರ ಪೊಲೀಸರು ಮತ್ತು ಕ್ಷಿಪ್ರ ಕಾರ್ಯ ಪಡೆಯ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.
ಸ್ಥಳೀಯರಾದ ರೇಬಾ ಬಿಸ್ವಾಸ್ (57) ಮತ್ತು ಆ ಪ್ರದೇಶದ ಇತರ ಒಂಬತ್ತು ಮಹಿಳೆಯರು ಇಲ್ಲಿ ಆಶ್ರಯಪಡೆದಿರುವವರಿಗಾಗಿ ಅಡುಗೆ ಮಾಡುತ್ತಿದ್ದಾರೆ. ನಾವು ಅವರನ್ನು ಶುಕ್ರವಾರ ರಾತ್ರಿ ನಮ್ಮ ಮನೆಗಳಲ್ಲಿ ಇಟ್ಟುಕೊಂಡು ನಂತರ ಇಲ್ಲಿಗೆ ಕರೆತಂದೆವು ಎಂದು ಅವರು ಹೇಳಿದ್ದಾರೆ. ಈ ಶಾಲೆಯ ಮಧ್ಯಾಹ್ನದ ಬಿಸಿಯೂಟದ ಅಡುಗೆ ಕೋಣೆ ತಾತ್ಕಾಲಿಕ ಅಡುಗೆಮನೆಯಾಗಿ ಮಾರ್ಪಟ್ಟಿದೆ ಮತ್ತು ವಿದ್ಯಾರ್ಥಿ ನಿಲಯವು ಜನರಿಗೆ ಊಟ ಮಾಡುವ ಸಭಾಂಗಣವಾಗಿದೆ.
ಶಾಲೆಯಲ್ಲಿ ನಿಯೋಜಿತರಾಗಿರುವ ಕುಂಭಿರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಪ್ರಸೇನ್‌ಜಿತ್ ಮೊಂಡೋಲ್, ಇಲ್ಲಿ ಒಬ್ಬ ಗರ್ಭಿಣಿ ಮಹಿಳೆ ಇದ್ದಾರೆ, ಹೆರಿಗೆಯಾಗಬೇಕಿದ್ದ ಮತ್ತೊಬ್ಬರನ್ನು ಬೆದ್ರಾಬಾದ್ ಗ್ರಾಮೀಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಾವು ಕುಟುಂಬಗಳು ಇಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದೇವೆ. ನಾವು ವಯಸ್ಕರಿಗೆ ಅನ್ನ, ಬೇಳೆ, ಆಲೂಗಡ್ಡೆ ಮತ್ತು ಮೊಟ್ಟೆಗಳನ್ನು, ಶಿಶುಗಳಿಗೆ ಶಿಶು ಆಹಾರವನ್ನು ಮತ್ತು ಮಕ್ಕಳಿಗೆ ಹಾಲನ್ನು ನೀಡುತ್ತಿದ್ದೇವೆ. ಆಡಳಿತವು ಟಾರ್ಪಾಲಿನ್ ಹಾಳೆಗಳು ಮತ್ತು ಸಾಕಷ್ಟು ಕುಡಿಯುವ ನೀರನ್ನು ಒದಗಿಸಿದೆ ಎಂದು ಕಲಿಯಚೌಕ್ 3 ಬ್ಲಾಕ್ ಅಭಿವೃದ್ಧಿ ಅಧಿಕಾರಿ ಸುಕಾಂತ ಸಿಕ್ದರ್ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಶಾಲೆಗೆ ಭೇಟಿ ನೀಡಿ ಅಲ್ಲಿ ಆಶ್ರಯ ಪಡೆದಿರುವವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ. ಹೊರಗಿನವರಿಗೆ ಪ್ರವೇಶವಿಲ್ಲ ಎಂದು ಪೊಲೀಸರು ಗೇಟ್‌ಗಳನ್ನು ಲಾಕ್ ಮಾಡಿದ್ದರಿಂದ ಅವರು ಬರುವ ಮೊದಲು ಸ್ವಲ್ಪ ಗದ್ದಲ ಉಂಟಾಯಿತು. ಆದಾಗ್ಯೂ, ಅಂತಿಮವಾಗಿ ಅವರನ್ನು ಒಳಗೆ ಬಿಡಲಾಯಿತು.
