ಪಶ್ಚಿಮ ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾಚಾರ ಭುಗಿಲೆದ್ದಿದೆ. ಟಿಎಂಸಿ ಸಂಸದರೊಬ್ಬರು ವಕ್ಫ್ ಆಸ್ತಿ ರಕ್ಷಣೆಗಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಜಾರ್ಖಂಡ್ ಸಚಿವರು ಷರಿಯಾ ಕಾನೂನು ಮೊದಲು ಎಂದಿದ್ದಾರೆ.

ಕೋಲ್ಕತಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುರ್ಷಿದಾಬಾದ್‌ನಲ್ಲಿ ನಡೆದ ಹಿಂಸಾಚಾರ ಮೂವರನ್ನು ಬಲಿಪಡೆದ ಬೆನ್ನಲ್ಲೇ, ನೆರೆಯ ದಕ್ಷಿಣ 24 ಪರಗಣ ಜಿಲ್ಲೆಯಲ್ಲೂ ಸೋಮವಾರ ಹಿಂಸಾಚಾರ ಭುಗಿಲೆದ್ದಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್‌ನಲ್ಲಿ ವಕ್ಫ್ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭದಲ್ಲಿ, ಭಾರತೀಯ ಜಾತ್ಯತೀತ ರಂಗ (ಐಎಸ್‌ಎಫ್) ಪಕ್ಷದ ಬೆಂಬಲಿಗರು ಭಾರೀ ಹಿಂಸಾಚಾರ ನಡೆಸಿದ್ದಾರೆ. ಈ ವೇಳೆ ಹಲವು ಪೊಲೀಸ್ ವಾಹನಗಳನ್ನು ಸುಟ್ಟುಹಾಕಿದ್ದು, ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 7 ಪೊಲೀಸರು ಗಾಯಗೊಂಡಿದ್ದಾರೆ.

ಆಗಿದ್ದೇನು?:
ಕೋಲ್ಕತಾದ ರಾಮಲೀಲಾ ಮೈದಾನದಲ್ಲಿ ವಕ್ಫ್ ವಿರೋಧಿ ರ್‍ಯಾಲಿ ಆಯೋಜನೆಗೊಂಡಿತ್ತು. ಭಾಂಗರ್ ಶಾಸಕ ನೌಶಾದ್ ಸಿದ್ದಿಕ್ರ್‍ ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದರು. ಭಾಂಗರ್, ಮಿನಾಖಾನ್ ಮತ್ತು ಸಂದೇಶಖಾಲಿಯಿಂದ ಬಂದ ಐಎಸ್‌ಎಫ್ ಬೆಂಬಲಿಗರ ದೊಡ್ಡ ಗುಂಪು ರ್‍ಯಾಲಿಗೆ ತೆರಳಲಿತ್ತು. ಆದರೆ ರ್‍ಯಾಲಿಗೆ ಪೊಲೀಸ್ ಅನುಮತಿ ಇಲ್ಲದ ಕಾರಣ ಅವರನ್ನು ಬಸಂತಿ ಹೆದ್ದಾರಿಯಲ್ಲಿ ಪೊಲೀಸರು ತಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಿಡಿಗೇಡಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ.

ಬಿಎಸ್‌ಎಫ್ ನಿಯೋಗ ಭೇಟಿ:
ಈ ನಡುವೆ ಮುರ್ಷಿದಾಬಾದ್ ಜಿಲ್ಲೆಯ ಹಿಂಸಾಚಾರಪೀಡಿತ ಪ್ರದೇಶಗಳಿಗೆ ಸೋಮವಾರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಗಳು ಭೇಟಿ ನೀಡಿದರು. ಹೆಚ್ಚುವರಿ ಮಹಾನಿರ್ದೇಶಕ ರವಿ ಗಾಂಧಿ ನೇತೃತ್ವದ ಬಿಎಸ್‌ಎಫ್ ನಿಯೋಗ, ಹೆಚ್ಚು ಗಲಭೆಪೀಡಿತ ಪ್ರದೇಶಗಳಾದ ಸುತಿ, ಸಮ್ಸರ್‌ಗಂಜ್ ಮತ್ತು ಧುಲಿಯನ್‌ಗಳಿಗೆ ಭೇಟಿ ನೀಡಿ, ಶಾಂತಿ ಪುನಸ್ಥಾಪನೆ ಮತ್ತು ನಾಗರಿಕರ ಸುರಕ್ಷತೆಯ ಭರವಸೆ ನೀಡಿತು.

ವಕ್ಫ್ ಆಸ್ತಿ ಮೇಲೆ ಕಣ್ಣಿಟ್ಟವರ ಕಣ್ಣು ಕೀಳಿ: ಟಿಎಂಸಿ ಸಂಸದ 
ಕೋಲ್ಕತಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಭಾರೀ ಹಿಂಸಾಚಾರ ನಡೆಯುತ್ತಿರುವ ಮಧ್ಯೆಯೇ ಟಿಎಂಸಿ ಸಂಸದರೊಬ್ಬರು ಪ್ರಚೋದನಕಾರಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಮಥುರಾಪುರ ಕ್ಷೇತ್ರದ ಟಿಎಂಸಿ ಸಂಸದ ಬಾಪಿ ಹಲಧರ್, ‘ವಕ್ಫ್ ಆಸ್ತಿ ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ. ಅದು ಒಂದು ಸಮುದಾಯಕ್ಕೆ ಸೇರಿದ ಆಸ್ತಿ. ನಿಮ್ಮ ತಂದೆ, ತಾತನ ಸಮಾಧಿಯನ್ನು ರಕ್ಷಿಸುವ ಹೊಣೆ ನಿಮ್ಮದು ಮಾತ್ರವಲ್ಲ; ನಮ್ಮದೂ ಹೌದು. ಯಾರಾದರೂ ವಕ್ಫ್ ಆಸ್ತಿಯ ಮೇಲೆ ಕಣ್ಣು ಹಾಕಿದರೆ ಅವರ ಕಣ್ಣುಗುಡ್ಡೆಗಳನ್ನು ಕೀಳಿ, ಕೈಕಾಲುಗಳನ್ನು ಮುರಿಯಿರಿ’ ಎಂದಿದ್ದಾರೆ.

ಈ ವಿಡಿಯೋವನ್ನು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಬಾಪಿ ಹಲಧರ್, ಕಣ್ಣುಗಳನ್ನು ಕಿತ್ತು, ಕೈಕಾಲುಗಳನ್ನು ಮುರಿಯುವುದಾಗಿ ಭೀಕರ ಬೆದರಿಕೆ ಹಾಕಿದ್ದಾರೆ. ಮುರ್ಷಿದಾಬಾದ್‌ನ ಅಸಹಾಯಕ, ಮುಗ್ಧ ಹಿಂದೂಗಳ ವಿರುದ್ಧ ಹಿಂಸಾಚಾರವನ್ನು ನೇರವಾಗಿ ಪ್ರಚೋದಿಸಿದ್ದಾರೆ. ಆದರೆ ದುರ್ಬಲ, ಹೇಡಿ ರಾಜ್ಯ ಪೊಲೀಸರು ಈ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಾಹ್ಯಾಕಾಶಕ್ಕೆ ನೆಗೆದ 6 ಮಹಿಳೆಯರ ತಂಡ: ಇತಿಹಾಸದಲ್ಲಿ ಇದೇ ಮೊದಲು!

ಮೊದಲು ಷರಿಯಾ ಕಾನೂನು, ಬಳಿಕ ಸಂವಿಧಾನ: ಜಾರ್ಖಂಡ್‌ ಸಚಿವ ವಿವಾದ
ರಾಂಚಿ: ‘ದೇಶದಲ್ಲಿ ಮುಸ್ಲಿಮರಿಗೆ ಮೊದಲು ಷರಿಯಾ ಕಾನೂನು ಮುಖ್ಯ. ಆ ಬಳಿಕ ಸಂವಿಧಾನ’ ಎಂದು ಜಾರ್ಖಂಡ್‌ ಸಚಿವ ಹಫೀಜುಲ್ ಅನ್ಸಾರಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಇದಕ್ಕೆ ಬಿಜೆಪಿ ಕಿಡಿ ಕಾರಿದೆ.ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ಷರಿಯತ್‌ ನನಗೆ ಅತಿ ದೊಡ್ಡದು. ನಾನು ಕುರಾನ್‌ನ್ನು ಹೃದಯದಲ್ಲಿಟ್ಟುಕೊಳ್ಳುತ್ತೇನೆ. ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತೇನೆ. ಮಸ್ಲಿಮರು ಕುರಾನ್‌ನಲ್ಲಿ ಹೃದಯಲ್ಲಿಟ್ಟುಕೊಂಡರೆ, ಸಂವಿಧಾನವನ್ನು ಕೈಯಲ್ಲಿಟ್ಟುಕೊಳ್ಳುತ್ತಾರೆ. ಮೊದಲು ನನಗೆ ಷರಿಯಾ ಕಾನೂನು ಮುಖ್ಯ. ಆ ಬಳಿಕ ಸಂವಿಧಾನ’ ಎಂದಿದ್ದಾರೆ.

ಜಾರ್ಖಂಡ್ ಸಚಿವರ ಹೇಳಿಕೆಗೆ ಬಿಜೆಪಿ ಕಿಡಿ ಕಾರಿದ್ದು, ‘ಷರಿಯಾ ಕಾನೂನು ಹೃದಯದಲ್ಲಿಟ್ಟು ಕೊಂಡಿರುವವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಬಾಗಿಲು ತೆರೆದಿದೆ. ಭಾರತವು ಬಾಬಾ ಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಂವಿಧಾನದಡಿಯಲ್ಲಿ ಮಾತ್ರ ನಡೆಯುತ್ತದೆ’ ಎಂದಿದೆ.

ಇದನ್ನೂ ಓದಿ: ₹1800 ಕೋಟಿ ಮೌಲ್ಯದ 300 ಕೆಜಿ ಡ್ರಗ್ಸ್ ವಶ - ಉಗ್ರ ನಿಗ್ರಹ ದಳ, ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ