ಕನ್ನಡಿಗರು ಸೇರಿದಂತೆ ರಾಜ್ಯದಲ್ಲಿರುವ ಭಾಷಾ ಅಲ್ಪಸಂಖ್ಯಾತರ ಮೇಲೆ ಮಲಯಾಳಂ ಭಾಷೆ ಹೇರಿಕೆ ಮಾಡುವುದಿಲ್ಲ. ಪ್ರತಿಯೊಬ್ಬ ಪ್ರಜೆಯ ಭಾಷಾ ಸ್ವಾತಂತ್ರ್ಯ ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

ತಿರುವನಂತಪುರ: ಕನ್ನಡಿಗರು ಸೇರಿದಂತೆ ರಾಜ್ಯದಲ್ಲಿರುವ ಭಾಷಾ ಅಲ್ಪಸಂಖ್ಯಾತರ ಮೇಲೆ ಮಲಯಾಳಂ ಭಾಷೆ ಹೇರಿಕೆ ಮಾಡುವುದಿಲ್ಲ. ಪ್ರತಿಯೊಬ್ಬ ಪ್ರಜೆಯ ಭಾಷಾ ಸ್ವಾತಂತ್ರ್ಯ ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮಲಯಾಳಂ ಭಾಷಾ ವಿಧೇಯಕ-2025 ವಿಷಯದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ಸತ್ಯಕ್ಕೆ ದೂರವಾದುದು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಕೇರಳದ ಕಾನೂನು ಸಚಿವ ಪಿ.ರಾಜೀವ್ ಮಾತನಾಡಿ, ಹಳೆಯ ಮಸೂದೆ ತಲೆಯಲ್ಲಿಟ್ಟುಕೊಂಡು ಕರ್ನಾಟಕ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಐಚ್ಛಿಕ. ಬಹುಶಃ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿದ್ದಕ್ಕೆ ಅವರು ಇಂಥ ಹೇಳಿಕೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸಿಎಂ ಪತ್ರ:

ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ ಮಾಡಲು ಅವಕಾಶ ಮಾಡಿಕೊಡುವ ಮಲಯಾಳಂ ಭಾಷಾ ವಿಧೇಯಕ-2025 ವಿರೋಧಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪಿಣರಾಯಿ ವಿಜಯನ್‌ ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ವೇಳೆ ಈ ‍ವಿಧೇಯಕವನ್ನು ಅಂಗೀಕರಿಸಿದರೆ ಭಾಷಾ ಅಲ್ಪಸಂಖ್ಯಾತರು ಹಾಗೂ ಒಕ್ಕೂಟ ವ್ಯವಸ್ಥೆಯ ರಕ್ಷಣೆಗೆ ಕರ್ನಾಟಕವು ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಬಳಸಿಕೊಂಡು ವಿರೋಧ ವ್ಯಕ್ತಪಡಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಜತೆಗೆ, ಈ ವಿಧೇಯಕ ಭಾಷಾ ಸ್ವಾತಂತ್ರ್ಯ ಮತ್ತು ಗಡಿನಾಡು ಕಾಸರಗೋಡಿನ ಕನ್ನಡಿಗರ ಮೇಲೆ ನಡೆಸಿದ ಪ್ರಹಾರ ಎಂದೂ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪಿಣರಾಯಿ ವಿಜಯನ್‌ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಪಿಣರಾಯಿ ಹೇಳಿದ್ದೇನು?:

ಬಹುತ್ವ ಮತ್ತು ಜಾತ್ಯತೀತತೆಯ ಸಾಂವಿಧಾನಿಕ ಮೌಲ್ಯ ಎತ್ತಿಹಿಡಿಯಲು ಕೇರಳ ಸರ್ಕಾರ ಬದ್ಧವಾಗಿದೆ. ಭಾಷಾ ಅಲ್ಪಸಂಖ್ಯಾತರು ಅದರಲ್ಲೂ ಮುಖ್ಯವಾಗಿ ಕನ್ನಡ ಮತ್ತು ತಮಿಳು ಭಾಷಿಕರ ಹಕ್ಕುಗಳನ್ನು ರಕ್ಷಿಸಲು ಈ ವಿಧೇಯಕ ವಿಶೇಷ ಪ್ರಾಧಾನ್ಯತೆ ಹೊಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಯಾವುದೇ ಭಾಷೆ ಹೇರಿಕೆಯನ್ನು ತಡೆಯುವ ಮತ್ತು ಭಾಷಾ ಸ್ವಾತಂತ್ರ್ಯ ಸಂಪೂರ್ಣವಾಗಿ ರಕ್ಷಣೆಯಾಗುವಂಥ ನಿಬಂಧನೆಗಳು ವಿಧೇಯಕದಲ್ಲಿವೆ. ಗಡಿನಾಡಲ್ಲಿ ಕನ್ನಡ ಮತ್ತು ತಮಿಳು ಭಾಷಿಕರು ತಮ್ಮ ಮಾತೃಭಾಷೆಯನ್ನು ಅಧಿಕೃತ ಸರ್ಕಾರಿ ಇಲಾಖೆಗಳು, ಇಲಾಖೆ ಮುಖ್ಯಸ್ಥರು ಮತ್ತು ಸ್ಥಳೀಯ ಕಚೇರಿಗಳ ಜತೆಗಿನ ವ್ಯವಹಾರಕ್ಕೆ ಬಳಸಬಹುದಾಗಿದೆ. ಅದೇ ಭಾಷೆಯಲ್ಲೇ ಅವರಿಗೆ ಉತ್ತರ ನೀಡಲಾಗುವುದು ಎಂದು ಅದರಲ್ಲಿ ವಿವರಿಸಿದ್ದಾರೆ.

ಇನ್ನು ಯಾವ ವಿದ್ಯಾರ್ಥಿಗಳ ಮಾತೃ ಭಾಷೆ ಮಲಯಾಳಂ ಅಲ್ಲವೋ ಆ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮಕ್ಕೆ ಅನುಗುಣವಾಗಿ ಶಾಲೆಯಲ್ಲಿ ಲಭ್ಯವಿರುವ ಭಾಷೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೊರ ರಾಜ್ಯಗಳು ಅಥವಾ ವಿದೇಶಿ ವಿದ್ಯಾರ್ಥಿಗಳು 9, 10ನೇ ತರಗತಿ ಅಥವಾ ಹೈಯರ್‌ ಸೆಕೆಂಡರಿ ಹಂತದಲ್ಲಿ ಮಲಯಾಳಂ ಪರೀಕ್ಷೆ ಎದುರಿಸುವುದು ಕಡ್ಡಾಯವಲ್ಲ.

ಕೇರಳದ ಭಾಷಾ ನೀತಿ 1963ರ ಅಧಿಕೃತ ಭಾಷೆಗಳ ಕಾಯ್ದೆಗೆ ಅನುಗುಣವಾಗಿದೆ ಮತ್ತು ಸಂವಿಧಾನದ 346 ಮತ್ತು 347ನೇ ಪರಿಚ್ಛೇದಕ್ಕೆ ಬದ್ಧವಾಗಿದೆ ಎಂದು ಹೇಳಿರುವ ಪಿಣರಾಯಿ, ಭಾರತದ ವೈವಿಧ್ಯತೆಯನ್ನು ಸಂಭ್ರಮಿಸಬೇಕೇ ಹೊರತು ನಿರ್ದಿಷ್ಟ ಭಾಷೆಯನ್ನೇ ಮಾತನಾಡಬೇಕೆಂದು ಒತ್ತಾಯದ ಹೇರಿಕೆ ಸರಿಯಲ್ಲ. ಕೇರಳ ಮಾದರಿಯು ಎಲ್ಲರ ಭಾಗೀದಾರಿಕೆ ಮತ್ತು ಪಾರದರ್ಶಕತೆ ಮೇಲೆ ನಿಂತಿದೆ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ನಮ್ಮ ಸರ್ಕಾರ ವಿರೋಧಿಸುವ ಜತೆ ಜತೆಗೆ ಪ್ರತಿಯೊಬ್ಬ ಪ್ರಜೆಯ ಭಾಷಾ ಸ್ವಾತಂತ್ರ್ಯ ರಕ್ಷಿಸಲೂ ಬದ್ಧವಾಗಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.

ರಾಜೀವ್‌ ಸ್ಪಷ್ಟನೆ:

ಇದೇ ವೇಳೆ ಕಾನೂನು ಸಚಿವ ರಾಜೀವ್ ಮಾತನಾಡಿ, ಕರ್ನಾಟಕದ ಮುಖ್ಯಮಂತ್ರಿ ಅಭಿಪ್ರಾಯ, ಈ ಹಿಂದೆ ರಾಷ್ಟ್ರಪತಿಗಳಿಂದ ತಿರಸ್ಕೃತವಾದ ಮಸೂದೆ ಆಧರಿಸಿ ಇರಬಹುದು. ಈ ಮಸೂದೆಗೆ ವ್ಯಕ್ತವಾದ ವಿರೋಧ ಪರಿಗಣಿಸಿ ಹೊಸ ಮಸೂದೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಅದರನ್ವಯ, ‘ಭಾಷಾ ಅಲ್ಪಸಂಖ್ಯಾತರು ತಮ್ಮ ಮಾತೃ ಭಾಷೆಯಲ್ಲೇ ಕಲಿಯಬಹುದು ಮತ್ತು ಸಂವಹನ ನಡೆಸಬಹುದು. ಭಾಷಾ ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶದಲ್ಲಿ ಅವರು ಮಲಯಾಳಂ ಕಲಿಯುವುದು ಐಚ್ಛಿಕ. ಮೊದಲಿನ ಮಸೂದೆಯಲ್ಲಿ ಈ ಅಂಶವಿರಲಿಲ್ಲ. ಹೀಗಾಗಿ ಈ ಬಗ್ಗೆ ಕರ್ನಾಟಕ ಸಿಎಂ ಅಭಿಪ್ರಾಯ ತಪ್ಪಿದೆ. ಬಹುಶಃ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ಅನ್ವಯ ಅವರ ಈ ಕ್ರಮ ಕೈಗೊಂಡಿರಬಹುದು ಎಂದು ಹೇಳಿದ್ದಾರೆ.

ಕನ್ನಡಿಗರ ಹಕ್ಕು ರಕ್ಷಣೆಯಾವ ವಿದ್ಯಾರ್ಥಿಗಳ ಮಾತೃ ಭಾಷೆ ಮಲಯಾಳಂ ಅಲ್ಲವೋ ಆ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮಕ್ಕೆ ಅನುಗುಣವಾಗಿ ಶಾಲೆಯಲ್ಲಿ ಲಭ್ಯವಿರುವ ಭಾಷೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕನ್ನಡಿಗರ ಭಾಷಾ ಹಕ್ಕು ರಕ್ಷಿಸುವ ಸಲುವಾಗಿ ಮಸೂದೆ ತಂದಿದ್ದೇವೆ.

- ಪಿಣರಾಯಿ ವಿಜಯನ್‌, ಕೇರಳ ಸಿಎಂ

ಮಲಯಾಳಂ ಐಚ್ಛಿಕಕರ್ನಾಟಕ ಸಿಎಂ ಅವರು ಮಸೂದೆ ಅಧ್ಯಯನ ಮಾಡದೆ, ಕೇರಳ ಸರ್ಕಾರದ ಜತೆ ಚರ್ಚಿಸದೆ ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಕರ್ನಾಟಕ ಸಿಎಂ ಹೇಳುತ್ತಿರುವುದು ತಿರಸ್ಕೃತ ಮಸೂದೆ ಬಗ್ಗೆ ಇರಬಹುದು. ಹೊಸ ಮಸೂದೆಯಲ್ಲಿ ಮಲಯಾಳಂ ಐಚ್ಛಿಕ.

ಪಿ. ರಾಜೀವ್‌, ಕಾನೂನು ಸಚಿವ

ಕಾಯ್ದೆ ಆದರೆ ಹೋರಾಟ

ಕೇರಳದ ಭಾಷಾ ಮಸೂದೆ ಮೂಲಕ ಕನ್ನಡಿಗರ ಮೇಲೆ ಬಲವಂತವಾಗಿ ಮಲಾಳಂ ಹೇರಿಕೆ ಮಾಡಲಾಗುತ್ತಿದೆ. ರಾಜ್ಯಪಾಲರು ಸಹಿ ಹಾಕಿ, ಅದು ಕಾನೂನು ಆದರೆ ನಾವು ಹೋರಾಟ ಮಾಡಬೇಕಾದ ಸ್ಥಿತಿ ಬರಲಿದೆ. ಈ ಕುರಿತು ಕೇಂದ್ರ ಸರ್ಕಾರ, ರಾಷ್ಟ್ರಪತಿಗಳಿಗೂ ಮನವಿ ಮಾಡಲಾಗುವುದು.

- ಸಿದ್ದರಾಮಯ್ಯ, ಮುಖ್ಯಮಂತ್ರಿ