ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದ ಮನೆ ತೆರವು ಕಾರ್ಯಾಚರಣೆ ರಾಜಕೀಯ ತಿರುವು ಪಡೆದಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಸಂತ್ರಸ್ತರನ್ನು ಭೇಟಿ ಮಾಡಿ, ಕಾನೂನುಬದ್ಧ ದಾಖಲೆಗಳಿದ್ದರೂ ಮನೆ ಕೆಡವಿರುವುದನ್ನು 'ಬುಲ್ಡೋಜರ್ ಭಾಗ್ಯ' ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಜ.10): ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದ ಮನೆಗಳ ತೆರವು ಕಾರ್ಯಾಚರಣೆ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಎಸ್‌ಡಿಪಿಐ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಭೇಟಿ ನೀಡಿ, ಸಂತ್ರಸ್ತರ ಅಳಲು ಆಲಿಸುವುದರ ಜೊತೆಗೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸ್ಥಳಕ್ಕೆ ಭೇಟಿ, ಸಂತ್ರಸ್ತರ ದಾಖಲೆ ಪರಿಶೀಲನೆ
ಥಣಿಸಂದ್ರದಲ್ಲಿ ಬಿಡಿಎ (BDA) ನಡೆಸಿದ ಬುಲ್ಡೋಜರ್ ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡ ಕುಟುಂಬಗಳನ್ನು ಅಬ್ದುಲ್ ಮಜೀದ್ ಭೇಟಿ ಮಾಡಿದರು. ಸಂತ್ರಸ್ತರ ಬಳಿಯಿದ್ದ ಇ-ಖಾತಾ, ಇ-ಸ್ವತ್ತು ಸೇರಿದಂತೆ ಪ್ರಮುಖ ದಾಖಲೆಗಳನ್ನು ಸ್ವತಃ ಪರಿಶೀಲಿಸಿದ ಅವರು, 'ನಿವಾಸಿಗಳ ಬಳಿ ಕಾನೂನುಬದ್ಧ ದಾಖಲೆಗಳಿದ್ದರೂ ಅಮಾನವೀಯವಾಗಿ ಮನೆಗಳನ್ನು ಕೆಡವಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಸರ್ಕಾರದ '6ನೇ ಬುಲ್ಡೋಜರ್ ಭಾಗ್ಯ': ಮಜೀದ್ ಟೀಕೆ
ಘಟನೆ ಕುರಿತು ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅಬ್ದುಲ್ ಮಜೀದ್, ರಾಜ್ಯ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದರು. 'ಸಿದ್ದರಾಮಯ್ಯ ಅವರು ಐದು ಗ್ಯಾರಂಟಿಗಳನ್ನು ನೀಡಿದ್ದರು, ಈಗ 6ನೇ ಭಾಗ್ಯವಾಗಿ 'ಬುಲ್ಡೋಜರ್ ಭಾಗ್ಯ'ವನ್ನು ಜನರಿಗೆ ನೀಡುತ್ತಿದ್ದಾರೆ. ಯಾವುದೇ ಮುನ್ಸೂಚನೆ ಅಥವಾ ಕಾನೂನು ಪ್ರಕ್ರಿಯೆ ಪಾಲಿಸದೆ ಬಡವರ ಮನೆಗಳ ಮೇಲೆ ಜೆಸಿಬಿ ನುಗ್ಗಿಸುತ್ತಿರುವುದು ಸರ್ಕಾರದ ಅಹಂಕಾರಕ್ಕೆ ಸಾಕ್ಷಿ ಎಂದು ಗುಡುಗಿದರು.

ಬಿಡಿಎ ಸ್ವತ್ತು ಎಂದರೆ ಬೇಲಿ ಹಾಕಬೇಕಿತ್ತು?
ತೆರವು ಕಾರ್ಯಾಚರಣೆಯ ವೈಫಲ್ಯವನ್ನು ಎತ್ತಿ ತೋರಿಸಿದ ಅವರು, ಇದು ಬಿಡಿಎ ಸ್ವತ್ತು ಎನ್ನುವುದಾದರೆ ಬಿಬಿಎಂಪಿಯವರು ಇಲ್ಲಿ ರಸ್ತೆ ನಿರ್ಮಿಸಿ, ವಿದ್ಯುತ್ ಸಂಪರ್ಕ ನೀಡಿದ್ದು ಹೇಗೆ? ಬಿಡಿಎಗೆ ತನ್ನ ಆಸ್ತಿಗೆ ಬೇಲಿ ಹಾಕಿಕೊಳ್ಳಬೇಕಿತ್ತು. ತನ್ನ ಆಸ್ತಿ ರಕ್ಷಿಸಿಕೊಳ್ಳುವ ಜವಾಬ್ದಾರಿ ಇರಲಿಲ್ಲವೇ? ಇಷ್ಟು ವರ್ಷಗಳ ಕಾಲ ಸುಮ್ಮನಿದ್ದು, ಈಗ ಇದ್ದಕ್ಕಿದ್ದಂತೆ ಬಡವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಸರಿಯಲ್ಲ. ಸರ್ಕಾರ ಸುಪ್ರೀಂ ಕೋರ್ಟ್ ನಿಯಮಗಳನ್ನು ಗಾಳಿಗೆ ತೂರಿದೆ' ಎಂದು ದೂರಿದರು.

ದೊಡ್ಡವರಿಗೆ ಒಂದು ನ್ಯಾಯ, ಬಡವರಿಗೊಂದು ನ್ಯಾಯವೇ?
ರಾಜ್ಯ ಸರ್ಕಾರದ ತಾರತಮ್ಯ ನೀತಿಯನ್ನು ಪ್ರಶ್ನಿಸಿದ ಮಜೀದ್, ನಗರದಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳು ಮತ್ತು ಶ್ರೀಮಂತರು ಅಕ್ರಮವಾಗಿ ಆಸ್ತಿ ಮಾಡಿದ್ದಾರೆ. ಅವರ ಮನೆಗಳ ಬಳಿ ಏಕೆ ನಿಮ್ಮ ಬುಲ್ಡೋಜರ್ ಹೋಗುತ್ತಿಲ್ಲ? ಅವರ ಮನೆಗಳನ್ನೇಕೆ ಕೆಡುವಲ್ಲ? ಸಿದ್ದರಾಮಯ್ಯ ಸರ್ಕಾರಕ್ಕೆ ಕೇವಲ ಮುಸ್ಲಿಮರು ಮತ್ತು ದಲಿತರು ವಾಸಿಸುವ ಪ್ರದೇಶಗಳೇ ಆಗಬೇಕಾ? ಕೋಗಿಲು ಗ್ರಾಮದ ಗಾಯ ಆರುವ ಮುನ್ನವೇ ಥಣಿಸಂದ್ರದಲ್ಲಿ ಬುಲ್ಡೋಜರ್ ರಾಜಕೀಯ ಶುರು ಮಾಡಿರುವುದು ಅಮಾನವೀಯ' ಎಂದು ಕಿಡಿಕಾರಿದರು.


