ಪಂಜಾಬ್ ರಾಜ್ಯವು ತಾನು ಹರಿಸಿದ ನೀರಿಗಾಗಿ ರಾಜಸ್ಥಾನದಿಂದ 1.44 ಲಕ್ಷ ಕೋಟಿ ರೂ. ರಾಯಲ್ಟಿ ಕೇಳಿರುವುದು ಹೊಸ ಜಲವಿವಾದಕ್ಕೆ ಕಾರಣವಾಗಿದೆ. ಇದೇ ರೀತಿ ಕಾವೇರಿ ನೀರು ಹರಿಸಿದ್ದಕ್ಕಾಗಿ ಕರ್ನಾಟಕವು ತಮಿಳುನಾಡಿಗೆ ಬಿಲ್ ಕೇಳಲು ಕಾನೂನಿನಲ್ಲಿ ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಹಂಚಿಕೆ ಕಡ್ಡಾಯವಾಗಿದೆ.
ಜೈಪುರ: ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳ ನಡುವಿನ ಜಲವಿವಾದ ತಾರಕಕ್ಕೇರಿದ್ದು, ವರ್ಷಗಳ ಕಾಲ ನೀರು ಹರಿಸಿದ್ದಕ್ಕಾಗಿ ರಾಜಸ್ಥಾನ ತನಗೆ 1.44 ಲಕ್ಷ ಕೋಟಿ ರು. ಹಣ ಪಾವತಿಬೇಕು ಎಂದು ಪಂಜಾಬ್ ಪಟ್ಟು ಹಿಡಿದಿದೆ. ಇದಕ್ಕೆ ರಾಜಸ್ಥಾನ ನಿರಾಕರಿಸಿದ ಬೆನ್ನಲ್ಲೇ, ನ್ಯಾಯಕ್ಕಾಗಿ ಕೋರ್ಟ್ ಮತ್ತು ಬೀದಿಗಳಲ್ಲಿ ಹೋರಾಡುತ್ತೇವೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಿಸಿದ್ದಾರೆ.
ತನ್ನ ಸಟ್ಲೆಜ್, ರವಿ, ಬಿಯಾಸ್ ನದಿಗಳಿಂದ ಹರಿಸಿದ ನೀರಿಗೆ ರಾಜಸ್ಥಾನ ರಾಯಲ್ಟಿ ಪಾವತಿಸಬೇಕು ಎಂದು ಆಗ್ರಹಿಸುವ ನಿರ್ಣಯವೊಂದನ್ನು ಪಂಜಾಬ್ ವಿಧಾನಸಭೆ ಇತ್ತೀಚೆಗೆ ಅಂಗೀಕರಿಸಿದೆ. ಈ ಬೆನ್ನಲ್ಲೇ, ನೆರೆಯ ರಾಜ್ಯ 1.44 ಲಕ್ಷ ಕೋಟಿ ರು.ಗಳನ್ನು ಪಾವತಿಸಬೇಕು ಹಾಗೂ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಮಾನ್ ಆಗ್ರಹಿಸಿದ್ದಾರೆ. ಆದರೆ ರಾಜಸ್ಥಾನದ ಜಲಸಂಪನ್ಮೂಲ ಸಚಿವ ಈ ಬೇಡಿಕೆಯನ್ನು ತಿರಸ್ಕರಿಸಿದ್ದು, ನೀರಿನ ಹಂಚಿಕೆ ಐತಿಹಾಸಿಕ ಒಪ್ಪಂದದ ಮೂಲಕವೇ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕವು ತಮಿಳುನಾಡಿಗೆ ಈ ಬೇಡಿಕೆ ಇಡಲು ಸಾಧ್ಯವೇ?
ಕಾವೇರಿ ಅಥವಾ ಇತರ ಯಾವುದೇ ಅಂತರರಾಜ್ಯ ನದಿ ನೀರನ್ನು ತಮಿಳುನಾಡಿಗೆ ಹರಿಸಿದ್ದಕ್ಕೆ ಕರ್ನಾಟಕ ಸರ್ಕಾರ ಹಣ ಅಥವಾ ಬಿಲ್ ಕೇಳಲು ಸಾಧ್ಯವಿಲ್ಲ. ಕಾನೂನುಬದ್ಧವಾಗಿ ಇದಕ್ಕೆ ಅವಕಾಶವಿಲ್ಲ. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ವಿವಾದ ನ್ಯಾಯಾಧಿಕರಣವು ಸ್ಪಷ್ಟ ತೀರ್ಪು ನೀಡಿದೆ. ಅದರಂತೆ, ಸಾಮಾನ್ಯ ವರ್ಷಗಳಲ್ಲಿ ಕರ್ನಾಟಕವು ತಮಿಳುನಾಡಿಗೆ ಇಂತಿಷ್ಟೇ ಪ್ರಮಾಣದ ನೀರನ್ನು ಹರಿಸುವುದು ಕಾನೂನುಬದ್ಧ ಬಾಧ್ಯತೆಯಾಗಿದೆ. ಇದು ಹಂಚಿಕೆಯಾದ ನೀರೇ ಹೊರತು ಕರ್ನಾಟಕ ಮಾರಾಟ ಮಾಡುತ್ತಿರುವ ನೀರಲ್ಲ.
ಕರ್ನಾಟಕ ತಮಿಳುನಾಡಿಗೆ ನೀರಿನ ದರ ಕೇಳಲು ಬರುವುದಿಲ್ಲ. ಆದರೆ, ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಒಂದು ವಿನಾಯಿತಿ ಇದೆ. ಒಂದುವೇಳೆ ತಮಿಳುನಾಡು ಗಡಿಯ ಬಳಿ ಇರುವ ಇತರ ಯೋಜನೆಗಳಲ್ಲಿ ನೀರು ಹರಿಸುವಾಗ ಉತ್ಪಾದನೆಯಾಗುವ ವಿದ್ಯುತ್ ಅಥವಾ ಅಣೆಕಟ್ಟುಗಳ ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದಂತೆ ರಾಜ್ಯಗಳ ನಡುವೆ ಒಪ್ಪಂದಗಳಿದ್ದರೆ ಆ ನಿರ್ದಿಷ್ಟ ವೆಚ್ಚವನ್ನು ಮಾತ್ರ ಕೋರಬಹುದು. ಆದರೆ ನೀರಿನ ಮೂಲ ಬೆಲೆಯನ್ನು ಕೇಳಲು ಆಗುವುದಿಲ್ಲ. ಸಾಮಾನ್ಯ ನೀರಿನ ವರ್ಷದಲ್ಲಿ (ಜೂನ್ನಿಂದ ಮೇ ವರೆಗೆ) ಕರ್ನಾಟಕವು ತಮಿಳುನಾಡಿಗೆ ಒಟ್ಟು 177.25 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಈ ವರ್ಷ ದೇಶದಾದದ್ಯಂತ ಮಳೆ ಕೊರತೆಯಿಂದ ನೀರಿನ ಅಭಾವ ಬಹುವಾಗಿ ಕಾಡಲಿದೆ. ಭವಿಷ್ಯದಲ್ಲಿ ಏನೇನು ಸಮಸ್ಯೆಗಳಾಗಬಹುದೋ ಅವನ್ನು ನಿರ್ವಹಿಸಲು ಸಿದ್ದರಾಗಿರಬೇಕಿದೆ.






