ಭಾರತಕ್ಕೆ ಬರುವ ಮುನ್ನ ಸಾಕಷ್ಟು ಎಚ್ಚರಿಕೆ ನೀಡಲಾಗಿತ್ತು. ಕಿರುಕುಳ, ದರೋಡೆ, ಅಪರಿಚಿತರ ನೋಟ… ಹೀಗೆ ಹಲವು ಭಯ ಹುಟ್ಟಿಸುವ ಮಾತುಗಳನ್ನು ಕೇಳಿದ್ದೆ. ಆದರೆ ಭಾರತದಲ್ಲಿ ಏಕಾಂಗಿಯಾಗಿ ಪ್ರಯಾಣ ಆರಂಭಿಸಿದ ಬಳಿಕ ನನಗೆ ಎದುರಾದ ಅನುಭವವೇ ಬೇರೆ ಎಂದಿದ್ದಾರೆ ಪೋರ್ಚುಗೀಸ್ ಯುವತಿ.
ಭಾರತಕ್ಕೆ ಬರುವ ಮುನ್ನ ಸಾಕಷ್ಟು ಎಚ್ಚರಿಕೆ ನೀಡಲಾಗಿತ್ತು. ಕಿರುಕುಳ, ದರೋಡೆ, ಅಪರಿಚಿತರ ನೋಟ… ಹೀಗೆ ಹಲವು ಭಯ ಹುಟ್ಟಿಸುವ ಮಾತುಗಳನ್ನು ಕೇಳಿದ್ದೆ. ಆದರೆ ಭಾರತದಲ್ಲಿ ಏಕಾಂಗಿಯಾಗಿ ಪ್ರಯಾಣ ಆರಂಭಿಸಿದ ಬಳಿಕ ನನಗೆ ಎದುರಾದ ಅನುಭವವೇ ಬೇರೆ. ಇಲ್ಲಿನ ಜನರು ನನ್ನ ಭಾರತದ ಕುರಿತ ದೃಷ್ಟಿಕೋನವನ್ನೇ ಬದಲಿಸಿದ್ದಾರೆ ಎಂದು ಪೋರ್ಚುಗಲ್‌ನ 24 ವರ್ಷದ ಪ್ರವಾಸಿಗೆಯೊಬ್ಬರು ಹೇಳಿದ್ದಾರೆ.
ಪೋರ್ಚುಗಲ್ ಮೂಲದ ಅನಾ ಸದ್ಯ ಭಾರತದಲ್ಲಿ ಏಕಾಂಗಿಯಾಗಿ ಹಿಚ್‌ಹೈಕಿಂಗ್ (ಅಪರಿಚಿತರ ವಾಹನದಲ್ಲಿ ಪ್ರಯಾಣಿಸುವುದು) ಮಾಡುತ್ತಿದ್ದಾರೆ. ಇದು ಅವರ ದೀರ್ಘಾವಧಿಯ ಪ್ರವಾಸದ ಒಂದು ಭಾಗವಾಗಿದ್ದು, ಭಾರತ ಪ್ರವಾಸದ ಅನುಭವಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತಕ್ಕೆ ಬರುವ ಮುನ್ನ ಸುರಕ್ಷತೆಯ ಬಗ್ಗೆ ಸಾಕಷ್ಟು ಆತಂಕ ಹೊಂದಿದ್ದ ಅವರು, ಇಲ್ಲಿನ ಜನರೊಂದಿಗೆ ಬೆರೆತ ಬಳಿಕ ತಮ್ಮ ಅಭಿಪ್ರಾಯ ಬದಲಾಗಿದೆ ಎಂದು ಹೇಳಿದ್ದಾರೆ.
ಭಾರತಕ್ಕೆ ಬರುವ ಮುನ್ನ ಭಯವಿತ್ತು
ಭಾರತಕ್ಕೆ ಕಾಲಿಡುವ ಮುನ್ನ ಹಲವರು ತಮಗೆ ಎಚ್ಚರಿಕೆ ನೀಡಿದ್ದರು ಎಂದು ಅನಾ ಹೇಳಿದ್ದಾರೆ. “ಭಾರತಕ್ಕೆ ಬರುವ ಮುನ್ನ ಎಲ್ಲರೂ ಕಿರುಕುಳ, ದರೋಡೆ ಮತ್ತು ಅಪರಿಚಿತರ ನೋಟದ ಬಗ್ಗೆ ಎಚ್ಚರಿಸಿದ್ದರು. ಹೀಗಾಗಿ ಭಾರತಕ್ಕೆ ಬರಲು ನನಗೆ ನಿಜವಾಗಿಯೂ ಸ್ವಲ್ಪ ಭಯವಾಗಿತ್ತು. ದೇಶಕ್ಕೆ ಬಂದ ಮೊದಲ ಒಂದು ತಿಂಗಳು ಹಿಚ್‌ಹೈಕಿಂಗ್ ಮಾಡುವುದನ್ನೇ ಸಂಪೂರ್ಣವಾಗಿ ತಪ್ಪಿಸಿದ್ದೆ” ಎಂದು ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಆದರೆ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಾ ಹೋದಂತೆ ಅವರ ಅನುಭವ ಬದಲಾಗಿದೆ. ದಾರಿಯಲ್ಲಿ ಭೇಟಿಯಾದ ಅಪರಿಚಿತರು ತೋರಿದ ಸ್ನೇಹ, ಸಹಾಯ ಮತ್ತು ಆತ್ಮೀಯತೆ ತಮ್ಮಲ್ಲಿದ್ದ ಹಲವು ಭಯಗಳನ್ನು ದೂರ ಮಾಡಿತು ಎಂದು ಅನಾ ಹೇಳಿದ್ದಾರೆ.
‘ಭಾರತದ ಜನರು ನನ್ನ ದೃಷ್ಟಿಕೋನವನ್ನೇ ಬದಲಿಸಿದರು’
“ಸಮಯ ಕಳೆದಂತೆ ವಾಸ್ತವ ಸಂಪೂರ್ಣ ವಿಭಿನ್ನವಾಗಿದೆ ಎಂದು ತಿಳಿಯಿತು. ನಾನು ಹೋದ ಪ್ರತಿಯೊಂದು ಸ್ಥಳದಲ್ಲೂ ಅತ್ಯಂತ ದಯಾಳು, ತಮಾಷೆಯ ಮತ್ತು ಸಹಾಯ ಮಾಡುವ ಜನರನ್ನು ಭೇಟಿಯಾಗುತ್ತಿದ್ದೆ. ಬೀದಿಯಲ್ಲಿ ಅಪರಿಚಿತರೇ ಎರಡು ಗಂಟೆಗಳ ಕಾಲ ಸಮಯ ನೀಡಿ ನನ್ನ ಫೋನ್ ಸಮಸ್ಯೆ ಬಗೆಹರಿಸಲು ಸಹಾಯ ಮಾಡಿದ್ದು, ಜೀವನಪೂರ್ತಿ ಉಳಿಯುವ ಸ್ನೇಹ ಬೆಳೆದಿದ್ದು… ನಾನು ಭೇಟಿಯಾದ ಪುರುಷರು ಭಾರತದ ಬಗ್ಗೆ ನನ್ನ ದೃಷ್ಟಿಕೋನವನ್ನೇ ಬದಲಿಸಿದರು” ಎಂದು ಅನಾ ಹೇಳಿದ್ದಾರೆ.
ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಭಾರತ ಪ್ರವಾಸದ ಹಲವು ವಿಡಿಯೋ ತುಣುಕುಗಳಿವೆ. ಅಲ್ಲಿ ತಾವು ಭೇಟಿಯಾದ ಕೆಲವರೊಂದಿಗೆ ನೃತ್ಯ ಮಾಡುತ್ತಿರುವುದು, ದೈನಂದಿನ ಕೆಲಸಗಳಲ್ಲಿ ಸಹಾಯ ಪಡೆಯುತ್ತಿರುವುದು ಸೇರಿದಂತೆ ಹಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
‘ಭಾರತ ಸಂಪೂರ್ಣ ಸುರಕ್ಷಿತ ಎಂದು ಹೇಳುತ್ತಿಲ್ಲ’
ಆದರೆ ತಮ್ಮ ಅನುಭವದ ಆಧಾರದ ಮೇಲೆ ಭಾರತ ಸಂಪೂರ್ಣ ಸುರಕ್ಷಿತ ಎಂದು ಹೇಳುತ್ತಿಲ್ಲ ಎಂದು ಅನಾ ಸ್ಪಷ್ಟಪಡಿಸಿದ್ದಾರೆ. ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
“ಭಾರತ ಶೇ.100ರಷ್ಟು ಸುರಕ್ಷಿತ, ನೀವು ಯಾವುದೇ ಎಚ್ಚರಿಕೆ ಇಲ್ಲದೆ ಇರಬಹುದು ಅಥವಾ ಇತರ ಮಹಿಳೆಯರ ಅನುಭವಗಳನ್ನು ಕಡಿಮೆ ಮಾಡಿ ನೋಡಬೇಕು ಎಂದು ನಾನು ಹೇಳುತ್ತಿಲ್ಲ. ವಿಶೇಷವಾಗಿ ದೊಡ್ಡ ನಗರಗಳಲ್ಲಿ ಖಂಡಿತವಾಗಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಆದರೆ ಭಯದಿಂದ ಭಾರತದ ಸುಂದರ ಅನುಭವವನ್ನು ಕಳೆದುಕೊಳ್ಳಬೇಡಿ” ಎಂದು ಅವರು ಹೇಳಿದ್ದಾರೆ.
ಹರಿಯಾಣದಿಂದ ಲಡಾಖ್‌ವರೆಗೆ ಪ್ರಯಾಣ
ಅನಾ ಅವರ ಭಾರತ ಪ್ರವಾಸ ಈಗಾಗಲೇ ಹಲವು ಪ್ರದೇಶಗಳನ್ನು ಒಳಗೊಂಡಿದೆ. ಹರಿಯಾಣ, ಪಂಜಾಬ್, ಕಾಶ್ಮೀರ ಮತ್ತು ಲಡಾಖ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅವರು ಸಂಚರಿಸಿದ್ದಾರೆ. ಅವರ ಅನುಭವದ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರೂ ಪ್ರತಿಕ್ರಿಯಿಸಿದ್ದಾರೆ. “ಭಾರತದ ಮತ್ತೊಂದು ಮುಖವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು, “ನಿಮ್ಮ ಪ್ರಯಾಣದಲ್ಲಿ ಒಳ್ಳೆಯ ಪುರುಷರನ್ನು ಭೇಟಿಯಾಗಿದ್ದಕ್ಕೆ ಸಂತೋಷ. ಆದರೆ ನೀವು ಕೇಳಿರುವ ಎಚ್ಚರಿಕೆಗಳು ಸಂಪೂರ್ಣ ಆಧಾರರಹಿತವಲ್ಲ. ಜಾಗರೂಕರಾಗಿರಿ ಮತ್ತು ಭಾರತದಲ್ಲಿ ಉತ್ತಮ ಅನುಭವ ಪಡೆಯಿರಿ” ಎಂದು ಹೇಳಿದ್ದಾರೆ.
‘ನೀವು ಯಾವ ಶಕ್ತಿ ನೀಡುತ್ತೀರೋ ಅದೇ ಮರಳಿ ಬರುತ್ತದೆ’
ಇನ್ನೊಬ್ಬ ಬಳಕೆದಾರರು, “ಜನರನ್ನು ಮುಕ್ತ ಮನಸ್ಸಿನಿಂದ ಮತ್ತು ದಯೆಯಿಂದ ಎದುರಿಸಿದರೆ ಅದೇ ರೀತಿಯ ಆತ್ಮೀಯತೆ ನಮಗೂ ಮರಳಿ ಸಿಗುತ್ತದೆ” ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅನಾ, “ನೀವು ಯಾವ ಶಕ್ತಿಯನ್ನು ಹೊಂದಿರುತ್ತೀರೋ ಅದನ್ನೇ ಆಕರ್ಷಿಸುತ್ತೀರಿ. ನಾನು ಪ್ರಯಾಣಿಸಿದ ದೇಶಗಳಲ್ಲಿ ಪುರುಷರೊಂದಿಗೆ ಸಂವಹನ ನಡೆಸುವಾಗ ನನಗೆ ಹೆಚ್ಚು ಅಸುರಕ್ಷಿತವೆನಿಸಿದ್ದು ಜಾರ್ಜಿಯಾ” ಎಂದು ಹೇಳಿದ್ದಾರೆ. ಜಾರ್ಜಿಯಾದಲ್ಲಿ ತಮ್ಮ ಹಿಚ್‌ಹೈಕಿಂಗ್ ಅನುಭವ ಅಷ್ಟೊಂದು ಆರಾಮದಾಯಕವಾಗಿರಲಿಲ್ಲ. ಆದರೂ ಆ ದೇಶ ಅದ್ಭುತವಾಗಿದೆ ಎಂದು ಅವರು ಹೇಳಿದ್ದಾರೆ.
19ನೇ ವಯಸ್ಸಿನಿಂದಲೇ ಸೋಲೋ ಟ್ರಾವೆಲ್
ಅನಾ ಅವರ ಪ್ರಯಾಣದ ಕಥೆಯೂ ಕುತೂಹಲಕಾರಿಯಾಗಿದೆ. ಅವರ ಯೂಟ್ಯೂಬ್ ಬಯೋ ಪ್ರಕಾರ, ಅವರು 19ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಏಕಾಂಗಿಯಾಗಿ ಪ್ರವಾಸ ಕೈಗೊಂಡಿದ್ದರು. ಪೋಲೆಂಡ್‌ನಲ್ಲಿ ಒಂದು ತಿಂಗಳು ಸ್ವಯಂಸೇವಕರಾಗಿ ಕೆಲಸ ಮಾಡಿದ್ದರು. ಬಳಿಕ ಗ್ರೀಸ್‌ನಲ್ಲೂ ಇದೇ ರೀತಿಯ ಅನುಭವ ಪಡೆದಿದ್ದರು. 21ನೇ ವಯಸ್ಸಿನಲ್ಲಿ ಪೂರ್ಣಾವಧಿ ಪ್ರಯಾಣ ಆರಂಭಿಸಿದ ಅವರ ‘ಗ್ಯಾಪ್ ಇಯರ್’ ಬಳಿಕ ‘ಗ್ಯಾಪ್ ಲೈಫ್’ ಆಗಿ ಬದಲಾಗಿದೆ. ನಂತರ ಸುಮಾರು ಐದು ತಿಂಗಳು ಕೆಲಸ ಮಾಡಿ ಹಣ ಉಳಿಸಿಕೊಂಡು ತಮ್ಮ ಬಹುದಿನಗಳ ಕನಸಾದ ಪೋರ್ಚುಗಲ್‌ನಿಂದ ಆಸ್ಟ್ರೇಲಿಯಾದವರೆಗೆ ಹಿಚ್‌ಹೈಕಿಂಗ್ ಪ್ರಯಾಣ ಆರಂಭಿಸಿದ್ದಾರೆ.
ಭಾರತ ಪ್ರವಾಸವೂ ಇದೇ ದೀರ್ಘ ಪ್ರಯಾಣದ ಒಂದು ಭಾಗವಾಗಿದೆ. ಮುಂದಿನ ಸುಮಾರು ಒಂದೂವರೆ ವರ್ಷಗಳ ಕಾಲ ಭಾರತ ಮತ್ತು ನೇಪಾಳದಲ್ಲಿ ಸಂಚರಿಸುವ ಯೋಜನೆಯನ್ನು ಅನಾ ಹೊಂದಿದ್ದಾರೆ. ಭಾರತದ ಬಗ್ಗೆ ಭಯದಿಂದ ಬಂದಿದ್ದ ಈ ಯುವತಿ, ಇಲ್ಲಿನ ಜನರ ಆತ್ಮೀಯತೆಯಿಂದ ತಮ್ಮ ದೃಷ್ಟಿಕೋನವನ್ನೇ ಬದಲಿಸಿಕೊಂಡಿರುವ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
