ದೇಶದ ಮೊದಲ ಪ್ರಧಾನಿ ನೆಹರು ಅವರಿಗೆ ಹಸ್ತಾಂತರಿಸಿದ್ದ ಹಾಗೂ ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಲಾದ ಐತಿಹಾಸಿಕ ಸೆಂಗೋಲ್ ನಿರ್ಮಾತೃ ವುಮ್ಮಿಡಿ ಎಥಿರಾಜ್ (99) ನಿಧನರಾಗಿದ್ದಾರೆ. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪ ರಾಷ್ಟ್ರಪತಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರು ಅವರಿಗೆ ಸೆಂಗೋಲ್‌ ಹಸ್ತಾಂತರಿಸಿದ್ದ ಹಾಗೂ ಇತ್ತೀಚೆಗೆ ಲೋಕಸಭೆ ಹೊಸ ಕಟ್ಟಡದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಐತಿಹಾಸಿಕ ಸೆಂಗೋಲ್‌ ಹಿಂದಿನ ಶಿಲ್ಪಿ ತಿರು ವುಮ್ಮಿಡಿ ಎಥಿರಾಜ್‌ ಅವರು ತಮ್ಮ 99ನೇ ವಯಸ್ಸಿನಲ್ಲಿ ನಿಧನರಾದರು.

ವುಮ್ಮಿಡಿ ತಮಿಳುನಾಡಿನ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದವರು. 125 ವರ್ಷಗಳ ಇತಿಹಾಸವಿರುವ ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್ ಸಂಸ್ಥೆಯ ಮನೆತನದವರು.

1947ರಲ್ಲಿ ಸ್ವಾತಂತ್ರ್ಯ ಸಿಕ್ಕ ಬಳಿಕ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವುಮ್ಮಿಡಿ ಬಂಗಾರು ಚೆಟ್ಟಿ ಆಭರಣ ಸಂಸ್ಥೆಯವರು ಸೆಂಗೋಲ್‌ (ರಾಜದಂಡ) ನಿರ್ಮಿಸಿ ಅಂದಿನ ಪ್ರಧಾನಿ ನೆಹರು ಅವರಿಗೆ ಹಸ್ತಾಂತರಿಸಿದ್ದರು. ಇದರ ನಿರ್ಮಾಣದಲ್ಲಿ ಎಥಿರಾಜ್‌ ಅವರು ಪ್ರಮುಖ ಪಾತ್ರ ವಹಿಸಿದ್ದರು.

ದಶಕಗಳ ಕಾಲ ಅದು ಅಲಹಾಬಾದ್‌ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿತ್ತು. 2023ರಲ್ಲಿ ಸಂಸತ್‌ನ ಹೊಸ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಲೋಕಸಭೆಯ ಸ್ಪೀಕರ್‌ ಆಸನದ ಸಮೀಪ ಸೆಂಗೋಲ್‌ ಅನ್ನು ಪ್ರತಿಷ್ಠಾಪಿಸಿದರು. ಈ ಸಂದರ್ಭದಲ್ಲಿ ಸೆಂಗೋಲ್‌ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ವುಮ್ಮಿಡಿ ಕುಟುಂಬದ ಸದಸ್ಯರನ್ನೂ ಪ್ರಧಾನಿ ಭೇಟಿಯಾಗಿದ್ದರು.

ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

++

ಎಕ್ಸ್‌ನಲ್ಲಿ ಟ್ಚೀಟಿಸಿರುವ ಮೋದಿ, ‘ತಿರು ವುಮ್ಮಿಡಿ ಎಥಿರಾಜ್‌ ಅವರ ನಿಧನದಿಂದ ತೀವ್ರ ದುಃಖವಾಗಿದೆ, ಅವರು ತಮಿಳುನಾಡಿನ ಪ್ರತಿಷ್ಠಿತ ಕುಟುಂಬವೊಂದರಲ್ಲಿ ಜನಿಸಿದ್ದರು. ಮಾಜಿ ಪ್ರಧಾನಿ ನೆಹರು ಅವರಿಗೆ ಅರ್ಪಿಸಲಾದ ಸೆಂಗೋಲ್‌ ನಿರ್ಮಿಸುವಲ್ಲಿ ಅವರ ಶ್ರಮ ಅವಿಸ್ಮರಣೀಯ’ ಎಂದಿದ್ದಾರೆ.