Asianet Suvarna News Asianet Suvarna News

ಸೆಂಗೋಲ್ ತೆಗೆದು ಸಂವಿಧಾನ ಇಡಿ ಎಂದ ಎಸ್‌ಪಿ ಸಂಸದ, ಬಿಜೆಪಿ ತಿರುಗೇಟು!

ಸಂಸತ್ತಿನಲ್ಲಿ ಇದೀಗ ಸೆಂಗೋಲ್ ವಿವಾದ ಶುರುವಾಗಿದೆ. ಸೆಂಗೋಲ್ ತೆಗೆದು ಸಂವಿಧಾನ ಇಡುವಂತೆ ಎಸ್‌ಪಿ ಸಂಸದ ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ. 
 

BJP hits back samajwadi party Mp for Sengol row  says its insult for tamil culture ckm
Author
First Published Jun 28, 2024, 7:40 AM IST

ನವದೆಹಲಿ: ಮೋದಿ-3 ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಕಳೆದ ವರ್ಷ ಲೋಕಸಭೆಯ ಸಭಾಪತಿಗಳ ಪೀಠದ ಪಕ್ಕೆ ಇರಿಸಲಾಗಿದ್ದ ತಮಿಳುನಾಡು ಮೂಲದ ‘ಸೆಂಗೋಲ್‌’ (ರಾಜದಂಡ) ಮತ್ತೆ ವಿವಾದಕ್ಕೆ ಕಾರಣವಾಗಿದೆ. ‘ರಾಜಪ್ರಭುತ್ವದ ಸಂಕೇತವಾದ ರಾಜದಂಡವನ್ನು ತೆಗೆದು ಹಾಕಿ ಆ ಜಾಗದಲ್ಲಿ ಪ್ರಜಾಪ್ರಭುತ್ವದ ಸಂಕೇತವಾದ ಸಂವಿಧಾನದ ಪ್ರತಿ ಇರಿಸಬೇಕು’ ಎಂದು ಸಮಾಜವಾದಿ ಪಕ್ಷದ ಸಂಸದ ಆರ್‌.ಕೆ. ಚೌಧರಿ ಅವರು ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ.

ಚೌಧರಿ ಆಗ್ರಹವನ್ನು ಬಿಜೆಪಿ, ಆರ್‌ಎಲ್‌ಡಿ ಹಾಗೂ ಎಲ್‌ಜೆಪಿ ತೀವ್ರವಾಗಿ ಖಂಡಿಸಿವೆ. ‘ಇದು ತಮಿಳು ಸಂಸ್ಕೃತಿಗೆ ಅವಮಾನ. ಇಂಡಿಯಾ ಕೂಟದಲ್ಲಿ ಸಮಾಜವಾದಿ ಪಕ್ಷದ ಮಿತ್ರಪಕ್ಷವಾದ ತಮಿಳುನಾಡಿನ ಡಿಎಂಕೆ ಈ ಆಗ್ರಹವನ್ನು ಒಪ್ಪುತ್ತದೆಯೇ?’ ಎಂದು ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ಪ್ರಶ್ನಿಸಿದ್ದಾರೆ. ಇನ್ನು, ‘ಸಮಾಜವಾದಿ ಪಕ್ಷಕ್ಕೆ ದೇಶದ ಸಂಸ್ಕೃತಿ ಗೊತ್ತಿಲ್ಲ’ ಎಂದು ಎಲ್‌ಜೆಪಿ ನಾಯಕ, ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಹಾಗೂ ಆರ್‌ಎಲ್‌ಡಿ ನಾಯಕ, ಕೇಂದ್ರ ಸಚಿವ ಜಯಂತ ಚೌಧರಿ ಕಿಡಿಕಾರಿದ್ದಾರೆ.

ಪಟ್ಟದಕಲ್ಲಿನ ಶಿವನ ಮೂರ್ತಿ ಕೈಯಲ್ಲೂ ‘ಸೆಂಗೋಲ್‌’!

ಈ ನಡುವೆ, ಚೌಧರಿ ಮನವಿಯಲ್ಲಿ ಆರ್‌ಜೆಡಿ ಸಂಸದರಾದ ಮನೋಜ್‌ ಝಾ, ಮಿಸಾ ಭಾರತಿ ಹಾಗೂ ಕಾಂಗ್ರೆಸ್‌ನ ರೇಣುಕಾ ಚೌಧರಿ ಬೆಂಬಲಿಸಿದ್ದಾರೆ. ‘ಸೆಂಗೋಲ್ ಅನ್ನು ಮ್ಯೂಸಿಯಂಗೆ ಕಳುಹಿಸಬೇಕು. ಇದು ಪ್ರಜಾಪ್ರಭುತ್ವದ ಸಂಕೇತವಲ್ಲ ಆದರೆ ರಾಜಪ್ರಭುತ್ವದ ಸಂಕೇತವಾಗಿದೆ’ ಎಂದು ಮಿಸಾ ಹೇಳಿದ್ದಾರೆ.

ಕಳೆದ ವರ್ಷ ಹೊಸ ಸಂಸತ್‌ ನಿರ್ಮಾಣವಾದಾಗ ರಾಜದಂಡವನ್ನು (ಸೆಂಗೋಲ್‌) ಲೋಕಸಭೆಯ ಸಭಾಪತಿ ಪೀಠದ ಪಕ್ಕ ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಾಪಿಸಿದ್ದರು. ಭಾರತದ ಮೊದಲ ಪ್ರಧಾನಿ ಪಂ. ಜವಾಹರಲಾಲ್‌ ನೆಹರು ಅವರಿಗೆ ಬ್ರಿಟಿಷರು ಅಧಿಕಾರ ಹಸ್ತಾಂತರಿಸುವಾಗ ಸಾಂಕೇತಿಕವಾಗಿ ಸೆಂಗೋಲನ್ನು ನೀಡಿದ್ದರ ಜ್ಞಾಪಕಾರ್ಥವಾಗಿ ಇದನ್ನು ಇರಿಸಲಾಗಿತ್ತು.

ನೂತನ ಸಂಸತ್ ಭವನ ಉದ್ಘಾಟನೆಗೆ ಕೇಂದ್ರ ಬಿಜೆಪಿ ಸರ್ಕಾರ ಸೆಂಗೋಲ್ ಸ್ಥಾಪಿಸಿತ್ತು. ಸೆಂಗೋಲ್ ಹುಡುಕಲು ಕೇಂದ್ರ ಸರ್ಕಾರ 2 ವರ್ಷ ತೆಗೆದುಕೊಂಡಿತ್ತು. 1947ರ ಆಗಸ್ಟ್‌ 14ರ ರಾತ್ರಿ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಹಸ್ತಾಂತರದ ಚಿಹ್ನೆಯಾಗಿ ‘ಸೆಂಗೋಲ್‌ ಹಸ್ತಾಂತರ ಸಮಾರಂಭ ನಡೆದಿತ್ತು. ಈ ಕುರಿತ ಅಂಕಣ, ಲೇಖನ ಆಧರಿಸಿ ಶೋಧ ಕಾರ್ಯ ಆರಂಭಗೊಂಡಿತ್ತು. ತಮಿಳುನಾಡಿನ ಡಿಎಂಕೆ ಸರ್ಕಾರ ಪ್ರಕಟಿಸಿದ ಹಿಂದು ಧಾರ್ಮಿಕ ಮತ್ತು ಮುಜರಾಯಿ ನೀತಿ-2021-22ರಲ್ಲೂ 1947ರ ಸೆಂಗೋಲ್‌ ಪ್ರದಾನ ಸಮಾರಂಭದ ಬಗ್ಗೆ ಮಾಹಿತಿಯಿತ್ತು. ಈ ಎಲ್ಲ ಮಾಹಿತಿಯೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವೇಳೆ ರಾಜದಂಡವನ್ನು ಹಸ್ತಾಂತರಿಸುವ ಸಮಾರಂಭ ನಡೆದಿತ್ತು ಎಂಬುದನ್ನು ಕೇಂದ್ರ ಸರ್ಕಾರ ಖಚಿತಪಡಿಸಿಕೊಂಡಿತು.

ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲೂ ಇದೆ ಸೆಂಗೋಲ್..!

ಕೊನೆಗೆ 77 ವರ್ಷ ಹಳೆಯದಾದ ಸೆಂಗೋಲ್‌ ಅಲಹಾಬಾದ್‌ ಮ್ಯೂಸಿಯಂನಲ್ಲಿ ‘ಇದು ನೆಹರು ಅವರ ಚಿನ್ನದ ವಾಕಿಂಗ್‌ ಸ್ಟಿಕ್‌’ ಎಂಬ ಅಡಿಬರಹದೊಂದಿಗೆ ಪ್ರದರ್ಶನಕ್ಕಿರುವುದು ಕೇಂದ್ರ ಸರ್ಕಾರಕ್ಕೆ ತಿಳಿಯಿತು. 
 

 

Latest Videos
Follow Us:
Download App:
  • android
  • ios