ಕಾಡಿನಲ್ಲಿ ಯುವಕನೊಬ್ಬ ಟೆಂಟ್‌ನಲ್ಲಿ ಕುಳಿತಿದ್ದಾಗ ಹಾವೊಂದು ಆತನ ತಲೆಯ ಮೇಲಿದ್ದ ಟೋಪಿಯನ್ನು ಕಚ್ಚಿ ಕಿತ್ತೆಸೆದ ಘಟನೆ ನಡೆದಿದೆ. ಟೋಪಿ ಇದ್ದ ಕಾರಣಕ್ಕೆ ಆತನ ಜೀವ ಉಳಿದಿದೆ.
ಕೆಲವೊಂದು ಘಟನೆಗಳು ನಮ್ಮನ್ನು ಸಾವಿನ ದವಡೆಗೆ ಸಿಲುಕಿಸಿ ಕೂದಲೆಳೆ ಅಂತರದಲ್ಲಿ ಪಾರು ಮಾಡುತ್ತವೆ. ಅಂತಹದೊಂದು ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗಿದೆ. ಯುವಕನೋರ್ವ ಕಾಡಿನಲ್ಲಿ ಮರದ ಮೇಲೆ ನಿರ್ಮಿಸಲಾಗಿರುವ ಟೆಂಟ್‌ನಂತಹ ಮನೆಯಲ್ಲಿ ಕುಳಿತು ತನ್ನ ಫೋನ್‌ನಲ್ಲಿ ಬ್ಯುಸಿಯಾಗಿದ್ದ ಈ ವೇಳೆ ಹಾವೊಂದು ಆತನ ಹಿಂದಿನ ಬಂದಿದ್ದು, ಆತನ ತಲೆಯಲ್ಲಿದ್ದ ಟೋಫಿಯನ್ನು ಬಾಯಿಯಲ್ಲಿ ಕಚ್ಚಿ ಕಿತ್ತೆಸೆದಿದೆ. ಈ ವೇಳೆ ಯುವಕ ತನ್ನ ಟೋಪಿ ಎಳೆಯುತ್ತಿರುವುದು ಯಾರು ಎಂದು ಆತ ತಿರುಗಿ ನೋಡಿದಾಗ ಅಲ್ಲಿನ ದೃಶ್ಯ ನೋಡಿ ಆತನೇ ಒಂದು ಕ್ಷಣ ಆಘಾತಕ್ಕೊಳಗಾಗಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮೇಜಿಂಗ್ ನೇಚರ್ ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಜನ ಈ ವೀಡಿಯೋ ನೋಡಿ ಆಘಾತ ವ್ಯಕ್ತಪಡಿಸಿದ್ದಾರೆ. ತಲೆಯಲ್ಲಿ ಕ್ಯಾಪ್ ಇದ್ದ ಕಾರಣ ಈ ಯುವಕ ಜೀವಂತವಾಗಿದ್ದಾನೆ ಎಂದು ಬರೆದು ಈ ಆರು ಸೆಕೆಂಡ್‌ಗಳ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಹಾವು ಕುಳಿತಿರುವ ಯುವಕನ ತಲೆ ಮೇಲಿಂದ ಬಂದು ತಲೆಯ ಮೇಲಿದ್ದ ಕ್ಯಾಪನ್ನು ಕಸಿಯುವುದನ್ನು ನೋಡಬಹುದಾಗಿದೆ.
ಈ ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಅದೆಷ್ಟು ಹತ್ತಿರದಲ್ಲಿತ್ತು, ಆತ ಎಂಥಾ ಅದೃಷ್ಟವಂತ ಎಂಬುದು ಆತನಿಗೇ ಗೊತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೇ ಕಾರಣಕ್ಕೆ ನಾನು ಮನೆಯಿಂದ ಹೊರಗಿರುವಾಗ ಬಹಳ ಜಾಗರೂಕನಾಗಿರುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕ್ಯಾಪ್ ಹೆಲ್ಮೆಟ್‌ಗಿಂತಲೂ ಹೆಚ್ಚು ಯಶಸ್ವಿ ಜೀವರಕ್ಷಕವಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕ್ಯಾಪನ್ನು ಕೇವಲ ಫ್ಯಾಷನ್‌ಗೆ ಮಾತ್ರವಲ್ಲ, ಇದನ್ನು ಹಾವಿನಿಂದ ರಕ್ಷಣೆಗೂ ಬಳಸಬಹುದು ಎಂದು ಮತ್ತೊಬ್ಬರು ಬರೆದಿದ್ದಾರೆ.
ಇನ್ನೇನು ಮಳೆಗಾಲ ನಿಗದಿಪಡಿಸಿದ ಸಮಯಕ್ಕೂ ಮೊದಲೇ ಬಂದು ಬಿಟ್ಟಿದೆ. ಈ ಸಮಯದಲ್ಲಿ ಹಾವುಗಳು, ಚೇಳುಗಳು ಬೆಚ್ಚನೆಯ ಜಾಗ ಆರಸಿ ಬರುತ್ತವೆ. ಹೀಗಿರುವಾಗ ಜನರು ಮನೆಯ ಮೂಲೆಗಳನ್ನು ಕಬೋರ್ಡ್‌ಗಳು, ಕಪಾಟುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು, ಬಿಚ್ಚಿಟ್ಟಿರುವ ಶೂಗಳು, ಹೆಲ್ಮೆಟ್ ಮುಂತಾದವುಗಳನ್ನು ಮತ್ತೆ ಧರಿಸುವ ಮೊದಲು ಪರಿಶೀಲಿಸಿದ ನಂತರವೇ ಧರಿಸಬೇಕು, ಏಕೆಂದರೆ ಹಾವುಗಳು ಶೂಗಳು, ಹೆಲ್ಮೆಟ್‌ಗಳು, ಕಾರುಗಳ ಒಳಗೆ ಮಳೆಗಾಲದಲ್ಲಿ ಹೆಚ್ಚಾಗಿ ಸೇರಿಕೊಳ್ಳುತ್ತವೆ. ಹೀಗಾಗಿ ಮುಂದಾಗುವ ಅನಾಹುತವನ್ನು ಮೊದಲೇ ತಪ್ಪಿಸಲು ಶೂ ಹೆಲ್ಮೆಟ್ ಧರಿಸುವ ಮೊದಲು ಪರಿಶೀಲಿಸಿಕೊಳ್ಳಿ
