ವಿದೇಶಿ ವ್ಲಾಗರ್ ಬಳಿ ವಸೂಲಿ: ವೀಡಿಯೋ ವೈರಲ್ ಬಳಿಕ ದಗಲ್ಬಾಜಿ ಟ್ರಾಫಿಕ್ ಪೊಲೀಸ್ ಅಮಾನತು
ವಿದೇಶಿಗನ ಬಳಿ ವಸೂಲಿಗಿಳಿದ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ.
ನವದೆಹಲಿ: ನಮ್ಮವರೊಂದಿಗೆ ಇರಲಿ ಬಿಡಿ ಆದರೆ ಹೊರಗಿನಿಂದ ಬಂದವರೊಂದಿಗೂ ಸರ್ಕಾರಿ ಹುದ್ದೆಯ ಜವಾಬ್ದಾರಿ ಸ್ಥಾನದಲ್ಲಿರುವವರು ಅನಾಗರಿಕವಾಗಿ ವರ್ತಿಸಿದರೆ ದೇಶದ ಹೆಸರು ಹೊರದೇಶದಲ್ಲೂ ಹಾಳಾಗುವುದು ಎಂಬ ಸಣ್ಣ ಯೋಚನೆಯೂ ಸರ್ಕಾರಿ ಹುದ್ದೆಯಲ್ಲಿರುವ ಕೆಲವರಿಗೆ ಇರುವುದೇ ಇಲ್ಲ. ಇಂತಹವರ ಕಾರಣಕ್ಕೆ ದೇಶದ ಮಾನ ಮೂರು ಕಾಸಿಗೆ ಹರಾಜಾಗುತ್ತಿದೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ವಿದೇಶಿಗನ ಬಳಿ ವಸೂಲಿಗಿಳಿದ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಆಗಿದ್ದೇನು?
ಈ ಯೂಟ್ಯೂಬರ್‌ಗಳು, ವ್ಲಾಗರ್ ಎಲ್ಲಿ ಹೋದರು ತಮ್ಮ ಕೈಯಲ್ಲಿ ಕ್ಯಾಮರಾ ಆನ್ ಇಟ್ಟುಕೊಂಡೆ ತಿರುಗಾಡುತ್ತಿರುತ್ತಾರೆ. ನಮ್ಮ ಕನ್ನಡದ ಯೂಟ್ಯೂಬರ್ ಡಾಕ್ಟರ್ ಬ್ರೋ ಹೇಗೆ ವಿದೇಶಗಳಲ್ಲೆಲ್ಲಾ ಸಂಚರಿಸಿ ಕನ್ನಡಿಗರಿಗೆ ವಿದೇಶದ ವಿವಿಧ ದೇಶಗಳ ಪರಿಚಯ ಮಾಡುತ್ತಾನೋ ಅದೇ ರೀತಿ ಅನೇಕ ವಿದೇಶಿ ಬ್ಲಾಗರ್/ಬ್ಲಾಗರ್/ಯೂಟ್ಯೂಬರ್‌ಗಳು ನಮ್ಮ ದೇಶಕ್ಕೆ ಬಂದು ದೇಶದ ವಿವಿಧ ಸ್ಥಳಗಳನ್ನು ಸುತ್ತಾಡುತ್ತಾ ನಮ್ಮ ಸಂಸ್ಕೃತಿ, ದೇಶ ಭಾಷೆ, ಆಹಾರ, ಪರಂಪರೆ ಇವುಗಳ ಬಗ್ಗೆ ವೀಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಹರಿ ಬಿಡುತ್ತಾ ಪ್ರಪಂಚಕ್ಕೆ ತಿಳಿಸುತ್ತಾರೆ. ಹೀಗೆ ಬರುವವರ ಜೊತೆ ನಾವು ವಸೂಲಿಗಿಳಿದರೆ ಹೇಗೆ?
ದೆಹಲಿಯ ಪೊಲೀಸ್ ಪೇದೆ ಮಾಡಿದ್ದು ಇದೇ ತಪ್ಪು, ಕಾರಿನಲ್ಲಿ ಕ್ಯಾಮರಾ ಆನ್ ಇಟ್ಟು ಕಾರು ಚಲಾಯಿಸಿಕೊಂಡು ರಸ್ತೆಯಲ್ಲಿ ಸಾಗುತ್ತಿದ್ದ ಕಾರನ್ನು ದೆಹಲಿಯ ಟ್ರಾಫಿಕ್ ಪೊಲೀಸ್ ಪೇದೆ ಕಾರು ನಿಲ್ಲಿಸುವಂತೆ ಸೂಚಿಸಿ ಕಾರನ್ನು ನಿಲ್ಲಿಸಿದ್ದಾನೆ. ನಂತರ ಆತನ ಬಳಿ ವಸೂಲಿಗಿಳಿದಿದ್ದಾನೆ. ಆತನಿಗೆ ಯಾವುದೇ ರಶೀದಿ ನೀಡದೆ ಆತನಿಂದ 5 ಸಾವಿರ ರೂಪಾಯಿ ವಸೂಲಿ ಮಾಡಿದ್ದಾನೆ. ಈ ದೃಶ್ಯ ಆತನ ಕಾರಿನ ಡಾಶ್‌ಬೋರ್ಡ್‌ನಲ್ಲಿದ್ದ ಕ್ಯಾಮರಾದಲ್ಲಿ ಸೆರೆ ಆಗಿದೆ ಎನ್ನಲಾಗಿದೆ. ಒಂದು ತಿಂಗಳ ಹಿಂದೆ ನಡೆದ ಈ ಘಟನೆ ಈಗ ಕೊರಿಯನ್ ವ್ಯಕ್ತಿಯ ವೀಡಿಯೋ ವೈರಲ್ ಆದ ನಂತರ ಬೆಳಕಿಗೆ ಬಂದಿದೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ದೆಹಲಿ ಟ್ರಾಫಿಕ್ ಪೊಲೀಸ್ ಪೇದೆಯ ದಗಲ್ಬಾಜಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಅನೇಕರು ಈ ವೀಡಿಯೋದ ಸ್ಕ್ರೀನ್‌ಶಾಟ್ ಫೋಟೋ ತೆಗೆದು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಇತನಿಂದಾಗಿ ದೇಶದ ಮಾನ ವಿದೇಶದಲ್ಲಿ ಹರಾಜಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಐಷಾರಾಮಿ ಜೀವನ ಅಂದ್ರೆ ಇದಪ್ಪಾ! 60 ಸಾವಿರ ರೂ. ಮೌಲ್ಯದ ಟವಲ್ ಖರೀದಿಸಿದ ಯೂಟ್ಯೂಬರ್
ಕೂಡಲೇ ಎಚ್ಚೆತ್ತ ದೆಹಲಿ ಪೊಲೀಸರು ಹೀಗೆ ವಿದೇಶಿಗನಿಂದ ವಸೂಲಿಗಿಳಿದ ದೆಹಲಿ ಪೊಲೀಸ್ ಪೇದೆ ಮಹೇಶ್ ಚಾಂದ್‌ನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ವೀಡಿಯೋದಲ್ಲಿ ಏನಿದೆ
ಕೊರಿಯನ್ ಯುವಕ ಕಾರು ಚಾಲಾಯಿಸಿಕೊಂಡು ತಾನು ಹೋಗುತ್ತಿರುವ ಸ್ಥಳದ ಬಗ್ಗೆ ವಿವರಿಸುತ್ತಾ ಇಲ್ಲಿನ ವಿಶೇಷತೆಗಳನ್ನು ತಿಳಿಸುತ್ತಾ ಕಾರು ಚಲಾಯಿಸುತ್ತಾ ಪ್ರಯಾಣಿಸುತ್ತಿದ್ದರೆ, ಆತನ ಕಾರನ್ನು ಟ್ರಾಫಿಕ್ ಪೇದೆ ಮಹೇಶ್ ಚಾಂದ್ ಅಡ್ಡ ಹಾಕಿದ್ದಾನೆ. ಅಲ್ಲದೇ ದಂಡ ಕಟ್ಟುವಂತೆ ಕೇಳುತ್ತಾನೆ. ಈ ವೇಳೆ ಈ ಕೊರಿಯನ್ ವ್ಲಾಗರ್ ಮೊದಲಿಗೆ 500 ರೂಪಾಯಿ ನೋಟು ತೆಗೆದು ನೀಡುತ್ತಾನೆ. ಈ ವೇಳೆ ಆತ 500 ಅಲ್ಲ 500 ಸಾವಿರ ಎಂದು ಕೇಳಿದ್ದು, ಬಳಿಕ ಯೂಟ್ಯೂರ್ ತನ್ನ ಬಳಿ ಇದ್ದ ನೋಟನ್ನೆಲ್ಲಾ ತೆಗೆದು ನೀಡುತ್ತಾನೆ. ಈ ವೇಳೆ ಆದರಲ್ಲಿ 500 ರೂಪಾಯಿಯನ್ನು ಮರಳಿ ಯೂಟ್ಯೂಬರ್‌ಗೆ ನೀಡಿದ ಆತ ಉಳಿದ ಹಣವನ್ನು ಜೇಬಿಗೆ ಹಾಕಿಕೊಂಡು ಅಲ್ಲಿಂದ ಹೋಗುತ್ತಾನೆ. ಇಷ್ಟು ಮೊತ್ತಕ್ಕೆ ಆತ ಯಾವುದೇ ರಶೀದಿಯನ್ನು ಕೂಡ ನೀಡುವುದಿಲ್ಲ.
ಮೊಬೈಲ್ ಕಳ್ಳನನ್ನು ಬೆನ್ನಟ್ಟಿ ಹಿಡಿದ ಟ್ರಾಫಿಕ್ ಪೊಲೀಸ್; ಸಾರ್ವಜನಿಕರಿಂದ ಮೆಚ್ಚುಗೆ
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ವೀಡಿಯೋ ನೋಡಿದ ಭಾರತೀಯರೆಲ್ಲರೂ ಮಹೇಶ್ ಚಾಂದ್ ಅಮಾನತಿಗೆ ಆಗ್ರಹಿಸಿದ್ದರು. ಅದರಂತೆ ಈಗ ಮಹೇಶ್ ಚಾಂದ್ ಅಮಾನತಾಗಿದೆ. ಅನೇಕರು ವೀಡಿಯೋಗೆ ಕಾಮೆಂಟ್ ಮಾಡಿ ನಿಮಗೆ ಭಾರತದಲ್ಲಿ ಹೀಗಾಗಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿದ್ದಾರೆ.